ಶಿವಮೊಗ್ಗ

ತೀರ್ಥಹಳ್ಳಿಗೆ ಹೈಟೆಕ್ ಬಸ್ಸು ನಿಲ್ದಾಣ

Published On :

ತೀರ್ಥಹಳ್ಳಿ:  ತೀರ್ಥಹಳ್ಳಿ ಪಟ್ಟಣಕ್ಕೆ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣ ಮಾಡುವ ಯೋಚನೆ ಇದೆ. ಸೂಕ್ತ ಸ್ಥಳ ಹುಡುಕಬೇಕಾಗಿದೆ. ತೀರ್ಥಹಳ್ಳಿ ಪಟ್ಟಣದಲ್ಲಿ ಹಾದುಹೋಗಿರುವ ರಾಷ್ಠೀಯ ಹೆದ್ದಾರಿಗಾಗಿ ರಸ್ತೆ ಅಗಲೀಕರಣ ಪ್ರಕ್ರಿಯೆ ಪ್ರಾರಂಭವಾದರೆ ಈಗಿರುವ ಮುಖ್ಯ ಬಸ್ ನಿಲ್ದಾಣ ತನ್ನ ನೆಲೆ ಕಳೆದುಕೊಳ್ಳಲಿದೆ. ಹಾಗಾಗಿ ಈ ಹೆಟೆಕ್ ಬಸ್ ನಿಲ್ದಾಣದ ಚಿಂತನೆ ನೆಡೆಸಲಾಗುತ್ತಿದೆ ಎಂದು ಕ್ಷೇತ್ರದ ಶಾಸಕ, ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.    
 ವಿದ್ಯುತ್ ಸಮಸ್ಯೆಯಿಂದ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಇದನ್ನು ಪರಿಹರಿಸಲು ಎಲ್ಲ ಶಾಲೆಗಳ ವಿದ್ಯಾರ್ಥಿಗಳಿಗೂ   ಸೋಲಾಲ್ ದೀಪಗಳನ್ನು ನೀಡುವ ಯೋಚನೆ ಇದೆ. ಇದಕ್ಕಾಗಿ ದಾನಿಗಳ ಮನವೊಲಿಸಲಾಗಿದ್ದು, ಯೋಜನೆಗೆ ಸದ್ಯದಲ್ಲೇ ಚಾಲನೆ ನೀಡಲಾಗುತ್ತದೆ ಎಂದು ತ್ರೈಮಾಸಿಕ ಅಭಿವೃದ್ಧಿ ಪರಿಶೀಲನಾ ಸಭೆಯಲ್ಲಿ ಅವರು ಹೇಳಿದರು.  
 ಶಿಕ್ಷಣಾಧಿಕಾರಿಗಳ ಕಚೇರಿಯೂ ತನ್ನ ಅಸ್ತಿತ್ವ ಕಳೆದುಕೊಳ್ಳಲಿದ್ದು, ಇದನ್ನೂ ಸ್ಥಳಾಂತರಿಸುವ ಅಗತ್ಯವಿದೆ. ಇಲಾಖೆಗೆ ಸೇರಿದ ಜಾಗದಲ್ಲಿ ಹೊಸ ಕಟ್ಟಡ ನಿರ್ಮಿಸಲು 75 ಲಕ್ಷ ರು. ಅನುದಾನ ಮಂಜೂರು ಮಾಡಲಾಗಿದೆ ಎಂದು ಸಚಿವರು ಹೇಳಿದರು.   
ಘಾಟಿ ರಸ್ತೆ ದುರಸ್ತಿ: ಆಗುಂಬೆ ಘಾಟಿಯಲ್ಲಿ ಜಿಲ್ಲೆಯ ಗಡಿಯವರೆಗೆ ರಸ್ತೆ ಹಾಳಾಗಿದ್ದು, ಇದರ ರಿಪೇರಿ ನಿರ್ವಹಣೆಗಾಗಿ ಈಗಾಗಲೇ 10ಕೋಟಿ ಹಣ ಮುಂಜೂರಾಗಿದ್ದು ಸದ್ಯದಲ್ಲೇ ಕಾಮಗಾರಿ ಪ್ರಾರಂಭಿಸಲಾಗುವುದು. ಹಾಗೇ ತೀರ್ಥಹಳ್ಳಿ ಪಟ್ಟಣದಲ್ಲಿ ರಸ್ತೆ ಅಗಲೀಕರಣಕ್ಕಾಗಿ 10 ಕೋಟಿ ಹಾಗೂ ಸಿಆರ್‌ಎಫ್‌ನಿಂದ 5 ಕೋಟಿ ರು. ಮಂಜೂರಾಗಿದೆ. ಖಾತೆದಾರರಿಗೆ ಪರಿಹಾರ ನೀಡಲು 7 ಕೋಟಿ ರು.  