ಇಂದಿನಿಂದ ಕೈಮಗ್ಗ ಸಂಘಟನೆಗಳ ಒಕ್ಕೂಟ ಸತ್ಯಾಗ್ರಹ
ಕ.ಪ್ರ.ವಾರ್ತೆ, ಶಿವಮೊಗ್ಗ, ಡಿ.31
ಕೇಂದ್ರ ಸರ್ಕಾರವು ಕೈಮಗ್ಗ ಯಂತ್ರದ ವಿದ್ಯುದ್ದೀಕರಣ ಪ್ರಕ್ರಿಯೆ ಕೂಡಲೇ ನಿಲ್ಲಿಸಿ, ರಾಜ್ಯ ಸರ್ಕಾರವು ಕೈಮಗ್ಗ ನೇಕಾರಿಕೆ ಕ್ಷೇತ್ರಗಳಲ್ಲಿ ವಿದ್ಯುತ್ ಮಗ್ಗ ಅಳವಡಿಸುವ ಕಾರ್ಯಕ್ರಮವನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿರುವ ಅಖಿಲ ಭಾರತ ಕೈಮಗ್ಗ ಸಂಘಟನೆಗಳ ಒಕ್ಕೂಟವು ಜ. 1ರಿಂದ ರಾಜ್ಯಾದ್ಯಂತ ಹಂತ- ಹಂತವಾಗಿ ಸತ್ಯಾಗ್ರಹ ಆರಂಭಿಸಿದೆ.
ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಅಂತಿಮವಾಗಿ ಗಾಂಧೀಜಿ ಹುತಾತ್ಮರಾದ ದಿನವಾದ ಜ. 30ರಿಂದ ಕನ್ನಡದ ಲೇಖಕರು, ರಂಗಕರ್ಮಿ ಪ್ರಸನ್ನ ಅವರು ಸಾಗರ ತಾಲೂಕು ಹೆಗ್ಗೋಡು ಗ್ರಾಮದ ಶ್ರಮಜೀವಿ ಆಶ್ರಮದಲ್ಲಿ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ಆರಂಭಿಸಲು ನಿರ್ಧರಿಸಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೈಮಗ್ಗ ಪದಾರ್ಥಗಳ ಮೀಸಲಾತಿ ಕಾನೂನನ್ನು ಗಟ್ಟಿಮುಟ್ಟಾಗಿ ಜಾರಿಗೆ ತರಬೇಕು. ರಾಜ್ಯ ಸರ್ಕಾರವು ಕೈಮಗ್ಗ ನೇಕಾರಿಕೆ ಕ್ಷೇತ್ರಗಳಲ್ಲಿ ತಪ್ಪಾಗಿ ಅಳವಡಿಸಲಾಗಿರುವ ವಿದ್ಯುತ್ ಮಗ್ಗಗಳಿಂದಾಗಿ, ಕಾರ್ಮಿಕರು ಬೀದಿಪಾಲಾಗುವುದನ್ನು ತಪ್ಪಿಸಬೇಕು. ಕೈಮಗ್ಗಕ್ಕೆ ಮೀಸಲಿರದ ಇತರೆ ಬಟ್ಟೆಗಳ ನೇಯ್ಗೆ ಮಾಡಲಿಕ್ಕೆ ಅವರಿಗೆ ನೂಲು ಒದಗಿಸಬೇಕು ಹಾಗೂ ಅಂತಹ ಬಟ್ಟೆಯನ್ನು ವಿದ್ಯುತ್ ಮಗ್ಗಗಳ ಅಭಿವೃದ್ಧಿ ನಿಗಮದ ಮೂಲಕ ಖರೀದಿಸಬೇಕು. ಅಲ್ಲದೆ, ಎರಡೂ ಸರ್ಕಾರಗಳು ನೆನಗುದಿಗೆ ಬಿದ್ದಿರುವ ವಿವಿಧ ಕೈಮಗ್ಗ ಯೋಜನೆಗಳು ಗ್ರಾಮೀಣ ಫಲಾನುಭವಿಗಳನ್ನು ತಲುಪುವಂತೆ ಸರಕಾರಿ ವ್ಯವಸ್ಥೆ ಚುರುಕುಗೊಳಿಸಬೇಕು ಎಂಬುದು ಇವರ ಬೇಡಿಕೆ.
