ಶಿವಮೊಗ್ಗ

ಬಿ.ಇಡಿ ಪರೀಕ್ಷೆಗೆ ಸೆಮಿಸ್ಟರ್ ಪದ್ಧತಿ ಜಾರಿ

Published On :

ಶಿವಮೊಗ್ಗ: ಪ್ರಸಕ್ತ ಶೈಕ್ಷಣಿಕ( 2013-14) ಸಾಲಿನಿಂದ ಬಿ.ಇಡಿ ಪದವಿ ಪರೀಕ್ಷೆಯನ್ನು ಸೆಮಿಸ್ಟರ್ ಪದ್ಧತಿಯಲ್ಲಿ ನಡೆಸಲು ಕುವೆಂಪು ವಿಶ್ವವಿದ್ಯಾನಿಲಯ ನಿರ್ಧರಿಸಿದೆ.
 ವಿವಿಯ ವಿದ್ಯಾವಿಷಯಕ ಪರಿಷತ್ತಿನ ಸಾಮಾನ್ಯ ಸಭೆ (ಶಿಕ್ಷಣ ಮಂಡಳಿ)ಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.
ಸೆಮಿಸ್ಟರ್ ಜಾರಿ: ಕುವೆಂಪು ವಿಶ್ವವಿದ್ಯಾನಿಲಯದ ಪ್ರೊ. ಎಸ್.ಆರ್. ಹಿರೇಮಠ ಸಭಾಂಗಣದಲ್ಲಿ ಮಂಗಳವಾರ ವಿವಿ ಕುಲಪತಿ ಎಸ್.ಎ. ಬಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ರಾಜ್ಯದ ಇತರೆ ವಿವಿಗಳಲ್ಲಿ ಸೆಮಿಸ್ಟರ್ ಪದ್ಧತಿಯಲ್ಲಿ ಪರೀಕ್ಷೆ ನಡೆಯುತ್ತಿವೆ. ಆದರೆ, ಕುವೆಂಪು ವಿವಿಯಲ್ಲಿ ಈ ಪದ್ಧತಿ ಇರಲಿಲ್ಲ. ಇದರಿಂದ ವಿದ್ಯಾರ್ಥಿಗಳಿಗೂ ತೊಂದರೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಸೆಮಿಸ್ಟರ್ ಪದ್ಧತಿ ಜಾರಿಗೊಳಿಸಲಾಗಿದೆ ಎಂದು ಕುಲಪತಿ ತಿಳಿಸಿದರು.
ಈ ಸಂಬಂಧವಾಗಿ ಬಿ.ಇಡಿ ಕಾಲೇಜುಗಳಲ್ಲಿ ಪ್ರಸ್ತುತ ಜಾರಿಯಲ್ಲಿರುವ ನಾನ್ ಸೆಮಿಸ್ಟರ್ ಪದ್ಧತಿಯ ಶೈಕ್ಷಣಿಕ ವೇಳಾಪಟ್ಟಿಯ ಬದಲಿಗೆ 2013-14ನೇ ಶೈಕ್ಷಣಿಕ ಸಾಲಿನಿಂದ ಜಾರಿಗೆ ಬರುವಂತೆ ಶೈಕ್ಷಣಿಕ ವೇಳಾಪಟ್ಟಿಯನ್ನು ಸಿದ್ದಪಡಿಸಲಾಗುವುದು. ಅಲ್ಲದೇ ಶೈಕ್ಷಣಿಕ ಸಾಲಿನಿಂದ ಬಿ.ಇಡಿ ಪದವಿಗೆ ಸೆಮಿಸ್ಟರ್ ಪಠ್ಯಕ್ರಮವನ್ನು ಅಳವಡಿಸಲಾಗುವುದು ಎಂದರು.
