ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು
ಶಿವಮೊಗ್ಗ: ಸಾಗರದ ವಸತಿ ಗೃಹದಲ್ಲಿ ನಡೆದಿದ್ದ ನಿಗೂಡ ಸಾವಿನ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಂಗಳೂರಿನಿಂದ ಜೋಗಕ್ಕೆ ಬಂದ ಕುಟುಂಬವೊಂದು ಜೋಗ ಜಲಪಾತಕ್ಕೆ ಬಿದ್ದು ಸಾಯಲು ನಿರ್ಧರಿಸಿ ಬಳಿಕ ಅದು ಸಾಧ್ಯವಾಗದ ಕಾರಣ ಸಾಗರದ ವಸತಿ ಗೃಹದಲ್ಲಿ ರೂಂ ಪಡೆದು ಆತ್ಮಹತ್ಯೆ ಯತ್ನಿಸಿದ್ದ ಪ್ರಸಂಗ ನಡೆದಿತ್ತು. ಈ ಘಟನೆಯಲ್ಲಿ ಪತಿ ಸಾವಿಗೀಡಾದರೆ ಪತ್ನಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದರು. ಈ ನಡುವೆ ಇವರ ಜತೆ ಬಂದ ಪುತ್ರ ನಿಗೂಢವಾಗಿ ನಾಪತ್ತೆಯಾಗಿದ್ದ. ಇದು ಕೊಲೆಯೋ, ಆತ್ಮಹತ್ಯೆಯೋ ಎಂಬ ಅನುಮಾನಕೂಡ ವ್ಯಕ್ತವಾಗಿತ್ತು.
ಪ್ರಕರಣಕ್ಕೆ ಹೊಸ ತಿರುವು: ಇದೇ ಸಂದರ್ಭದಲ್ಲಿ ಜೋಗದಲ್ಲಿ ಒಂದು ಅಪರಿಚಿತ ಶವ ಸಿಕ್ಕಿದ್ದು, ಅದು ಆತನದ್ದೇ ಇರಬಹುದೆಂದು ಪೊಲೀಸರು ಶಂಕಿಸಿದ್ದರು. ಜೊತೆಗೆ ಘಟನೆಯ ಹಿನ್ನೆಲೆಯ ಹುಡುಕಾಟದಲ್ಲೇ ಪೊಲೀಸರಿದ್ದರು. ಆದರೀಗ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.
ಅಂದಿನ ಘಟನೆಯಲ್ಲಿ ಬೆಂಗಳೂರಿನ ಬಿಇಎಂಎಲ್ ನಿವೃತ್ತ ಉದ್ಯೋಗಿ ಕಸ್ತೂರಿ ರಂಗನ್(72) ಮೃತಪಟ್ಟವರು. ಇವರ ಪತ್ನಿ ರಮಾ ಕೆ.ರಂಗನ್ (60) ಸಾವಿನ ಅಪಾಯದಿಂದ ಪಾರಾಗಿ ಆಸ್ಪತ್ರೆಯಲ್ಲಿದ್ದು, ಸದ್ಯ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಪುತ್ರ ಕಣ್ಮರೆ: ಅಂದು ಕಸ್ತೂರಿ ರಂಗನ್ ಶವ ಕುತ್ತಿಗೆಗೆ ದಿಂಬಿನ ಕವರ್ ಸುತ್ತಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ರಮಾ ಅವರ ಕತ್ತಿನ ಭಾಗ ಸೀಳಿತ್ತು. ಇವರ ಜೊತೆಯಲ್ಲಿ ಬಂದಿದ್ದ ಪುತ್ರ ನಾಗಾನಂದನ್ ಕಣ್ಮರೆಯಾಗಿದ್ದ.
