ಇಒ ನೇತೃತ್ವದಲ್ಲಿ ಗ್ರಾಪಂ ಅಕ್ರಮ ತನಿಖೆ: ಕಾಗೋಡು
ಕನ್ನಡಪ್ರಭ ವಾರ್ತೆ, ಹೊಸನಗರ, ಡಿ.15
ಉದ್ಯೋಗ ಖಾತ್ರಿ, ಆಶ್ರಯ ಮನೆ, ಸೇರಿದಂತೆ ಹಲವು ಸೌಲಭ್ಯಗಳ ವಿತರಣೆಯಲ್ಲಿ ಅಕ್ರಮದ ಮಾತು ಕೇಳಿ ಬಂದಿದ್ದು, ತಾಪಂ ಕಾರ್ಯನಿರ್ವಹಣಾಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆಸಲಾಗುವುದು ಎಂದು ವಿಧಾನಸಭೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಭರವಸೆ ನೀಡಿದರು.
ತಾಲೂಕಿನ ಜೇನಿ ಗ್ರಾಪಂ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆಗೆ ಆಗಮಿಸಿದ್ದ ಸಂದರ್ಭದಲ್ಲಿ ಗ್ರಾಮಸ್ಥರು ಪಂಚಾಯಿತಿ ಮಟ್ಟದಲ್ಲಿ ಆಗುತ್ತಿರುವ ಅಕ್ರಮ, ಅನ್ಯಾಯಗಳ ನೋವು ತೋಡಿಕೊಂಡರು.
ಯಾರದೊ ಹೆಸರಲ್ಲಿ ಖಾತ್ರಿ ಬಿಲ್ ಪಾವತಿ, ಅರ್ಹ ಫಲಾನುಭವಿಗಳನ್ನು ವಂಚಿಸಿ ಹಣಕ್ಕಾಗಿ ಆಶ್ರಯ ಮನೆಗಳ ಬೇಕಾಬಿಟ್ಟಿ ವಿತರಣೆ ಸೇರಿದಂತೆ ಕಣ್ಣಿಗೆ ಕಾಣುವಂತೆ ಅಕ್ರಮ ನಡೆಯುತ್ತಿದೆ ಎಂದು ದೂರಿದರು. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಮತ್ತು ಆ ಹಣ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ತಲುಪುವಂತೆ ಮಾಡುವಂತೆ ಒತ್ತಾಯಿಸಿದರು.
ಅಕ್ರಮ ಪತ್ತೆ: ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಾಗೋಡು, ಇಂದಿನ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಲ್ಲಿ ಸಾಮಾಜಿಕ ಬದ್ಧತೆ ಕಡಿಮೆಯಾಗುತ್ತಿದೆ. ಯಾವುದರಲ್ಲಿ ಹಣ ಹೊಡೀಬೇಕು ಎಂಬುದೇ ಅವರ ದೊಡ್ಡ ಚಿಂತೆಯಾಗಿದೆ. ಇದರಿಂದಾಗಿ ಬಸವಳಿಯುತ್ತಿರುವುದು ಬಡ ಗ್ರಾಮಸ್ಥರು ಎಂದು ವಿಷಾದ ವ್ಯಕ್ತಪಡಿಸಿದರು.
ಸ್ಥಳೀಯ ಗ್ರಾಪಂಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಬಗ್ಗೆ ಇಒ ನೇತೃತ್ವದಲ್ಲಿ ಸಮಿತಿ ರಚಿಸಿ ತನಿಖೆ ನಡೆಸಲಾಗುವುದು. ತಪ್ಪಿತಸ್ಥರು ಯಾರೆ ಆಗಿದ್ದರೂ ಶಿಕ್ಷೆಗೆ ಗುರಿ ಮಾಡಬೇಕಿದೆ. ಇದರಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಮತ್ತು ರಾಜಕೀಯ ಪುಢಾರಿಗಳ ಪಾತ್ರವು ಕೆಲಸ ಮಾಡುತ್ತಿದೆ ಎಂದರು.
ಜನರು ಜಾಗೃತರಾದಾಗ ಮಾತ್ರ ಯಾವುದೆ ಯೋಜನೆ ಪ್ರಾಮಾಣಿಕ ಮತ್ತು ಸಮರ್ಪಕ ಅನುಷ್ಠಾನವಾಗಲು ಸಾಧ್ಯ. ಅಗಿರುವ ಅನ್ಯಾಯವನ್ನು ಮುಲಾಜಿಲ್ಲದೆ ಪ್ರಶ್ನಿಸುವ ಧೈರ್ಯ ಮಾಡಿದಾಗ ಮಾತ್ರ ಭ್ರಷ್ಟಾಚಾರ ಕಡಿವಾಣ ಬರಲು ಸಾಧ್ಯ ಎಂದರು.
ತಾಪಂ ಮಟ್ಟದ ಅಧಿಕಾರಿಗಳೊಂದಿಗೆ ಸ್ಥಳೀಯ ಮಟ್ಟದ ರಾಜಕಾರಣಿಗಳ ಸಂಪರ್ಕವಿರುವುದರಿಂದ ತನಿಖೆ ದಿಕ್ಕು ತಪ್ಪುವುದಿಲ್ಲವೆ ಎಂಬ ಪತ್ರಕರ್ತರ ಪ್ರಶ್ನೆಗೆ, ಸಮಿತಿಯಲ್ಲಿ ಪ್ರಾಮಾಣಿಕರನ್ನು ಗುರುತಿಸಿ ಆಯ್ಕೆ ಮಾಡಲಾಗುವುದು. ತನಿಖೆ ದಿಕ್ಕು ತಪ್ಪಲು ಅವಕಾಶ ನೀಡುವುದಿಲ್ಲ ಎಂದರು.
ಜಿಪಂ ಸದಸ್ಯೆ ಜ್ಯೋತಿ ಚಂದ್ರಮೌಳಿ, ತಾಪಂ ಸದಸ್ಯ ಕುಬೇಂದ್ರಪ್ಪ, ಪಪಂ ಸದಸ್ಯ ಹಾಲಗದ್ದೆ ಉಮೇಶ್, ಎಪಿಎಂಸಿ ಅಧ್ಯಕ್ಷ ಗುಬ್ಬಿಗ ಅನಂತರಾವ್, ಆಪ್ಕೋಸ್ ಸದಸ್ಯ ಕಲ್ಯಾಣಪ್ಪಗೌಡ ಪ್ರಮುಖರಾದ ಕೊಡೂರು ಚಂದ್ರಮೌಳಿ, ಗ್ರಾಮಸ್ಥರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

