ಶಿವಮೊಗ್ಗ

ಬತ್ತ, ಮೆಕ್ಕೆಜೋಳಕ್ಕೆ ಗೋದಾಮು ಹುಡುಕಾಟ

Published On :

ಕ.ಪ್ರ.ವಾರ್ತೆ, ಶಿವಮೊಗ್ಗ , ಡಿ.28
ಜಿಲ್ಲೆಯಲ್ಲಿ ಲೆವಿ ಅಕ್ಕಿ ಖರೀದಿ ಹಾಗೂ ರೈತರಿಂದ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಿದ ಬತ್ತ ಹಾಗೂ ಮೆಕ್ಕೆಜೋಳವನ್ನು ಸಂಗ್ರಹಿಸಲು ಸೂಕ್ತ ಗೋದಾಮುಗಳನ್ನು ಹುಡುಕುವ ಕಾರ್ಯಕ್ಕೆ ಜಿಲ್ಲಾಡಳಿತ ಮುಂದಾಗಿದೆ.
ಈ ಸಂಬಂಧ ಶನಿವಾರ ಸಭೆ ನಡೆಸಿದ ಜಿಲ್ಲಾಧಿಕಾರಿ ವಿಪುಲ್ ಬನ್ಸಾಲ್ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸೂಕ್ತ ಗೋದಾಮು ಇದ್ದರೆ ಮಾಹಿತಿ ನೀಡುವಂತೆ ರೈಸ್ ಮಿಲ್ ಮಾಲಿಕರಿಗೂ ಮನವಿ ಮಾಡಿದರು.
ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ರೈತರಿಂದ ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ ಹಾಗೂ ಬತ್ತ ಖರೀದಿ ಮಾಡಲಾಗುತ್ತಿದೆ. ಜೊತೆಗೆ ಅನ್ನಭಾಗ್ಯ ಯೋಜನೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಲೆವಿ ಅಕ್ಕಿ ಸಂಗ್ರಹವನ್ನೂ ಹೆಚ್ಚಿಸಲಾಗಿದೆ. ಹೀಗಾಗಿ, ಸಂಗ್ರಹಗೊಂಡ ಬತ್ತ, ಅಕ್ಕಿ, ಜೋಳ ಸಂಗ್ರಹಿಸಲು ಅಗತ್ಯವಿರುವ ಗೋದಾಮು ಗುರುತಿಸಬೇಕು ಎಂದು ಅಧಿಕಾರಿಗಳಿಗೆ ಸಭೆಯಲ್ಲಿ ಸೂಚಿಸಿದರು.
ಸರ್ಕಾರದ ನಿಯಮಾವಳಿಗೆ ಅನುಗುಣವಾಗಿಯೇ ಗೋದಾಮುಗಳನ್ನು ಗುರುತಿಸಬೇಕು. ಖಾಸಗಿಯಾಗಿ ಸಿಗುವ ಗೋದಾಮುಗಳನ್ನೂ ಪಡೆದುಕೊಳ್ಳಬೇಕು. ಖಾಸಗಿ ಗೋದಾಮುಗಳಿಗೆ ಖಾಸಗಿಯಾಗಿ ಮಾರುಕಟ್ಟೆಯಲ್ಲಿ ಹೆಚ್ಚಿನ ಧಾರಣೆ ಇದೆ. ಆದರೆ ಅಷ್ಟು ಮೊತ್ತವನ್ನು ಸರ್ಕಾರ ನೀಡುವುದಿಲ್ಲ. ಹೀಗಿದ್ದರೂ ಗೋದಾಮುಗಳನ್ನು ಪಡೆದುಕೊಳ್ಳುವ ಅನಿವಾರ್ಯತೆ ಇದೆ. ದುರಸ್ತಿಯಲ್ಲಿರುವ ಗೋದಾಮುಗಳು ಬೇಡ. ಸುಸ್ಥಿತಿಯಲ್ಲಿರುವ ಹಾಗೂ ಸೂಕ್ತ ರಕ್ಷಣೆಯನ್ನು ಹೊಂದಿರುವ ಗೋದಾಮು ಮಾತ್ರ ಪಡೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಖಾಸಗಿ ರೈಸ್‌ಮಿಲ್ ಆವರಣದಲ್ಲಿರುವ ಗೋದಾಮುಗಳನ್ನು ಗುರುತಿಸಬಾರದು. ಈ ಬಗ್ಗೆ ಸರ್ಕಾರ ಕಟ್ಟುನಿಟ್ಟಾದ ಆದೇಶ ಹೊರಡಿಸಿದೆ ಎಂದು ಸಭೆಯಲ್ಲಿ ತಿಳಿಸಿದರು.
ಲೆವಿ ಅಕ್ಕಿ ಕುರಿತಂತೆ ರೈಸ್‌ಮಿಲ್ ಮಾಲಿಕರ ಕೋರಿಕೆಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ, ಅಕ್ಕಿ ಗಿರಣಿಗಳ ಮಾಲೀಕರಿಗೆ ಸಕಾಲದಲ್ಲಿ ಹಣ ಪಾವತಿ ಮಾಡಲು ಕ್ರಮ ಕೈಗೊಳ್ಳಲಾಗುವುದು. ಸದ್ಯ ದೇಶದ ವಿವಿಧ ರಾಜ್ಯಗಳಲ್ಲಿ ಕಡಿಮೆ ಹಣಕ್ಕೆ ಅಕ್ಕಿ ನೀಡುವ ಯೋಜನೆ ಆರಂಭಿಸಲಾಗಿದೆ. ಇದರಿಂದ ಹೊರ ರಾಜ್ಯಗಳಿಂದ ಅಕ್ಕಿ ಲಭ್ಯವಾಗುವ ಸ್ಥಿತಿ ಕಡಿಮೆಯಾಗಿದೆ. ಹೀಗಾಗಿ, ಅನ್ನಭಾಗ್ಯ ಯೋಜನೆಯಡಿ ಅಕ್ಕಿ ವಿತರಣೆ ಮಾಡಲು ರಾಜ್ಯದ ಅಕ್ಕಿಯನ್ನೇ ಅವಲಂಬಿತವಾಗುವಂತಾಗಿದೆ. ಸರ್ಕಾರ ನಿಗದಿ ಮಾಡಿದ ಲೆವಿ ಅಕ್ಕಿಯನ್ನು ಎಲ್ಲ ರೈಸ್ ಮಿಲ್ ಮಾಲೀಕರು ಕಡ್ಡಾಯವಾಗಿ ನೀಡಬೇಕು ಎಂದು ಸೂಚಿಸಿದರು.
ಆಹಾರ ಇಲಾಖೆ ಉಪನಿರ್ದೇಶಕ ಶ್ರೀಧರ್, ಎಪಿಎಂಸಿ ಕಾರ್ಯದರ್ಶಿ ಪಾತಲಿಂಗಪ್ಪ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಧುಸೂಧನ್ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.