ಉತ್ಪ್ರೇಕ್ಷೆ ನಿವಾರಣೆ ಸಂಶೋಧನೆ ಉದ್ದೇಶ
ತೀರ್ಥಹಳ್ಳಿ: ಸಾಹಿತ್ಯದೊಳಗಿನ ಉತ್ಪ್ರೇಕ್ಷೆಯನ್ನು ತೊಡೆದು ಹಾಕುವುದು ಸಂಶೋಧನೆಯ ಮುಖ್ಯ ಉದ್ದೇಶವಾಗಬೇಕೆಂದು ಹಿರಿಯ ಸಾಹಿತಿ ಹಾಗೂ ಸಂಶೋಧಕ ಡಾ.ಎನ್.ಎಸ್. ತಾರಾನಾಥ್ ಅಭಿಪ್ರಾಯಪಟ್ಟರು.
ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿಯ ಹೇಮಾಂಗಣ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸಂಶೋಧನಾ ವಿದ್ಯಾರ್ಥಿಗಳಿಗೆ ಎರಡು ದಿನಗಳು ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಸಂಶೋಧನಾ ಕಮ್ಮಟವನ್ನು ಉದ್ಘಾಟಿಸಿ, ನಂತರ -ಸಾಹಿತ್ಯ ಚರಿತ್ರೆ, ಸಂಶೋಧನೆ ಪರಸ್ಪರ ಪೂರಕತೆ- ಕುರಿತು ಮಾತನಾಡಿದರು.
ಬಹುಪಾಲು ಸಾಹಿತ್ಯ ರಚನೆಗಳು ಚರಿತ್ರೆಯ ಹಿನ್ನೆಲೆಯಲ್ಲಿಯೇ ರಚನೆಯಾಗಿರುತ್ತವೆ. ಪಂಪ, ರನ್ನ, ಪೊನ್ನ, ಕಾಳಿದಾಸ ಸೇರಿದಂತೆ ಅನೇಕ ಸಾಹಿತಿಗಳು ತಮಗೆ ಆಶ್ರಯ ನೀಡಿದ್ದ ರಾಜ ಮಹಾರಾಜರನ್ನು ತಮ್ಮ ಸಾಹಿತ್ಯ ಮುಖ್ಯಪಾತ್ರಗಳಲ್ಲಿ ಸಮೀಕರಿಸಿಕೊಂಡಿರುವುದು ಕಾಣುತ್ತದೆ. ಇದರಿಂದಾಗಿ ಸಾಹಿತ್ಯದಲ್ಲಿ ಚರಿತ್ರೆಯ ಮಹತ್ವವನ್ನು ತಿಳಿಯಬಹುದಾಗಿದೆ ಎಂದು ತಿಳಿಸಿದರು.
ಚರಿತ್ರೆ ಹಿನ್ನೆಲೆ: ಕನ್ನಡದ ಮೊದಲ ಕೃತಿಯಾದ ಕವಿರಾಜಮಾರ್ಗ ಕೂಡ ಚರಿತ್ರೆಯ ಹಿನ್ನೆಲೆ ಹೊಂದಿರುವುದನ್ನು ಕಾಣಬಹುದಾಗಿದೆ. ಕೆಲವು ಕವಿಗಳು ಚರಿತ್ರೆಯನ್ನೇ ಮುಖ್ಯವಾಗಿಸಿಕೊಂಡು ಸಾಹಿತ್ಯ ರಚಿಸಿರುವುದನ್ನು ನೋಡಿದರೆ, ಸಾಹಿತ್ಯದಲ್ಲಿ ಚರಿತ್ರೆಯ ಉದ್ದೇಶ ಎಷ್ಟು ಮುಖ್ಯವಾಗಿತ್ತು ಎಂಬುದನ್ನು ನೋಡಬಹುದಾಗಿದೆ. ಚರಿತ್ರೆಯ ಹಿನ್ನಲೆಯಲ್ಲಿ ಸಾಹಿತ್ಯ ಹುಟ್ಟುವುದು ಮತ್ತು ರೂಪುಗೊಳ್ಳುವುದು ಸಾಮಾನ್ಯ ಎಂದರು.
