ಶಿವಮೊಗ್ಗ

ಮರಳು ಸಾಗಾಣಿಕೆ ಮೇಲೆ ಮತ್ತೆ ಕರಿ ನೆರಳು

Published On :


ಶಿವಮೊಗ್ಗ: ಮರಳು ಸಾಗಾಣಿಕೆ ವ್ಯವಸ್ಥೆಯಲ್ಲಿ ಮತ್ತೆ ಗೊಂದಲ ತಲೆದೋರಿದೆ. ತೀರ್ಥಹಳ್ಳಿ ತಾಲೂಕು ಬೆಜ್ಜವಳ್ಳಿಯಲ್ಲಿ ಮರಳು ಸಾಗಾಣಿಕೆ ಲಾರಿಗಳನ್ನು ತಡೆದು ನಿಲ್ಲಿಸಲಾಗಿದ್ದು, ಲಾರಿ ಮಾಲಿಕರು ಸಮಸ್ಯೆ ಪರಿಹಾರ ಮಾಡುವಂತೆ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದೆ.
ಹಣ ಸಂದಾಯವಾಗಿಲ್ಲ: ಹೊಸ ಮರಳು ನೀತಿ ಪ್ರಕಾರ ಮರಳು ಸಾಗಣೆ ಮಾಡಲು ಪರ್ಮಿಟ್ ಪಡೆವ ಸಂದರ್ಭದಲ್ಲಿ  ಕಟ್ಟುವ ಶುಲ್ಕದ ಶೇ.25ರಷ್ಟನ್ನು ಸಂಬಂಧಿಸಿದ ಗ್ರಾಪಂಗಳಿಗೆ ಬಿಡುಗಡೆ ಮಾಡಬೇಕು. ಬೆಜ್ಜವಳ್ಳಿ ಗ್ರಾಪಂ ವ್ಯಾಪ್ತಿಯ ಮಹಿಷಿ ಹಾಗೂ ದಬ್ಬಣಗದ್ದೆ ಮರಳು ಲೋಡಿಂಗ್ ಪಾಯಿಂಟ್ ಸ್ಥಳಗಳು ಬರುತ್ತವೆ. ಆದರೆ ಈ ಗ್ರಾಪಂಗೆ ಜಿಲ್ಲಾಡಳಿತದಿಂದ ಸೂಕ್ತ ಹಣ ಸಂದಾಯ ಮಾಡಲಾಗಿಲ್ಲ. ಇದರಿಂದ ಅಸಮಾಧಾನಗೊಂಡ ಗ್ರಾಮಸ್ಥರು ಶುಕ್ರವಾರ ಬೆಳಿಗ್ಗೆಯಿಂದಲೇ, ನಿಗದಿತ ಹಣ ಪಾವತಿಸಿ ಪರ್ಮಿಟ್ ಪಡೆದು ಮರಳು ತುಂಬಲು ಹೋಗುತ್ತಿರುವ ಲಾರಿಗಳನ್ನು ತಡೆದು ನಿಲ್ಲಿಸಿದ್ದಾರೆ.
ಮನವಿ: ಈ ಹಿನ್ನೆಲೆಯಲ್ಲಿ ಮರಳು ಸಾಗಾಣಿಕೆ ಮಾಡುವ ಲಾರಿ ಮಾಲಿಕರ ಸಂಘ ನ್ಯಾಯದೊರಕಿಸಿಕೊಡುವಂತೆ ಒತ್ತಾಯಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿವರಿಗೆ ಮನವಿ ಅರ್ಪಿಸಿತು.
ಸಮಸ್ಯೆ ಪರಿಹರಿಸಿ: ತಮ್ಮ ಗ್ರಾಪಂಗೆ ಬಾಕಿ ಉಳಿದಿರುವ ಹಣ ಸಂದಾಯವಾಗುವವರೆಗೂ ಮಹಿಷಿ ಹಾಗೂ ದಬ್ಬಣಗದ್ದೆ ಲೋಡಿಂಗ್ ಪಾಯಿಂಟ್‌ಸ್ಥಳಗಳಲ್ಲಿ ಯಾವುದೇ ಕಾರಣಕ್ಕೂ ಮರಳು ಸಾಗಣೆ ಮಾಡಲು ಅವಕಾಶ ನೀಡುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ಹೀಗಾಗಿ ಕೂಡಲೇ ಸಮಸ್ಯೆ ಪರಿಹರಿಸುವಂತೆ ಲಾರಿ ಮಾಲಿಕರ ಸಂಘ ಒತ್ತಾಯಿಸಿತು.
ಜಿಲ್ಲಾಡಳಿತ ಹಾಗೂ ಸಂಬಂಧಿಸಿದ ಗ್ರಾಪಂ ನಡುವಿನ ಸಮಸ್ಯೆಯ ನೇರ ಪರಿಣಾಮ ತಮ್ಮ ಮೇಲೆ ಬೀರಿದೆ. ಲಾರಿಗಳನ್ನು ತಡೆ ಹಿಡಿದಿರುವುದರಿಂದ ಲಾರಿ ಮಾಲೀಕರ ಮೇಲೆ ಅನಗತ್ಯ ವೆಚ್ಚ ಬೀಳುತ್ತಿದೆ. ಲಾರಿ ಚಾಲಕರು, ಮರಳು ತುಂಬುವ ಕೂಲಿ ಕಾರ್ಮಿಕರು ಸಂಕಷ್ಟ ಪಡುವಂತಾಗಿದೆ ಎಂದು ಸಂಘ ತಿಳಿಸಿದೆ.
ಕೂಡಲೇ ಪೊಲೀಸ್ ಇಲಾಖೆ ಮಹಿಷಿ ಹಾಗೂ ದಬ್ಬಣಗದ್ದೆ ಪ್ರದೇಶಗಳಲ್ಲಿ ಸೂಕ್ತ ಭದ್ರತೆ ನೀಡಬೇಕು. ತಡೆ ಹಿಡಿಯಲಾಗಿರುವ ಮರಳು ಲಾರಿಗಳನ್ನು ಬಿಡಿಸಬೇಕು. ಮರಳು ಭರ್ತಿ ಮಾಡಲು ಅವಕಾಶ ನೀಡಬೇಕು ಎಂದು ಸಂಘ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿತು.
ಅಹವಾಲು ಆಲಿಸಿದ ಜಿಲ್ಲಾ ರಕ್ಷಣಾಧಿಕಾರಿಯವರು ಈ ಕುರಿತು ಸ್ಥಳೀಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಸಂಘಕ್ಕೆ ಭರವಸೆ ನೀಡಿದ್ದಾರೆ. ಮನವಿ ಅರ್ಪಿಸುವ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಡಿ. ರಾಜಶೇಖರ್, ಏಜಾಜ್, ನವೀದ್, ಸೆಲ್ವರಾಜ್, ಮಂಜುನಾಥ್, ತ್ರಿಮೂರ್ತಿ, ಸೆಲ್ವಂ, ಕೆ. ಮಂಜು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.