ಶಿವಮೊಗ್ಗ

ಮುಚ್ಚಿದ ಬಾಗಿಲ ಚರ್ಚೆ: ಸದಸ್ಯರ ಗಪ್‌ಚಿಪ್

Published On :

ಶಿವಮೊಗ್ಗ: ಇನ್‌ಡೋರ್-ಔಟ್‌ಡೋರ್ ಚರ್ಚೆಯೇ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲದು. ಗುರುವಾರ ನಗರದಲ್ಲಿ ನಡೆದ ಜಿಪಂ ಸಾಮಾನ್ಯ ಸಭೆಯಲ್ಲಿ ಈ ವಿಷಯ ಮತ್ತೊಮ್ಮೆ ಸಾಬೀತಾಯಿತು.
ಅನುದಾನ: ಕಳೆದ ಬಾರಿ ವಿಪಕ್ಷದವರ ವಿರೋಧದಿಂದ ಸಭೆ ಅನಿರ್ದಿಷ್ಠ ಮುಂದೂಡಿಕೆಗೆ ಕಾರಣವಾಗಿದ್ದ ಅಧ್ಯಕ್ಷರ ವಿವೇಚನಾ ನಿದಿ ಬಳಕೆ ವಿಚಾರ ಗುರುವಾರ ಮತ್ತೊಮ್ಮೆ ಚರ್ಚೆಗೆ ಬಂತು. ಅಧ್ಯಕ್ಷರ ಅಪ್ಪಣೆ ಮೇರೆಗೆ ವಿಷಯಗಳ ಚರ್ಚೆಯ ನಂತರ ಅಜೆಂಡಾಕ್ಕೆ ಬರುತ್ತಿದ್ದಂತೆ ಈಸೂರು ಬಸವರಾಜ್ ಅವರು ಈ ವಿಷಯ ಚರ್ಚೆಗೆ ತಂದರು. ಹಿಂದಿನ ಅಧ್ಯಕ್ಷರಿದ್ದಾಗ ವಿವೇಚನಾ ನಿಧಿ ಎಂದು 2 ಕೋಟಿ ರು. ಅನುದಾನ ಮಂಜೂರಾಗಿತ್ತು.
ಸುದೀರ್ಘ ಚರ್ಚೆ: ಆದರೆ ಬಿಡುಗಡೆಯಾಗಿದ್ದು 50 ಲಕ್ಷ ಮಾತ್ರ. ಇಷ್ಟು ಮೊತ್ತಕ್ಕೆ ಕ್ರಿಯಾಯೋಜನೆ ರೂಪಿಸುವ ಬದಲು ಅವರು ಇಡೀ ಮೊತ್ತಕ್ಕೆ ಕ್ರಿಯಾಯೋಜನೆ ರೂಪಿಸಿದ್ದರು. ಇದು ಸರಿ ಅಲ್ಲ. ಈಗಿನ ಅಧ್ಯಕ್ಷರ ಹಕ್ಕು ಮೊಟಕು ಮಾಡಲಾಗಿದೆ ಎಂಬುದು ಅವರ ವಾದ. ಈ ಬಗ್ಗೆ ಮತ್ತೆ ಸುದೀರ್ಘ ಚರ್ಚೆ ನಡೆಯಿತು. ಆಗ ಹಿಂದಿನ ಅಧ್ಯಕ್ಷೆ ಶುಭಾ ಕೃಷ್ಣಮೂರ್ತಿ ಅವರು ಎದ್ದು ನಿಂತು, ಇದು ಅಧ್ಯಕ್ಷರ ವಿವೇಚನಾ ನಿಧಿ. ಸಭೆಯ ಮುಂದಿಡಬೇಕಾದ ಅಗತ್ಯವಿಲ್ಲ ಎಂದು ಹೇಳಿ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದರು. ವಿಪಕ್ಷ ನಾಯಕ ಕಲಗೋಡು ರತ್ನಾಕರ್, ಈಗಿನ ಅಧ್ಯಕ್ಷರೇ ಕೇಳುತ್ತಿಲ್ಲ. ನೀವೇಕೆ ಅವರ ಪರ ಮಾತನಾಡುತ್ತೀರಿ ಎಂದು ಕಿಚಾಯಿಸಿದರು. ಬಿಡುಗಡೆಯಾದ ಹಣಕ್ಕೆ ಮಾತ್ರ ಕ್ರಿಯಾಯೋಜನೆ ರೂಪಿಸುವ ಬದಲು ಇಡೀ ಮೊತ್ತಕ್ಕೆ ಓಎಂ ಕೊಟ್ಟಿದ್ದು ಏಕೆ ಎಂದು ಕೃಷ್ಣೇಗೌಡ ಹರಿಹಾಯ್ದರು.
