ಕರಕುಶಲಕರ್ಮಿಗಳಿಗೆ ಪದವಿ ನೀಡಲು ನಿರ್ಧಾರ
ಸಾಗರ: ಗುರುಕುಲದಲ್ಲಿ ತರಬೇತಿ ಪಡೆಯುವ ಯುವ ಕರಕುಶಲಕರ್ಮಿಗಳಿಗೆ ಬ್ಯಾಚುಲರ್ ಆಫ್ ಫೈನ್ ಆರ್ಟ್ಸ್ ಪದವಿ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪೂರ್ಣಿಮಾ ಪ್ರಕಾಶ್ ಹೇಳಿದರು.
ಭಾನುವಾರ ಪಟ್ಟಣದ ಶ್ರೀಗಂಧ ಸಂಕೀರ್ಣಕ್ಕೆ ಭೇಟಿ ನೀಡಿ, ಗುರುಕುಲದ ಕಾರ್ಯ ನಿರ್ವಹಣೆ ಕುರಿತು ಪರಿಶೀಲನೆ ನಡೆಸಿ, ಮುಂದಿನ ಶೈಕ್ಷಣಿಕ ವರ್ಷದಿಂದ ಚಿತ್ರಕಲಾ ಪರಿಷತ್ತಿನಂತೆ ಗುರುಕುಲದಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಅಂತಾರಾಷ್ಟ್ರೀಯಮಟ್ಟದ ಕೌಶಲ್ಯತೆ ಬೆಳೆಸಿಕೊಳ್ಳುವ ಹಾಗೂ ಸ್ಪರ್ಧೆಯನ್ನು ಎದುರಿಸುವ ರೀತಿಯಲ್ಲಿ ಮೂರು ವರ್ಷಗಳ ತರಬೇತಿ ನೀಡಲು ಉದ್ದೇಶಿಸಲಾಗಿದೆ ಎಂದರು.
ನೂತನ ಕಟ್ಟಡ ನಿರ್ಮಾಣ: ರಾಜ್ಯ ಸರ್ಕಾರವು ಕರಕುಶಲ ಅಭಿವೃದ್ಧಿ ನಿಗಮದ ಮೂಲಕ ಪಾರಂಪರಿಕ ಕಲೆಗಳನ್ನು ಉಳಿಸಿ ಪೋಷಣೆ ಮಾಡುವ ಸದುದ್ದೇಶ ಇರಿಸಿಕೊಂಡು ಇಲ್ಲಿ ಸ್ಥಾಪಿಸಿರುವ ಗುರುಕುಲದ ಕಾರ್ಯವೈಖರಿ ಗಮನಾರ್ಹವಾಗಿದೆ. ಗುರುಕುಲದಲ್ಲಿ ಬೋಧನಾ ವಿಭಾಗ, ವಸತಿ ವಿಭಾಗ ಇನ್ನಿತರ ಮೂಲಸೌಕರ್ಯಗಳನ್ನು ಒದಗಿಸುವುದಕ್ಕಾಗಿ ರು. 97.70 ಲಕ್ಷ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣವಾಗುತ್ತಿದೆ ಎಂದು ತಿಳಿಸಿದರು.
ಶ್ರೀಗಂಧದ ಕೊರತೆಯ ಹಿನ್ನೆಲೆಯಲ್ಲಿ ಶಿಕಾರಿಪುರ ತಾಲೂಕಿನ ಚಂದ್ರಕಲಾ ರಕ್ಷಿತಾರಣ್ಯದ 7 ಎಕರೆ ಪ್ರದೇಶದಲ್ಲಿ ಶ್ರೀಗಂಧ ಬೆಳೆಸುವ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ಇದರ ಜೊತೆಗೆ ಕೇರಳ, ತಮಿಳುನಾಡುಗಳಿಂದ ಶ್ರೀಗಂಧವನ್ನು ಖರೀದಿಸಿ, ರಾಜ್ಯದ ಗುಡಿಗಾರರಿಗೆ ಸಬ್ಸಿಡಿದರದಲ್ಲಿ ವಿತರಿಸುವ ಪ್ರಯತ್ನ ನಡೆಸಲಾಗುವುದು ಎಂದು ಹೇಳಿದರು.
ಕುಶಲಕರ್ಮಿಗಳಿಗೆ ಮಾಸಾಶನ: ಸ್ಥಳೀಯ ಕುಶಲಕರ್ಮಿಗಳು ತಯಾರಿಸಿದ ಕಲಾಕೃತಿಗಳಿಗೆ ಮಾರುಕಟ್ಟೆ ಕಲ್ಪಿಸುವ ಹಾಗೂ ಪ್ರದರ್ಶನ ಏರ್ಪಡಿಸುವ ಕುರಿತು ಚಿಂತನೆ ನಡೆಸಲಾಗಿದೆ. ಈ ಸಂಬಂಧ ಪಟ್ಟಣದ ಕೇಂದ್ರಭಾಗದಲ್ಲಿ ನಿಗಮದ ವತಿಯಿಂದ ಮಳಿಗೆಯನ್ನು ಆರಂಭಿಸಲು ಯೋಚಿಸಲಾಗಿದೆ. ಸಾಗರದಲ್ಲಿ ಶಿಥಿಲವಾಸ್ಥೆಯಲ್ಲಿಯರುವ ಕೈಗಾರಿಕಾ ತರಬೇತಿ ಕೇಂದ್ರವನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದರಲ್ಲದೆ, ರಾಜ್ಯದಲ್ಲಿರುವ 60 ವರ್ಷ ಮೇಲ್ಪಟ್ಟ ಕರಕುಶಲಕರ್ಮಿಗಳಿಗೆ ಮಾಸಾಶನ ಹಾಗೂ ಆರೋಗ್ಯವಿಮೆ ಕಲ್ಪಿಸಲು ಶೀಘ್ರದಲ್ಲಿಯೇ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ನಿಗಮದ ವ್ಯವಸ್ಥಾಪಕ ನಿರ್ದೇಶಕ ಚಂದ್ರಶೇಖರ್, ಶಿವಮೂರ್ತಿ, ಹೇಮಂತ್, ಸಾಗರ ಶ್ರೀಗಂಧ ಸಂಕೀರ್ಣದ ಯೋಜನಾಧಿಕಾರಿ ಪರಶುರಾಮ, ಸಿರಸಿ ಯೋಜನಾಧಿಕಾರಿ ಜಗದೀಶ್, ತಹಸೀಲ್ದಾರ್ ಆರ್. ರಾಜಣ್ಣ, ಗಫಾರ್ ಖಾನ್ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

