ದೇವಾಂಗ ಸಮಾಜ ಶಿಕ್ಷಣಕ್ಕೆ ಒತ್ತು ನೀಡಲಿ
ಕ.ಪ್ರ.ವಾರ್ತೆ ಹೊಳಲ್ಕೆರೆ ಡಿ.10
ತಾಲೂಕು ದೇವಾಂಗ ಸಮುದಾಯ ಭವನ ನಿರ್ಮಾಣಕ್ಕೆ 1 ಕೋಟಿ ಅನುದಾನ ನೀಡುವುದಾಗಿ ಸಮಾಜ ಕಲ್ಯಾಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಆಂಜನೇಯ ಭರವಸೆ ನೀಡಿದರು.
ಇಲ್ಲಿಯ ಶಿಕ್ಷಕರ ಸದನದಲ್ಲಿ ತಾಲೂಕು ನೇಕಾರ ದೇವಾಂಗ ಸಮಾಜ ಮತ್ತು ತಾಲೂಕು ನೇಕಾರ ದೇವಾಂಗ ಸಮಾಜದ ಸರ್ಕಾರ ನೌಕರರ ಸಂಘಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇವಾಂಗ ಸಮಾಜ ತಮ್ಮ ಕುಲ ಕಸುಬಿನ ಜೊತೆಗೆ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ಪ್ರತಿಯೊಬ್ಬರು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಶಾಲಾ -ಕಾಲೇಜುಗಳಿಗೆ ಕಳಿಸಬೇಕು. ದೊಡ್ಡ ದೊಡ್ಡ ಯಂತ್ರಗಳಿಂದ ಬಟ್ಟೆ ತಯಾರು ಮಾಡುತ್ತಿದ್ದು, ಈಗ ಕೈಮಗ್ಗಗಳ ನೇಯ್ಗೆಗೆ ಸಂಚಕಾರ ಬಂದಿದೆ. ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ ಮತ್ತು ಉಮಾಶ್ರೀ ಸಮಾಜದ ಸಂಘಟನೆಗೆ ಹೆಚ್ಚು ಶ್ರಮಿಸಿದ್ದಾರೆ ಎಂದರು.
ನೇಕಾರರ ಸ್ಥಿತಿ ರಾಜ್ಯದಲ್ಲಿ ತುಂಬಾ ಶೋಚನಿಯವಾಗಿದೆ. ಅದರಲ್ಲಿ ಕೆಲವರು ಸ್ಥಿತಿವಂತರಿದ್ದಾರೆ. ಉತ್ತರ ಕರ್ನಾಟಕದಲ್ಲಿ ದೇವಾಂಗ ಸಮಾಜದವರು ಕಷ್ಟದಲ್ಲಿದ್ದಾರೆ. ಸಮಾಜ ಬಾಂಧವರು ಶೈಕ್ಷಣಿಕ, ರಾಜಕೀಯವಾಗಿ ಹಿಂದೆ ಇದ್ದು, ಈ ಸಮುದಾಯಕ್ಕೆ ರಾಜಕೀಯಶಕ್ತಿ ನೀಡಲು ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದಿಂದ ನಟಿ ಉಮಾಶ್ರೀ ಅವರಿಗೆ ಟಿಕೆಟ್ ನೀಡಿದರು. ಅವರು ಆಯ್ಕೆಯಾದ ಮೇಲೆ ಅವರಿಗೆ ಉತ್ತಮ ಖಾತೆ ನೀಡಿದ್ದಾರೆ ಎಂದು ಸಚಿವರು ತಿಳಿಸಿದರು.
ಬೆಂಗಳೂರು ಬಿಎಂಟಿಸಿ ವ್ಯವಸ್ಥಾಪಕ ಡಾ. ಜಿ.ರಮೇಶ್ ದೇವಾಂಗ ನೌಕರರ ಸಂಘ ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿ 60 ಲಕ್ಷ ಜನಸಂಖ್ಯೆ ಇದ್ದರೂ ಸಹ ನಾವು ರಾಜಕೀಯವಾಗಿ ಎಲ್ಲಾ ಸಮಾಜಗಳಿಗಿಂತ ಹಿಂದೆ ಇದ್ದೇವೆ. ಅದಕ್ಕೆ ಕಾರಣ ಶಿಕ್ಷಣದ ಕೊರತೆ. ಸಮಾಜ ಬಾಂಧವರು ಶಿಕ್ಷಣಕ್ಕೆ ಹೆಚ್ಚು ಅದ್ಯತೆ ನೀಡುವ ಮೂಲಕ ಸಮಾಜ ಸಂಘಟನೆಗೆ ಮುಂದಾಗಬೇಕು ಎಂದರು.
ರಾಜ್ಯಮಟ್ಟದ ದೇವಾಂಗ ಸಮಾಜದ ಬೃಹತ್ ಸಮ್ಮೇಳನವನ್ನು ಡಿ.29ರಂದು ಹೊಸದುರ್ಗದಲ್ಲಿ ಹಮ್ಮಿಕೊಂಡಿದ್ದು, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಮನವಿ ಮಾಡಿದರು.
ತಾಲೂಕು ದೇವಾಂಗ ಸಮಾಜದ ಅಧ್ಯಕ್ಷ ಸಿ.ರವಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಮುಂದೆ ಬರಲು ಪ್ರತಿಯೊಬ್ಬರು ಶ್ರಮಿಸಬೇಕು. ಆ ಮೂಲಕ ಸಮಾಜದ ಅಭಿವೃದ್ಧಿಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ನಿವೃತ್ತ ತೋಟಗಾರಿಗೆ ಜಂಟಿ ನಿರ್ದೇಶಕ ಎ.ನಾರಾಯಣಸ್ವಾಮಿ ಮಾತನಾಡಿ, ಜಿಲ್ಲಾ ಕೇಂದ್ರಗಳಲ್ಲಿ ಹಾಸ್ಟೆಲ್ಗಳನ್ನು ಆರಂಭಿಸಬೇಕು. ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರೋತ್ಸಾಹ ನೀಡಬೇಕೆಂದು ಕರೆ ನೀಡಿದರು.
ಸಾಹಿತಿ ಬಾಗೂರು ನಾಗರಾಜಪ್ಪ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಎಸ್.ಆರ್. ಮಂಜುನಾಥ್, ದೇವಾಂಗ ನೌಕರ ಸಂಘದ ಖಜಾಂಚಿ ಆರ್.ಜಗನ್ನಾಥ್, ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಡಿಕ್ಕಿ ಮಾಧವರಾವ್, ಸಮಾಜ ಮುಖಂಡರಾದ ಬಿ.ಪುಟ್ಟಸ್ವಾಮಿ, ಟಿ.ರುದ್ರಸ್ವಾಮಿ, ಬಿ.ಎಚ್. ಬಾಬು, ಎಚ್.ಸಿ. ಪ್ರಭಾಕರ್ ಹಾಗೂ ಸಂಘದ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