ಡಿಸೆಂಟ್ ನೋಟ್: ಆಗ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ್, ಈ ಹಣ ಬಳಕೆಗೆ ಈಗಾಗಲೇ ಕ್ರಿಯಾಯೋಜನೆ ಆಗಿದೆ. ಹಾಗಾಗಿ ಅದರಂತೆ ಬಳಸಲಾಗುವುದು ಎಂದು ಸಮಜಾಯಿಷಿ ನೀಡಿದಾಗ ಅದನ್ನು ಒಪ್ಪದ ಈಸೂರು ಬಸವರಾಜ್ ಡಿಸೆಂಟ್ ನೋಟ್ ಬರೆಸಲು ಮುಂದಾದರು. ಆಗ ಅಶೋಕ್ ನಾಯ್ಕ್, ಸಭೆಯನ್ನು 10 ನಿಮಿಷ ಮುಂದೂಡಿ ಸದಸ್ಯರೊಂದಿಗೆ ಚರ್ಚಿಸಿ ಬಗೆಹರಿಸಿ ಎಂದು ಸಲಹೆ ನೀಡಿದರು. ಆಗ ಅಧ್ಯಕ್ಷರು 10 ನಿಮಿಷ ಸಭೆ ಮುಂದೂಡಿ ಎಲ್ಲಾ ಸದಸ್ಯರನ್ನೂ ತಮ್ಮೊಂದಿಗೆ ಕರೆದೊಯ್ದರು.
ಇಂಡೋರ್ ಚರ್ಚೆ: ಎಲ್ಲ ಸದಸ್ಯರು ಅಧ್ಯಕ್ಷರ ಕೊಠಡಿಯಲ್ಲಿ ಸಭೆ ಸೇರಿ ಚರ್ಚಿಸಿದ ಬಗ್ಗೆ ಮೂಲಗಳು ಹೇಳಿದ್ದು ಹೀಗೆ- ಆಗಿದ್ದಾಯಿತು. ಈಗ 2 ಕೋಟಿ ಅನುದಾನದಲ್ಲಿ 1 ಕೋಟಿ ಅನುದಾನದ ಕ್ರಿಯಾಯೋಜನೆಯನ್ನು ಹಳೇ ಅಧ್ಯಕ್ಷರು ಹೇಗೆ ಮಾಡಿದ್ದಾರೋ ಹಾಗೆಯೇ ಬಿಡೋಣ. ಇನ್ನುಳಿದ 1 ಕೋಟಿ ಅನುದಾನ ಕ್ರಿಯಾಯೋಜನೆಯನ್ನು ಹೊಸ ಅಧ್ಯಕ್ಷರು ಮಾಡುತ್ತಾರೆ. ಇದಕ್ಕೆ ನೀವೆಲ್ಲಾ ಒಪ್ಪಿಕೊಳ್ಳಿ. ಸುಮ್ಮನೆ ನಮ್ಮ ನಡುವೆ ಕಿತ್ತಾಟ ಏಕೆ ಅದರಂತೆ ಆಯಿತು. ಮತ್ತೆ ಸಭೆ ಸೇರಿದಾಗ ಗೀತಾ ಮಲ್ಲಿಕಾರ್ಜುನ್, ಅಧ್ಯಕ್ಷರ ವಿವೇಚನಾ ನಿಧಿ ಬಗ್ಗೆ ಚರ್ಚೆ ಮಾಡುವುದು ಬೇಡ. ಆ ವಿಷಯ ಬಿಟ್ಟುಬಿಡಿ ಎಂದರು. ಎಲ್ಲ ಸದಸ್ಯರು ಸುಮ್ಮನೆ ಅದಕ್ಕೆ ಒಪ್ಪಿಕೊಂಡರು.
