ಬಾಲ್ಯ ಕಸಿಯುತ್ತಿರುವ ಪೋಷಕರ ಟಿವಿ ಪ್ರೇಮ
ಕ.ಪ್ರ.ವಾರ್ತೆ , ಶಿವಮೊಗ್ಗ , ಡಿ. 29
ಮೊದಲು ಮಕ್ಕಳ ಬಾಲ್ಯ ಸೊಗಸಾಗಿತ್ತು. ಆದರೆ, ಇಂದು ಮಕ್ಕಳ ಬಾಲ್ಯವನ್ನೆ ಕಸಿದುಕೊಂಡಿದ್ದೇವೆ. ಪೋಷಕರಿಗೆ ಸಂಜೆಯ ಧಾರಾವಾಹಿಗಳು, ಬೆಳಗ್ಗೆಯ ಬ್ರಹ್ಮಾಂಡ ಕಾರ್ಯಕ್ರಮಗಳೇ ಹೆಚ್ಚಾಗಿವೆ ಎಂದು ಸಹ್ಯಾದ್ರಿ ಕಲಾ ಕಾಲೇಜು ಉಪನ್ಯಾಸಕ ಡಾ. ಮೋಹನ್ ಚಂದ್ರಗುತ್ತಿ ಅಭಿಪ್ರಾಯಪಟ್ಟರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಲ್ಲಿ ಭಾನುವಾರ ಆಯೋಜಿಸಿದ್ದ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾನವೀಯ ಸಂಬಂಧಗಳು ಮತ್ತು ವಾಣಿಜ್ಯೋದ್ಯಮ ವಿಷಯ ಕುರಿತು ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಯಾರಿಗಾದರೂ ಮೋಸ ಮಾಡಿ ಬದುಕಬೇಕೆಂಬ ಕೆಟ್ಟ ಸಂಸ್ಕೃತಿ ಬೆಳೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇಂದು ಶ್ರೀಮಂತಿಕೆ ಪ್ರದರ್ಶನಕ್ಕಾಗಿ ಕೆಲ ಸಭೆ, ಸಮಾರಂಭಗಳನ್ನು ಏರ್ಪಡಿಸಲಾಗುತ್ತಿದೆ. ಮಕ್ಕಳಿಗೆ ಮಾನವೀಯತೆ ಹಿನ್ನೆಲೆಯುಳ್ಳ ಕಥೆಗಳನ್ನು ಹೇಳಿಕೊಡುವಲ್ಲಿ ವಿಫಲರಾಗಿದ್ದೇವೆ. ಮನುಷ್ಯನಾಗು ಎಂದು ಹೇಳಿಕೊಡುವ ಬದಲಾಗಿ ಎಂಜಿನಿಯರ್, ಡಾಕ್ಟರ್ ಆಗು ಎಂದು ಮಕ್ಕಳನ್ನು ಬೆಳೆಸುತ್ತಿರುವುದು ವಿಷಾದನೀಯ ಎಂದರು.
ರಾಜ್ಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಆರ್.ಶಿವಕುಮಾರ್ ಮಾತನಾಡಿ, ಪ್ರತಿ ಜಿಲ್ಲೆಗಳಲ್ಲೂ ಬಂಡವಾಳ ಹೂಡಿಕೆದಾರರ ಸಭೆ ನಡೆಸಿ, ಹೊರದೇಶಗಳಿಂದ ಬಂಡವಾಳ ಹೂಡಿಕೆದಾರರನ್ನು ಕರೆಸುವ ಬದಲು ನೆರೆ ರಾಜ್ಯದವರನ್ನು, ಯುವಜನತೆಯನ್ನು ಸಭೆಗೆ ಆಹ್ವಾನಿಸಿ ಅವಕಾಶ ನೀಡಲಾಗುವುದು. ಅದರಲ್ಲೂ ಮಹಿಳಾ ಉದ್ಯಮಿಗಳಿಗೆ ಪ್ರೋತ್ಸಾಹಿಸಲಾಗುವುದು ಎಂದು ತಿಳಿಸಿದರು.
ಮುಂದಿನ ವರ್ಷ ಸುವರ್ಣ ಮಹೋತ್ಸವ ಆಚರಿಸುತ್ತಿರುವ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಸಂಸ್ಥೆ ಅದ್ಧೂರಿಯಾಗಿ ಸಮಾರಂಭ ಆಯೋಜಿಸಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ ಶೋಭಾ ಸ್ಟೋರ್ಸ್ ಪಾಲುದಾರ ಡಿ.ಎಸ್. ನಟರಾಜ್, ಗುಂಡುಮನೆ ವೆಂಕಟರಮಣಯ್ಯ, ವಡ್ಡಿನಬೈಲ್ ನಾಗಪ್ಪ ಕಂಪನಿ ಪಾಲುದಾರ ಜಿ.ಎಸ್.ರಾಮಚಂದ್ರ, ಎಂ.ಅಪ್ಪುರಾವ್ ಅಂಡ್ ಸನ್ಸ್ನ ಎಂ. ಶಿವಶಂಕರ್ ರಾವ್ ಕಂಪನಿಗಳಿಗೆ 2013ನೇ ಸಾಲಿನ ವಾಣಿಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಎಚ್.ಮಹೇಂದ್ರಪ್ಪ, ಉಪಾಧ್ಯಕ್ಷ ಚಂದ್ರಶೇಖರ್, ಕಾರ್ಯದರ್ಶಿ ಪಿ.ರುದ್ರೇಶ್, ಜಿ.ಆರ್. ವಾಸುದೇವ್ ಮತ್ತಿತರರು ಇದ್ದರು.
