ಶಿವಮೊಗ್ಗ

ರಾಮದಾಸ್‌ರ 'ರೋಜಾ ಪುಸ್ತಕ' ಲೋಕಾರ್ಪಣೆ

Published On :

ತೀರ್ಥಹಳ್ಳಿ: 'ಕಾನೂರು ಹೆಗ್ಗಡತಿ' ಹಾಗೂ 'ಮಲೆಗಳಲ್ಲಿ ಮದುಮಗಳು' ಬೃಹತ್ ಕಾದಂಬರಿಗಳನ್ನು ಬರೆದಾಗ ಕುವೆಂಪು ಇವು ಮಲೆನಾಡಿನ ಬದುಕಿನಲ್ಲಿ ಇದೊಂದು ಬಿಂದು ಎಂದಿದ್ದರು. ಆದರೆ, 'ರೋಜಾ ಪುಸ್ತಕ' ಕಾದಂಬರಿ ಬರೆಯುವ ಮೂಲಕ ಬಿಳುಮನೆ ರಾಮದಾಸ್ ನಮಗೆ ಒಂದು ಬಿಂದಿಗೆಯನ್ನೇ ನೀಡಿದ್ದಾರೆ ಎಂದು ಡಾ. ಜೆ.ಕೆ. ರಮೇಶ್ ಅಭಿಪ್ರಾಯಪಟ್ಟರು. ಇಲ್ಲಿನ ತಾಲೂಕು ಪಂಚಾಯತ್ ಸಭಾಂಗಣದಲ್ಲಿ 'ರೋಜಾ ಪುಸ್ತಕ' ಬಿಡುಗಡೆ ಮಾಡಿ ಮಾತನಾಡಿದ ಅವರು, ಕುವೆಂಪು ನಂತರ ಕಾದಂಬರಿಗಳ ವಿಷಯದಲ್ಲಿ ಬಿಳುಮನೆ ರಾಮದಾಸ್ ಕುವೆಂಪು ಅವರ ಉತ್ತರಾಧಿಕಾರಿಯಂತೆ  ಬರಹಗಳನ್ನು ನೀಡಿದ್ದಾರೆ ಎಂದು ಅವರು ಹೇಳಿದರು.
ವಿಮರ್ಶಕ ಚಂದ್ರಶೇಖರ ನಂಗಲಿ ಕೃತಿ ಕುರಿತು ಮಾತನಾಡಿದರು. ಸತ್ಯಾನ್ವೇಷಕ ವಸ್ತುನಿಷ್ಠನಾಗಿರಬೇಕು. ಸತ್ಯದ ಪರವಾಗಿ ಬರೆಯಬೇಕು. ವ್ಯಕ್ತಿನಿಷ್ಠನಾಗಿ ಬರೆದವನ ಕೃತಿ ಹೆಚ್ಚು ಕಾಲ ಬಾಳುವುದಿಲ್ಲ. ತನ್ನ ಮೂಗಿನ ನೇರಕ್ಕೆ ಹೇಳುವವ ಕಲಾವಿದ ಆಗಲಾರ. ಕಾಲನ ಪರೀಕ್ಷೆಯಲ್ಲಿ 'ರೋಜಾ ಪುಸ್ತಕ' ಗೆಲ್ಲುವ ಎಲ್ಲಾ ಲಕ್ಷಣ ಹೊಂದಿದೆ. ಮನುಷ್ಯ ಕೇಂದ್ರಿತವಾಗದೆ ಜೀವ ಕೇಂದ್ರಿತವಾಗಿರುವುದೇ ಈ ಕೃತಿಯ ಲಕ್ಷಣ ಎಂದರು. ತಾಲೂಕು ಕಸಾಪ ಅಧ್ಯಕ್ಷ ನೆಂಪೆ ದೇವರಾಜ್, ಕೃತಿಯ ಲೇಖಕ ಬಿಳುಮನೆ ರಾಮದಾಸ್, ಹಿರಿಯರಾದ ಕಿಟ್ಟಪ್ಪ ಗೌಡರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಟಿ.ಕೆ.ರಮೇಶ ಶೆಟ್ಟಿ ಸ್ವಾಗತಿಸಿ, ಗಾಯತ್ರಿ ಶೇಷಗಿರಿ ವಂದಿಸಿದರು.