ಹಸಿರೀಕರಣ: ಹಿಂದಿನ ಸಭೆಯಲ್ಲಿ ಸಾಗರ ತಾಲೂಕು ಆವಿನಹಳ್ಳಿಯಲ್ಲಿ ಹಸಿರೀಕರಣದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಸಿದೆ ಎಂದು ಸಿಇಓ ಸಂಜಯ್ ಬಿಜ್ಜೂರ್ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು ಬೆವರಿಳಿಸಿದ್ದ ಪದ್ಮಾವತಿ ಚಂದ್ರಕುಮಾರ್ ಅವರು ಇದೇ ವಿಷಯ ಅನುಪಾಲನಾ ವರದಿಯಲ್ಲಿ ಚರ್ಚೆಗೆ ಬಂದಾಗ ವರ್ತಿಸಿದ್ದೇ ಬೇರೆ ರೀತಿ.
ಈ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲು ಸೂಚಿಸಲಾಗಿದೆ ಎಂದು ವರದಿಯಲ್ಲಿ ಸೂಚಿಸಲಾಗಿತ್ತು.
 ಈ ವಿಷಯ ಚರ್ಚೆಗೆ ಬಂದಾಗ ಮೊದಲು ಎದ್ದು ನಿಂತ ಸಾಗರ ತಾಪಂ ಅಧ್ಯಕ್ಷ ಮಹಬಲೇಶ್ವರ ಕುಗ್ವೆ, ಆ ವಿಷಯದ ಚರ್ಚೆ ಬಿಟ್ಟುಬಿಡೋಣ. ಇನ್ನುಮುಂದೆ ಈ ರೀತಿ ಆಗದಂತೆ ಎಚ್ಚರ ವಹಿಸಲು ಅಧಿಕಾರಿಗಳಿಗೆ ಸೂಚಿಸಿ ಎಂದರು. ಪದ್ಮಾವತಿ ಚಂದ್ರಕುಮಾರ್ ಇದಕ್ಕೆ ಅನುಮೋದಿಸಿದರು. ಹಿಂದಿನ ಸಭೆಗೂ, ಇಂದಿನ ಸಭೆಗೂ ಅವರ ನಡುವಳಿಕೆ ವ್ಯತಿರಿಕ್ತವಾಗಿದ್ದು ಅಚ್ಚರಿ ಮೂಡಿಸಿತ್ತು.
ಆದರೆ ಇತರೆ ಸದಸ್ಯರು ಚರ್ಚೆ ಮುಕ್ತಾಯಗೊಳಿಸಲು ಬಿಡಲಿಲ್ಲ. ಅಶೋಕ್ ನಾಯ್ಕ್, ಸುಂದರೇಶ್, ಹಾರೋಗೊಳಿಗೆ ಪದ್ಮನಾಭ್ ಇದನ್ನು ತೀವ್ರವಾಗಿ ಪ್ರತಿಭಟಿಸಿ, ಇಡೀ ಪ್ರಕರಣದ ಸಮಗ್ರ ತನಿಖೆ ನಡೆಸಿ ಪ್ರಕರಣಕ್ಕೆ ಇತಿಶ್ರಿ ಹಾಡಿ ಎಂದು ಒತ್ತಾಯಿಸಿದರು. ಆಗ ಸಾಗರ ತಾಪಂ ಅಧ್ಯಕ್ಷರು ಮತ್ತೆ ಎದ್ದುನಿಂತು, ಸಾಗರ ತಾಲೂಕಿನಲ್ಲಿ ಏನೂ ಆಗಿಲ್ಲ ಎಂದು ರೂಲಿಂಗ್ ನೀಡಿ ಎಂದರು. ಕೊನೆಗೆ ನೂತನ ಸಿಇಓ ಶಶಿಕಾಂತ್ ಸೆಂಥಿಲ್, ಪ್ರಕರಣದ ಪರಿಶೀಲನೆ ನಡೆಸುವುದಾಗಿ ಹೇಳಿದರು.
