ನೇಮಕಾತಿ ಪಾರದರ್ಶಕವಾಗಿರಲಿ
ಕ.ಪ್ರ. ವಾರ್ತೆ ಶಿವಮೊಗ್ಗ ಡಿ.13
ಶಿವಮೊಗ್ಗ ಹಾಲು ಒಕ್ಕೂಟದ ಮೂಲಕ ನಡೆಯುತ್ತಿರುವ ನೇಮಕಾತಿ ಸಂದರ್ಶನ ಪ್ರಕ್ರಿಯೆಯನ್ನು ತಡೆಹಿಡಿದು, ಪಾರದರ್ಶಕತೆಯ ಮೂಲಕ ನೇಮಕಾತಿ ನಡೆಸುವಂತೆ ಒತ್ತಾಯಿಸಿ ನಗರ ಕಾಂಗ್ರೆಸ್ ಸಮಿತಿ ವತಿಯಿಂದ ಶುಕ್ರವಾರ ಜಿಲ್ಲಾಡಳಿತಕ್ಕೆ ಮನವಿ ಅರ್ಪಿಸಿತು.
ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು, ಪಾರದರ್ಶಕವಾಗಿ ನೇಮಕಾತಿ ನಡೆಯಬೇಕೆಂದು ಆಗ್ರಹಿಸಿ ಘೋಷಣೆ ಕೂಗಿದರು.
ಕರ್ನಾಟಕ ಹಾಲು ಒಕ್ಕೂಟದ ಅಧೀನಕ್ಕೊಳಪಟ್ಟ ಶಿಮುಲ್ನಲ್ಲಿ ಖಾಲಿ ಇರುವ 103 ವಿವಿಧ ಹುದ್ದೆಗಳ ಭರ್ತಿಗಾಗಿ ಅರ್ಜಿ ಕರೆಯಲಾಗಿತ್ತು. ಇದಕ್ಕೆ ಸುಮಾರು 7000ಕ್ಕೂ ಅಧಿಕ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಈಗಾಗಲೇ ಶಿಮುಲ್ ಆಡಳಿತ ಮಂಡಳಿ ಈ ಎಲ್ಲಾ ಅರ್ಜಿಗಳನ್ನು ಪರಿಶೀಲಿಸಿ ಆಯಾ ಹುದ್ದೆಗೆ ನಿಗದಿತ ವಿದ್ಯಾರ್ಹತೆಯಲ್ಲಿ ಅಭ್ಯರ್ಥಿಗಳು ಪಡೆದಿರುವ ಅಂಕಗಳನ್ನು ಆಧರಿಸಿ ಜೇಷ್ಠತಾ ಪಟ್ಟಿ (ಮೆರಿಟ್ ಲಿಸ್ಟ್ ಸಿದ್ಧಪಡಿಸಿರುವುದಾಗಿ ತಿಳಿದುಬಂದಿದೆ. ಹೀಗೆ ಸಿದ್ಧಪಡಿಸಿದ ಮೆರಿಟ್ ಲಿಸ್ಟ್ ಆಧರಿಸಿ ಪ್ರತಿ ಒಂದು ಹುದ್ದೆಗೆ ತಲಾ 1.5ರ ಅನುಪಾತದಲ್ಲಿ ಸಂದರ್ಶನಕ್ಕೆ ಹಾಜರಾಗಲು ಅಭ್ಯರ್ಥಿಗಳಿಗೆ ಸೂಚಿಸಲಾಗಿದೆ.
ಕಾರ್ಯಕರ್ತರ ಆರೋಪ: ಆದರೆ, ಈ ಪ್ರಕ್ರಿಯೆಯಲ್ಲಿ ಅವ್ಯವಹಾರ- ಅಕ್ರಮಗಳು ನಡೆಯುತ್ತಿರುವ ಬಗ್ಗೆ ನೊಂದ ಅಭ್ಯರ್ಥಿಗಳು ಹಾಗೂ ಪೋಷಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಕೊರ್ಯಕರ್ತರು ಆರೋಪಿಸಿದರು.
ಪ್ರತಿ ಹುದ್ದೆಗೆ 1.5ರ ಅನುಪಾತದಲ್ಲಿ ಸಂದರ್ಶನಕ್ಕೆ ಹಾಜರಾಗುವವರಲ್ಲಿಯೇ ಹೆಚ್ಚಿನ ಹಣ ಸಂದಾಯ ಮಾಡುವವರನ್ನು ಆಯ್ಕೆ ಸಮಿತಿ ಸಂದರ್ಶನದ ವೇಳೆ ಹೆಚ್ಚು ಅಂಕ ನೀಡಿ ಅವರನ್ನು ಆಯ್ಕೆ ಮಾಡಲು ಹುನ್ನಾರ ನಡೆಸಲಾಗುತ್ತಿದೆ. ಇತ್ತೀಚೆಗಷ್ಟೇ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ನಡೆಸಿದ ವಿವಿಧ ನೇಮಕಾತಿಗಳಲ್ಲಿ ಸಂದರ್ಶನದ ವೇಳೆ ಅಕ್ರಮ- ಅವ್ಯವಹಾರಗಳು ನಡೆದಿರುವ ಸಂಬಂಧ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ತನಿಖೆ ನಡೆಸುತ್ತಿರುವುದು ಎಲ್ಲರಿಗೂ ತಿಳಿದಿದೆ. ಇಂತಹದ್ದೇ ಒಂದು ಅಕ್ರಮ ಇಲ್ಲಿ ನಡೆದಿರುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ಕ್ರಮಕ್ಕೆ ಒತ್ತಾಯ: ಈಗಿನ ಶಿಮುಲ್ ಆಡಳಿತ ಮಂಡಳಿಗೆ 90 ದಿನಗಳ ಆಡಳಿತಾವಧಿ ಮಾತ್ರ ಉಳಿದಿದೆ. ನಂತರ ಚುನಾವಣೆ ನಡೆದು ಹೊಸ ಆಡಳಿತ ಮಂಡಳಿ ನೇಮಕಾತಿಯಂತಹ ಮಹತ್ವದ ತೀರ್ಮಾನಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ನೇಮಕಾತಿ ಸಂದರ್ಭಕ್ಕೆ ವಿಶೇಷವಾಗಿ ತಾಂತ್ರಿಕವಾಗಿ ಸರ್ಕಾರಿ ಎನ್ಡಿಡಿ ಬೋರ್ಡ್ ಸದಸ್ಯರನ್ನು ನೇಮಕಾತಿ ಕಮಿಟಿಯಿಂದ ಕೈಬಿಟ್ಟಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಶಿಮುಲ್ ಮೂಲಕ ನಡೆಯುತ್ತಿರುವ ನೇಮಕಾತಿ ಸಂದರ್ಶನ ತಡೆ ಹಿಡಿದು ಸರ್ಕಾರ ಪಾರದರ್ಶಕವಾಗಿ ನೇಮಕಾತಿ ನಡೆಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ನಗರ ಕಾಂಗ್ರೆಸ್ ಸಮಿತಿ ಬಿ. ರಘು, ದಿನೇಶ್ರಾವ್, ವಸಂತಕುಮಾರ್, ಕೆ.ಪಿ. ಮೂರ್ತಿ, ಯು.ಕೆ. ಪ್ರಕಾಶ್ ಮತ್ತಿತರರು ಮನವಿ ಸಲ್ಲಿಕೆ ಸಂದರ್ಭದಲ್ಲಿ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

