ಶಿವಮೊಗ್ಗ

ಖಾತ್ರಿ ಇನ್ನಷ್ಟು ಯಶಸ್ಸು ಸಾಧಿಸಲಿ

Published On :

ಕ.ಪ್ರ. ವಾರ್ತೆ     ಸಾಗರ     ಡಿ.12
ದೇಶಕ್ಕೆ ಸಮಾಜವಾದಿ ಸಿದ್ಧಾಂತ ನೀಡಿದ ಸಾಗರ ಕ್ಷೇತ್ರದಲ್ಲಿ ದುಡಿಯುವ ಕೈಗಳಿಗೆ ಕೆಲಸ ಕೊಡುವ ಉದ್ಯೋಗಖಾತ್ರಿ ಯೋಜನೆ ಹೆಚ್ಚು ಯಶಸ್ಸು ಕಾಣುವಂತಾಗಬೇಕು ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಹೇಳಿದರು.
ಇಲ್ಲಿನ ತಾಪಂ ಸಭಾಂಗಣದಲ್ಲಿ ಗುರುವಾರ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಜಾಗೃತಿ ಕಾರ್ಯಾಗಾರ ಉದ್ಘಾಟಿಸಿ, ನನ್ನ ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲಿಯೇ ಉದ್ಯೋಗಖಾತ್ರಿ ಯೋಜನೆ ನಿರೀಕ್ಷಿತ ಯಶಸ್ಸು ಸಾಧಿಸದೆ ಹೋಗಿರುವುದು ನಿಜಕ್ಕೂ ತಲೆತಗ್ಗಿಸುವ ವಿಚಾರವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಮನವರಿಗೆ ಅಗತ್ಯ: ಉದ್ಯೋಗ ಪಡೆಯುವುದು ನಿಮ್ಮ ಹಕ್ಕು ಎನ್ನುವುದನ್ನು ಜಾಬ್ ಕಾರ್ಡ್ದಾರರಿಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡಬೇಕು. ಗ್ರಾಮಾಂತರ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರು ಉದ್ಯೋಗಖಾತ್ರಿ ಕೆಲಸ ಮಾಡಿದರೆ ಕೂಲಿ ಪಾವತಿ ವಿಳಂಬ ಎನ್ನುವ ಮನೋಭಾವ ಹೊಂದಿದ್ದಾರೆ.
ಅದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಎಂಟು ದಿನದೊಳಗೆ ಕೂಲಿ ಪಾವತಿ ಮಾಡಲು ಅಧಿಕಾರಿಗಳು ಗಮನ ಹರಿಸಬೇಕು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ವೈಫಲ್ಯತೆ ಹೊಂದಿದ ಗ್ರಾಪಂ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಪಿಡಿಒ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ರು. 25 ಕೋಟಿ ಗುರಿ: ಉದ್ಯೋಗಖಾತ್ರಿ ಯೋಜನೆಯಡಿ ತಾಲೂಕಿನಲ್ಲಿ ಈ ಸಾಲಿನಲ್ಲಿ ರು. 25 ಕೋಟಿ ಗುರಿ ಹೊಂದಲಾಗಿತ್ತು. ಈತನಕ ರು. 5.25 ಕೋಟಿ ಮಾತ್ರ ಖರ್ಚಾಗಿದೆ. ಉಳಿದ 3 ತಿಂಗಳಿನೊಳಗೆ ಅತಿ ಹೆಚ್ಚು ಹಣ ಖರ್ಚು ಮಾಡುವ ಬಗ್ಗೆ ಗಮನಹರಿಸಬೇಕು. ಪ್ರತಿ ಪಂಚಾಯ್ತಿಯಲ್ಲಿ ತಲಾ ರು. 30 ಲಕ್ಷ ಖರ್ಚು ಮಾಡುವ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದರು.
ರಾಜ್ಯದ ಹಲವು ಅನೇಕ ಮಂತ್ರಿಗಳಿಗೆ ಹಾಗೂ ಶಾಸಕರಿಗೆ ಈ ಯೋಜನೆ ಯಶಸ್ವಿ ಅನುಷ್ಠಾಗೊಳಿಸುವ ಬಗ್ಗೆ ಮನಸ್ಸಿದ್ದಂತೆ ಕಾಣುತ್ತಿಲ್ಲ. ಕಳೆದ ಸಾಲಿನಲ್ಲಿ ರಾಜ್ಯಕ್ಕೆ ಉದ್ಯೋಗ ಖಾತ್ರಿ ಯೋಜನೆಯಡಿ ರು. 15,000 ಕೋಟಿ ಖರ್ಚು ಮಾಡುವ ಅವಕಾಶವಿತ್ತು. ಆದರೆ ಕೇವಲ ರು. 3,000 ಕೋಟಿ ಖರ್ಚಾಗಿದೆ. ಜನರನ್ನು ಜಾಗೃತಿಗೊಳಿಸುವಲ್ಲಿ ಆಗಿರುವ ವೈಫಲ್ಯವೆ ಯೋಜನೆ ಹಿನ್ನಡೆ ಅನುಭವಿಸಲು ಕಾರಣವಾಗಿದೆ ಎಂದರು.
ತಾಪಂ ಅಧ್ಯಕ್ಷ ಹರೀಶ್ ಗಂಟೆ, ಉಪಾಧ್ಯಕ್ಷೆ ಗೌರಮ್ಮ, ಜಿಪಂ ಸದಸ್ಯೆ ಲಲಿತಾ ನಾರಾಯಣ್, ಎ.ಪಿ.ಎಂ.ಸಿ. ಸದಸ್ಯ ಹೊಳೆಯಪ್ಪ, ಕಾರ್ಯನಿರ್ವಹಣಾಧಿಕಾರಿ ಸಿದ್ದಪ್ಪ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.