ಜ.4 ರಿಂದ ತರಬೇತಿ: ಸದ್ಯದಲ್ಲೇ ಬಿ.ಇಡಿ ತರಗತಿ ಆರಂಭವಾಗಲಿದ್ದು, ಮಧ್ಯಂತರ ರಜೆಯನ್ನೂ ಬದಲಾಯಿಸಲು ಕ್ರಮ ಕೈಗೊಳ್ಳಲಾಗುವುದು. ಇದರೊಂದಿಗೆ ಬಿ.ಇಡಿ ಕಾಲೇಜುಗಳ ಪ್ರಾಂಶುಪಾಲರಿಗೆ ಈ ಕುರಿತು ಜ.4 ರಂದು ತರಬೇತಿ ನೀಡಲಾಗುವುದು ಎಂದು ತಿಳಿಸಿದರು.
ನಂತರ ಸಭೆಯಲ್ಲಿ ಮಂಡಳಿಯ ಸದಸ್ಯರು ಉತ್ತರ ಪತ್ರಿಕೆಯ ಕುರಿತು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಕುಲಪತಿಗಳು, ಈ ವರ್ಷ ಕುವೆಂಪು ವಿವಿಯ ಉತ್ತರ ಪತ್ರಿಕೆಗಳಿಗೆ ಮಲ್ಟಿಪಲ್ ಬಾರ್ ಕೋಡಿಂಗ್ ಮಾಡಿದ್ದರಿಂದಾಗಿ ಯಾವುದೇ ಅಕ್ರಮ ನಡೆಯಲು ಸಾಧ್ಯವಿಲ್ಲ. ಈ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದರಿಂದ ಉತ್ತರ ಪತ್ರಿಕೆಗಳ ಮೌಲ್ಯಮಾಪನದಲ್ಲಿ ಪ್ರಗತಿ ಸಾಧಿಸಬಹುದು ಎಂದು ತಿಳಿಸಿದರು.
ಫಲಿತಾಂಶಕ್ಕೆ ಹರ್ಷ: ಕೆಲ ದಿನಗಳ (ಡಿ.14) ಹಿಂದೆ ನಡೆದ ವಿವಿ ವ್ಯಾಪ್ತಿಯ ಬಿ.ಇಡಿ ಪರೀಕ್ಷೆ ಫಲಿತಾಂಶವನ್ನು ಕೆಲವೇ ಗಂಟೆಗಳಲ್ಲಿ ಬಿಡುಗಡೆ ಮಾಡಲಾಯಿತು ಎಂದು ಹರ್ಷ ವ್ಯಕ್ತಪಡಿಸಿದರು.  
--
ಮಹಿಳೆ ಕೈ ಮುರಿತ
ಸೊರಬ: ಪುರಾಣ ಪ್ರಸಿದ್ಧ ಚಂದ್ರಗುತ್ತಿಯಲ್ಲಿ ಮಂಗಳವಾರ ನಡೆದ ಹೊಸ್ತಿಲ ಹುಣ್ಣಿಮೆ ವೇಳೆ ನೂಕುನುಗ್ಗಲಿನಿಂದಾಗಿ ಹಿರೇಕೆರೂರು ತಾಲೂಕು ವರಹ ಗ್ರಾಮದ ಮಹಿಳೆ ಗದಿಗೆಮ್ಮ ಕೈ ಮುರಿದುಕೊಂಡಿದ್ದಾರೆ. ಹುಣ್ಣಿಮೆಗೆ ಆಗಮಿಸುವ ಭಕ್ತರ ಸಂಖ್ಯೆ ಏರುತ್ತ ಹೋದಂತೆ, ದೇಗುಲಕ್ಕೆ ನುಗ್ಗುವವರ ಸಂಖ್ಯೆಯೂ ಹೆಚ್ಚಾಯಿತು. ವಾಹನಗಳ ಹಾಗೂ ಜನರ ನಡುವೆಯೇ ಜಾನುವಾರುಗಳು ನುಗ್ಗಿದ್ದರಿಂದ ಅವಘಡ ನಡೆಯಿತು. ಗದಿಗೆಮ್ಮರಿಗೆ ಆಕಳೊಂದು ನುಗ್ಗಿ ಕೆಡವಿದ ಕಾರಣ ಕೈಗೆ ಪೆಟ್ಟಾಗಿದೆ. ಕೂಡಲೇ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.