ಪಾದಯಾತ್ರೆ: ದೇಶಾದ್ಯಂತ ಈ ಚಳವಳಿ ಆರಂಭವಾಗಿದ್ದು, ಕರ್ನಾಟಕದಲ್ಲಿಯೂ ವಿವಿಧ ಹಂತದ ಚಳವಳಿ ಆಯೋಜಿಸಲಾಗಿದೆ. ಜನವರಿ 1ರಿಂದ ರಾಜ್ಯಾದ್ಯಂತ ಜನಸಂಪರ್ಕ ಸಭೆಗಳು ನಡೆಯಲಿವೆ. ಜನವರಿ 15ರಿಂದ 28ರ ವರೆಗೆ ಎರಡು ವಾರಗಳ ಕಾಲ, ಉತ್ತರ ಕರ್ನಾಟಕ ನೇಕಾರಿಕೆ ಪ್ರದೇಶಗಳಲ್ಲಿ ಪಾದಯಾತ್ರೆ ಕಾರ್ಯಕ್ರಮವು ನಡೆಯಲಿದೆ ಎಂದು ಹೆಗ್ಗೋಡಿನ ಚರಕ ಸಂಸ್ಥೆಯ ಸಂಸ್ಥಾಪಕ, ರಂಗಕರ್ಮಿ ಪ್ರಸನ್ನ ಹೇಳಿದ್ದಾರೆ.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಕಾರ್ಯಕ್ರಮದ ವಿವರ ನೀಡಿ, ಪಾದಯಾತ್ರೆಯಲ್ಲಿ ನೇಕಾರರ ಸಂಘಟನೆಗಳ ಕಾರ್ಯಕರ್ತರು, ರೈತ ಸಂಘಟನೆಗಳ ಕಾರ್ಯಕರ್ತರು, ಪರಿಸರವಾದಿಗಳು, ಲೇಖಕರು, ಕಲಾವಿದರು ಹಾಗೂ ಸಾಮಾಜಿಕ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಪಾದಯಾತ್ರೆಯು ಗದಗ ಜಿಲ್ಲೆಯ ಗಜೇಂದ್ರಗಡದಲ್ಲಿ ಆರಂಭವಾಗಿ, ಗದಗ, ಕೊಪ್ಪಳ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ, ಎರಡು ನೂರು ಕಿಲೋಮೀಟರುಗಳ ಮಾರ್ಗ ಕ್ರಮಿಸಿ, ಬಾಗಲಕೋಟೆ ಜಿಲ್ಲೆಯ ಕೆರೂರು ಗ್ರಾಮದಲ್ಲಿ ಅಂತ್ಯಗೊಳ್ಳಲಿದೆ ಎಂದರು.
ಸತ್ಯಾಗ್ರಹದ ಮೂರನೆಯ ಘಟ್ಟದಲ್ಲಿ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ನಡೆಯಲಿದೆ ಎಂದರು.
ಕೈಮಗ್ಗ ಉದ್ದಿಮೆಯನ್ನು ವಿನಾಶದ ಅಂಚಿಗೆ ತಳ್ಳಿರುವ- ಕೈಮಗ್ಗ ಯಾಂತ್ರೀಕರಣ- ಪ್ರಕ್ರಿಯೆ ವಿರೋಧಿಸಿ ಈ ಸತ್ಯಾಗ್ರಹವು ನಡೆಯಲಿದೆ. ಹತ್ತಿ ನೇಕಾರರು, ಉಣ್ಣೆ ನೇಕಾರರು, ರೇಷ್ಮೆ ನೇಕಾರರು, ಖಾದಿ ನೇಕಾರರು, ಹಾಗೂ ವಿದ್ಯುತ್ ಮಗ್ಗಗಳ ಕಾರ್ಮಿಕರ ಜಂಟಿ ಸತ್ಯಾಗ್ರಹ ಇದಾಗಿರುತ್ತದೆ. ಹತ್ತಿ ಬೆಳೆಗಾರರು, ಕುರಿ ಸಾಕುವವರು, ರೇಷ್ಮೆ ಬೆಳೆಗಾರರು, ಖಾದಿ ನೂಲು ತೆಗೆಯುವ ಗ್ರಾಮೀಣ ಮಹಿಳೆಯರು, ಬಣ್ಣಕಾರರು, ಇತ್ಯಾದಿಯಾಗಿ, ಬಡವರ ಪರವಾದ ಸತ್ಯಾಗ್ರವೂ ಇದು ಹೌದಾಗಿದೆ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

