ಶಿವಮೊಗ್ಗ

ಬೆಲೆ ಕಳೆದುಕೊಳ್ಳುತ್ತಿದೆ ಬೆಳೆ ವಿಮೆ

Published On :

ಶಿರಾಳಕೊಪ್ಪ: ಬೆಳೆ ಹಾಳಾದರೆ ಬೆಳೆವಿಮೆ ಸಹಾಯಕ್ಕೆ ಬರುತ್ತದೆ ಎಂದು ಹಣ ತುಂಬುತ್ತಿದ್ದ ರೈತ ಈಗ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾನೆ. ಆಗಿರುವ ನಷ್ಟಕ್ಕೂ, ಸಿಕ್ಕಿರುವ ಪರಿಹಾರಕ್ಕೂ ಅಜಗಜಾಂತರ ವ್ಯತ್ಯಾಸ. ವಿಚಿತ್ರವೆಂಬಂತೆ ಕೆಲವು ಪ್ರಕರಣಗಳಲ್ಲಿ ನಿರೀಕ್ಷೆಗೂ ಮೀರಿ ಹಣ ಸಿಕ್ಕಿದೆ. ಇನ್ನೂ ಕೆಲವು ಪ್ರಕರಣಗಳಲ್ಲಿ ಒಂದು ಪೈಸೆಯೂ ಸಿಕ್ಕಿಲ್ಲ!
ಇತ್ತೀಚಿನವರೆಗೂ ಸಹಕಾರ ಸಂಘಗಳ ಮೂಲಕ ಸಾಲ ಪಡೆಯುವಾಗ ರೈತರ ಬೆಳೆವಿಮೆ ಕಂತು ಕಟ್ಟಿಸಿಕೊಳ್ಳುತ್ತಿದ್ದರು. ಪ್ರಸಕ್ತ ಸಾಲಿನಿಂದ ಪದ್ಧತಿ ಬದಲಾಗಿದ್ದು, ವಿಮೆ ಪಡೆದುಕೊಳ್ಳುವುದು ರೈತರ ಇಷ್ಟಕ್ಕೆ ಬಿಟ್ಟದ್ದಾಗಿದೆ. ಹಿಂದಿನ ವರ್ಷಗಳ ಕಹಿ ಅನುಭವದಿಂದ ಬೇಸತ್ತ ರೈತರು ಈಗ ವಿಮೆ ಮಾಡಿಸುವುದರಿಂದಲೇ ಹಿಂಜರಿಯುತ್ತಿದ್ದಾರೆ.
2012ನೇ ಸಾಲಿನಲ್ಲಿ ಜಿಲ್ಲಾದ್ಯಂತ 9 ಕೋಟಿಯಷ್ಟು ವಿಮೆ ಸಂಗ್ರಹವಾಗಿದೆ. ಆದರೆ ಕೊಟ್ಟಿದ್ದು ಸುಮಾರು 1.6 ಕೋಟಿ ಮಾತ್ರ. ಇದೂ ಸಹ ವೈಜ್ಞಾನಿಕವಾಗಿ ವಿತರಣೆ ಆಗಿಲ್ಲ. ಸರ್ಕಾರ ವಿಮಾ ಕಂಪನಿಗಳೊಂದಿಗೆ ಶಾಮೀಲಾಗಿ ರೈತರಿಗೆ ಭಾರಿ ಮೋಸ ಮಾಡುತ್ತಿರುವ ಪ್ರಸಂಗವಿದು. ಇದರಿಂದ ನೊಂದ ರೈತರು ಪ್ರತಿಭಟನೆಗೆ ಸಿದ್ಧತೆ ನಡೆಸಿದ್ದಾರೆ.