ಸದನ ಸಮಿತಿ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯಲ್ಲಿ ಹೊರಗುತ್ತಿಗೆ ಸಿಬ್ಬಂದಿ ನೇಮಕ ಮಾಡಿಕೊಂಡು, ಅವರಿಗೆ ಸಂಬಳ ನೀಡುವಾಗ ಕಡಿತ ಮಾಡಲಾಗುತ್ತಿದೆ ಎಂಬ ಹಿಂದಿನ ಸಭೆಯಲ್ಲಿ ಚರ್ಚೆಗೆ ಬಂದಿತ್ತು. ಸದನ ಸಮಿತಿ ರಚಿಸಲು ತೀರ್ಮಾನಿಸಲಾಗಿತ್ತು. ಇನ್ನೂ ಯಾಕೆ ಸಮಿತಿ ರಚಿಸಿಲ್ಲ ಎಂದು ಸುಂದರೇಶ್ ಹಾಗೂ ಕೃಷ್ಣೇಗೌಡ ಪಟ್ಟು ಹಿಡಿದರು.
 ಯಾರೂ ದೂರು ನೀಡಿಲ್ಲ ಎಂದು ಅಧ್ಯಕ್ಷರು ಸಮಜಾಯಿಷಿ ನೀಡಿದಾಗ ಸುಂದರೇಶ್, ನಾನು ದೂರು ನೀಡಿದ್ದು ಸಾಕಾಗಲಿಲ್ಲವೇ ಎಂದು ಕಟುವಾಗಿ ಪ್ರಶ್ನಿಸಿದರು. ಈ ಬಗ್ಗೆ ಅಧ್ಯಕ್ಷರು ರೂಲಿಂಗ್ ನೀಡಿದರೆ ಸಮಿತಿ ರಚಿಸಬಹುದು ಎಂದು ಸಿಇಓ ಶಶಿಕಾಂತ್ ಹೇಳಿದರು. ಆದರೆ ಕೊನೆಗೂ ಅಧ್ಯಕ್ಷರು ಮನಸು ಮಾಡಲಿಲ್ಲ.
ಕ್ರೆಡಿಲ್ ಗೊಂದಲ: ಕ್ರೆಡಿಲ್ ಸಂಸ್ಥೆ ನಿರ್ಮಿಸಿರುವ ಕಟ್ಟಡಗಳ ಕಾಮಗಾರಿ ಕಳಪೆಯಾಗಿರುವುದು ಗುರುವಾರದ ಸಭೆಯಲ್ಲಿ ಮತ್ತೆ ಚರ್ಚೆಗೆ ಬಂತು. ತೀರ್ಥಹಳ್ಳಿ ಸ್ತ್ರೀಶಕ್ತಿ ಭವನದ ಬಗ್ಗೆಯಂತೂ ಆ ತಾಲೂಕಿನ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ಕಟ್ಟಡ ಕಾಮಗಾರಿ ಅರ್ಧಕ್ಕೆ ನಿಂತು, ಗಿಡಗಂಟೆಗಳು ಬೆಳೆದು ಸ್ಮಾರಕದಂತಾಗಿದೆ ಎಂದರು.
ಕೊನೆಗೆ ಸಿಇಓ ಶಶಿಕಾಂತ್, ನಿಮ್ಮಿಂದ ಕೆಲಸ ಮಾಡಲು ಆಗುತ್ತದೆಯೇ, ಇಲ್ಲವೇ ಎಂಬ ಬಗ್ಗೆ ಸ್ಪಷ್ಟವಾಗಿ ಹೇಳಿ. ನಿಮ್ಮ ಮೇಲಧಿಕಾರಿಗಳನ್ನು ಕೇಳಿ ಒಂದು ವಾರದಲ್ಲಿ ತಿಳಿಸಿ ಎಂದು ತಾಕೀತು ಮಾಡಿದರು.
