ಶಿವಮೊಗ್ಗ

ರಾಷ್ಟ್ರೀಯ ಅಧ್ಯಕ್ಷರಿಂದ ದಿನಾಂಕ ನಿಗದಿ

Published On :

ಕ.ಪ್ರ.ವಾರ್ತೆ, ಶಿವಮೊಗ್ಗ, ಡಿ.31
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳಬೇಕೆಂಬುದು ನಮ್ಮ ಇಚ್ಛೆಯಾಗಿತ್ತು. ಕಳೆದೆರಡು ದಿನದಿಂದ ಅವರು ಪೂರಕವಾಗಿ ಸ್ಪಂದಿಸಿದ್ದಾರೆ. ಅವರಿಗೆ ಯಾವಾಗ ಆಮಂತ್ರಣ ನೀಡಬೇಕೆಂಬುದರ ಬಗ್ಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ನಿರ್ದೇಶನಕ್ಕಾಗಿ ಕಾಯುತ್ತಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ಹೇಳಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಶ್ನೆಯೊದಕ್ಕೆ ಪ್ರತಿಕ್ರಿಯಿಸಿ, ಸ್ಥಾನಮಾನ ಇತ್ಯಾದಿ ವಿಷಯಗಳೆಲ್ಲಾ ಈಗ ಅಪ್ರಸ್ತುತ. ಸೇರ್ಪಡೆ ನಂತರವೇ ಈ ಬಗ್ಗೆ ಚರ್ಚೆ ಸಾಧ್ಯ ಎಂದರು.
ಪಕ್ಷ ಬಿಡಲು ಹೇಳಿರಲಿಲ್ಲ: ಯಡಿಯೂರಪ್ಪ ಅವರ ವಿರುದ್ಧ ಸಾಂವಿಧಾನಿಕ ಸಂಸ್ಥೆಯಿಂದ ಆರೋಪಗಳು ಬಂದಾಗ ಅವತ್ತಿನ ಸಂದರ್ಭದಲ್ಲಿ ಪಕ್ಷ ಮುಖ್ಯಮಂತ್ರಿ ಸ್ಥಾನ ಬಿಡಬೇಕೆಂದು ಹೇಳಿತ್ತೇ ಹೊರತು ಪಕ್ಷ ಬಿಡಬೇಕು ಎಂದಲ್ಲ. ಅವರ ವಿರುದ್ಧದ ಆರೋಪಗಳು ಇನ್ನೂ ತನಿಖಾ ಹಂತದಲ್ಲಿವೆ. ಈ ಸಂದರ್ಭದಲ್ಲಿ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವುದು ತಪ್ಪು ಎನ್ನುವುದು ಸರಿ ಅಲ್ಲ ಎಂದು ಸಮರ್ಥಿಸಿಕೊಂಡರು.
20ರಂದು ಮೊದಲ ಪಟ್ಟಿ: ಲೋಕಸಭೆ ಚುನಾವಣೆ ಅಭ್ಯರ್ಥಿಗಳ ಮೊದಲ ಪಟ್ಟಿಯು ಜ.20ರಂದು ಬಿಡುಗಡೆ ಮಾಡುವುದಾಗಿ ಕೇಂದ್ರ ಸಮಿತಿ ಹೇಳಿದೆ. ಇದಕ್ಕೂ ಮುನ್ನ ರಾಜ್ಯದ ಎಲ್ಲಾ ಜಿಲ್ಲಾ ಉಸ್ತುವಾರಿ ಸಮಿತಿಗಳೊಂದಿಗೆ ಚರ್ಚಿಸಿ ವರದಿ ಪಡೆಯಲಾಗುವುದು ಎಂದು ಪ್ರಹ್ಲಾದ್ ಜೋಷಿ ಹೇಳಿದರು. ಜ.16, 17ರಂದು ಬೆಂಗಳೂರಿನಲ್ಲಿ ರಾಜ್ಯ ಉಸ್ತುವಾರಿ ಗೆಹ್ಲೋಟ್ ಅವರು ಎಲ್ಲಾ ಜಿಲ್ಲಾ ಉಸ್ತುವಾರಿ ಸಮಿತಿಯವರನ್ನು ಪ್ರತ್ಯೇಕವಾಗಿ ಭೇಟಿ ಮಾಡುವರು.
