ವೈದ್ಯರ ವಿರುದ್ಧ ಕ್ರಮಕ್ಕೆ ಒತ್ತಾಯ
ಸಾಗರ: ಉಪವಿಭಾಗೀಯ ಆಸ್ಪತ್ರೆ ಫಿಜಿಶಿಯನ್ ಡಾ. ರಾಜು ಅವರ ಅನುಚಿತ ನಡವಳಿಕೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬುಧವಾರ ಸಾರ್ವಜನಿಕರು ಸಿವಿಲ್ ಸರ್ಜನ್ ಡಾ.ಬಿ.ಜಿ. ಸಂಗಮ್ ಅವರಿಗೆ ಮನವಿ ಸಲ್ಲಿಸಿದರು.
10ರಂದು ಸಂಜೆ 7 ಗಂಟೆಗೆ ಮಾಸೂರು ವಾಸಿ ಮೋಹನ್ ಎಂ.ಬಿ. ಅವರ ಒಂದೂವರೆ ವರ್ಷದ ಮಗುವನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾಗ, ತುರ್ತು ಚಿಕಿತ್ಸಾ ವಿಭಾಗದಲ್ಲಿ ಕರ್ತವ್ಯದಲ್ಲಿದ್ದ ಡಾ. ರಾಜು ಮಗುವನ್ನು ಪರೀಕ್ಷೆ ಮಾಡದೆ ಖಾಸಗಿ ನರ್ಸಿಂಗ್ ಹೋಂಗೆ ಹೋಗುವಂತೆ ಸೂಚಿಸಿದ್ದಾರೆ. ಭಾನುವಾರವಾಗಿರುವುದರಿಂದ ಖಾಸಗಿ ಆಸ್ಪತ್ರೆಗಳಿಗೆ ರಜೆ ಇರುತ್ತದೆ. ಮಗುವಿನ ಕಾಲು ಬೆರಳಿಗೆ ಮರದ ಚೂರು ನಾಟಿರುವುದರಿಂದ ತುರ್ತು ಚಿಕಿತ್ಸೆಯನ್ನಾದರೂ ನೀಡಿ ಎಂದು ಕೇಳಿದಾಗಲೂ ಸದರಿ ವೈದ್ಯ ಚಿಕಿತ್ಸೆ ನೀಡಲು ತಿರಸ್ಕರಿಸಿದ್ದಾರೆ. ತುರ್ತು ಚಿಕಿತ್ಸೆಗೆ ವಿನಂತಿಸಿಕೊಂಡ ಪೋಷಕರ ಮೇಲೆ ಏಕವಚನದಿಂದ ಗದರಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಮಗುವಿನ ಗೋಳಾಟ ನೋಡಲಾಗದೆ ಪರೀಕ್ಷೆ ಮಾಡುವಂತೆ ಕೇಳಿದರೆ ಹೊರಗೆ ಹೋಗಿ. ಇಲ್ಲವಾದರೆ ಸೆಕ್ಯೂರಿಟಿ ಹತ್ತಿರ ಹೇಳಿ ಹೊರದೂಡಬೇಕಾಗುತ್ತದೆ ಎಂದು ಬೆದರಿಕೆ ಹಾಕಿರುತ್ತಾರೆ. ಡಾ. ರಾಜು ಅವರ ವರ್ತನೆ ಬಡರೋಗಿಗಳಿಗೆ ತೀವ್ರ ನೋವು ಉಂಟು ಮಾಡಿದೆ ಎಂದು ಮನವಿಯಲ್ಲಿ ವಿವರಿಸಿದ್ದಾರೆ.
ಸಾಗರ ಆಸ್ಪತ್ರೆಗೆ ಉತ್ತಮ ಹೆಸರಿದ್ದು, ಒಳ್ಳೆಯ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಒಬ್ಬಿಬ್ಬರು ವೈದ್ಯರು ಮಾಡುವ ಇಂತಹ ನಡವಳಿಕೆಯಿಂದ ಆಸ್ಪತ್ರೆಯ ವಾತಾವರಣವೆ ಕೆಟ್ಟುಹೋಗುವ ಸಾಧ್ಯತೆಯಿದ್ದು, ತಕ್ಷಣ ಡಾ. ರಾಜು ವಿರುದ್ಧ ಶಿಸ್ತಿನ ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ನಗರಸಭೆ ಸದಸ್ಯ ಟಿ.ಡಿ. ಮೇಘರಾಜ್, ಕೆ.ಆರ್. ಗಣೇಶಪ್ರಸಾದ್, ರಾಜೇಂದ್ರ ಅವಿನಹಳ್ಳಿ, ಮೋಹನ್ ಎಂ.ಬಿ. ವೆಂಕಟೇಶ್, ಸುರೇಶ್ ಕೆ.ಜಿ, ಶ್ರೀಪಾದ ಕೆ.ಎಚ್, ರಾಜಶೇಖರ್, ಚಂದ್ರಣ್ಣ ಬೇಳೂರು, ವಿರೇಂದ್ರ, ಜಯಕುಮಾರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