ನಿಗದಿ ಹೀಗೆ:  ಅಂಕಿ ಅಂಶ ಇಲಾಖೆಯು ಕಳಿಸಿದ ವರದಿಯನ್ನು ಗಮನಿಸಿ ಆಣೆವಾರು ಲೆಕ್ಕದಲ್ಲಿ ಇಳುವರಿ ಕಡಿಮೆ ಇದ್ದಾಗ ಕೃಷಿ ಸಚಿವಾಲಯದ ಹಣಕಾಸು ವಿಭಾಗ ಹಾಗೂ ವಿಮೆ ಕಂಪನಿಗಳು ಸೇರಿ ರಾಜ್ಯದ ವಿವಿದ ಜಿಲ್ಲೆಗಳ ಬೆಳೆಯ ಮಾಹಿತಿ ಪರಿಗಣಿಸಿ ಬೆಳೆ ವಿಮೆ ಘೋಷಿಸುತ್ತಾರೆ. ಆ ಪ್ರಕಾರ ಶಿವಮೊಗ್ಗ ಜಿಲ್ಲೆಯಲ್ಲಿ ಐಸಿಐಸಿಐ ಲ್ಯಾಂಬಾರ್ಡ್ ಜನರಲ್ ಇನ್ಯೂರೆನ್ಸ್ ವಿಮೆ ಕಂಪನಿಯು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಮುಖಾಂತರ ವಿಮೆ ಕಂತು ಪಡೆಯುತ್ತಿದೆ.
ಮಳೆ ಇತ್ಯಾದಿ ನೈಸರ್ಗಿಕ ಕಾರಣದಿಂದ ಇಳುವರಿ ಕುಂಠಿತವಾದಾಗ ವಿಮೆ ಪಡೆದಿರುವ ರೈತರು ಪರಿಹಾರ ಪಡೆಯಲು ಅರ್ಹರಾಗಿರುತ್ತಾರೆ. ಅದರಂತೆ 2012ರ ರೈತರು ನಷ್ಟ ಅನುಭವಿಸಿದಾಗ ವಿಮೆ ಮೊತ್ತವಾದರೂ ಸಿಗುತ್ತದೆ ಎಂದು ಸಮಾಧಾನದಿಂದಿದ್ದರು. ಆದರೆ ಸಿಕ್ಕಿದ್ದು ಮಾತ್ರ ಅತ್ಯಲ್ಪ.
ತಾಲೂಕಿನಾದ್ಯಂತ ಕಳೆದ ವರ್ಷ ಹಲವಾರು ರೈತರ ಮೆಕ್ಕೆಜೋಳ ಹಾಳಾಗಿದ್ದರೂ ಕೆಲವು ಭಾಗದಲ್ಲಿ ಮಾತ್ರ ವಿಮೆ ಕೊಡಲಾಗಿದೆ. ತಾಳಗುಂದ ಹೋಬಳಿಯ ನರಸಾಪುರ, ತಾಳಗುಂದ ಗ್ರಾಮಗಳಿಗೆ ಹಾಗೂ ಉಡಗಣಿ ಹೋಬಳಿಯ ಹಿರೇಜಂಬೂರು, ಹೊಸೂರು ಹೋಬಳಿಯ ಕಿಟ್ಟದಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಕೆಲ ಗ್ರಾಮಗಳಿಗೆ ಮಾತ್ರ ವಿಮೆ ದೊರಕಿದೆ.
ನಷ್ಟವಾದ ಕಡೆ ಇಲ್ಲ:  'ಕನ್ನಡಪ್ರಭ'ಕ್ಕೆ ಲಭ್ಯವಿರುವ ದೃಢೀಕೃತ ಮಾಹಿತಿ ಪ್ರಕಾರ ಅತ್ಯಂತ ಕಡಿಮೆ ಇಳವರಿ ಇರುವ ಹಲವಾರು ಗ್ರಾಮಗಳಿಗೆ ವಿಮೆ ದೊರೆತಿಲ್ಲ.
