ಶಿವಮೊಗ್ಗ

ಕದ್ದಿದ್ದ 50 ಲಕ್ಷ ಮೌಲ್ಯದ ಚಿನ್ನಾಭರಣ ವಶ

Published On :

ಕ.ಪ್ರ.ವಾರ್ತೆ, ಶಿವಮೊಗ್ಗ,  ಡಿ.27
ಶಿವಮೊಗ್ಗ ಪೊಲೀಸ್ ಉಪ ವಿಭಾಗದ ಅಪರಾಧ ಪತ್ತೆ ತಂಡವು ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ನಾಲ್ಕು ಪ್ರತ್ಯೇಕ ಪ್ರಕರಣಗಳಡಿ ಒಟ್ಟಾರೆ 50,04,295 ಮೌಲ್ಯದ ಚಿನ್ನಾಭರಣ, ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಶ್ಲಾಘನಾರ್ಹ ಕಾರ್ಯಮಾಡಿದ್ದಾರೆ ಎಂದು ಪೂರ್ವ ವಲಯ ಐಜಿ ಪರಶಿವಮೂರ್ತಿ ಹೇಳಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಲ್ಕು ಪ್ರಮುಖ ಪ್ರಕರಣಗಳನ್ನು ಬೇಧಿಸಿರುವ ಪೊಲೀಸ್ ತಂಡ, ಕಳವಾದ ಮಾಲನ್ನು ಪತ್ತೆ ಮಾಡಲು ಸಫಲವಾಗಿದೆ ಎಂದು ಪ್ರಕರಣಗಳನ್ನು ವಿವರಿಸಿದರು.
ಮನೆ ಕಳ್ಳರ ಬಂಧನ: ಶಿವಮೊಗ್ಗ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಹಲವಾರು ಮನೆ ಕಳವು ಮತ್ತು ಸುಲಿಗೆ ಮಾಡುತ್ತಿದ್ದ ಆರು ಜನರ ತಂಡವನ್ನು ಶಿವಮೊಗ್ಗ ಗ್ರಾಮಾಂತರ ವೃತ್ತದ ಸಿಪಿಐ ಕುಮಾರಸ್ವಾಮಿ ಮತ್ತು ಕುಂಸಿ ಠಾಣೆ ಪಿಎಸ್‌ಐ ಅಭಯ ಪ್ರಕಾಶ್ ಸೋಮನಾಳ್ ಮತ್ತು ಸಿಬ್ಬಂದಿ ವೈಜ್ಞಾನಿಕ ತಂತ್ರಜ್ಞಾನದ ಮೂಲಕ ಪತ್ತೆ ಹಚ್ಚಿದ್ದಾರೆ.
ಪ್ರಮುಖ ಆರೋಪಿ ಅಬ್ದುಲ್ ಲತೀಫ್ (41) ಕಾಸರಗೋಡು ಜಿಲ್ಲೆಯ ಪಾರಂಪಳ್ಳಿಯವನು. ಈತ ಶಿವಮೊಗ್ಗ ನಗರದಲ್ಲಿ ದಾಖಲಾದ 8 ಪ್ರಕರಣಗಳಲ್ಲಿ ಆರೋಪಿ. ಉಳಿದಂತೆ ಮಂಡೇನಕೊಪ್ಪದ ಅರುಣ (23), ಹಾಲೇಶ ನಾಯ್ಕ (19), ಶಿವರಾಜ್ (19), ತರೀಕೆರೆ ನಂದಿಬಟ್ಲು ಗ್ರಾಮದ ಸಂತೋಷ (22) ಅವರನ್ನೊಳಗೊಂಡ ತಂಡ ಅಬ್ದುಲ್ ಲತೀಫ್ ಮಾರ್ಗದರ್ಶನದಲ್ಲಿ ಕಳ್ಳತನ ಮಾಡುತ್ತಿತ್ತು. ಲತೀಫ್ ಕೇರಳದ ವಟ್ಟಪಾಲಂ ಮತ್ತು ತ್ರಿಶೂರ್‌ನಲ್ಲಿ ಕದ್ದಿದ್ದ ಮಾಲನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಒಟ್ಟಾರೆ ಈ ತಂಡದಿಂದ 26.40 ಲಕ್ಷ ಮೌಲ್ಯದ ಆಭರಣ, ಒಂದು ಕಾರು, 2 ದ್ವಿಚಕ್ರ ವಾಹನ ವಶಕ್ಕೆ ಪಡೆಯಲಾಗಿದೆ.
