ಮಹಿಳಾ ಸಬಲೀಕರಣಕ್ಕೆ ಧ.ಗ್ರಾ ನೆರವು
ಶಿಕಾರಿಪುರ: ರಾಜ್ಯದ ಗ್ರಾಮೀಣ ಭಾಗದ ಅಭಿವೃದ್ಧಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡುಗೆ ಅಪಾರವಾಗಿದೆ. ಈ ದಿಸೆಯಲ್ಲಿ ಸರ್ಕಾರದ ಕಾರ್ಯವನ್ನು ಯೋಜನೆ ಬಹು ಯಶಸ್ವಿಯಾಗಿ ನಿರ್ವಹಿಸುತ್ತಿದೆ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದರು.
ಗುರುವಾರ ಪಟ್ಟಣದ ಯುವಜನ ಸೇವಾ ಮತ್ತು ಕ್ರೀಡಾ ಇಲಾಖಾ ಕ್ರೀಡಾಂಗಣದಲ್ಲಿ ಶ್ರೀ ಕ್ಷೇತ್ರ ದರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕೃಷಿ ಇಲಾಖೆ, ಕೃಷಿ ವಿವಿ, ಕೃಷಿ ಉತ್ಸವ ವ್ಯವಸ್ಥಾಪನಾ ಸಮಿತಿ ಸಂಯುಕ್ತಾಶ್ರಯದಲ್ಲಿ ನಡೆದ ತಾಲೂಕು ಮಟ್ಟದ ಕೃಷಿ ಉತ್ಸವ 2013 ಉದ್ಘಾಟಿಸಿ ಮಾತನಾಡಿದರು.
ಅನಾದಿ ಕಾಲದಿಂದ ಸಮಾಜದಲ್ಲಿ ಮಹಿಳೆಯರು ಪುರುಷರನ್ನು ಅವಲಂಬಿಸಿ ಬದುಕುತ್ತಿದ್ದಾರೆ. ಕೇವಲ ಕುಟುಂಬ ನಿರ್ವಹಣೆಗೆ ಮಾತ್ರ ಸೀಮಿತವಾಗಿದ್ದ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿಸಿ ಆರ್ಥಿಕವಾಗಿ ಸಬಲರನ್ನಾಗಿಸಿ ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆ ಪಾತ್ರ ಬಹುಮುಖ್ಯವಾಗಿದೆ ಎಂದು ಪ್ರಶಂಸಿಸಿದರು. ಈ ಕಾರ್ಯದಿಂದಾಗಿ ಇತ್ತೀಚಿನ ದಿನದಲ್ಲಿ ಪುರುಷ ಪ್ರಧಾನ ಸಮಾಜದಲ್ಲಿ ಎಲ್ಲಾ ಕ್ಷೇತ್ರದಲ್ಲಿ ಪುರುಷರು ಮಹಿಳೆಯರನ್ನು ಅವಲಂಬಿಸಬೇಕಾಗುತ್ತಿದೆ ಎಂದರು.
ಯೋಜನೆ ಮೂಲಕ ನನಸು: ಕೃಷಿ ಕಾರ್ಯದಿಂದ ವಿಮುಖವಾಗಿ ಯುವಪೀಳಿಗೆ ಉದ್ಯೋಗ ಅರಸಿ ಪಟ್ಟಣಕ್ಕೆ ವಲಸೆ ಹೋಗುತ್ತಿದ್ದು, ವಿದ್ಯಾವಂತರ ವಲಸೆ ತಪ್ಪಿಸಿ ಗ್ರಾಮ ರಾಜ್ಯದ ಕನಸು ನನಸಾಗಲು ಪ್ರತಿ ಗ್ರಾಮದಲ್ಲಿ ಸರ್ವ ರೀತಿಯ ಸೌಲಭ್ಯ ದೊರಕಬೇಕಾಗಿದೆ. ಈ ಕಾರ್ಯವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗಡೆಯವರು ಯೋಜನೆಯ ಮೂಲಕ ನನಸಾಗಿಸುತ್ತಿದ್ದಾರೆ ಎಂದರು.
ದೇಶದ ಪಂಚಾಯತ್ ವ್ಯವಸ್ಥೆ ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಜಾರಿಯಾಗಿದೆ. ಇದರಿಂದಾಗಿ ಸ್ಥಳೀಯ ಸಂಸ್ಥೆಗಳನ್ನು ಮಹಿಳೆಯರು ಪ್ರತಿನಿಧಿಸುತ್ತಿದ್ದಾರೆ. ಶೇ.50ಕ್ಕಿಂತ ಅಧಿಕ ಮಹಿಳೆಯರು ಆರ್ಥಿಕವಾಗಿ ಸಬಲರಾಗಿ ಸ್ವಾವಲಂಬಿಗಳಾಗಿ ಬದುಕಿದಾಗ ಮಾತ್ರ ಗ್ರಾಮೀಣ ಅಭಿವೃದ್ಧಿ ಸಾಧ್ಯ ಎಂದರು.