ತಾಲೂಕಿನ ಹಿರೇಜಂಬೂರು ಗ್ರಾ.ಪಂ. ವ್ಯಾಪ್ತಿಯ ಕಟಾವು ಇಳುವರಿ 4675 ಕೆಜಿ. ಇಲ್ಲಿನ ರೈತರಿಗೆ ವಿಮೆ ಪರಿಹಾರ ಸಿಕ್ಕಿದೆ. ಅದರೆ, ತಡಗಣಿ ಗ್ರಾಪಂ ವ್ಯಾಪ್ತಿಯಲ್ಲಿ 3006 ಕೆಜಿ, ಜಕ್ಕಿನಕೊಪ್ಪ 1426 ಕೆಜಿ ಕಟಾವು ಇಳುವರಿ ಇದ್ದರೂ ವಿಮೆ ಸಿಕ್ಕಿಲ್ಲ. ಇದು ಹೇಗಾಯಿತು ಎಂದು ವಿಮೆ ಕಂಪನಿಯನ್ನು ರೈತರು ಪ್ರಶ್ನಿಸಿದರೆ ಉತ್ತರವೇ ಇಲ್ಲ. ಆದರೆ, ಶಿಕಾರಿಪುರ ತಾಲೂಕಿನ ಜಕ್ಕಿನಕೊಪ್ಪ ಗ್ರಾಮದಲ್ಲಿ ಮೆಕ್ಕೆಜೋಳ ಬೆಳೆದ ಒಬ್ಬ ರೈತನಿಗೆ 45,744 ರು. ಪರಿಹಾರ ಸಿಕ್ಕಿದೆ. ಶಿಕಾರಿಪುರ ತಾಲೂಕಿನಾದ್ಯಂತ ಮಳೆ ಆಶ್ರಿತ ಭತ್ತಕ್ಕೆ ವಿಮೆಗೆ ಅವಕಾಶವಿಲ್ಲ. ಆದರೂ ಕೆಲವೆಡೆ ಮಳೆ ಆಶ್ರಿತ ಭತ್ತಕ್ಕೆ ವಿಮೆ ಕೊಟ್ಟಿರುವುದು ಹೇಗೆ ಎಂಬುದಕ್ಕೂ ಸಹ ಉತ್ತರವಿಲ್ಲ.
ವಿಮೆ ಯೋಜನೆಯಲ್ಲಿ ಈ ರೀತಿ ಹಲವು ನ್ಯೂನತೆಗಳಿವೆ. ಕೂಡಲೇ ಸರ್ಕಾರ ಮಾಹಿತಿ ಪಡೆದು ತನಿಖೆ ಮಾಡಬೇಕು. ಇದೊಂದು ಬಹುಕೋಟಿ ಹಗರಣ. ಈ ಘಟನೆಯನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ರೈತರು ಹಾಗು ರೈತ ಹೋರಾಟ ಸಮಿತಿ ಒತ್ತಾಯಿಸಿದೆ.

ವಿಮೆ ನಿಗದಿಯಾಗುವುದು ಹೀಗೆ
ರಾಜ್ಯ ಸರ್ಕಾರದ ಅಂಕಿ-ಅಂಶ (ಸ್ಟ್ಯಾಟಿಸ್ಟಿಕಲ್ ವಿಭಾಗ) ಇಲಾಖೆ ಪ್ರತಿವರ್ಷ ಗ್ರಾಪಂ ವ್ಯಾಪ್ತಿಯಲ್ಲಿ ಕಟಾವು ಮಾಡಿ ಬೆಳೆಯ ಮಾಹಿತಿಯನ್ನು ಸರ್ಕಾರಕ್ಕೆ ಕಳಿಸುತ್ತದೆ. ಅಂಕಿಅಂಶ ಇಲಾಖೆ ಕಟಾವು ಮಾಹಿತಿ ಕಲೆಹಾಕಲು ಕಂದಾಯ, ಕೃಷಿ, ತಾಪಂ, ತೋಟಗಾರಿಕೆ, ಜಲಾನಯನ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ಸಮನ್ವಯದೊಂದಿಗೆ ಇಳುವರಿ ಮಾಹಿತಿ ಪಡೆಯುತ್ತದೆ. ನಂತರ ಈ ವರದಿಯನ್ನು ತಹಸೀಲ್ದಾರರು, ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಕಳುಹಿಸಲಾಗುತ್ತದೆ. ಈ ಮಾಹಿತಿಯು ವಿಮೆ ಕಂಪನಿಯನ್ನು ತಲುಪಿದ ನಂತರ ಸಂಬಂಧಪಟ್ಟ ರೈತರಿಗೆ ವಿಮೆ ಮೊತ್ತ ಸಂದಾಯವಾಗುತ್ತದೆ.
-ಬಿ.ವಿ. ಶೇಷಗಿರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.