ಸರಗಳ್ಳರಿಬ್ಬರ ಬಂಧನ: ಶಿವಮೊಗ್ಗ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಮಾಂಗಲ್ಯ ಸರಗಳನ್ನು ಅಪಹರಿಸುತ್ತಿದ್ದ ಅಂತರ ಜಿಲ್ಲಾ ಸುಲಿಗೆಕೋರರಾದ ಇಬ್ರಾಹಿಂ ಮತ್ತು ರುದ್ರೇಶ್ ಅಲಿಯಾಸ್ ರೆಹಮಾನ್ ಎಂಬುವರನ್ನು ಸಿಪಿಐ ಕುಮಾರಸ್ವಾಮಿ ಮತ್ತು ತುಂಗಾ ನಗರ ಠಾಣೆಯ ಪಿಎಸ್‌ಐ ರಮೇಶ್ ಹಾಗೂ ಸಿಬ್ಬಂದಿ ಮತ್ತೆ ಮಾಡಿ ಬಂಧಿಸಿದ್ದು, 9 ಪ್ರಕರಣಗಳಲ್ಲಿ ಇವರು ಆರೋಪಿಗಳಾಗಿದ್ದರು. ಇವರಿಂದ ಒಟ್ಟು 7,37,630 ರುಪಾಯಿ ಮೌಲ್ಯದ ಬಂಗಾರದ ಆಭರಣ ಮತ್ತು ಬೆಳ್ಳಿ ವಸ್ತು ವಶಪಡಿಸಿಕೊಂಡಿದ್ದಾರೆ.
ಮನೆ ಕಳ್ಳ: ಮಹಮ್ಮದ್ ತಬರೇಜ್ (20) ಎಂಬಾತನ್ನು ಕೋಟೆ ವೃತ್ತದ ಸಿಪಿಐ ಜಯರಾಜ್ ಮತ್ತು ಸಿಬ್ಬಂದಿ ಬಂಧಿಸಿದ್ದು, ಈತನಿಂದ 3.75 ಲಕ್ಷ ಮೌಲ್ಯದ ಬಂಗಾರದ ಆಭರಣ ಹಾಗೂ 70 ಸಾವಿರ ಮೌಲ್ಯದ 1 ಕೆಜಿಯಷ್ಟು ತೂಕದ ಬೆಳ್ಳಿಯ ಸಾಮಾನುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ನಕಲಿ ಪೊಲೀಸ್: ಶಿವಮೊಗ್ಗ ನಗರದ ಹಲವು ಕಡೆಗಳಲ್ಲಿ ಯುವಕ- ಯುವತಿಯರು ಏಕಾಂತ ಸ್ಥಳದಲ್ಲಿದ್ದಾಗ ಮತ್ತು ಮನೆಯಲ್ಲಿ ಒಂಟಿಯಾಗಿರುವ ಮಹಿಳೆಯರಿಗೆ ಪೊಲೀಸ್ ಎಂದು ಹೇಳಿ ವಿಚಾರಣೆಗೆ ಹಾಜರಾಗುವಂತೆ ಹೆದರಿಸಿ ಅವರಿಂದ ಆಭರಣ ಪಡೆಯುತ್ತಿದ್ದ ತರುಣ್‌ಶೆಟ್ಟಿಯನ್ನು ದೊಡ್ಡಪೇಟೆ ವೃತ್ತದ ಸಿಪಿಐ ಶಿವಕುಮಾರ್, ಪಿಎಸ್‌ಐ ರಾಘವೇಂದ್ರ ಮತ್ತು ಶಫಿವುಲ್ಲಾ ತಂಡ ಬಂಧಿಸಿದ್ದು, ಈತನಿಂದ 3.80 ಸಾವಿರ ಮೌಲ್ಯದ 147 ಗ್ರಾಂ ಬಂಗಾರದ ಆಭರಣ ವಶಕ್ಕೆ ಪಡೆದುಕೊಂಡಿದ್ದಾರೆ.
