ಹೊಸ ವರ್ಷಕ್ಕೆ ಪವರ್ ಕಟ್ ಉಡುಗೊರೆ!
ಶಿವಮೊಗ್ಗ: ಸಾರ್ವಜನಿಕರೇ, ಪವರ್ ಕಟ್ ಎದುರಿಸಲು ಸಜ್ಜಾಗಿ!
ವಾರ್ಷಿಕ ಸಂಪ್ರದಾಯ ಎಂಬಂತಾಗಿರುವ ಪವರ್ ಕಟ್ ಪ್ರಕ್ರಿಯೆ ಈ ಬಾರಿ ಹೊಸ ವರ್ಷದ ಹೊಸ್ತಿಲಿನಲ್ಲೇ ಆರಂಭವಾಗಲಿದೆ.
ಮೆಸ್ಕಾಂ ಹಿರಿಯ ಅಧಿಕಾರಿಗಳು ಈ ಕುರಿತು ಮಾಹಿತಿ ನೀಡಿದ್ದು, ಡಿಸೆಂಬರ್ ಅಂತ್ಯ ಅಥವಾ ಜನವರಿಯಿಂದ ಪವರ್ ಕಟ್ ಮಾಡುವ ಕುರಿತು ಚರ್ಚೆ ನಡೆದಿದೆ. ಆದರೆ, ತೀರ್ಮಾನ ಕೈಗೊಂಡಿಲ್ಲ ಎಂದು 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ಈ ಬಾರಿ ಜಲ ವಿದ್ಯುತ್ ಯೋಜನೆಗಳ ಮೇಲೆ ಹೆಚ್ಚಿನ ನಿರೀಕ್ಷೆ ಇತ್ತು. ಹಾಗೆಯೇ ಸಾಕಷ್ಟು ಮಳೆಯಾಗಿದ್ದರಿಂದ ಬಹುತೇಕ ಡ್ಯಾಂಗಳಲ್ಲಿ ನೀರು ಶೇಖರಣೆಯಾದ ಪರಿಣಾಮ ನಿರೀಕ್ಷೆಯಷ್ಟು ವಿದ್ಯುತ್ ಉತ್ಪಾದನೆ ಮಾಡಲು ಸಾಧ್ಯವಿದೆ. ಆದರೆ, ಬೇಡಿಕೆಯಷ್ಟು ವಿದ್ಯುತ್ತನ್ನು ಜಲವಿದ್ಯುತ್‌ನಿಂದಲೇ ಪೂರೈಸಲು ಸಾಧ್ಯವಿಲ್ಲ ಎಂಬುದು ಜೋಗದ ಕೆಪಿಸಿ ಹಿರಿಯ ಅಧಿಕಾರಿಗಳ ವಿವರಣೆ.
ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ 3 ತಿಂಗಳು ತಡೆರಹಿತ ವಿದ್ಯುತ್ ನೀಡಲಾಗಿದೆ, ಅದೇ ತೃಪ್ತಿ. 2012ರ ಸಾಲಿನಲ್ಲಿ ಸೆಪ್ಟೆಂಬರ್‌ನಿಂದಲೇ ಪವರ್‌ಕಟ್ ಆರಂಭವಾಗಿತ್ತು. ಗ್ರಾಮೀಣ ಭಾಗದಲ್ಲಿ ಹೆಚ್ಚಿನ ವಿದ್ಯುತ್ ವ್ಯತ್ಯಯವಾಗಿತ್ತು. ಅಲ್ಲದೇ, ಏಪ್ರಿಲ್ ವೇಳೆಗೆ ಪವರ್ ಕಟ್ ಪ್ರಮಾಣ ಹೆಚ್ಚಾಗಿತ್ತು. ಆದರೆ, ಈ ಬಾರಿ ಜಲವಿದ್ಯುತ್ ಯೋಜನೆಗಳಿಗೆ ಸಾಕಷ್ಟು ನೀರು ಸಿಕ್ಕಿದ ಪರಿಣಾಮ ಡಿಸೆಂಬರ್‌ವರೆಗೂ ತಡೆರಹಿತ ವಿದ್ಯುತ್ ಪೂರೈಸಲಾಗಿದೆ. ಮುಂದೆ ಏನಾಗುತ್ತದೆ ಹೇಳಲಾಗದು ಎಂದು ಅವರು ಅಭಿಪ್ರಾಯಪಡುತ್ತಾರೆ.
