ಕೊಳೆರೋಗ ಪರಿಹಾರಧನ ವಿತರಣೆಗೆ ಆಗ್ರಹ
ಸಾಗರ: ಅಡಕೆ ಬೆಳೆಗಾರರಿಗೆ ತಕ್ಷಣ ಕೊಳೆರೋಗ ಪರಿಹಾರಧನ ವಿತರಣೆ ಮಾಡುವಂತೆ ಒತ್ತಾಯಿಸಿ ಗುರುವಾರ ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದಿಂದ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಬಿ.ಆರ್.ಜಯಂತ್ ಮಾತನಾಡಿ, ಕೊಳೆರೋಗದಿಂದ ಸಂತ್ರಸ್ತರಾಗಿರುವ ಅಡಕೆ ಬೆಳೆಗಾರರಿಗೆ ಡಿ.31ರೊಳಗೆ ಪರಿಹಾರಧನದ ಚೆಕ್ಕನ್ನು ವಿತರಣೆ ಮಾಡದೆ ಹೋದರೆ ಬೆಳೆಗಾರರ ಜೊತೆಗೂಡಿ ಉಪವಿಭಾಗಾಧಿಕಾರಿ ಕಚೇರಿ ಎದುರು ಧರಣಿ ನಡೆಸುವುದಾಗಿ ಎಚ್ಚರಿಸಿದರು.
ಶೇ.70ರಷ್ಟು ನಾಶ: ತಾಲ್ಲೂಕಿನಲ್ಲಿ ವಿಪರೀತ ಕೊಳೆರೋಗದಿಂದ ಶೇ.70ರಷ್ಟು ಅಡಕೆ ಫಸಲು ನಾಶವಾಗಿದೆ. ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದು, ಸರ್ಕಾರ ಕೊಳೆರೋಗಕ್ಕೆ ಪರಿಹಾರ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದರೂ, ಕೆಲವು ಭಾಗಗಳಲ್ಲಿ ಗ್ರಾಮ ಲೆಕ್ಕಾಧಿಕಾರಿಗಳ ಬೇಜವಾಬ್ದಾರಿತನದಿಂದಾಗಿ ಈತನಕ ಪರಿಹಾರದ ಚೆಕ್ಕು ರೈತರ ಕೈಗೆ ತಲುಪಿಲ್ಲ ಎಂದು ಆರೋಪಿಸಿದರು.
ತಾಲ್ಲೂಕಿನ ಕಸಬಾ ಹೋಬಳಿಯಲ್ಲಿ ಈತನಕ ಒಬ್ಬರಿಗೂ ಪರಿಹಾರಧನದ ಚೆಕಕ್ವಿತರಣೆಯಾಗಿಲ್ಲ. ಆನಂದಪುರಂ ಹೋಬಳಿಯಲ್ಲಿ ಕೆಲವು ಪಂಚಾಯ್ತಿ ವ್ಯಾಪ್ತಿಯಲ್ಲಿ ಚೆಕ್ ನೀಡಿದ್ದು, ಇನ್ನು ಸಾಕಷ್ಟು ಬೆಳೆಗಾರರಿಗೆ ಚೆಕ್ ನೀಡಬೇಕಾಗಿದೆ. ಉಪವಿಭಾಗಾಧಿಕಾರಿಗಳು ನವೆಂಬರ್ ಒಳಗೆ ಪರಿಹಾರಧನದ ಚೆಕ್ ವಿತರಣೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಈತನಕ ಶೇ.40ರಷ್ಟು ಬೆಳೆಗಾರರಿಗೆ ಮಾತ್ರ ನೀಡಲಾಗಿದೆ. ಇದರಿಂದ ಬೆಳೆಗಾರರು ಕಚೇರಿಗೆ ಅಲೆಯುವಂತೆ ಆಗಿದೆ. ಡಿ.31ರೊಳಗೆ ಪರಿಹಾರಧನದ ಚೆಕ್ ವಿತರಣೆ ಮಾಡಬೇಕು. ಇಲ್ಲವಾದರೆ ಹೋರಾಟ ಅನಿವಾರ್ಯ ಎಂದು ಹೇಳಿದರು.
ಸಂಘದ ಪ್ರಧಾನ ಕಾರ್ಯದರ್ಶಿ ವ.ಶಂ.ರಾಮಚಂದ್ರ ಭಟ್, ಪ್ರಮುಖರಾದ ಬಿ.ಆರ್.ವಿನಾಯಕರಾವ್, ನರಹರಿ, ಪ್ರಭಾಕರ್, ಶ್ರೀಧರ್, ರಾಮಮೂರ್ತಿ ಇನ್ನಿತರರು ಹಾಜರಿದ್ದರು.
ಉಪವಿಭಾಗಾಧಿಕಾರಿ ಸ್ಪಷ್ಟನೆ
ಕೊಳೆರೋಗದಿಂದ ಹಾನಿಗೊಳಗಾದ ಬೆಳೆಗಾರರಿಗೆ ಪರಿಹಾರ ಕೊಡಲು ಹಣದ ಕೊರತೆ ಇಲ್ಲ. ಈಗಾಗಲೆ ಬಹುತೇಕ ಬೆಳೆಗಾರರಿಗೆ ಪರಿಹಾರವನ್ನು ನೀಡಲಾಗಿದೆ. ಇನ್ನು ಕೆಲವು ಕಡೆಗಳಲ್ಲಿ ಪರಿಹಾರ ಕೊಡುವುದು ಬಾಕಿ ಇದೆ.
ಸೂಕ್ತ ದಾಖಲೆ ಇಲ್ಲದ ಕೆಲವು ಪ್ರಕರಣಗಳಲ್ಲಿ ಈತನಕ ಪರಿಹಾರ ನೀಡಿಲ್ಲ ಎನ್ನಲಾಗುತ್ತಿದೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಹಣವಿದ್ದೂ ಬೆಳೆಗಾರರಿಗೆ ಪರಿಹಾರ ಕೊಡುವಲ್ಲಿ ವಿಳಂಬ ಮಾಡುವ ಗ್ರಾಮ ಲೆಕ್ಕಾಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನಕ್ರಮ ಕೈಗೊಳ್ಳಲಾಗುವುದು. ಗ್ರಾಮ ಲೆಕ್ಕಾಧಿಕಾರಿಗಳು ತಕ್ಷಣ ಬಾಕಿ ಉಳಿಸಿಕೊಂಡಿರುವ ಚೆಕ್ಕನ್ನು ಬೆಳೆಗಾರರಿಗೆ ನೀಡುವಂತೆ ಸೂಚನೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