ಹೆಸರುಕಾಳು, ಸೂರ್ಯಕಾಂತಿ ಬೆಳೆ ನಿರ್ವಹಣೆ ತರಬೇತಿ
ಶಿವಮೊಗ್ಗ: ನವಿಲೆಯ ಕೃಷಿ ವಿಜ್ಞಾನ ಕೇಂದ್ರ, ನಬಾರ್ಡ್ ಜಲಾನಯನ ಅಭಿವೃದ್ಧಿ ಯೋಜನೆ ಮತ್ತು ಚೈತನ್ಯ ರೂರಲ್ ಡೆವೆಲಪ್ಮೆಂಟ್ ಸೊಸೈಟಿ ಆಶ್ರಯದಲ್ಲಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಶಿಕಾರಿಪುರ ತಾಲೂಕಿನ ಹಾರೋಗೊಪ್ಪ, ಅತ್ತಿಬೈಲು, ದಿಂಡದಹಳ್ಳಿ, ಮಾರವಳ್ಳಿ ಮತ್ತು ಚೌಡನಾಯಕನಕೊಪ್ಪ ಜಲಾನಯನ ವ್ಯಾಪ್ತಿಯ 62 ಜನ ರೈತರಿಗೆ ಹೆಸರುಕಾಳು ಮತ್ತು ಸೂರ್ಯಕಾಂತಿ ಸಮಗ್ರ ಬೆಳೆ ನಿರ್ವಹಣೆ ಕುರಿತು ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಮಾತನಾಡಿದ ಚೈತನ್ಯ ರೂರಲ್ ಡೆವೆಲಪ್ಮೆಂಟ್ ಸೊಸೈಟಿ ಅಧ್ಯಕ್ಷ ಬಿ.ಟಿ. ಬದ್ರೀಶ್, ಇಂದಿನ ದಿನಗಳಲ್ಲಿ ಉತ್ತಮ ಹೆಸರುಕಾಳಿನ ಬೀಜಗಳ ಕೊರತೆ ಎದ್ದುಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ರೈತರಿಗೆ ಕೆ.ಕೆ.ಎಂ-3 ಮತ್ತು ಬಿ.ಜಿ.ಎಸ್-9 ಹೆಸರು ತಳಿಯ ಬೀಜಗಳನ್ನು ಕೃಷಿ ವಿಜ್ಞಾನ ಕೇಂದ್ರ ಮತ್ತು ನಬಾರ್ಡ್ ಜಲಾನಯನ ಅಭಿವೃದ್ಧಿ ಯೋಜನೆಯಡಿ ವಿತರಿಸಲಾಗುತ್ತಿದೆ. ರೈತರು ಇದನ್ನು ಬೆಳೆದು, ಬೀಜಗಳನ್ನು ಸಂರಕ್ಷಿಸಿ ಮುಂದಿನ ಬೆಳೆ ಸಮಯದಲ್ಲಿ ಉಪಯೋಗಿಸಲು ಕರೆ ನೀಡಿದರು.
ಕಾರ್ಯಕ್ರಮ ಸಂಯೋಜಕ ಬಿ.ಸಿ.ಹನುಮಂತಸ್ವಾಮಿ, ಇಂದಿನ ದಿನಗಳಲ್ಲಿ ಎಣ್ಣೆಕಾಳು ಮತ್ತು ದ್ವಿದಳ ಧಾನ್ಯ ಬೆಳೆಯುವ ಪ್ರದೇಶವು ಕಡಿಮೆಯಾಗುತ್ತಿದೆ. ಆದರೆ, ಇವುಗಳ ಬೇಡಿಕೆ ಮೊದಲಿನಂತೆಯೇ ಇರುವುದರಿಂದ ರೈತರು ಕಡಿಮೆ ಅವಧಿಯಲ್ಲಿ ಹೆಸರುಕಾಳು ಮತ್ತು ಸೂರ್ಯಕಾಂತಿ ಬೆಳೆಗಳನ್ನು ಬೆಳೆಯುವುದರಿಂದ ಮಣ್ಣಿನ ಫಲವತ್ತತೆ ಉಳಿಸಿಕೊಳ್ಳುವುದಲ್ಲದೇ, ಹೆಚ್ಚಿನ ಆದಾಯ ಪಡೆಯಬಹುದು ಎಂದು ತಿಳಿಸಿದರು.
ಇದೇ ವೇಳೆ ಆಯ್ದ ರೈತರಿಗೆ ಹೆಸರು ಕಾಳಿನ ಬೀಜ ಮತ್ತು ಜೈವಿಕ ಗೊಬ್ಬರಗಳನ್ನು ವಿತರಿಸಲಾಯಿತು. ಕೃಷಿ ವಿಜ್ಞಾನ ಕೇಂದ್ರದ ವಿಷಯ ತಜ್ಞ ಡಾ.ಬಸವರಾಜ್ ಬೀರಣ್ಣವರ್, ಡಾ. ಬಿ.ಸಿ. ಹನುಮಂತಸ್ವಾಮಿ ಮಾತನಾಡಿದರು.
ಕೃಷಿ ವಿಜ್ಞಾನ ಕೇಂದ್ರದ ವಿಷಯ ತಜ್ಞ ಡಾ. ಬಿ.ಸಿ. ಧನಂಜಯ, ಹೆಸರುಕಾಳು ಮತ್ತು ಸೂರ್ಯಕಾಂತಿ ಬೆಳೆಗಳಲ್ಲಿ ತಳಿಯ ಆಯ್ಕೆ, ಬೀಜೋಪಚಾರ, ಪೋಷಕಾಂಶ ನಿರ್ವಹಣೆ ಹಾಗೂ ಬೇಸಾಯ ಕ್ರಮಗಳ ಬಗ್ಗೆ ತಾಂತ್ರಿಕ ಮಾಹಿತಿಯನ್ನು ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

