ಶಿವಮೊಗ್ಗ

ವಿದೇಶಿ ರಾಜಕಾರಣಿಗಳಿಗೂ ಗಾಂಧೀಜಿ ಆದರ್ಶ

Published On :

ಕ.ಪ್ರ.ವಾರ್ತೆ   ಚಿತ್ರದುರ್ಗ    ಡಿ.10
ಗಾಂಧೀವಾದ ಎಂಬ ಆದರ್ಶ ಕೇವಲ ದೇಶದ ರಾಜಕಾರಣಿಗಳಲ್ಲಷ್ಟೆ ಅಲ್ಲ, ಹೊರ ದೇಶದ ರಾಜಕಾರಣಿಗಳಲ್ಲೂ ಅಡಗಿದೆ ಎಂದು ಡಾ. ಶಿವಮೂರ್ತಿ ಶರಣರು ತಿಳಿಸಿದರು.
ನಗರದ ಹೊರವಲಯದಲ್ಲಿನ ಸೀಬಾರದ ರಾಷ್ಟ್ರನಾಯಕ ದಿವಂಗತ ಎಸ್. ನಿಜಲಿಂಗಪ್ಪ ಸ್ಮಾರಕದ ಬಳಿ ಹಮ್ಮಿಕೊಂಡಿದ್ದ ಎಸ್. ನಿಜಲಿಂಗಪ್ಪನವರ 111ನೇ ಜನ್ಮದಿನಾಚರಣೆ ಕಾಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ದೇಶದಲ್ಲಿ ಬಸವಣ್ಣ, ಬುದ್ಧ, ಅಂಬೇಡ್ಕರ್ ಸೇರಿದಂತೆ ಹಲವಾರು ಮಹಾನೀಯರ ಆದರ್ಶವಾದಗಳಿವೆ. ಈ ಎಲ್ಲಾ ವಾದಗಳ ನಡುವೆ ಗಾಂಧೀವಾದ ತಾತ್ವಿಕ ಹಾಗೂ ಸೈದ್ಧಾಂತಿಕ ವಾದವಾಗಿ ಗಟ್ಟಿತನದಿಂದ ನೆಲೆಯೂರಿದೆ ಎಂದು ಹೇಳಿದ ಅವರು, ಗಾಂಧೀವಾದಕ್ಕೆ ಕೇವಲ ಭಾರತದಲ್ಲಷ್ಟೆ ಅಲ್ಲದೆ ಹೊರ ದೇಶದಲ್ಲಿನ ನೆಲ್ಸನ್ ಮಂಡೇಲ, ಬರಾಕ್ ಒಬಾಮ ಸೇರಿದಂತೆ ಹಲವಾರು ಮುಖಂಡರು, ರಾಜಕಾರಣಿಗಳು ಪ್ರಭಾವಿತರಾಗಿದ್ದಾರೆ ಎಂದು ಹೇಳಿದರು.
ರಾಜಕಾರಣಿಗಳು ಅಳವಡಿಸಿಕೊಳ್ಳಲಿ: ಎಸ್. ನಿಜಲಿಂಗಪ್ಪ ಹಾಗೂ ನೆಲ್ಸನ್ ಮಂಡೇಲ ಇಬ್ಬರು ಗಾಂಧೀವಾದಿಗಳಾಗಿದ್ದು, ತಮ್ಮ ಸ್ವಾರ್ಥಕ್ಕಾಗಿ ಏನನ್ನೂ ಬಳಸಿಕೊಳ್ಳದೆ ತಮ್ಮ ಜೀವನ ಪೂರ್ತಿ ಜನಸಾಮಾನ್ಯರ ಉದ್ಧಾರಕ್ಕೆ ಸ್ವಂದಿಸಿದ್ದಾರೆ. ಅವರ  ಆದರ್ಶವನ್ನು ಇಂದಿನ ರಾಜಕಾರಣಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ರಾಜಕಾರಣ, ಅಧಿಕಾರದ ಮೂಲಕ ಜನರು ಹಾಗೂ ಜಗತ್ತನ್ನು ತಲುಪುವ ನಿಟ್ಟಿನಲ್ಲಿ ಕೆಲವೇ ಕೆಲವರು ಪ್ರಯತ್ನ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಮಂಡೇಲ ವರ್ಗಭಾವನೆಯನ್ನು ಕಡೆಗಣಿಸಿ, ಮಾನವ ಕಾಳಜಿಯನ್ನು ಇಟ್ಟುಕೊಂಡು ಅನೇಕ ಚಳವಳಿ ನಡೆಸಿ ಜೈಲುವಾಸವನ್ನು ಅನುಭವಿಸಿ, ಅಧಿಕಾರಕ್ಕೆ ಬಂದು ಸ್ವಾತಂತ್ರ್ಯವನ್ನು ತಂದು ಕೊಡುವ ಮೂಲಕ ಎಲ್ಲರಿಗೂ ಬದುಕನ್ನು ಕಟ್ಟಿಕೊಟ್ಟವರು. ಅವರಂತೆಯೇ ನಿಜಲಿಂಗಪ್ಪ ಕೂಡ ಮಕ್ಕಳು, ಅಧಿಕಾರ, ಸ್ವಾರ್ಥವನ್ನು ಬದಿಗಿಟ್ಟು ತಮ್ಮ ತತ್ವ ಸಿದ್ಧಾಂತಗಳಿಗೆ ಒತ್ತು ಕೊಟ್ಟವರು ಎಂದರು.