ತಾಯಿ, ಶಿಶು ಮರಣ ಅರಿವು ಕಾರ್ಯಕ್ರಮ
ಸೊರಬ: ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದ ಅನೇಕ ಕುಟುಂಬಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ತಾಯಿ- ಮಗುವಿನ ಪೋಷಣೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿವೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ಸತೀಶ್ ತಿಳಿಸಿದರು.
ಪಟ್ಟಣದ ಗುರುಭವನ ರಸ್ತೆಯ ಅಂಗನವಾಡಿ ಕೇಂದ್ರದಲ್ಲಿ ತಾಲೂಕು ಆರೋಗ್ಯ ಕೇಂದ್ರ, ಹೊಸಬಾಳೆ ಪ್ರಾಥಮಿಕ ಆರೋಗ್ಯ ಕೇಂದ್ರ ಹಮ್ಮಿಕೊಂಡಿದ್ದ ತಾಯಿ ಮರಣ, ಶಿಶು ಮರಣದ ಅರಿವು ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. ಸುರಕ್ಷಿತ ಮಾತೃತ್ವ, ಸ್ತನ್ಯಪಾನ, ಮಗುವಿನ ಬೆಳವಣಿಗೆಗೆ ಸಮರ್ಪಕ ಆಹಾರ, ಲಸಿಕೆ, ಮಾರಕ ರೋಗಗಳ ತಡೆಯುವಿಕೆ ಮುಂತಾದವುಗಳ ಬಗ್ಗೆ ಅವರು ಮಾಹಿತಿ ನೀಡಿದರು.
ಪಪಂ ಸದಸ್ಯೆ ಮೆಹಬೂಬಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಆರುಂಧತಿ, ತಾಲೂಕು ಹಿರಿಯ ಆರೋಗ್ಯ ಸಹಾಯಕ ರಮಾಕಾಂತ್ ಶಾನುಭೋಗ್, ಕಿರಿಯ ಆರೋಗ್ಯ ಸಹಾಯಕ ಗಿರೀಶ್, ಹಿರಿಯ ಆರೋಗ್ಯ ಸಹಾಯಕಿ ಸಾವಿತ್ರಿ, ಆರೋಗ್ಯ ಸಹಾಯಕಿ ಜಯಮ್ಮ, ನಾಗರತ್ನ, ಶಶಿಕಾಂತ್, ಶಿವಾನಂದ ಪೂಜಾರಿ, ಸಮಾಜ ಸೇವಕಿ ರೇಣುಕಮ್ಮ ಗೌಳಿ  ಇದ್ದರು.
ಕಾಟಾಚಾರದ ಕಾರ್ಯಕ್ರಮ:  ಬೆಳಗ್ಗೆಯಿಂದ ನಮ್ಮನ್ನು ಕಲೆ ಹಾಕಿ ಕೇವಲ ಬಿಸ್ಕತ್, ಅರ್ಧ ಲೋಟ ಹಾಲು ನೀಡಿ ಸಾಗಹಾಕಿದ್ದಾರೆ. ಕುಳಿತುಕೊಳ್ಳುವ ಸರಿಯಾದ ವ್ಯವಸ್ಥೆ ಕೂಡ ಇರಲಿಲ್ಲ ಎಂದು ಸರ್ಕಾರಿ ಸೌಲಭ್ಯದ ಚೆಕ್ ಪಡೆಯಲು ಬಂದ ಗರ್ಭಿಣಿ, ಬಾಣಂತಿಯರಿಂದ ಆರೋಪ ಕೇಳಿಬಂದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.