ರಾಜ್ಯದ ಶೇ.50 ರಷ್ಟು ವಿದ್ಯುತ್ ಬೇಡಿಕೆಯನ್ನು ಜಲ ವಿದ್ಯುತ್ ಯೋಜನೆಗಳೇ ಪೂರೈಸುತ್ತಿವೆ. ಉಳಿದಿದ್ದು, ಕಲ್ಲಿದ್ದಲು, ಥರ್ಮಲ್ ಮೂಲದಿಂದ ಮತ್ತು ಕೇಂದ್ರ ಸರ್ಕಾರದ ಗ್ರಿಡ್‌ನಿಂದ ಪೂರೈಕೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಸಮತೋಲನ ಕಾಯ್ದುಕೊಳ್ಳುವ ಉದ್ದೇಶದಿಂದ ರಾಜ್ಯದ ಡ್ಯಾಂಗಳಲ್ಲಿ ಈಗಿರುವ ನೀರನ್ನು ಉಳಿಸಿಕೊಳ್ಳಬೇಕಾಗುತ್ತದೆ. ಇರುವ ನೀರನ್ನೆಲ್ಲಾ ಖಾಲಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಮುಂದಿನ ಜೂನ್ ಆರಂಭದವರೆಗೆ ಅಂದರೆ ಮಳೆಗಾಲ ಆರಂಭದವರೆಗೆ ಇರುವ ಶೇಖರಣೆಯಾದ ನೀರನ್ನು ಹಂಚಿಕೆ ಮಾಡಿಕೊಂಡು ವಿದ್ಯುತ್ ಉತ್ಪಾದಿಸಬೇಕಾಗುತ್ತದೆ. ಹೀಗಾಗಿ, ಹೆಚ್ಚಿನ ವಿದ್ಯುತ್ತನ್ನು ಕಲ್ಲಿದ್ದಲು, ಥರ್ಮಲ್ ಮೂಲದಿಂದಲೇ ನೋಡಿಕೊಳ್ಳಬೇಕಾಗುತ್ತದೆ. ಹಾಲಿ ಉತ್ಪಾದಿಸುತ್ತಿರುವಷ್ಟು ವಿದ್ಯುತ್‌ನ್ನು ಇನ್ನು ಮುಂದೆ ಜಲ ವಿದ್ಯುತ್ ಯೋಜನೆಗಳಿಂದ ನಿರೀಕ್ಷಿಸಲು ಸಾಧ್ಯವಿಲ್ಲ ಎಂಬುದು ಅಧಿಕಾರಿಗಳ ವಿವರಣೆ.
ಪರಿಸ್ಥಿತಿ ಇಷ್ಟಕ್ಕೇ ಸೀಮಿತವಾಗಿಲ್ಲ. ಖಾಸಗಿ ಮೂಲಗಳಿಂದ ಮತ್ತು ಹೊರ ರಾಜ್ಯಗಳಿಂದ ವಿದ್ಯುತ್ ಖರೀದಿ ಅನಿವಾರ್ಯವಾಗಲಿದೆ. ಇದಕ್ಕಾಗಿ ಸರ್ಕಾರ ಸಾಕಷ್ಟು ಹಣ ಮೀಸಲಿಡಬೇಕಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಸರ್ಕಾರದಲ್ಲಿ ವಿದ್ಯುತ್ ಖರೀದಿಸುವಷ್ಟು ಸಾಮರ್ಥ್ಯ ಇಲ್ಲದಿರುವ ಕಾರಣ ವಿದ್ಯುತ್ ಕಡಿತ ಆರಂಭವಾಗಲಿದೆ ಎಂಬ ಮಾತೂ ಇದೆ. ಅದರಲ್ಲೂ ಪ್ರಮುಖವಾಗಿ ಕಲ್ಲಿದ್ದಲು ಲಭ್ಯತೆಯೂ ಚೆನ್ನಾಗಿಲ್ಲದ ಕಾರಣ ಕತ್ತಲಲ್ಲಿ ಕಳೆಯುವುದು ಅನಿವಾರ್ಯವಾಗಲಿದೆ.
ಇದು ಚಳಿಗಾಲವಾದರೂ ಹಗಲಿನ ವೇಳೆಯಲ್ಲಿ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಇದರಿಂದ ನಿತ್ಯದ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಏರುಗತಿಯಲ್ಲಿ ಸಾಗಿರುವ ಬೇಡಿಕೆಯಷ್ಟು ವಿದ್ಯುತ್ತನ್ನು ಪೂರೈಸುವುದು ಒಂದು ಹಂತದವರೆಗೆ ಮಾತ್ರ ಸಾಧ್ಯ. ಹೀಗಾಗಿ, ಜನವರಿ ವೇಳೆಗೆ ಪವರ್ ಕಟ್ ಅನಿವಾರ್ಯ ಎಂಬುದು ಮೆಸ್ಕಾಂ ಅಧಿಕಾರಿಗಳ ವಿವರಣೆ. ಒಟ್ಟಾರೆ 2014ರ ಶುಭಾರಂಭ ಪವರ್ ಕಟ್‌ನಿಂದಲೇ ಆದರೂ ಆಶ್ಚರ್ಯವಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

