ಅಧಿಕಾರಿಗಳ ಮಧ್ಯೆ ಪ್ರವೇಶ: ಬಾಲ್ಯ ವಿವಾಹಕ್ಕೆ ತಡೆ
ಶಿವಮೊಗ್ಗ: ಕೂಡ್ಲಿಯ ದೇವಸ್ಥಾನದಲ್ಲಿ ಬಾಲಕಿಯ ಮದುವೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಪಡೆದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಬುಧವಾರ ಬಾಲ್ಯವಿವಾಹ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಇಲ್ಲಿನ ಅಗರದಹಳ್ಳಿ ಕ್ಯಾಂಪ್ನ ಬಾಲಕಿ(16) ಹಾಗೂ ಇಲ್ಲಿನ ಸ್ಥಳೀಯ ಜಗದೀಶ್ ಎಂಬುವವನಿಗೆ ಮದುವೆ ಮಾಡಲು ಹಿರಿಯರು ನಿಶ್ಚಿಯಿಸಿದ್ದರು. ಈ ಮಾಹಿತಿ ಪಡೆದ ಅಧಿಕಾರಿಗಳು ಹೊಳೆಹೊನ್ನೂರು ಪೊಲೀಸ್ರ ಸಹಕಾರದೊಂದಿಗೆ ಮದುವೆ ಮನೆಗೆ ದಾಳಿ ನಡೆಸಿ ಮದುವೆ ತಡೆದಿದ್ದಾರೆ. ಅಲ್ಲದೇ ಬಾಲಕಿಯ ಪೋಷಕರಿಂದ ಬಾಲಕಿಗೆ 18 ವರ್ಷ ತುಂಬವವರೆಗೂ ಮದುವೆ ಮಾಡವುದಿಲ್ಲ ಎಂದು ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ ಎಂದು ಹೊಳೆಹೊನ್ನೂರು ಪೊಲೀಸರು ತಿಳಿಸಿದ್ದಾರೆ.
ಇ-ಮೇಲ್ ದುರ್ಬಳಕೆ
ಶಿವಮೊಗ್ಗ: ಅಪರಿಚಿತರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರ ಇ-ಮೇಲ್ ಅಕೌಂಟ್ ಹ್ಯಾಕ್ ಮಾಡಿ ಮೇಲಧಿಕಾರಿಗಳಿಗೆ ಸುಳ್ಳು ಮಾಹಿತಿ ರವಾನಿಸಿದ ಘಟನೆ ಜಯನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಇಲಾಖೆಯ ಉಪನಿರ್ದೇಶಕಿ ಲಕ್ಷ್ಮೀಕಾಂತಮ್ಮ ಅವರು ಕಾರ್ಯನಿಮಿತ್ತ ಜಿಪಂ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡಿದ್ದ ವೇಳೆ ಇವರ ಇ-ಮೇಲ್ನಿಂದ ಮೇಲಾಧಿಕಾರಿ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗೆ ಈ ಮೇಲಲ್ರವಾನೆಯಾಗಿದೆ. ತಾನು ಸ್ಪೈನ್ ದೇಶದಲ್ಲಿದ್ದೇನೆ. ತನ್ನ ಬಳಿ ಇದ್ದ ಹಣ, ಮೊಬೈಲ್ ಹಾಗೂ ಬೆಲೆ ಬಾಳುವ ದಾಖಲೆಗಳನ್ನು ಕಳ್ಳರು ಅಪಹರಿಸಿದ್ದಾರೆ. ನನಗೆ ಹಣದ ಅವಶ್ಯಕತೆಯಿದ್ದು, ತಾವುಗಳು ಸಹಾಯ ಮಾಡಬೇಕೆಂದು ಕೋರಿದಂತೆ ಸಂದೇಶ ಕಳುಹಿಸಲಾಗಿದೆ. ಉಪನಿರ್ದೇಶಕರು ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ರು. 37 ಲಕ್ಷ ವಶ
ಶಿವಮೊಗ್ಗ: ವಾಹನದಲ್ಲಿ ಸಾಗಿಸುತ್ತಿದ್ದ 37 ಲಕ್ಷ ರು. ಹಣವನ್ನು ಸ್ಥಳೀಯ ಗ್ರಾಮಾಂತರ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿದ ಘಟನೆ ಬುಧವಾರ ನಗರದ ರಾಗಿಗುಡ್ಡದ ಚೆಕ್ ಪೋಸ್ಟ್ ಬಳಿ ನಡೆದಿದೆ.