50 ಲಕ್ಷ: ಒಟ್ಟಾರೆ ಈ ಪ್ರಮುಖ ನಾಲ್ಕು ಪ್ರಕರಣಗಳಿಂದ ಒಟ್ಟಾರೆ 1 ಕೆಜಿ 497 ಗ್ರಾಮ 200 ಮಿಲಿ ಚಿನ್ನ, 1 ಕೆಜಿ 612 ಗ್ರಾಂ ಬೆಳ್ಳಿ, 1 ಕಾರು ಹಾಗೂ 2 ದ್ವಿಚಕ್ರ ವಾಹನಗಳು ಸೇರಿ 50,04,295 ರುಪಾಯಿ ಮೌಲ್ಯದ ಕಳುವು ಮಾಲು ಪೊಲೀಸರ ವಶವಾಗಿದೆ ಎಂದು ಐಜಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಕಳ್ಳರ ಬಂಧನಕ್ಕೆ ಕಾರಣವಾದ ತಂಡಕ್ಕೆ ನಗದು ಪುರಸ್ಕಾರ ಘೋಷಿಸಿದ ಅವರು, ಪ್ರತ್ಯೇಕವಾಗಿ ಪ್ರತಿಯೊಬ್ಬರಿಗೂ ಪ್ರಮಾಣಪತ್ರ ವಿತರಿಸಿ ಶ್ಲಾಘಿಸಿದರು.  ಸುದ್ದಿಗೋಷ್ಠಿಯಲ್ಲಿ ಎಸ್ಪಿ ಕೌಶಲೇಂದ್ರ ಕುಮಾರ್, ದಯಾಳ್ ಇದ್ದರು.

ಒತ್ತಡದ ಕೆಲಸ ದುರಂತ: ಐಜಿ
ಶಿವಮೊಗ್ಗ: ಪ್ರತಿನಿತ್ಯ ಒತ್ತಡದಲ್ಲಿ ಕಾರ್ಯನಿರ್ವಹಿಸುವ ಸಂಚಾರಿ ವಿಭಾಗದ ಪೊಲೀಸ್ ಸಿಬ್ಬಂದಿಯ ಕೆಲಸದ ಬಗ್ಗೆ ಉತ್ತರ ಕೊಡಲಾಗಲ್ಲ ಎಂದು ಪೂರ್ವ ವಲಯ ಐಜಿ ಪರಶಿವಮೂರ್ತಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಪ್ರಸಂಗ ನಡೆಯಿತು.
ಶುಕ್ರವಾರ ಇಲ್ಲಿನ ಡಿಎಆರ್ ಮೈದಾನದ ಸಭಾಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒತ್ತಡವಿರುವುದು ನಿಜ, ಅದು ದುರಂತ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಸಿಬ್ಬಂದಿ ಕೊರತೆ ಇರುವುದು ಹೌದು. ಶೇ.15ರಷ್ಟು ಕೊರತೆ ಇದೆ. ಹೀಗಾಗಿ ಮಾಡುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದರೆ ಒತ್ತಡ ಕಡಿಮೆ ಬೀಳುತ್ತದೆ. ಸಿಬ್ಬಂದಿ ಇದನ್ನು ಅರಿಯಬೇಕು ಎಂದು ಸಲಹೆ ನೀಡಿದರು.
ಪ್ರತಿವರ್ಷ 10-15 ಹೊಸ ಠಾಣೆಗೆ ಸರ್ಕಾರ ಮಂಜೂರಾತಿ ಕೊಡುತ್ತದೆ. ಈ ಬಾರಿ ನಾವೂ ಸಹ ಪ್ರಸ್ತಾವನೆ ಕಳುಹಿಸಿದ್ದು, ಒಂದೆರಡು ಮಂಜೂರಾಗಬಹುದೆಂದ ನಿರೀಕ್ಷೆ ಇದೆ ಎಂದ ಅವರು, ಹಾಳಾಗಿರುವ ಶಿವಮೊಗ್ಗ ನಗರದ ವಿವಿಧ ಠಾಣೆಗಳ ದುರಸ್ತಿಕಾರ್ಯ ಕೈಗೆತ್ತಿಕೊಳ್ಳಲಾಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.