 ಬೆಳಗಿನಿಂದ ಸಂಜೆ ಸುಮಾರು 6.30ರ ವರೆಗೆ ನಡೆದ ಸಭೆಯಲ್ಲಿ ಸ್ಥಾಯಿ ಸಮಿತಿ ಸಭೆಗಳ ಬಗ್ಗೆ ಚರ್ಚೆ ನಡೆಸಲು ಸಾಧ್ಯವಾಗಲಿಲ್ಲ. ಕೊನೆಗೆ ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಮುಂದೂಡಲಾಯಿತು. ಉಪಾಧ್ಯಕ್ಷೆ ಹೇಮಪಾವನಿ ಇದ್ದರು.

ಮುಖ್ಯಾಂಶಗಳು
 ವಿದ್ಯುತ್ ಕೊರತೆಯಿಂದ ಬೇಸಿಗೆಯಲ್ಲಿ ಸಂಭವಿಸಬಹುದಾದ ಕುಡಿಯುವ ನೀರಿನ ಸಮಸ್ಯೆ ಎದುರಿಸಲು ಎಲ್ಲಾ ಗ್ರಾಪಂಗಳಿಗೂ ಜನರೇಟರ್ ಖರೀದಿಸಲು ಸೂಚನೆ.
 ಕುಡಿಯುವ ನೀರು ಯೋಜನೆ ತುರ್ತು ರಿಪೇರಿಗಾಗಿ ಪ್ರತಿ ತಾಲೂಕಿಗೆ ಸರ್ಕಾರದಿಂದ 25 ಲಕ್ಷ ರು. ಅನುದಾನ.
 ಕೋಣಂದೂರು ಹಾಗೂ ಕಮ್ಮರಡಿಯಲ್ಲಿ ನಿರ್ಮಿಸಿರುವ ವಿದ್ಯುತ್ ಕೇಂದ್ರಗಳ ಕಾಮಗಾರಿ ತುರ್ತಾಗಿ ಮುಗಿಸುವ ಸಂಬಂಧ ಜಿಲ್ಲಾಧಿಕಾರಿ ಜತೆ ಚರ್ಚೆ ನಡೆಸುವುದಾಗಿ ಸಿಇಓ ಭರವಸೆ.
 ವಿದ್ಯುತ್ ಕೊರತೆ ಸಮಸ್ಯೆ ನೀಗಿದ್ದು, ತಲಾ 4 ಗಂಟೆ ವಿದ್ಯುತ್ ನೀಡುತ್ತಿರುವುದಾಗಿ ಮೆಸ್ಕಾಂ ಅಧಿಕಾರಿಗಳ ಹೇಳಿಕೆ.

ಮಹಿಳಾ ಸಾಮ್ರಾಜ್ಯ
13ನೇ ಹಣಕಾಸು ಯೋಜನೆ ಅನುಷ್ಠಾನ ಸಂಬಂಧ ಸಾಗರ ತಾಲೂಕಿನ ನಾಲ್ಕು ಜಿಪಂ ಕ್ಷೇತ್ರಗಳ ಪೈಕಿ ಎರಡು ಕ್ಷೇತ್ರಗಳ ಕ್ರಿಯಾ ಯೋಜನೆ ಮಾತ್ರ ಅನುಮೋದನೆಯಾಗಿವೆ. ತಿರಸ್ಕೃತಗೊಂಡ ಕ್ರಿಯಾ ಯೋಜನೆಗಳ ಬಗ್ಗೆ ಯಾವುದೇ ಕಾರಣ ನೀಡಿಲ್ಲ ಎಂದು ಸದಸ್ಯೆ ಸುಮಂಗಲ ಅವರು ತೀವ್ರ ಟೀಕೆ ಮಾಡಿದರು. ಜತೆಗೆ ಈ ಯೋಜನೆ ಅನುದಾನ ಹಣ ಕಡಿತ ಮಾಡಲಾಗಿದೆ ಎಂದು ಆರೋಪಿಸಿದರು. ಸದಸ್ಯರ ಹಕ್ಕುಚ್ಯುತಿಯಾಗಿದೆ. ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಇದಕ್ಕೆ ಲಲಿತಾ ನಾರಾಯಣ್, ಪದ್ಮಾವತಿ ಚಂದ್ರಕುಮಾರ್, ಹೊನಗೋಡು ರತ್ನಾಕರ್ ಬೆಂಬಲಿಸಿದರು.
