18ರಂದು ಕೇಂದ್ರದ ನೀತಿ ಖಂಡಿಸಿ ಸಾಗರ ಬಂದ್
ಸಾಗರ: ಕೇಂದ್ರ ಸರ್ಕಾರದ ಅಡಕೆ ಬೆಳೆಗಾರರ ವಿರೋಧಿ ನೀತಿಯನ್ನು ಖಂಡಿಸಿ ಪ್ರಾಂತ್ಯ ಅಡಕೆ ಬೆಳೆಗಾರರ ಸಂಘವು ಡಿ.18ರಂದು ಸಾಗರ ಬಂದ್ಗೆ ಕರೆ ನೀಡಿದೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಬಿ.ಆರ್. ಜಯಂತ್, ಕೇಂದ್ರ ಸರ್ಕಾರ ಅಡಕೆಯನ್ನು ನಿಷೇದಿಸಬೇಕೆಂದು ಸುಪ್ರಿಂಕೋರ್ಟಿಗೆ ವರದಿ ಸಲ್ಲಿಸುವ ಮೂಲಕ ಬೆಳೆಗಾರ ವಿರೋಧಿ ನೀತಿ ಅನುಸರಿಸಿದೆ. ಇದನ್ನು ತಕ್ಷಣ ಹಿಂದಕ್ಕೆ ಪಡೆಯಬೇಕೆಂದು ಹಕ್ಕೊತ್ತಾಯ ಮಾಡಲು ಬಂದಿಗೆ ಕರೆ ನೀಡಿದ್ದು ಅಂದು ಸಾಗರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ಅಡಕೆ ಕ್ಯಾನ್ಸರ್ ಕಾರಕ ಎಂದು ಎಲ್ಲಿಯೂ ದೃಢಪಟ್ಟಿಲ್ಲ. ಈ ನಿಟ್ಟಿನಲ್ಲಿ ನಡೆದಿರುವ ಯಾವ ಸಂಶೋಧನೆಗಳೂ ಅಂತಿಮ ಹಂತ ತಲುಪಿಲ್ಲ. ಆದರೂ ಕೇಂದ್ರ ಸರ್ಕಾರ ಅಡಕೆ ಆರೋಗ್ಯಕ್ಕೆ ಹಾನಿಕರವಾಗಿದ್ದು ಅದನ್ನು ನಿಷೇದಿಸಬೇಕೆಂದು ಅಭಿಪ್ರಾಯಪಟ್ಟಿರುವುದು ವಿವೇಚನೆಯಿಲ್ಲದ್ದು ಹಾಗೂ ಜನವಿರೋಧಿಯಾದುದು ಎಂದು ಅಭಿಪ್ರಾಯಪಟ್ಟರು.
ರಾಜ್ಯದಲ್ಲಿ ಎರಡು ಲಕ್ಷ ಹೆಕ್ಟೇರಿಗಿಂತ ಹೆಚ್ಚು ಪ್ರದೇಶದಲ್ಲಿ ಅಡಕೆ ಬೆಳೆಯಲಾಗುತ್ತಿದೆ. ಅಡಕೆಯನ್ನು ಅವಲಂಬಿಸಿ ಲಕ್ಷಾಂತರ ಕಾರ್ಮಿಕರು ಬದುಕುತ್ತಿದ್ದಾರೆ. ಇದರ ಜೊತೆ ಅಡಕೆ ಪರಿಷ್ಕರಣ ಮಾಡುವ ವರ್ಗ, ಸಾರಿಗೆ ವಹಿವಾಟು, ಪಾನ್ ವಾಲಾಗಳು ಹೀಗೆ ಸುಮಾರು ಮೂರು ಕೋಟಿ ಜನರು ಅಡಕೆ ಅವಲಂಬಿತ ಬದುಕು ನಡೆಸುತ್ತಿದ್ದಾರೆ. ಅಡಕೆಯಿಂದ ಸರ್ಕಾರಕ್ಕೆ ಗಣನೀಯ ವರಮಾನವೂ ಬರುತ್ತಿದೆ. ಆದರೂ ಸರ್ಕಾರ ಅಡಕೆ ನಿಷೇದಿಸಲು ಮುಂದಾಗಿರುವುದು ಸರಿಯಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಂಜಪ್ಪ ಹೆಗಡೆ, ಎಂ.ಕೆ.ತಿಮ್ಮಪ್ಪ, ಮಹಾಬಲಗಿರಿ, ಪ್ರಭಾಕರ, ಜಗದೀಶಗೌಡ, ಪ್ರಸಾದ್, ವ.ಶಂ.ರಾಮಚಂದ್ರ ಭಟ್, ರಾಧಾಕೃಷ್ಣ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

