ಸನ್ಮಾನಕ್ಕಿಂತ ಜನರ ಪ್ರೀತಿ ಮುಖ್ಯ: ನಾ. ಡಿಸೋಜ
ಸಾಗರ: ಬರಹಗಾರನಿಗೆ ಪ್ರಶಸ್ತಿ, ಪುರಸ್ಕಾರ ಹಾಗೂ ಸನ್ಮಾನಗಳಿಗಿಂತ ತಾನು ವಾಸಿಸುವ ಊರಿನ ಜನರ ಪ್ರೀತಿ ಗಳಿಸುವುದೆ ಮುಖ್ಯವಾಗಿರುತ್ತದೆ ಎಂದು 80ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಡಾ. ನಾ. ಡಿಸೋಜ ಹೇಳಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ನೀಡಿದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ನನಗೆ ಸಮ್ಮೇಳನಾಧ್ಯಕ್ಷತೆ ದೊರಕಿರುವುದಕ್ಕೆ ಸಾಗರದ ಜನರು ಸಂಭ್ರಮಿಸುವ ರೀತಿ ನೋಡಿ ನಿಜಕ್ಕೂ ನನಗೆ ತುಂಬಾ ಸಂತೋಷವಾಗುತ್ತಿದೆ ಎಂದರು.
ಸ್ಫೂರ್ತಿ ಕೇಂದ್ರ: ಒಬ್ಬ ಲೇಖಕನಿಗೆ ತಾನು ಹುಟ್ಟಿ ಬೆಳೆದ ಊರು ಏನೆಲ್ಲಾ ಕೊಡಲು ಸಾಧ್ಯವೋ, ಅದನೆಲ್ಲಾ ಸಾಗರ ನನಗೆ ಕೊಟ್ಟಿದೆ. ಈ ಊರಿನಲ್ಲಿ ಸಾಹಿತ್ಯ ಕೃಷಿ ಮಾಡುತ್ತಿರುವ ನಾನು ನಿಜಕ್ಕೂ ಭಾಗ್ಯಶಾಲಿ. ನನ್ನ ಏಳಿಗೆಯನ್ನು ಕಂಡು ಸದಾ ಪ್ರೋತ್ಸಾಹಿಸುತ್ತಿರುವ ಸಾಗರದ ಜನತೆ ನನ್ನ ಸ್ಫೂರ್ತಿಯ ಕೇಂದ್ರವಾಗಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ಸಾಗರ ಎಂಬ ಹೆಸರು ಅತ್ಯಂತ ಪ್ರಭಾವಶಾಲಿಯಾದದ್ದು, ಸಾಗರದ ಬಗ್ಗೆ ರಾಜ್ಯದ ಎಲ್ಲ ವಲಯ ಗಮನಿಸುತ್ತಲೆ ಇರುತ್ತದೆ. ಇಲ್ಲಿನ ವಿಶ್ವವಿಖ್ಯಾತ ಜೋಗ ಜಲಪಾತ, ನೀನಾಸಂ, ಚರಕದಂತಹ ಸಂಸ್ಥೆಗಳು ವಿಶ್ವಮಟ್ಟದಲ್ಲಿ ಈ ಊರಿನ ಹೆಗ್ಗಳಿಕೆ ಹೆಚ್ಚಿಸಿದೆ. ಜೊತೆಗೆ ಇಲ್ಲಿನ ಜನರ ಪ್ರಜ್ಞಾವಂತಿಕೆಯೂ ಗಮನಾರ್ಹ ಎಂದು ತಿಳಿಸಿದರು.
ತಾ. ಕಸಾಪ ಅಧ್ಯಕ್ಷ ವಿ.ಟಿ. ಸ್ವಾಮಿ ಮಾತನಾಡಿ, ಡಿಸೋಜ ಅವರಿಗೆ ಸಮ್ಮೇಳನಾಧ್ಯಕ್ಷತೆ ದೊರಕಿರುವುದು ಮಲೆನಾಡಿಗೆ ಸಂದ ಗೌರವವಾಗಿದೆ. ಮಲೆನಾಡಿನ ಜನರ ಬಹುಕಾಲದ ಆಸೆ ಈಡೇರಿದ್ದು, ಸದ್ಯದಲ್ಲಿಯೇ ಸಾಗರ ಜನತೆಯ ಪರವಾಗಿ ನಾ. ಡಿಸೋಜ ಅವರಿಗೆ ಪೌರಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಮಲೆನಾಡಿನ ಜನರು ಹೆಮ್ಮೆ ಪಟ್ಟುಕೊಳ್ಳುವಂತೆ ಡಿಸೋಜ ಅವರು ಸಮ್ಮೇಳನದ ಅಧ್ಯಕ್ಷರಾಗುವಲ್ಲಿ ಪ್ರಮುಖಪಾತ್ರ ವಹಿಸಿದ ಪರಿಷತ್ತಿನ ಕೇಂದ್ರ ಸಮಿತಿ ಅಧ್ಯಕ್ಷರಾದ ಪುಡಂಲೀಕ ಹಾಲಂಬಿ ಹಾಗೂ ಪದಾಧಿಕಾರಿಗಳಿಗೆ ಮತ್ತು ಜಿಲ್ಲಾ ಕಸಾಪ ಅಧ್ಯಕ್ಷ ಡಿ. ಮಂಜುನಾಥ್ ಹಾಗೂ ಪದಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಪರಿಷತ್ ಕಾರ್ಯದರ್ಶಿಗಳಾದ ವಿ. ಶಂಕರ್, ಜಿ. ನಾಗೇಶ್, ಖಜಾಂಚಿ ಎಸ್.ಆರ್. ಭಟ್ ಭಡ್ತಿ, ನಿರ್ದೇಶಕರಾದ ಲೋಕೇಶಕುಮಾರ್, ಡಾ. ವೆಂಕಟೇಶ್ ಜೋಯಿಸ್ ಇನ್ನಿತರರು ಹಾಜರಿದ್ದರು.
--
ಅಂಬೇಡ್ಕರ್ ಮಹಾಪರಿನಿರ್ವಾಣ ದಿನ
ಶಿವಮೊಗ್ಗ: ಸಮಾಜ ಕಲ್ಯಾಣ ಇಲಾಖೆಯು ಡಿ. 6ರಂದು ಬೆಳಗ್ಗೆ 9 ಗಂಟೆಗೆ ನಗರದ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ 57ನೇ ಮಹಾಪರಿನಿರ್ವಾಣ ದಿನವನ್ನು ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಆಚರಿಸಲಾಗುವುದು.
ಇದೇ ಸಂದರ್ಭದಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗಿದ್ದು, ರಕ್ತದಾನಿಗಳು ಶಿಬಿರದಲ್ಲಿ ಪಾಲ್ಗೊಳ್ಳುವಂತೆ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