ಮಹಿಳೆಯರ ಸ್ವಾವಲಂಬನೆಗಾಗಿ ಭಾಗ್ಯಲಕ್ಷ್ಮಿ ಯೋಜನೆ, ಹಾಲಿಗೆ ಪ್ರೋತ್ಸಾಹ ಧನ, ಸಾಲ ಮನ್ನಾ ಯೋಜನೆ ಮತ್ತಿತರ ಹಲವು ಕಾರ್ಯವನ್ನು ಜಾರಿಗೊಳಿಸಲಾಗಿದೆ. ಸಾವಯವ ಕೃಷಿಗೆ ಹೆಚ್ಚಿನ ಗಮನ ನೀಡಿ ಕಡಿಮೆ ನೀರಿನಲ್ಲಿ ಅಧಿಕ ಬೆಳೆ ಬೆಳೆಯಲು ಸಲಹೆ ನೀಡಿದರು.
ಕೃಷಿ ಪರಿಕರಗಳಿಗೆ ಸಬ್ಸಿಡಿ: ಸಂಸದ ರಾಘವೇಂದ್ರ ಮಾತನಾಡಿ, ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಆರಂಭದಲ್ಲಿ ಪೂಜ್ಯ ಧರ್ಮಾಧಿಕಾರಿಗಳ ಆದೇಶದನ್ವಯ ಕೃಷಿಗೆ ಸಂಬಂಧಿಸಿದ ಹೆಚ್ಚಿನ ಕಾರ್ಯವನ್ನು ಈಡೇರಿಸಿದ್ದಾರೆ. ಹಲವಾರು ರೈತರನ್ನು ದೇಶದ ಬೆನ್ನೆಲುಬು ಎಂದು ಕತ್ತಲಿನಲ್ಲಿರಿಸಲಾಗಿದೆ. ಯಡಿಯೂರಪ್ಪನವರು ಉಚಿತ ವಿದ್ಯುತ್ ಸಹಿತ ಸಾಲ ಮನ್ನಾ, ಕೃಷಿ ಪರಿಕರಗಳಿಗೆ ಸಬ್ಸಿಡಿ ಮತ್ತಿತರ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ ಎಂದರು.
ದಿವ್ಯ ಸಾನ್ನಿಧ್ಯ ವಹಿಸಿದ್ದ ವೀರಾಪುರ ಮಠದ ಮರುಳಸಿದ್ದ ಪಂಡಿತಾರಾದ್ಯ ಶಿವಾಚಾರ್ಯ ಮಹಾಸ್ವಾಮಿಗಳ ಋಷಿಮುನಿಯ ಕೃಷಿ ಪುಸ್ತಕವನ್ನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಬಿಡುಗಡೆಗೊಳಿಸಿದರು.
ಪ್ರಾಸ್ತಾವಿಕವಾಗಿ ಯೋಜನೆಯ ಶೇಖರ್ ಗೌಡ ಹಾಗೂ ಸಹಾಯಕ ಕೃಷಿ ನಿರ್ದೇಶಕ ಡಾ. ಪ್ರಭಾಕರ್ ಮಾತನಾಡಿದರು.
ವೇದಿಕೆಯಲ್ಲಿ ಜಿಪಂ ಅಧ್ಯಕ್ಷೆ ಗೀತಾ, ಉಪಾಧ್ಯಕ್ಷೆ ಹೇಮಾ ಪಾವನಿ, ಸದಸ್ಯ ರುದ್ರಪ್ಪ, ಈಶ್ವರಪ್ಪ, ಶಾಂತಮ್ಮ, ಬಂಗಾರಿನಾಯ್ಕ, ತಾಪಂ ಅಧ್ಯಕ್ಷ ಹನುಮಂತಪ್ಪ, ಮುಖಂಡ ಕೆ. ಶೇಖರಪ್ಪ, ವಸಂತಗೌಡ, ಸಣ್ಣ ಹನುಮಂತಪ್ಪ, ಚನ್ನವೀರಪ್ಪ, ಮಹಾದೇವಪ್ಪ, ಶಿವಮೂರ್ತಿ, ಸುಧೀರ್ ಕುಮಾರ್ ಬಂಟ್ವಾಳ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