ಸಂಶೋಧನೆಯ ಅವಕಾಶಗಳು ಭಾಷೆ ಮತ್ತು ಸಾಹಿತ್ಯ- ಕುರಿತು ಹಿರಿಯ ಸಂಶೋಧಕ ಡಾ.ಎಂ.ಜಿ. ನಾಗರಾಜ್, ಅನ್ಯ ವ್ಯಕ್ತಿಗಳೊಡನೆ ಸ್ಪಂದಿಸಲು ಭಾಷೆ ರೂಪುಗೊಂಡು, ನಂತರ ಲಿಪಿಯ ಮೂಲಕ ಸಾಹಿತ್ಯದ ಅನ್ವೇಷಣೆಯಾಗಿದೆ. ಭಾಷೆ ಸಾಹಿತ್ಯದ ಬಹುಮುಖ್ಯ ಅಂಗವಾಗಿದೆ. ಸಾಹಿತ್ಯದ ಮುಖ್ಯ ನೆಲೆಯೇ ಭಾಷೆಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ. ಮಂಜುನಾಥ್, ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನ ದೊರೆತ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ರಾಜ್ಯದ ವಿಶ್ವ ವಿದ್ಯಾಲಯಗಳಿಗೆ ತಲಾ ಒಂದು ಕೋಟಿ ರುಪಾಯಿ ಸರ್ಕಾರ ನೀಡಿತ್ತು. ಇದರಿಂದ ಪ್ರತಿಯೊಂದು ಜಿಲ್ಲಾ ಕೇಂದ್ರದಲ್ಲಿ ಈಗಾಗಲೇ ಎರಡು ದಿನಗಳ ಸಂಶೋಧನಾ ಕಮ್ಮಟ ಹಮ್ಮಿಕೊಳ್ಳಲಾಗಿದೆ. ಅಲ್ಲಿ ಭಾಗವಹಿಸಿದ್ದ ಇಬ್ಬರು ಸಂಶೋಧನಾ ವಿದ್ಯಾರ್ಥಿಗಳನ್ನು ಪ್ರತಿ ಜಿಲ್ಲೆಯಿಂದ ಆಯ್ಕೆ ಮಾಡಿ ಇದೀಗ ರಾಜ್ಯ ಮಟ್ಟದ ಸಂಶೋಧನಾ ಕಮ್ಮಟ ಆಯೋಜಿಸಲಾಗಿದೆ ಎಂದರು.
ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸಮ ಕಾರ್ಯದರ್ಶಿ ಕಡಿದಾಳು ಪ್ರಕಾಶ್ ಮಾತನಾಡಿದರು. ಕೇಂದ್ರ ಕಸಾಪ ಸಂಶೋಧನಾ ವಿಭಾಗದ ಮುಖ್ಯಸ್ಥ ಪ್ರೊ. ಚಂದ್ರಪ್ಪ ಸ್ವಾಗತಿಸಿ, ಮಡಿಕೇರಿ ಕಸಾಪ ಜಿಲ್ಲಾಧ್ಯಕ್ಷ ಟಿ.ಪಿ. ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ತೀರ್ಥಹಳ್ಳಿ ಕಸಾಪ ಅಧ್ಯಕ್ಷ ನೆಂಪೆ ದೇವರಾಜು ಸ್ವಾಗತಿಸಿದರು. ಕಾರ್ಯದರ್ಶಿ ಮಹಮದ್ ಆಲಿ ವಂದಿಸಿದರು. ರಾಜ್ಯದ ಮೂವತ್ತು ಜಿಲ್ಲೆಗಳಿಂದ 75ಕ್ಕೂ ಹೆಚ್ಚು ಸಂಶೋಧನಾ ಶಿಬಿರಾರ್ಥಿಗಳು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

