ಶಿವಮೊಗ್ಗ

ಕಾರ್ಯಕರ್ತರು 'ಕೈ' ಸಾಧನೆ ಅರಿವು ಮೂಡಿಸಲಿ

Published On :

ಕ.ಪ್ರ.ವಾರ್ತೆ, ಶಿಕಾರಿಪುರ, ಡಿ.16
ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ರಾಜ್ಯದ ಜನತೆ ಸೂಕ್ತವಾದ ಉತ್ತರವನ್ನೇ ಕೊಟ್ಟಿದ್ದಾರೆ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹೇಳಿದರು.
ಪಟ್ಟಣದ ಜೈನ ಮಂದಿರದಲ್ಲಿ ಸೋಮವಾರ ಪಕ್ಷದ ಸಂಘಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಮಾಜದಲ್ಲಿನ ಕಟ್ಟಕಡೆಯ ವ್ಯಕ್ತಿಯ ಅಭಿಪ್ರಾಯ ಚುನಾವಣೆಯಲ್ಲಿ ಬಹುಮುಖ್ಯ ಪಾತ್ರ ವಹಿಸಲಿದ್ದು, ಈ ರೀತಿಯ ಎಲ್ಲಾ ವರ್ಗದ ಜನತೆ ಅಭಿಪ್ರಾಯ ಕ್ರೋಡಿಕರಿಸಿಕೊಂಡು ಅದನ್ನು ಪಕ್ಷದ ಪರವಾದ ಅಲೆಯನ್ನಾಗಿ ರೂಪಿಸಿಕೊಳ್ಳಬೇಕಾಗಿದೆ. ಕಾಂಗ್ರೆಸ್ ಪಕ್ಷ ಎಲ್ಲಾ ವರ್ಗದ ಜನತೆಗೆ ಹಲವು ರೀತಿಯ ಕಾರ್ಯಕ್ರಮಗಳನ್ನು ರೂಪಿಸಿದೆ. ಅವುಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಕಾರ್ಯಕರ್ತರ ಶ್ರಮ ಬಹು ಮುಖ್ಯವಾಗಿದೆ ಎಂದರು.
ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಸಾಮರ್ಥ್ಯವನ್ನು ಇಂದಿರಾ ಹೊಂದಿದ್ದರು. ಇದೀಗ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮನಮೋಹನ ಸಿಂಗ್ ಇಂತಹ ಮಾದರಿಯಲ್ಲಿಯೇ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ದೆಹಲಿಯಲ್ಲಿ ಪಕ್ಷ ಸೋಲನುಭವಿಸಿದ್ದು, ಫಲಿತಾಂಶದ ಬಗ್ಗೆ ತಪ್ಪು ತಿದ್ದಿಕೊಳ್ಳುವ ಪ್ರಯತ್ನವನ್ನು ಆರಂಭಿಸಿದ್ದಾರೆ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಗೆ ಸಮ್ಮಿಶ್ರ ಸರ್ಕಾರ ಮಾರಕವಾಗಿದೆ.  ವಿವಿಧ ಪಕ್ಷಗಳನ್ನು ಜತೆಗೂಡಿಸಿಕೊಂಡು ದೇಶ ಕಟ್ಟುವುದು ಅಸಾಧ್ಯ ಕಾರ್ಯ. ದೆಹಲಿಯಲ್ಲಿನ ಮತದಾರರು ಅಲೆಗೆ ಬಲಿಯಾಗಿ ತೀರ್ಪು ನೀಡಿದ್ದು, ಇದೇ ರೀತಿಯಲ್ಲಿ ಕಳೆದ ಬಾರಿ ರಾಜ್ಯದಲ್ಲಿ ಯಡಿಯೂರಪ್ಪ ಅವರ ಆಣೆ ಪ್ರಮಾಣಗಳಿಗೆ ಮನಸೋತು ಮತ ನೀಡಿ ನಂತರದಲ್ಲಿ ಜೈಲಿಗೆ ಹೋಗುವುದನ್ನು ಖುದ್ದು ವೀಕ್ಷಿಸಬೇಕಾಯಿತು ಎಂದರು.
ಜನತೆಯನ್ನು ಒಲೈಸುವ ಭರದಲ್ಲಿ ಇತಿಮಿತಿಯಲ್ಲಿ ಮಾತನಾಡುವುದನ್ನು ಜನಪ್ರತಿನಿಧಿಗಳು ಅರಿತು ವರ್ತಿಸುವಂತೆ ತಿಳಿಸಿ ಇದೀಗ ವಾಪಾಸು ಬಿಜೆಪಿಯ ಪಾದ ಹಿಡಿಯಲು ಯಡಿಯೂರಪ್ಪ ಸಿದ್ಧರಾಗಿದ್ದಾರೆ ಎಂದು ವ್ಯಂಗ್ಯವಾಡಿದರು.
ಐಟಿಬಿಟಿ, ದೊಡ್ಡ ಕಂಪನಿಗಳ ಪರವಾಗಿ ಮಾತನಾಡುವ ನರೇಂದ್ರ ಮೋದಿ ಯುವಪೀಳಿಗೆ, ರೈತರು, ಕೃಷಿ,ನೀರಾವರಿ, ಸಾಮಾನ್ಯ ಜನತೆ ಬಗ್ಗೆ ನಿರ್ಲಕ್ಷ್ಯ ಧೋರಣೆ ಹೊಂದಿದ್ದಾರೆ. 2.5 ಸಾವಿರ ಕೋಟಿ ವೆಚ್ಚದ ಪಟೇಲ್ ಪುತ್ಥಳಿ ಬದಲು ನೀರಾವರಿ ಯೋಜನೆ ರೂಪಿಸದೆ ಗುಜರಾತ್ ಸರ್ಕಾರಕ್ಕೆ 1.5 ಲಕ್ಷ ಕೋಟಿ ಸಾಲ ಹೊರಿಸಿದ ಬಗ್ಗೆ ದಾಖಲೆಗಳಿದೆ ಎಂದರು.
ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ, ಕೆಪಿಸಿಸಿ ಸದಸ್ಯ ನಗರದ ಮಹಾದೇವಪ್ಪ, ಮಾಜಿ ಶಾಸಕ ಶಾಂತವೀರಪ್ಪಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಣಿ ಮಾಲತೇಶ್, ಹನುಮಂತಪ್ಪ, ವೇಣುಗೋಪಾಲ್, ಪುಷ್ಪಾ, ಶಿವ್ಯಾನಾಯ್ಕ ಮಾತನಾಡಿದರು. ಮುಖಂಡ ಮಹೇಶ್ ಹುಲ್ಮಾರ್, ಯಲ್ಲಪ್ಪ, ಅರುಣ, ಮಾಜಿ ಶಾಸಕ ಡಾ.ಜಿ.ಡಿ. ನಾರಾಯಣಪ್ಪ, ತಬಲಿ ಬಂಗಾರಪ್ಪ, ತಟ್ಟೆಹಳ್ಳಿ ಮಹಾದೇವಪ್ಪ, ಫಯಾಜ್ ಇತರರಿದ್ದರು.
ಮೈಸೂರು ರಾಜವಂಶಸ್ಥ ಶ್ರೀಕಂಠದತ್ತ ಒಡೆಯರ್ ನಿಧನಕ್ಕೆ ಸಂತಾಪ ಸೂಚಿಸಿ ಕ್ಷಣ ಕಾಲ ಮೌನ ಆಚರಿಸಲಾಯಿತು.