ಬಿಡುಗಡೆಯಾಗಬೇಕಾಗಿದ್ದು  ಇದಾದ ಕೂಡಲೇ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದರು.
ಶಿಕ್ಷಕರ ಕೊರತೆ ಇಲ್ಲ: ತಾಲ್ಲೂಕಿನಲ್ಲಿ ಶಿಕ್ಷಕರ ಕೊರತೆ ಇಲ್ಲ ಎಂದು  ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಭೆಯಲ್ಲಿ ಇಲಾಖೆಯ ಪ್ರಗತಿಯ ಬಗ್ಗೆ ತಿಳಿಸಿದರು. ತಾಲ್ಲೂಕಿನಲ್ಲಿ  ಈ ಸಾಲಿಗೆ 1485 ಬೈಸಿಕಲ್‌ಗಳು ಬಂದಿದ್ದು, ಇದರಲ್ಲಿ 1200 ವಿದ್ಯಾರ್ಥಿಗಳಿಗೆ ನೀಡಲಾಗಿದೆ. ಉಳಿದವನ್ನು ಶೀಘ್ರವಾಗಿ ವಿತರಿಸಲಾಗುತ್ತದೆ ಎಂದರು.  
 ತಾಲ್ಲೂಕಿನ ಗ್ರಾಮ ಪಂಚಾಯ್ತಿ ಪ್ರದೇಶಗಳಲ್ಲಿ ಕೆಲವು ಕಡೆ  ಕೋಟಿಗಟ್ಟಲೆ ಬೆಲೆಬಾಳುವ ಮರಳನ್ನು ಅಕ್ರಮಮಾಗಿ ಕೊಳ್ಳೆಹೊಡೆಯಲಾಗುತ್ತಿದೆ. ಸಂಬಂಧಪಟ್ಟ ಇಲಾಖೆಗಳು ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳುವಲ್ಲಿ ವಿಫಲವಾಗಿವೆ ಎಂದು ಜಿ.ಪಂ. ಸದಸ್ಯ ಡಾ. ಸುಂದರೇಶ್ ಆರೋಪಿಸಿದರು.      
ಪೊಲೀಸ್ ರಕ್ಷಣೆ: ಸೂಕ್ತ ನಿರ್ದೇಶನಗಳನ್ನು ನೀಡಿ  ಕಂದಾಯ ಇಲಾಖೆ, ಗಣಿ ಇಲಾಖೆ, ಗ್ರಾಮ ಪಂಚಾಯ್ತಿಗಳು ಮುಂದೆ ಬಂದಲ್ಲಿ ಪೊಲೀಸ್ ಇಲಾಖೆಯೂ ತನ್ನ ಪಾಲಿನ ಹೊಣೆ ನಿಭಾಯಿಸುತ್ತದೆ ಎಂದು ಸರ್ಕಲ್ ಇನ್ಸ್‌ಪೆಕ್ಟರ್ ಬಸವರಾಜ್ ಉತ್ತರಿಸಿದರು.   
 ತಹಸೀಲ್ದಾರ್ ಗಣೇಶಮೂರ್ತಿ,  ತಾ.ಪಂ. ಕಾರ್ಯನಿರ್ವಣಾಧಿಕಾರಿ ಪುಟ್ಟಸ್ವಾಮಿ, ತಾ.ಪಂ. ಅಧ್ಯಕ್ಷೆ ರೇಣುಕಾ ನಾಗರಾಜ್, ಹೊಸಳ್ಳಿ ಸುಧಾಕರ್, ಬೇಳೆಹಳ್ಳಿ ಪ್ರಭಾಕರ್ ವೇದಿಕೆಯಲ್ಲಿ  ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.