ಬೆಂಗಳೂರಿನ ಕೋರಮಂಗಲ ನಿವಾಸಿಗಳಾದ ಕಸ್ತೂರಿ ರಂಗನ್ ಕುಟುಂಬ ಅಕ್ಟೋಬರ್ 29ರ ಸೋಮವಾರ ಬೆಳಗ್ಗೆ 11.30ಕ್ಕೆ ಇಲ್ಲಿನ ರಾಷ್ಟ್ರೀಯ ಹೆದ್ದಾರಿ 206ರ ಪಕ್ಕದಲ್ಲಿರುವ ಲಾಡ್ಜ್ನಲ್ಲಿ ರೂಂ ಪಡೆದಿದ್ದಾರೆ. ಮಂಗಳವಾರ ಬೆಳಗ್ಗೆ ರೂಂ ಬಾಯ್ ಕೋಣೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ರಮಾ ಅವರನ್ನು ನೋಡಿ ಮಾಲಿಕರಿಗೆ ವಿಷಯ ತಿಳಿಸಿದ್ದಾನೆ. ತಕ್ಷಣ ರಮಾರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆರ್ಥಿಕ ಸಮಸ್ಯೆ: ಕಸ್ತೂರಿ ರಂಗನ್ ಅವರನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿತ್ತು. ಕುಟುಂಬ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದು, ಆತ್ಮಹತ್ಯೆಗೆ ಪ್ರೇರಣೆ ನೀಡಿತ್ತೆಂಬುದು ಅಂದಿನ ಮಾಹಿತಿ. ರೂಮಿನಲ್ಲಿ 3 ತುಂಬಿದ ಸೀಮೆಎಣ್ಣೆ ಕ್ಯಾನ್ ಹಾಗೂ ನಿದ್ರೆ ಮಾತ್ರೆ ಸಹ ಪತ್ತೆಯಾಗಿದ್ದವು. ಇದನ್ನೆಲ್ಲ ನೋಡಿದಾಗ ಬೆಂಗಳೂರಿನಿಂದ ಆತ್ಮಹತ್ಯೆ ಮಾಡಿಕೊಳ್ಳಲು ಇಲ್ಲಿಗೆ ಆಗಮಿಸಿರಬಹುದು ಎನ್ನುವ ಅನುಮಾನ ವ್ಯಕ್ತವಾಗಿತ್ತು.
ನಾಗನಂದನ್ ಚೆನ್ನೈನಲ್ಲಿ ಸಾಫ್ಟವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಇತ್ತೀಚೆಗೆ ಅಲ್ಲಿನ ಉದ್ಯೋಗ ಬಿಟ್ಟು ಬೆಂಗಳೂರಿನಲ್ಲಿ ಕೆಲಸ ಹುಡುಕುತ್ತಿದ್ದ.
ಗೊಂದಲದ ಹೇಳಿಕೆ: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಮಾ ಪೊಲೀಸರಿಗೆ ನೀಡಿದ ಹೇಳಿಕೆ ಸಾಕಷ್ಟು ಗೊಂದಲಕರವಾಗಿದ್ದವು. ಸಾಲದಿಂದ ನೊಂದು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೆವು. ಇದಕ್ಕಾಗಿ ಪುತ್ರನ ಜೊತೆಗೂಡಿ ಜೋಗ ಜಲಪಾತಕ್ಕೆ ಬಿದ್ದು ಸಾಯಲು ಬೆಂಗಳೂರಿನಿಂದ ಬಂದಿದ್ದೆವು. ಆದರೆ ಜೋಗದಲ್ಲಿ ಸಾಯಲು ಅವಕಾಶ ದೊರಕದ ಕಾರಣ ವಸತಿ ಗೃಹದಲ್ಲಿ ರೂಂ ಪಡೆದಿದ್ದವು. ಅಲ್ಲಿ ದಿಂಬಿನ ಕವರ್ ಮತ್ತು ಚಾಕು ಸಹಾಯದಿಂದ ಸಾಯಲು ನಿರ್ಣಯಿಸಿದ್ದೆವು ಎಂದಿದ್ದರು.
ಆದರೆ, ಸಾಯಲು ನಿರ್ಧರಿಸಿದ್ದರೆ ಇವರ ಜೊತೆಯಲ್ಲಿದ್ದ ಪುತ್ರ ನಾಪತ್ತೆಯಾಗಿರುವುದು ಏಕೆ ಎಂಬ ಪ್ರಶ್ನೆ ಉದ್ಭವಿಸಿತ್ತು.
