ತಾಲೂಕಲ್ಲಿ ಕೆಲ ದಿನದಿಂದ ವಿದ್ಯುತ್ ಕ್ಷಾಮ
ಶಿಕಾರಿಪುರ: ತಾಲೂಕಿನ ಜನತೆ ಕಳೆದ ಕೆಲ ದಿನದಿಂದ ವಿದ್ಯುತ್ ಕ್ಷಾಮ ಎದುರಿಸುತ್ತಿದೆ. ಮೆಸ್ಕಾಂ ಈ ದಿಸೆಯಲ್ಲಿ ತಾಲೂಕಿಗೆ ಸರಬರಾಜು ಮಾಡುತ್ತಿರುವ ವಿದ್ಯುತ್ ಪ್ರಮಾಣವನ್ನು ಅಧಿಕ ರೀತಿಯಲ್ಲಿ ಕಡಿತಗೊಳಿಸುವ ಮೂಲಕ ತೀವ್ರತರ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಸಂಸದ ರಾಘವೇಂದ್ರ ಅಸಮಾಧಾನ ವ್ಯಕ್ತಪಡಿಸಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ 15 ದಿನದಿಂದ ಶಿವಮೊಗ್ಗ ಜಿಲ್ಲೆಯಲ್ಲಿ ವಿದ್ಯುತ್ ಅಭಾವ ಅತ್ಯಧಿಕವಾಗಿದ್ದು ಪರಿಸ್ಥಿತಿ ಮನಗಂಡು ದೊಡ್ಡ ಹಾಗೂ ಸಣ್ಣ ಹಿಡುವಳಿದಾರರು ಅಲ್ಪಸ್ವಲ್ಪ ಪ್ರಮಾಣದಲ್ಲಿ ಬಿತ್ತುವ ಮೂಲಕ ಮೆಸ್ಕಾಂ ಜತೆ ಸ್ಪಂದಿಸಿರುವ ರೈತರಿಗೆ ನಿತ್ಯ ಕನಿಷ್ಠ 5ರಿಂದ 6 ಗಂಟೆ 3 ಫೇಸ್ ವಿದ್ಯುತ್ ನೀಡುವಲ್ಲಿ ಇಲಾಖೆ ವಿಫಲವಾಗಿದೆ ಎಂದು ಆರೋಪಿಸಿದರು.
ಮಂಗಳೂರು ಮೆಸ್ಕಾಂ ಕಚೇರಿಯ 220 ಕೆ.ವಿ ಸ್ಟೇಷನ್ನ ಅಧೀನದಲ್ಲಿನ ತಾಲೂಕಿನ ಬಳ್ಳಿಗಾವಿಗೆ 150 ಮೆಗಾವ್ಯಾಟ್ ವಿದ್ಯುತ್ ಸರಬರಾಜಾಗುತ್ತಿದೆ. ಇದರಿಂದಾಗಿ ತಾಲೂಕಿಗೆ 50 ಮೆಗಾವ್ಯಾಟ್ ವಿದ್ಯುತ್ ದೊರೆಯುತ್ತಿದೆ. ಇದೀಗ ಈ ಪ್ರಮಾಣದಲ್ಲಿ ಹಠಾತ್ ಕಡಿತಗೊಳಿಸಿದ ಪರಿಣಾಮ ತಾಲೂಕಿನ ರೈತರು, ವಿದ್ಯಾರ್ಥಿಗಳಿಗೆ ಕುಡಿಯುವ ನೀರು ಸರಬರಾಜಿಗೆ ಹೆಚ್ಚಿನ ರೀತಿಯಲ್ಲಿ ಸಮಸ್ಯೆ ಉದ್ಭವವಾಗುತ್ತಿದೆ. ಶಿಕಾರಿಪುರ ವಿಭಾಗದ ಆನವಟ್ಟಿ, ಸೊರಬ ಹಾಗೂ ಶಿರಾಳಕೊಪ್ಪದಲ್ಲಿಯೂ ಇಂತಹ ಪರಿಸ್ಥಿತಿಯಿಂದಾಗಿ ಸಮಸ್ಯೆ ಬಿಗಡಾಯಿಸುತ್ತಿದೆ. ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣದ ರೀತಿಯಲ್ಲಿ ತಾರತಮ್ಯ ನೀತಿಯನ್ನು ಮೆಸ್ಕಾಂ ಅನುಸರಿಸುತ್ತಿದೆ ಎಂದು ದೂರಿದರು.
ಸಮಸ್ಯೆ ಪರಿಹಾರಕ್ಕೆ ಸಂವಾದ: ಜಿಲ್ಲೆಯಲ್ಲಿ ವಿದ್ಯುತ್ ಸಮಸ್ಯೆ ಹೆಚ್ಚಾಗಿದೆ. ಈ ಬಗ್ಗೆ ಜಿಲ್ಲೆಯವರಾದ ಉಪಮುಖ್ಯಮಂತ್ರಿ ಈಶ್ವರಪ್ಪನವರು ಸಮಸ್ಯೆ ಪರಿಹಾರಕ್ಕೆ ಹೆಚ್ಚಿನ ರೀತಿಯಲ್ಲಿ ಶ್ರಮಿಸಬೇಕಾಗಿದೆ. ಸಂಸದರಾಗಿ ಈಗಾಗಲೇ ಮೆಸ್ಕಾಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜತೆ ಸಮಸ್ಯೆ ಪರಿಹಾರಕ್ಕೆ ದೂರವಾಣಿ ಮೂಲಕ ಪ್ರಯತ್ನಿಸಿದ್ದಾಗಿ ತಿಳಿಸಿದರು.
ಇದುವರೆಗೂ ಕಂಡರಿಯದ ರೀತಿಯಲ್ಲಿ ವಿದ್ಯುತ್ ಸಮಸ್ಯೆಯಿಂದಾಗಿ ರೈತಾಪಿ ವರ್ಗದ ಸಹಿತ ವಿದ್ಯಾರ್ಥಿಗಳು ಪರೀಕ್ಷೆ ಸಮೀಪಿಸುತ್ತಿರುವ ಇಂದಿನ ದಿನದಲ್ಲಿ ತೀವ್ರ ರೀತಿಯ ತೊಂದರೆ ಅನುಭವಿಸುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಕುಡಿವ ನೀರಿಗೆ ರಾತ್ರಿ ಪೂರ್ತಿ ನಿದ್ದೆಗೆಡಬೇಕಾದ ಸನ್ನಿವೇಶ ನಿರ್ಮಾಣವಾಗುತ್ತಿದೆ ಎಂದರು.
ರಾಜ್ಯ ಸರ್ಕಾರ ಈ ಕೂಡಲೆ ಎಚ್ಚರಗೊಂಡು ಕೇಂದ್ರದ ಜತೆ ಮಾತುಕತೆ ಮೂಲಕ ಕೇಂದ್ರದ ಗ್ರಿಡ್ನಿಂದ ಸಮರ್ಪಕ ವಿದ್ಯುತ್ ದೊರಕಿಸಿ ರೈತರ ಸಹಿತ ವಿದ್ಯಾರ್ಥಿಗಳಿಗೆ ಕುಡಿವ ನೀರಿಗೆ ಶಾಶ್ವತ ಪರಿಹಾರ ಕಲ್ಪಿಸಲು ಮನವಿ ಮಾಡಿದರು.
ಗುರುಮೂರ್ತಿ, ಹಾಲಪ್ಪ, ಪ್ರವೀಣ ಶೆಟ್ಟಿ, ರುದ್ರಪ್ಪಯ್ಯ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

