ಅಭಿವೃದ್ಧಿ ಕುಂಠಿತ: ಬಿಎಸ್ವೈ ಅಸಮಾಧಾನ
ಕ.ಪ್ರ.ವಾರ್ತೆ, ಶಿವಮೊಗ್ಗ, ಡಿ.17
ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಶಿವಮೊಗ್ಗಕ್ಕೆ ಬಂದರೆಂದರೆ ಬೆಳಗಿನ ಝಾವ ರೈಲಿನಿಂದ ಇಳಿದ ಕೂಡಲೇ ಮಾಡುತ್ತಿದ್ದ ಕೆಲಸ ಕಾಮಗಾರಿಗಳ ವೀಕ್ಷಣೆ, ವಿಮಾನ ನಿಲ್ದಾಣ, ಗಾಂಧಿ ಪಾರ್ಕ್, ಮೇಲು ಸೇತುವೆ, ಬಿ.ಎಚ್. ರಸ್ತೆ, ನೂತನ ಜೈಲು ಇತ್ಯಾದಿ ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಧಾವಿಸುತ್ತಿದ್ದರು.
ಮಂಗಳವಾರ ಚಿತ್ರಣ ಬದಲಾಗಿತ್ತು. ಮಾಜಿ ಮುಖ್ಯಮಂತ್ರಿಯಾಗಿರುವ ಯಡಿಯೂರಪ್ಪ ಅವರು ಮತ್ತೆ ಕಾಮಗಾರಿ ವೀಕ್ಷಣೆಗೆ ಹೊರಟಿದ್ದರು. ಆಯ್ದ ನಾಲ್ಕು ಸ್ಥಳಗಳಿಗೆ ಭೇಟಿ ನೀಡಿದ ಅವರು, ಕಾಮಗಾರಿ ವೀಕ್ಷಣೆ ನಡೆಸಿದರು.
ಅಸಮಾಧಾನ; ಪಶುವೈದ್ಯ ಕಾಲೇಜು, ನೂತನ ಜೈಲು, ವಿಮಾನ ನಿಲ್ದಾಣ ಹಾಗೂ ಶಾಹಿ ಎಕ್ಸ್ಪೋರ್ಟ್ಸ್ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಕುಂಠಿತವಾಗಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಇಷ್ಟು ದಿನವಾದರೂ ಕಾಮಗಾರಿ ಮುಗಿದಿಲ್ಲ. ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಮರುಗಿದರು.
ಬೆಳಗ್ಗೆ 9 ಗಂಟೆಗೆ ಶುರುವಾದ ಪಯಣ ಮುಗಿದಾಗ ಮಧ್ಯಾಹ್ನ 1 ಗಂಟೆಯಾಗಿತ್ತು. ಪತ್ರಕರ್ತರು ಹಾಗೂ ಪಕ್ಷದ ಮುಖಂಡರೊಂದಿಗೆ ಬಸ್ಸಿನಲ್ಲಿಯೇ ಸಾಗಿದರು.
ಆಗ್ರಹ: ಅನ್ನಭಾಗ್ಯ ಯೋಜನೆಗೆ ಹೊರರಾಜ್ಯದ ಅಕ್ಕಿ ಖರೀದಿಸುವಾಗ ಯಾವ ಬೆಲೆ ನೀಡುತ್ತಾರೋ ಅದೇ ಬೆಲೆಯನ್ನು ರಾಜ್ಯದ ರೈತರಿಗೆ ನೀಡಬೇಕು. ಬತ್ತಕ್ಕೆ 2,200 ಬೆಂಬಲ ಬೆಲೆ ನೀಡಬೇಕು ಎಂದು ಒತ್ತಾಯಿಸಿದರು. ಪಶುವೈದ್ಯ ಕಾಲೇಜು: ಕಾಲೇಜಿನ ಕಟ್ಟಡ ಕಾಮಗಾರಿ ಅಪೂರ್ಣವಾಗಿರುವುದು ಹಾಗೂ ಕಾಲೇಜಿಗೆ ಇನ್ನೂ ಪಶುವೈದ್ಯ ಪರಿಷತ್ತಿನ ಮಾನ್ಯತೆ ಸಿಗದಿರುವುದು ಅವರಿಗೆ ಅಸಮಾಧಾನ ತರಿಸಿತ್ತು. ಕಾಲೇಜಿನ 11 ಎಕರೆ ಜಾಗ ಇನ್ನೂ ವಿವಾದದಲ್ಲಿದ್ದು, ಇದನ್ನು ಉಪವಿಭಾಗಾಧಿಕಾರಿಯವರು ಆದಷ್ಟು ಬೇಗ ಬಗಹರಿಸುವಂತೆ ಮಾತನಾಡುತ್ತೇನೆ ಎಂದರು.
