ಶಿವಮೊಗ್ಗ

ಸಂಡೋಡಿ ಸೇತುವೆ ಶಿಥಿಲಾವಸ್ಥೆ

Published On :

ಕ.ಪ್ರ. ವಾರ್ತೆ, ಹೊಸನಗರ, ಡಿ.5
ಹತ್ತಾರು ಗ್ರಾಮಗಳಿಗೆ ನಿತ್ಯದ ಸಂಪರ್ಕದ ಸೇತುವಾಗಿರುವ ಸಂಡೋಡಿ ಸೇತುವೆ ಸಂಪೂರ್ಣ ಶಿಥಿಲಗೊಂಡಿದ್ದು, ಗ್ರಾಮಸ್ಥರು ಅಪಾಯದ ಭೀತಿಯಲ್ಲಿ ಸಂಚಾರ ಮಾಡಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.
ತಾಲೂಕಿನ ನೂಲಿಗ್ಗೇರಿ ಸಮೀಪದ ಸಂಡೋಡಿ ಸೇತುವೆಯನ್ನು ಒಮ್ಮೆ ನೋಡಿದರೆ ಎಂತಹವರಿಗೂ ದಿಗಿಲು ಉಂಟಾಗುತ್ತದೆ. ಸೇತುವೆ ದುರ್ಬಲವಾಗಿದ್ದು, ಏಳೆಂಟು ವರ್ಷಗಳ ಹಿಂದೆ ಅಂದಿನ ಜಿಲ್ಲಾಧಿಕಾರಿಗಳೇ ಗುರುತಿಸಿದ್ದರೂ ಕೂಡಾ ಇಲ್ಲಿಯವರೆಗೆ ನೂತನ ಸೇತುವೆ ನಿರ್ಮಾಣದ ಮಾತು ಹಾಗಿರಲಿ, ದುರಸ್ತಿ ಮಾಡುವುದಕ್ಕೂ ಮುಂದಾಗಿಲ್ಲ ಎಂಬದು ಸ್ಥಳೀಯರ ಆಕ್ರೋಶದ ನುಡಿಗಳು.
ಸೇತುವೆ ದುಸ್ಥಿತಿ: ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬಂತೆ ಮೇಲ್ನೋಟಕ್ಕೆ ಪರವಾಗಿಲ್ಲ ಎಂದನಿಸುವ ಸೇತುವೆಯ ಬುಡ ಇಳಿದು ನೋಡಿದರೆ ಅಲ್ಲಿಂದ ಎಷ್ಟು ಬೇಗ ಕಾಲ್ಕೀಳುತ್ತೇವೋ ಎನಿಸುತ್ತದೆ. ಸೇತುವೆ ಫಿಲ್ಲರ್‌ಗಳೇ ಬುಡದಲ್ಲಿ ಸುಮಾರು 2 ಅಡಿ ಕೊರೆದುಕೊಂಡು ಹೋಗಿದೆ.
ಸೇತುವೆಯ ಸ್ಲ್ಯಾಬ್ ಕೆಳಭಾಗದಿಂದ ಕಾಂಕ್ರಿಟ್ ಉದುರಿ ಕಬ್ಬಿಣದ ರಾಡುಗಳು ತುಕ್ಕು ತಿಂದಿವೆ. ಇನ್ನೇನು ಈಗಲೋ, ಆಗಲೋ ಕುಸಿಯಲಿದೆ ಎಂಬ ಆತಂಕ ತರುವುದರಲ್ಲಿ ಅನುಮಾನವಿಲ್ಲ.
ಗ್ರಾಮಗಳ ಆತಂಕ: ಸಂಡೋಡಿ, ಮಳಲಿಕೊಪ್ಪಲು, ಹಿರೀಮನೆ, ಗಾಣದಗದ್ದೆ, ಹೂಗೆಬೈಲು, ಅತ್ತಿಕೊಡಿಗೆ, ಮಳಲಿ, ಮುಂಡಕೋಡು, ಬೈಸೆ ಸೇರಿದಂತೆ ಹತ್ತಾರು ಗ್ರಾಮಗಳ ಸಂಪರ್ಕ ಸೇತುವೆ ಇದು. ಮಾತ್ರವಲ್ಲ ಬ್ರಾಹ್ಮಣವಾಡ, ಚಕ್ರಾನಗರಕ್ಕೂ ಸಂಪರ್ಕ ಒದಗಿಸುತ್ತದೆ. ಐದಾರು ವರ್ಷಗಳ ಹಿಂದೆ ಹೊನ್ನಾಳಿ- ಬೈಂದೂರು ರಾಜ್ಯಹೆದ್ದಾರಿಯ ಚಿಕ್ಕಪೇಟೆ ಸೇತುವೆ ಕುಸಿದಾಗ ಇದು ಸಂಪರ್ಕ ಸೇತುವೆಯಾಗಿ ಗಮನ ಸೆಳೆದಿತ್ತು.
ಆಗಲೇ ಶಿಥಿಲಾವಸ್ಥೆ ತಲುಪಿದ್ದ ಸೇತುವೆ ಮೇಲೆ ಭಾರಿ ವಾಹನಗಳ ಓಡಾಡಕ್ಕೆ ಸ್ಥಳೀಯರು ವಿರೋಧಿಸಿದ್ದರು. ಇಲ್ಲಿ ಸೇತುವೆ ದುರ್ಬಲಗೊಂಡಿದ್ದು, ಅಭಿವೃದ್ಧಿ ಕಾಮಗಾರಿಗೆ ಶಿಫಾರಸು ಮಾಡಲಾಗಿತ್ತು. ಆದರೆ ಈವರೆಗೆ ಕಾಮಗಾರಿ ಪ್ರಾರಂಭವಾಗುವುದಿರಲಿ, ಸೇತುವೆ ಸ್ಥಿತಿ ಹೇಗಿದೆ ಎಂಬ ಬಗ್ಗೆ ಯಾವುದೇ ಜನಪ್ರತಿನಿಧಿಗಳು, ಅಧಿಕಾರಿಗಳು ಮುಂದಾಗಿಲ್ಲ ಎಂದು ಸ್ಥಳೀಯರು ನೋವು ವ್ಯಕ್ತಪಡಿಸುತ್ತಾರೆ.
ಅಪಾಯ: ಗ್ರಾಮಸ್ಥರು ಮತ್ತು ಶಾಲಾಮಕ್ಕಳು ದಿನಂಪ್ರತಿ ಇದೇ ರಸ್ತೆಯಲ್ಲಿ ಓಡಾಡುತ್ತಿದ್ದು, ಮಳೆ ಬಂತೆಂದರೆ ಆತಂಕದಲ್ಲಿ ದಾಟಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಸೇತುವೆ ದುಸ್ಥಿತಿ ನೋಡಿದರೆ ಅಪಾಯ ಕಟ್ಟಿಟ್ಟಬುತ್ತಿ. ಇದಕ್ಕೂ ಮುನ್ನ ಸಂಬಂಧಿಸಿದ ಇಲಾಖೆ ಎಚ್ಚೆತ್ತುಕೊಳ್ಳುತ್ತದೋ ಕಾದು ನೋಡಬೇಕು.