ಕುಟುಂಬ ರಾಜಕಾರಣಕ್ಕೆ ಮನ್ನಣೆ ಇಲ್ಲ
ಕ.ಪ್ರ.ವಾರ್ತೆ, ಶಿಕಾರಿಪುರ, ಡಿ.16
ಚುನಾವಣೆ ಈ ಬಾರಿ ಪಕ್ಷದ ಹಿತದೃಷ್ಟಿ ಅವಲಂಭಿಸಿದ್ದು, ಕುಟುಂಬ ರಾಜಕಾರಣಕ್ಕೆ ಮತದಾರರು ಮನ್ನಣೆ ನೀಡುವುದಿಲ್ಲ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹೇಳಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆ 4-5 ತಿಂಗಳ ಅವಧಿ ಉಳಿದಿದೆ. ಈ ದಿಸೆಯಲ್ಲಿ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಪಕ್ಷದ ಬಲವರ್ಧನೆಗಾಗಿ ಪ್ರವಾಸ ಕೈಗೊಂಡಿದ್ದು ಜವಾಬ್ದಾರಿ ಅರಿತು ರಾಜ್ಯ ಮುಖಂಡರ ಆದೇಶದನ್ವಯ ಸಾಮಾನ್ಯ ಕಾರ್ಯಕರ್ತನಾಗಿ ಎಲ್ಲರ ವಿಶ್ವಾಸಗಳಿಸಿ ಪಕ್ಷಕ್ಕೆ ಭದ್ರ ನೆಲೆಗಟ್ಟು ಕಲ್ಪಿಸಬೇಕಾಗಿದೆ ಎಂದರು.
ಕ್ಷೇತ್ರದ ಶಾಸಕ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ಪುತ್ರ ಸಂಸದ ರಾಘವೇಂದ್ರ ಜತೆ ಭ್ರಷ್ಟಾಚಾರದಲ್ಲಿ ಮುಳುಗಿ ಸಂಪೂರ್ಣ ರಾಜ್ಯ ರಾಜಕಾರಣವನ್ನು ಸಾಮಾಜಿಕ, ಆರ್ಥಿಕವಾಗಿ ಕಲುಷಿತಗೊಳಿಸಿದ್ದಾರೆ. ಇದನ್ನು ದುರಸ್ತಿಗೊಳಿಸಲು ಪಕ್ಷ ಅಧಿಕಾರಕ್ಕೇರಿದೆ ಎಂದರು.
ಬಿಜೆಪಿ ಇದುವರೆಗೂ ರಾಮನ ಹೆಸರಿನಲ್ಲಿ ಇಟ್ಟಿಗೆ, ಮಣ್ಣು ಹೊರಿಸಿ ನಾಮಹಾಕಿದ್ದು, ಇದೀಗ ಪಟೇಲ್ ಹೆಸರಿನಲ್ಲಿ ಕಬ್ಬಿಣ ಹೊರಿಸುವ ನಾಟಕ ಆಡುತ್ತಿದ್ದಾರೆ ಎಂದರು.
ಜೆಡಿಎಸ್‌ನಿಂದ ತಾಯಿ ಶಕುಂತಲಾ ಸ್ವರ್ಧಿಸಿದಲ್ಲಿ ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸುವ ಬಗ್ಗೆ ಪರ್ತಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಚುನಾವಣೆ ಪಕ್ಷದ ಹಿತದೃಷ್ಟಿಯನ್ನು ಅವಲಂಭಿಸಿದೆ. ಕುಟುಂಬದ ಹಿತವಲ್ಲ. ಪಕ್ಷ ಆದೇಶ ನೀಡಿದಲ್ಲಿ ಸ್ವರ್ಧಿಸುವ ವ್ಯಕ್ತಿಯ ಗೆಲುವಿನ ಏಕೈಕ ಉದ್ದೇಶದಿಂದ ಎಲ್ಲಾ ಕಾರ್ಯಕ್ಕೂ ಸಿದ್ಧರಿರುವುದಾಗಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.