ಬೆಳಗಾವಿಯಿಂದ ಶಿವಮೊಗ್ಗಕ್ಕೆ ಮಾರುತಿ ಇಂಡಿಕಾ ಕಾರಿನಲ್ಲಿ ಹಣ ಸಾಗಿಸುತ್ತಿದ್ದರು. ಖಚಿತ ವರ್ತಮಾನದ ಮೇರೆಗೆ ತನಿಖೆಗೊಳಪಡಿಸಿದ ಪೊಲೀಸರು, ವಾಹನದ ಸೀಟಿನ ಮಧ್ಯಭಾಗದಲ್ಲಿ ಒಂದು ಪ್ಲಾಸ್ಟಿಕ್ ಕವರ್ನಲ್ಲಿಟ್ಟಿದ್ದ ಸುಮಾರು 37 ಲಕ್ಷ ರುಪಾಯಿ ಹಣ ಪತ್ತೆ ಮಾಡಿದ್ದಾರೆ.
ಕಾರಿನಲ್ಲಿದ್ದ ಮೂವರನ್ನು ತನಿಖೆಗೆ ಒಳಪಡಿಸಿದಾಗ ಈ ಹಣವನ್ನು ಶಿವಮೊಗ್ಗದ ಅಡಕೆ ಮಂಡಿಯೊಂದಕ್ಕೆ ಕಟ್ಟಲು ತಂದಿರುವುದಾಗಿ ತಿಳಿಸಿದ್ದಾರೆ. ಆದರೆ ಈ ಸಂಬಂಧ ಯಾವುದೇ ದಾಖಲೆಗಳನ್ನು ಅವರು ಪೊಲೀಸರೆದುರು ಹಾಜರುಪಡಿಸಲಿಲ್ಲ ಎಂದು ಮೂಲಗಳು ತಿಳಿಸಿವೆ.
ಈ ಹಣವನ್ನು ಚುನಾವಣೆ ಬಳಕೆ ಮಾಡುವ ಉದ್ದೇಶದಿಂದ ತರಲಾಗಿದೆಯೊ ಅಥವಾ ಅಡಕೆ ಮಂಡಿಗೆ ಕಟ್ಟಲು ತರಲಾಗಿತ್ತೇ ಎಂಬುದು ತನಿಖೆ ನಂತರ ತಿಳಿಯುತ್ತದೆ ಎಂದು ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಗ್ರಾಮಾಂತರ ಠಾಣೆ ಪಿಎಸ್ಐ ಸಿದ್ದೇಗೌಡ ಹಾಗೂ ಸಿಬ್ಬಂದಿಗಳು ಇದ್ದರು.
ತನಿಖೆ ಆರಂಭ
ಶಿವಮೊಗ್ಗ: ನಕಲಿ ಅಂಕಪಟ್ಟಿ ಸೃಷ್ಟಿಸಿ ಭಡ್ತಿ ಪಡೆದಿದ್ದ ಕರ್ನಾಟಕ ಗೃಹಮಂಡಳಿಯ ಎಂಜಿನಿಯರ್ ಹಾಲೇಶಪ್ಪ ಪ್ರಕರಣವನ್ನು ರಾಜ್ಯ ಸರ್ಕಾರ ಸಿಓಡಿ ತನಿಖೆಗೆ ಒಪ್ಪಿಸಿದ್ದು, ಬುಧವಾರ ಸಿಓಡಿ ಅಧಿಕಾರಿಗಳು ತನಿಖೆಗೆಂದು ಕುವೆಂಪು ವಿಶ್ವವಿದ್ಯಾನಿಲಯಕ್ಕೆ ಆಗಮಿಸಿದ್ದಾರೆ.