ಕೆಪಿಸಿ ಜವಾಬ್ದಾರಿ
ಸಾವೇಹಕ್ಲು ಡ್ಯಾಂ ನೀರು ಹರಿಯುತ್ತಿರುವ ಕಾರಣ ಹಿಂದೆ ಕೆಪಿಸಿಯವರೇ ಸೇತುವೆ ನಿರ್ಮಾಣ ಮಾಡಿದ್ದರು. ಈಗ ಶಿಥಿಲಾವಸ್ಥೆ ತಲುಪಿರುವುದರಿಂದ ದುರಸ್ತಿ ಮಾಡುವುದು ಇಲ್ಲವೇ ಹೊಸ ಸೇತುವೆ ನಿರ್ಮಾಣ ಮಾಡುವುದು ಕೆಪಿಸಿ ಜವಾಬ್ದಾರಿಯಾಗಿದೆ.
-ತೋಟಪ್ಪಗೌಡ ಹಿರೀಮನೆ, ಸ್ಥಳೀಯರು

ಅನಾಹುತ ತಪ್ಪಿಸಲಿ
ಸೇತುವೆ ದುರಸ್ತಿ ಅಥವಾ ಹೊಸ ಸೇತುವೆ ನಿರ್ಮಾಣದ ಬಗ್ಗೆ ಜಿಪಂಗೆ ಮತ್ತು ಕೆಪಿಸಿಗೆ ಮನವಿ ನೀಡಲಾಗಿದೆ. ಆದರೆ ಪ್ರಯೋಜನವಾಗಿಲ್ಲ. ಈಗ ಉಸ್ತುವಾರಿ ಸಚಿವರಾಗಿರುವ ಶಾಸಕರು ಈ ಬಗ್ಗೆ ಗಮನ ಹರಿಸಿ ಮುಂದಾಗುವ ಅನಾಹುತ ತಪ್ಪಿಸಬೇಕು.
-ಶೇಖರ್ ಹೊಗೆಬೈಲು ಸ್ಥಳೀಯರು
 -ರವಿ ಬಿದನೂರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.