ಈ ಘಟನೆ ನಡೆದ ನಾಲ್ಕು ದಿನದ ನಂತರ ಜೋಗದಲ್ಲಿ ಒಂದು ಶವ ಪತ್ತೆಯಾಗಿದ್ದು, ಅದು ನಾಗಾನಂದನ್ನದ್ದೇ ಎಂದು ಶಂಕಿಸಲಾಗಿತ್ತು. ಆತನ ಪತ್ನಿ ಕೂಡ ಇದು ತನ್ನ ಪತಿಯನ್ನೇ ಹೋಲುವಂತಿದೆ ಎಂದು ಹೇಳಿದ್ದು, ಶವಸಂಸ್ಕಾರ ಕೂಡ ನಡೆದಿತ್ತು.
ಮೃತ ಪ್ರತ್ಯಕ್ಷ: ಆದರೆ, ನಾಗಾನಂದನ್ ಇದೀಗ ಪೊಲೀಸರ ಮುಂದೆ ಪ್ರತ್ಯಕ್ಷವಾಗಿದ್ದಾನೆ. ಬೆಂಗಳೂರಿನ ಕೋರಮಂಗಲ ಪೊಲೀಸರ ಮುಂದೆ ಶರಣಾಗಿದ್ದು, ಡಿ.11ರಂದು ಪೊಲೀಸರು ವಿಚಾರಣೆಗೆ ಸಾಗರಕ್ಕೆ ಕರೆತಂದಿದ್ದಾರೆ.
ಅಂದು ನಡೆದಿದ್ದು ಆತ್ಮಹತ್ಯೆಯೋ, ಕೊಲೆಯೋ ಎಂಬುದು ವಿಚಾರಣೆವೇಳೆ ಹೊರಬರಬೇಕಿದೆ.
ಪೊಲೀಸ್ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ: ಪ್ರಕರಣ ದಾಖಲು
ಶಿವಮೊಗ್ಗ: ಮಹಿಳೆಯೊಬ್ಬರು ಪೊಲೀಸ್ ಸಬ್ಇನ್ಸ್ ಪೆಕ್ಟರ್ ಕಣ್ಣಿಗೆ ಖಾರದಪುಡಿ ಎರಚಿರುವ ಘಟನೆ ಭದ್ರಾವತಿಯ ಹಳೇ ಪೊಲೀಸ್ ಠಾಣೆಯಲ್ಲಿ ಬುಧವಾರ ನಡೆದಿದೆ.
ಸ್ವಪ್ನ ಎಂಬ ಮಹಿಳೆ ಬೆಂಗಳೂರಿನ ಯುವಕನ ಜೊತೆ ಮದುವೆಯಾಗಿದ್ದು, ಆತನ ವಿರುದ್ಧ ದೂರು ದಾಖಲಿಸಲು ಪೊಲೀಸ್ ಠಾಣೆಗೆ ಬಂದಿದ್ದರು. ದೂರನ್ನು ಗಮನಿಸಿದ ಇನ್ಸ್ಪೆಕ್ಟರ್ ಲಕ್ಷ್ಮೀಕಾಂತ್ ಈ ದೂರು ಈಗಾಗಲೇ ಬೇರೆ ಠಾಣೆಯಲ್ಲಿ ದಾಖಲಾಗಿದೆ. ಹಾಗಾಗಿ ಈ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲು ಬರುವುದಿಲ್ಲ. ಅದೇ ಠಾಣೆಯಲ್ಲಿ ಹೋಗಿ ವಿಚಾರಿಸಿ ಎಂದು ಸಲಹೆ ನೀಡಿದ್ದಾರೆ.
ಈ ವೇಳೆ ಕೋಪಗೊಂಡ ಮಹಿಳೆ ಇನ್ಸ್ಪೆಕ್ಟರ್ ಕಣ್ಣಿಗೆ ಕಾರದ ಪುಡಿ ಎರಚಿದ್ದಾಳೆ. ಹಳೇ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