ಬಿಇ ಪದವಿ ಓದದಿದ್ದರೂ ಸಹ ನಕಲಿ ಅಂಕಪಟ್ಟಿಗಳನ್ನು ಇಲಾಖೆಗೆ ಸಲ್ಲಿಸಿ ಹಾಲೇಶಪ್ಪ ಭಡ್ತಿ ಪಡೆದ ಬಗ್ಗೆ ಕುವೆಂಪು ವಿಶ್ವವಿದ್ಯಾನಿಲಯವು ಭದ್ರಾವತಿ ಗ್ರಾಮಾಂತರ ಪೊಲೀಸರಿಗೆ ದೂರು ಸಲ್ಲಿಸಿತ್ತು. ಈ ಪ್ರಕರಣದ ಸಿಓಡಿ ತನಿಖೆ ನಡೆಸುವಂತೆ ಶಿಫಾರಸು ಮಾಡಲು ವಿವಿ ಸಿಂಡಿಕೆಟ್ ಸಭೆಯಲ್ಲಿ ಸದಸ್ಯರಾದ ಧರ್ಮಪ್ರಸಾದ್, ಜಯಪ್ರಕಾಶ್ ಕೊಂಡಜ್ಜಿ ಹಾಗೂ ಎಸ್.ಪಿ. ದಿನೇಶ್ ಅವರು ಒತ್ತಾಯಿಸಿದ್ದ ಮೇರೆಗೆ ಅದೇ ರೀತಿ ತೀರ್ಮಾನವನ್ನು ಕೈಗೊಳ್ಳಲಾಯಿತು.
ನಂತರದ ಬೆಳವಣಿಗೆಯಲ್ಲಿ ಕುವೆಂಪು ವಿವಿಯಲ್ಲಿ ನಕಲಿ ಅಂಕಪಟ್ಟಿ ಹಾಗೂ ಉತ್ತರ ಪತ್ರಿಕೆಗಳ ಭಾರಿ ಹಗರಣ ಹೊರಬಂದಿದ್ದು ಇತಿಹಾಸ. ಈಗ ಹಾಲೇಶಪ್ಪ ಪ್ರಕರಣ ಮಾತ್ರ ಸಿಓಡಿ ತನಿಖೆಗೆ ಒಳಪಟ್ಟಿದೆ.
ಕುವೆಂಪು ವಿವಿಗೆ ಆಗಮಿಸಿರುವ ಸಿಓಡಿ ಅಧಿಕಾರಿಗಳು ವಿಶ್ವವಿದ್ಯಾನಿಲಯದ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಮಾಹಿತಿ ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬೈಕ್ ಡಿಕ್ಕಿ: ಒಂದು ಸಾವು
ಶಿವಮೊಗ್ಗ: ತ್ಯಾವರೆಕೊಪ್ಪ ಬಳಿ ಸಂಭವಿಸಿದ ಬೈಕ್ಗಳ ಮುಖಾಮುಖಿ ಡಿಕ್ಕಿಯಲ್ಲಿ ಒಬ್ಬರು ಮೃತಪಟ್ಟ ಘಟನೆ ಬುಧವಾರ ನಡೆದಿದೆ.
ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಉಪಕುಲಸಚಿವ ಗೋಪಾಲಕೃಷ್ಣ (51) ಮೃತ ವ್ಯಕ್ತಿ. ಇವರು ಚೋರಡಿಯಿಂದ ಶಿವಮೊಗ್ಗಕ್ಕೆ ಬರುವಾಗ ಎದುರಿನಿಂದ ಬಂದ ಬೈಕ್ ಡಿಕ್ಕಿ ಹೊಡೆದಿದೆ. ತೀವ್ರವಾಗಿ ಗಾಯಗೊಂಡ ಅವರು ಮೃತಪಟ್ಟಿದ್ದಾರೆ.
ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

