ಶಿವಮೊಗ್ಗ

'ಸ್ಲಂ ಮುಕ್ತ ಶಿವಮೊಗ್ಗ'ಕ್ಕಾಗಿ ಯೋಜನೆ

Published On :

ಶಿವಮೊಗ್ಗ: ನಗರವನ್ನು ಸ್ಲಂ ಮುಕ್ತವಾಗಿಸುವ ನಿಟ್ಟಿನಲ್ಲಿ ಕೇಂದ್ರ- ರಾಜ್ಯ ಸರ್ಕಾರ ಜಂಟಿಯಾಗಿ ರೂಪಿಸಿರುವ ಯೋಜನೆ ಕಾರ್ಯಾರಂಭ ಮಾಡಿದ್ದು, ತಜ್ಞರ ತಂಡ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸುವ ಕಾರ್ಯಕ್ಕೆ ಕೈಹಾಕಿದೆ.
ರಾಜೀವ್ ಆವಾಸ್ ಯೋಜನೆ ಅಡಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ನಗರ ವ್ಯಾಪ್ತಿಯಲ್ಲಿ ಬರುವ 52 ಸ್ಲಂ ವಾಸಿಗಳಿಗೆ ಮನೆ ಕಟ್ಟಿಕೊಡಲಾಗುತ್ತದೆ. ಜೊತೆಗೆ ಮೂಲ ಸೌಕರ್ಯ ನೀಡಲಾಗುತ್ತದೆ.
ಯೋಜನೆ ವಿವರಣೆ: ಪ್ರತಿ ಸ್ಲಂ ಕುಟುಂಬಗಳಿಗೆ ಐದು ಚದರದ ಮನೆ ನಿರ್ಮಿಸಿಕೊಡಲಾಗುತ್ತದೆ. ಪ್ರತಿ ಮನೆಯ ವೆಚ್ಚ 4 ಲಕ್ಷ. ಇದರಲ್ಲಿ ಶೇ.75ರಷ್ಟನ್ನು ಕೇಂದ್ರ ಸರ್ಕಾರ ನೀಡಿದರೆ, ಶೇ. 15ರಷ್ಟನ್ನು ರಾಜ್ಯ ಸರ್ಕಾರ, ಉಳಿದ ಶೇ.10ನ್ನು ಫಲಾನುಭವಿ ನೀಡಬೇಕಾಗುತ್ತದೆ.
ಮನೆ ನಿರ್ಮಾಣದೊಂದಿಗೆ ಚರಂಡಿ, ಕುಡಿವ ನೀರಿನ ವ್ಯವಸ್ಥೆ, ರಸ್ತೆ ಸೇರಿದಂತೆ ಈ ಭಾಗದಲ್ಲಿ ಅಂಗನವಾಡಿ, ಪಾರ್ಕ್ ಸೇರಿದಂತೆ ವಿವಿಧ ಸೌಲಭ್ಯ ಕಲ್ಪಿಸಲಾಗುತ್ತದೆ. ಈ ಕಾರ್ಯಕ್ಕೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರದ ಜೊತೆಗೆ ಸ್ಥಳೀಯ ಸಂಸ್ಥೆ ಹಣ ವಿನಿಯೋಗಿಸುತ್ತವೆ.
ಈಗ ಯಾವ ಹಂತದಲ್ಲಿದೆ?: ಆರಂಭದಲ್ಲಿ ಯೋಜನೆಗೆ ಶಿವಮೊಗ್ಗ ಪಟ್ಟಣ ಆಯ್ಕೆಯಾಗುತ್ತಿದ್ದಂತೆ ಅಧಿಕಾರಿಗಳು ಒಂದು ವರದಿ ಸಿದ್ಧಪಡಿಸಿ ಸಲ್ಲಿಸಲಾಗಿತ್ತು. ಎರಡನೇ ಹಂತವಾಗಿ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿ ಸಲ್ಲಿಸಬೇಕಾಗಿದ್ದು, ಈ ಕಾರ್ಯಕ್ಕಾಗಿ ತಜ್ಞರ ತಂಡ ರಚಿಸಲಾಗಿದೆ.
ಪ್ರಾಜೆಕ್ಟ್ ಎಂಜಿನಿಯರ್ ಎಕ್ಸ್ಪರ್ಟ್, ಪ್ಲಾನ್ ಎಂಜಿನಿಯರ್, ಸೋಶಿಯನ್ ಡೆವಲಪ್ಮೆಂಟ್ ಸ್ಪೆಷಲಿಸ್ಟ್, ಕೆಪಾಸಿಟಿ ಬಿಲ್ಡಿಂಗ್ ಎಕ್ಸ್ಪರ್ಟ್... ಹೀಗೆ ಬೇರೆ ಕ್ಷೇತ್ರದ ತಜ್ಞರನ್ನು ಸರ್ಕಾರ ಕಾಲಮಿತಿಯಲ್ಲಿ ನೇಮಕ ಮಾಡಿಕೊಂಡಿದೆ.
