ಸ್ಥಳಾಂತರವೇ ಚಿದಂಬರ ರಹಸ್ಯ!
ಕ.ಪ್ರ.ವಾರ್ತೆ ಹೊಸನಗರ ಡಿ.10
ವಾರಾಹಿ ಯೋಜನೆ ಬಹುತೇಕ ಅನುಷ್ಠಾನಗೊಂಡಿದ್ದು ಖೈರಗುಂದ(ಮಾಸ್ತಿಕಟ್ಟೆ) ಗ್ರಾಪಂ ವ್ಯಾಪ್ತಿಯಲ್ಲಿ. ಬಿಟ್ಟರೆ ಇಲ್ಲಿಗೆ ಸಮೀಪದ ಯಡೂರು-ಸುಳುಗೋಡು ಗ್ರಾಪಂ ವ್ಯಾಪ್ತಿಯಲ್ಲಿ. ಆದರೆ ನಿರ್ವಹಣೆ ಇಲ್ಲಿಂದ ಕಷ್ಟ ಎಂಬ ಕೆಪಿಸಿ ನಿರ್ಧಾರ ಸಾಕಷ್ಟು ಅನುಮಾನಕ್ಕೆ ಕಾರಣವಾಗಿರುವುದು ಸುಳ್ಳಲ್ಲ. ಸುಸಜ್ಜಿತ ಮಾಸ್ತಿಕಟ್ಟೆ ಕಾಲೋನಿ ತೆರವುಗೊಳಿಸುವುದರ ಹಿಂದಿನ ಉದ್ದೇಶ ಜನರಿಗೆ ಅರ್ಥವಾಗುತ್ತಿಲ್ಲ.
ಖೈರಗುಂದ ವ್ಯಾಪ್ತಿಯ ಸ.ನಂ. 145ರಲ್ಲಿ 60 ಎಕರೆ, ಸ.ನಂ. 137ರಲ್ಲಿ 25 ಎಕರೆ ಸೇರಿ ಒಟ್ಟು 85 ಎಕರೆಯಲ್ಲಿ ಕೆಪಿಸಿಯ ಸುಸಜ್ಜಿತ ಕಾಲೋನಿ ಮೈದಳೆದಿದೆ. ಕಚೇರಿ ಕಟ್ಟಡಗಳು, ವಸತಿ ಕಟ್ಟಡಗಳು ಸೇರಿದಂತೆ ವಿಶಾಲ ಪ್ರದೇಶ ಕಾಲೋನಿಯ ಮುಕುಟಕ್ಕೆ ಗರಿ ಮೂಡಿಸಿದಂತಿದೆ. ಮಾತ್ರವಲ್ಲ ರಸ್ತೆ, ನೀರು, ವಿದ್ಯುತ್ ಮತ್ತು ಮೂಲ ಸೌಕರ್ಯಗಳು ಗಮನಸೆಳೆಯುವಂತಿದೆ.
ಇತ್ತೀಚಿನ ವರ್ಷಗಳಲ್ಲಿ ನಿರ್ಮಾಣ ಕಂಡ ವಸತಿ ಸಮುಚ್ಛಯಗಳು, ಸುಮಾರು 3 ಕೋಟಿ ವೆಚ್ಚದಲ್ಲಿ ನಿರ್ಮಾಣ ಕಂಡ ಎಂಜನಿಯರ್ಸ್ ಕ್ವಾರ್ಟ್ರಸ್ ಉಪಯೋಗವಾಗದೆ ಹಾಗೆ ಉಳಿದಿದೆ. ಕೆಪಿಸಿಯ ಸ್ವಂತ ಜಾಗವಾಗಿರುವ ಕಾರಣ ಇಲ್ಲಿ ನಿರ್ಮಾಣಗೊಳ್ಳುವ ಕಟ್ಟಡಗಳಿಗೆ ಎಂದಿಗೂ ಮೌಲ್ಯವಿರುತ್ತದೆ. ಹಿಂದೆ ಚಕ್ರಾನಗರದಲ್ಲಿದ್ದ ಕಾಲೋನಿ ಅರಣ್ಯಕ್ಕೆ ಸೇರಿದ್ದು ಯೋಜನೆ ಕಾರ್ಯಗತಗೊಂಡ ಮೇಲೆ ಅರಣ್ಯ ಇಲಾಖೆ ವಶಕ್ಕೆ ನೀಡಲಾಗಿದ್ದು. ಕಾಲೋನಿಯಲ್ಲಿದ್ದ ಕೋಟ್ಯಂತರ ಮೌಲ್ಯದ ಕಟ್ಟಡ ಸಾಮಗ್ರಿಗಳು ಲೂಟಿಕೋರರ ಪಾಲಾಗಿದ್ದು ಈಗ ಇತಿಹಾಸ.