ಮಾನವ ಪರವಾದ ಕಾಳಜಿಯನ್ನು ಇಟ್ಟುಕೊಂಡು ಕೊನೆಯವರೆಗೂ ಜೀವನ ನಡೆಸುವ ವ್ಯಕ್ತಿ ಕೊನೆಯಲ್ಲಿ ಆದರ್ಶವಾಗಿರುತ್ತಾರೆ ಎಂದು ಹೇಳಿದ ಅವರು ಸೃಷ್ಟಿ ಇರುವವರೆಗೂ ನಿಜಲಿಂಗಪ್ಪ ಆದರ್ಶವಾಗಿ ಉಳಿಯುತ್ತಾರೆ ಎಂದು ಹೇಳಿದರು.
ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಸ್. ನಿಜಲಿಂಗಪ್ಪನವರು ತಮ್ಮ ರಾಜಕೀಯ ಜೀವನದಲ್ಲಿ ಸ್ವಚ್ಛತೆ ಕಾಪಾಡಿಕೊಂಡು ಬಂದಂತವರು. ಅವರು ಬಯಸಿದ್ದರೆ ದೇಶದ ಪ್ರಥಮ ಪ್ರಜೆಯಾಗಿ ಮೆರೆಯಬಹುದಿತ್ತು. ಆದರೆ ಅಂತಹ ಅಧಿಕಾರದ ಆಸೆಯನ್ನು ಅವರು ಬಯಸದೆ, ಸಮಾಜವಾದಿ, ಜಾತ್ಯತೀತ ವ್ಯಕ್ತಿಯಾಗಿ ಸೇವೆ ಸಲ್ಲಿಸಿದವರು. ಅವರ ಆದರ್ಶವನ್ನು ಇಂದಿನ ಯುವ ಪೀಳಿಗೆ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಮೊದಲು ವಿಧಾನಸಭೆಯಲ್ಲಿ ಸಮಾಜಮುಖಿ ಹಾಗೂ ಎಲ್ಲಾ ಜನತೆಗೂ ಅನುಕೂಲವಾಗುವ ವಿಚಾರಗಳ ಬಗ್ಗೆ ಚರ್ಚೆಗಳು ನಡೆಯುತ್ತಿದ್ದವು. ಇಂದು ಕೇವಲ ಗುಡಿ, ಗೋಪುರ, ಭವನಗಳನ್ನು ಕಟ್ಟುವ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಅಂದಿನ ರಾಜಕಾರಣಿಗಳಿಗೂ ಇಂದಿನ ರಾಜಕಾರಣಿಗಳಿಗೂ ಬಹಳಷ್ಟು ವ್ಯತ್ಯಾಸಗಳು ಇವೆ. ಅಂದು ಸ್ವಾತಂತ್ರ ಹೋರಾಟದಲ್ಲಿ ಜೈಲು ಸೇರಿ ಹೊರಬಂದವರಿಗೆ ಹೆಚ್ಚಿನ ಗೌರವ ಸಿಗುತ್ತಿತ್ತು. ಆದರೆ, ಇಂದು ಜೈಲು ಸೇರಿ ಹೊರಬಂದವರಿಗೆ ಯಾವ ರೀತಿ ಕಾಣಬೇಕೋ ತಿಳಿಯದಾಗಿದೆ ಎಂದು ಹೇಳಿದರು.
ಕೇಂದ್ರ ರೇಷ್ಮೆ ಮಂಡಳಿ ಮಾಜಿ ಅಧ್ಯಕ್ಷ ಎಚ್. ಹನುಮಂತಪ್ಪ, ಜೈನುಲ್ಲಾಬ್ದಿನ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.