ಈ ತಂಡ ಮೊದಲು ಗುರುತಿಸಲ್ಪಟ್ಟ ಪ್ರತಿ ಸ್ಲಂಗೆ ಭೇಟಿ ಕೊಟ್ಟು ಅಲ್ಲಿನ ಸಾಧ್ಯತೆ ಸರ್ವೆ ಮಾಡಲಿದೆ. ಜೊತೆಗೆ ಮ್ಯಾಪಿಂಗ್ ಕೂಡ ಮಾಡಲಿದೆ. ಇದಕ್ಕೂ ಮುನ್ನ ಕಾರ್ಯಚಟುವಟಿಕೆ ತಿಳಿಸಿಕೊಡುವ ಸಲುವಾಗಿ ಕಾರ್ಯಾಗಾರ ನಡೆಸಲಾಗುತ್ತಿದೆ. ಹಾಲಿ ಸ್ಲಂನಲ್ಲಿರುವ ಕಮ್ಯುನಿಟಿ ಆಧಾರಿತ ಸಂಘಟನೆಯ ಮುಖಂಡರು, ಸ್ಥಳೀಯ ಜನಪ್ರತಿನಿಧಿಗಳನ್ನು ಮುಂದಿಟ್ಟುಕೊಂಡು ಸ್ಲಂ ನಿವಾಸಿಗಳ ಮನವೊಲಿಸುವ ಕಾರ್ಯ ನಡೆಯಲಿದೆ. ಇದಾದ ನಂತರ ವಿಸ್ತೃತ ವರದಿ ಕೇಂದ್ರಕ್ಕೆ ಸಲ್ಲಿಕೆಯಾಗಲಿದೆ.
ಯೋಜನೆ ಹೀಗಿರುತ್ತದೆ... ಮೊದಲ ಆದ್ಯತೆಯಾಗಿ ಸರ್ಕಾರಿ ಜಮೀನಿನಲ್ಲಿರುವ ಸ್ಲಂಗಳನ್ನು ಕೇಂದ್ರೀಕರಿಸಲಾಗುತ್ತದೆ. ಏಕೆಂದರೆ, ಜಾಗದ ಸಮಸ್ಯೆ ಇರುವುದಿಲ್ಲ. ಕೆಲವು ಸ್ಲಂಗಳು ಖಾಸಗಿ ಜಮೀನುಗಳಲ್ಲಿವೆ. ಅವುಗಳ ಬಗ್ಗೆ ಮುಂದಿನ ಹಂತದಲ್ಲಿ ಚರ್ಚಿಸಿ ತೀರ್ಮಾನಿಸಲಾಗುತ್ತದೆ. ಸರ್ಕಾರಿ ಜಾಗಕ್ಕೆ ಸ್ಥಳಾಂತರ ಅಥವಾ ಬೇರೆ ವ್ಯವಸ್ಥೆ ಮಾಡಲಾಗುತ್ತದೆ. ಹಾಲಿ ಇರುವ ಸ್ಥಳಾವಕಾಶದಲ್ಲಿ ಅವಕಾಶದಷ್ಟು ಕುಟುಂಬಗಳಿಗೆ ನೆಲೆ ಕಲ್ಪಿಸಲು ಸಾಧ್ಯವಾಗದೇ ಇದ್ದಲ್ಲಿ, ಎರಡು ಅಂತಸ್ತಿನ ಮನೆ ನಿರ್ಮಿಸಿ ಅವಕಾಶ ಕಲ್ಪಿಸಲಾಗುತ್ತದೆ. ಮನೆ ನಿರ್ಮಾಣವಾಗುವವರೆಗೆ ಸಮೀಪದ ಸ್ಥಳಗಳಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸಿಕೊಡಲಾಗುತ್ತದೆ. ಯೋಜನಾ ವರದಿ ತಯಾರಿಸುವಾಗ ಸೂಚಿತ ಪ್ರದೇಶದ ಜನರ ಅನುಕೂಲಕ್ಕಾಗಿ ಗ್ರಂಥಾಲಯ, ಅಂಗನವಾಡಿ, ಪಾರ್ಕ್ ಜೊತೆಗೆ ಚರಂಡಿ ವ್ಯವಸ್ಥೆ, ಕುಡಿವ ನೀರಿನ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತದೆ.


ಇವರೇನಂತಾರೆ ?


ಶಿವಮೊಗ್ಗವನ್ನು ಸ್ಲಂ ಮುಕ್ತ ನಗರವನ್ನಾಗಿಸುವ ನಿಟ್ಟಿನಲ್ಲಿ ರಾಜೀವ್ ಆವಾಸ್ ಯೋಜನೆ ಜಾರಿಯಲ್ಲಿದ್ದು, ವಿಸ್ತೃತ ಯೋಜನಾ ವರದಿಯನ್ನು ಸಿದ್ಧಪಡಿಸುವ ಪ್ರಕ್ರಿಯೆ ಇಷ್ಟರಲ್ಲೇ ಆರಂಭವಾಗುತ್ತಿದೆ. ತಜ್ಞರನ್ನು ಈ ಸಂಬಂಧ ನೇಮಕಾತಿ ಮಾಡಿಕೊಳ್ಳಲಾಗಿದೆ
- ಎಚ್.ಆರ್. ರಾಜಪ್ಪ
ಯೋಜನಾ ನಿರ್ದೇಶಕ, ಜಿಲ್ಲಾ ನಗರ ಯೋಜನಾ ಶಾಖೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.