ನೂತನ ಜೈಲು: ಜೈಲು ಕಾಮಗಾರಿ ಬಗ್ಗೆ ಸ್ವಲ್ಪ ಸಮಾಧಾನ ವ್ಯಕ್ತಪಡಿಸಿದ ಅವರು, ಇದು ಸೆಂಟ್ರಲ್ ಜೈಲಿನಷ್ಟು ಸೌಲಭ್ಯ ಹೊಂದಲಿದೆ. ಬಾಕಿ ರು. 21 ಕೋಟಿ ಬಿಡುಗಡೆ ಆದರೆ ಐದಾರು ತಿಂಗಳಲ್ಲಿ ಕಾಮಗಾರಿ ಮುಗಿಯಲಿದೆ ಎಂದರು.
ವಿಮಾನ ನಿಲ್ದಾಣ: ಶಿವಮೊಗ್ಗಕ್ಕೆ ವಿಮಾನ ನಿಲ್ದಾಣಬೇಕೆಂದು ಬಹು ನಿರೀಕ್ಷೆಯಿಂದ ಆರಂಭಿಸಿದ್ದ ಕಾಮಗಾರಿ ಕುಂಠಿತವಾಗಿರುವುದು ಯಡಿಯೂರಪ್ಪರಿಗೆ ಬೇಸರ ಮೂಡಿಸಿತ್ತು. ಈ ಜಾಗ ಬರಡು ಭೂಮಿ ಆಗಿದೆ. ಇನ್ನಾರು ತಿಂಗಳು ಹೀಗೇ ಬಿಟ್ಟರೆ ವಿಮಾನ ನಿಲ್ದಾಣ ಕೆಲಸ ಆರಂಭವಾಗಿದ್ದನ್ನೇ ಜನರು ಮರೆಯುತ್ತಾರೆ ಎಂದರು.
ಈ ಸಂದರ್ಭದಲ್ಲಿ ಕೆಜೆಪಿ ಜಿಲ್ಲಾಧ್ಯಕ್ಷ ಜ್ಯೋತಿಪ್ರಕಾಶ್, ಮುಖಂಡ ಎಸ್. ರುದ್ರೇಗೌಡ, ಪುರುಷೋತ್ತಮ್, ನಗರ ಘಟಕದ ಅಧ್ಯಕ್ಷ ಬಿಳಕಿ ಕೃಷ್ಣಮೂರ್ತಿ, ಮುಖಂಡ ನಾಗರಾಜ್, ಮಾಲತೇಶ್, ಬಳ್ಳೇಕೆರೆ ಸಂತೋಷ್ ಸೇರಿದಂತೆ ಹಲವು ಮುಖಂಡರು ಜತೆಗಿದ್ದರು.
ಶೀಘ್ರವೇ ಸಭೆ
ಜಿಲ್ಲೆಯಲ್ಲಿ ಕುಂಠಿತವಾಗಿರುವ ಕಾಮಗಾರಿ ಚುರುಕುಗೊಳಿಸಲು ಸದ್ಯವೇ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ವಿಧಾನಸಭಾಧ್ಯಕ್ಷ- ವಿಪ ಸಭಾಪತಿ ಅವರನ್ನು ಭೇಟಿ ಮಾಡಿ ಚರ್ಚಿಸುತ್ತೇನೆ. ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿ, ಮುಖ್ಯಮಂತ್ರಿಗಳ ಬಳಿಗೆ ಹೋಗುತ್ತೇನೆ. ಕಾಮಗಾರಿಗೆ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ವಿಐಎಸ್ಎಲ್ ಹಾಗೂ ಎಂಪಿಎಂ ಕಾರ್ಖಾನೆ ಪುನಶ್ಚೇತನಕ್ಕೆ ಸರ್ಕಾರ ಪ್ರಯತ್ನಿಸಬೇಕು ಎಂದ ಅವರು, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಕ್ಕೆ ಆನಂದಪುರ ಬಳಿ 700 ಎಕರೆ ಜಾಗ ಗುರುತಿಸಲಾಗಿದ್ದು, ಈ ಬಗ್ಗೆ ಗಮನಹರಿಸಬೇಕು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