ನಂತರ ಕ್ರೋಢೀಕೃತ ವರದಿಯನ್ನು ಜ.19ರಂದು ಕೇಂದ್ರ ಸಮಿತಿಗೆ ಸಲ್ಲಿಸಲಾಗುವುದು. ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿಯೇ ರಾಜ್ಯದ ಅಭ್ಯರ್ಥಿಗಳೂ ಇರುವಂತೆ ನೋಡಿಕೊಳ್ಳಲಾಗುವುದು ಎಂದರು.
ಮನೆಮನೆಗೆ ಬಿಜೆಪಿ ಕಾರ್ಯಕ್ರಮ: ಇನ್ನೆರಡು ದಿನಗಳಲ್ಲಿ ರಾಜ್ಯದ ಎಲ್ಲಾ ಕ್ಷೇತ್ರದ ಶಕ್ತಿಕೇಂದ್ರಗಳ ಪ್ರಮುಖಕರ ಕಾರ್ಯಾಗಾರ ಮುಕ್ತಾಯವಾಗುವುದು. ಜ.16ರಿಂದ ಮನೆಮನೆಗೆ ಬಿಜೆಪಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕರ್ತರು ಪ್ರತಿ ಮನೆಗೆ ಭೇಟಿ ನೀಡುವರು.
ರಾಜ್ಯ ಕಾಂಗ್ರೆಸ್ ಹಾಗೂ ಕೇಂದ್ರ ಯುಪಿಎ ಸರ್ಕಾರ ವೈಫಲ್ಯ, ವಾಜಪೇಯಿ ಸರ್ಕಾರದ ಸಾಧನೆ, ಬಿಜೆಪಿ ನಾಯಕತ್ವದ ಗುಣ ಕುರಿತ ಮೂರು ಕರಪತ್ರಗಳನ್ನು ಹಂಚುವರು ಎಂದರು. ಜನವರಿ ಕೊನೆಯ ವಾರ ಅಥವಾ ಫೆಬ್ರವರಿಯಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ರಾಜ್ಯದಲ್ಲಿ ಪ್ರವಾಸ ನಡೆಸಲಿದ್ದು, ಬಹಿರಂಗ ಸಮಾವೇಶ ಆಯೋಜನೆಯಾಗಲಿವೆ ಎಂದು ಅವರು ಹೇಳಿದರು.
ಭಾರತ್ ಸ್ಟೊರ್ಸ್ ಸಿನಿಮಾ ಹಕ್ಕು ಬಿಜೆಪಿಗೆ
ಬಿಜೆಪಿಯು ಪಿ. ಶೇಷಾದ್ರಿ ಅವರು ನಿರ್ದೇಶಿಸಿರುವ ಭಾರತ್ ಸ್ಟೋರ್ಸ್ ಸಿನಿಮಾ ಪ್ರದರ್ಶನದ ಹಕ್ಕನ್ನು ಪಡೆದಿದೆ. ಇನ್ನು ಕೆಲವೇ ದಿನಗಳಲ್ಲಿ ರಾಜ್ಯಾದ್ಯಂತ ಈ ಸಿನಿಮಾ ಪ್ರದರ್ಶನ ಆಯೋಜಿಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ಹೇಳಿದರು.
ಎಫ್‌ಡಿಎ ಬಗ್ಗೆ ಬಿಜೆಪಿ ಹೊಂದಿರುವ ನಿಲವನ್ನು ಈ ಸಿನಿಮಾ ಪ್ರತಿಪಾದಿಸಿದೆ. ಈ ಸಿನಿಮಾವನ್ನು ಚುನಾವಣೆಗೆ ಬಳಸಿಕೊಳ್ಳುತ್ತೇವೆ ಎನ್ನುವುದಕ್ಕಿಂತ ದೇಶದ ಹಿತಾಸಕ್ತಿ ದೃಷ್ಟಿಯಿಂದ ಪ್ರದರ್ಶನ ಹಕ್ಕು ಪಡೆದಿದೆ. ವಿದೇಶ ಬಂಡವಾಳದ ದುಷ್ಪರಿಣಾಮವನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ರಾಜ್ಯದ ಪ್ರಮುಖ ಕೇಂದ್ರಗಳಲ್ಲಿ ಈ ಸಿನಿಮಾ ಪ್ರದರ್ಶನ ಆಯೋಜಿಸುತ್ತೇವೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.