ಇದಕ್ಕುತ್ತರಿಸಲು ತಿಣುಕಾಡಿದ ಅಧಿಕಾರಿಗಳು ಕೊನೆಗೆ, ಸೇತುವೆ ನಿರ್ಮಾಣ ಸಂಬಂಧ ಹೈಕೋರ್ಟ್ ಜಪ್ತಿ ಆದೇಶ ಬಂದಿದ್ದರಿಂದ 10 ಲಕ್ಷ ರು. ಮೊದಲ ಕಂತಿನ ಹಣವನ್ನು ಇದರಲ್ಲಿ ಕಟ್ಟಲಾಗಿದೆ ಎಂದರು. ಆಗ ಆಕ್ರೋಶಗೊಂಡ ಸದಸ್ಯರು ಅಧ್ಯಕ್ಷ ಪೀಠದ ಮುಂದೆ ತೆರಳಿ ತೀವ್ರ ಪ್ರತಿಭಟನೆ ನಡೆಸಿದರು. ಲೋಪವಾಗಿದ್ದರೆ ಅದಕ್ಕೆ ಜಿಪಂ ಸಂಪೂರ್ಣ ಹೊಣೆ. ಆದರೆ ಸಾಗರ ಕ್ಷೇತ್ರದ ಸದಸ್ಯರ ಅನುದಾನದ ಹಣ ಮಾತ್ರ ಕಡಿತಗೊಳಿಸಿ ಅವಮಾನಗೊಳಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
 ಕೊನೆಗೆ ಸಿಇಓ ಶಶಿಕಾಂತ್, ಮೇಲ್ನೋಟಕ್ಕೆ ಅಧಿಕಾರಿಗಳು ತಪ್ಪು ಮಾಡಿರುವುದು ಗೊತ್ತಾಗುತ್ತಿದೆ. ಎರಡು ದಿನದಲ್ಲಿ ಈ ಬಗ್ಗೆ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಪ್ರತ್ಯೇಕ ಆಸನ
ಸಭೆ ಆರಂಭವಾಗುತ್ತಿದ್ದಂತೆ ಕೆಜೆಪಿ-ಬಿಜೆಪಿ ಸಮಸ್ಯೆ ಮತ್ತೆ ಸಾಮಾನ್ಯ ಸಭೆಯಲ್ಲಿ ಶುರುವಾಯಿತು. ಅಧ್ಯಕ್ಷರಾದಿಯಾಗಿ 12 ಸದಸ್ಯರು ಪ್ರತ್ಯೇಕ ಆಸನ ಕೇಳಿ ಬರೆದಿರುವ ಪತ್ರದ ಬಗ್ಗೆ ಹುಣವಳ್ಳಿ ಗಂಗಾಧರಪ್ಪ ಪ್ರಸ್ತಾಪಿಸಿದರು. ನಿಮಗೆ ಆಡಳಿತ ನಡೆಸಲು ಹಕ್ಕಿಲ್ಲ ಎಂದು ಟೀಕಿಸಿದರು. ಅಧ್ಯಕ್ಷರು, ಈಗ ಅಭಿವೃದ್ಧಿ ಬಗ್ಗೆ ಮಾತ್ರ ಚರ್ಚಿಸೋಣ ಎಂದರೂ ಚರ್ಚೆ ನಿಲ್ಲಲಿಲ್ಲ.
ಕೊನೆಗೆ ಸಿಇಓ ಶಶಿಕಾಂತ್ ಸ್ಪಷ್ಟನೆ ನೀಡಿ, ಇವರು ನೀಡಿರುವ ಪತ್ರ ಚುನಾವಣಾ ಆಯೋಗದ ಮುಂದೆ ಇದೆ. ಹಾಗಾಗಿ ಅಲ್ಲಿ ನಿರ್ಧಾರ ಆಗುವವರೆಗೆ ಸಭೆ ನಡೆಸುವ ಅಧಿಕಾರ ಅಧ್ಯಕ್ಷರಿಗಿದೆ ಎಂದು ಹೇಳಿ ಚರ್ಚೆಗೆ ಮಂಗಳ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.