ಹೊಸಂಗಡಿಯಲ್ಲಿ ಅರಣ್ಯ ಭೂಮಿ: ಉಡುಪಿ ಜಿಲ್ಲೆ ಹೊಸಂಗಡಿಯಲ್ಲಿ ಕೂಡ ಕೆಪಿಸಿ ಕಾಲೋನಿ ಇದೆ. ಮಾಸ್ತಿಕಟ್ಟೆಯಿಂದ ಹಂತ ಹಂತವಾಗಿ ಸ್ಥಳಾಂತರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕಾಲೋನಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗುತ್ತಿವೆ. ಆದರೆ ಕಾಲೋನಿ ಇರುವ ಪ್ರದೇಶ ಮೆಟಕಲ್ ಗುಡ್ಡದ ವ್ಯಾಪ್ತಿಗೆ ಸೇರಿದ ಸ.ನಂ. 156ರಲ್ಲಿ ಕೇವಲ 1 ಎಕರೆ ಮಾತ್ರ ಕೆಪಿಸಿಗೆ ಮಂಜೂರಾಗಿದೆ. ಉಳಿದಂತೆ ಪೂರ್ತಿಯಾಗಿ ಕೇಂದ್ರ ಮೀಸಲು ಅರಣ್ಯಕ್ಕೆ ಸೇರಿದೆ. ಇತ್ತೀಚೆಗೆ ಕೇಂದ್ರ ಪರಿಸರ ಸಚಿವಾಲಯ ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕೆಲಸಗಳಿಗೆ ನಿಷೇಧ ಮಾಡಿದೆ.
ಸದರಿ ಪ್ರದೇಶ ಕೇಂದ್ರ ಮೀಸಲು ಅರಣ್ಯಕ್ಕೆ ಸೇರಿದ ಹಿನ್ನೆಲೆಯಲ್ಲಿ ಎಂದಿದ್ದರೂ ಅಪಾಯ ಮಾತ್ರ ಖಚಿತ. ಮತ್ತೆ ಆ ಕೆಪಿಸಿ ಕೋಟ್ಯಂತರ ರುಪಾಯಿ ಮೌಲ್ಯದ ಆಸ್ತಿ ಚಕ್ರಾನಗರದಂತೆ ಪೋಲಾಗುವ ಸಾಧ್ಯತೆ ಕೂಡ ಇದೆ. ಹೀಗಿರುವ ಕೆಪಿಸಿಯ ಸ್ವಂತ ಆಸ್ತಿಯಾಗಿರುವ ಮಾಸ್ತಿಕಟ್ಟೆ ವಿಶಾಲ ಪ್ರದೇಶದಲ್ಲಿ ನಿರ್ವಹಣೆ, ಅಭಿವೃದ್ಧಿ ಮಾಡುವುದೆ ಸೂಕ್ತ ಎನ್ನುತ್ತಾರೆ ಸ್ಥಳೀಯರು.
ಟ್ರ್ಯಾಲಿ ಅಳವಡಿಸಲಿ: ಮಾಸ್ತಿಕಟ್ಟೆಯ ಟಾಪ್ ಅಡಿಟ್ನಿಂದ ಕೇವಲ 600 ಮೀ. ಟ್ರ್ಯಾಲಿ ಅಳವಡಿಸಿದರೆ ಮಾಸ್ತಿಕಟ್ಟೆಯಿಂದ ಹೊಸಂಗಡಿಗೆ ಶಿಫ್ಟ್ ಡ್ಯೂಟಿ ಹೋಗಿ ಬರಲು ಪೂರಕವಾಗುತ್ತದೆ. ಹೀಗಾದರೆ ಹೇರಳ ಇಂಧನ, ಸಮಯ ಉಳಿತಾಯವಾಗುತ್ತದೆ.
ಈಗಿರುವ ಮಾಸ್ತಿಕಟ್ಟೆ ಕಾಲೋನಿಯಲ್ಲಿ ಕಟ್ಟಡಗಳು ಸೇರಿದಂತೆ ಅಭಿವೃದ್ದಿಯಾದಂತೆ ಪ್ರಾಪರ್ಟಿ ಮೌಲ್ಯ ಕೂಡ ಜಾಸ್ತಿಯಾಗುತ್ತದೆ. ಕೆಪಿಸಿ ಸ್ವಂತ ಜಾಗ ಆಗಿರುವ ಕಾರಣ ಸಂಪೂರ್ಣ ಹಕ್ಕು ಸಾಮ್ಯ ಕೆಪಿಸಿಗಿರುತ್ತದೆ ಎಂದು ಯೋಜನಾ ಪ್ರದೇಶದ ತಜ್ಞರು ಅಭಿಪ್ರಾಯ ನೀಡುತ್ತಾ ಬಂದಿದ್ದರೂ ಕೆಪಿಸಿ ಮಾತ್ರ ಈ ಬಗ್ಗೆ ಗಮನ ಹರಿಸದಿರುವುದು ಮಾತ್ರ ವಿಪರ್ಯಾಸ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

