ಶಿವಮೊಗ್ಗ

ಇಲ್ಲಿ ಮದ್ಯವೇ ತೀರ್ಥ, ಮಾಂಸವೇ ನೈವೇದ್ಯ

Published On :

ಹರಪನಹಳ್ಳಿ: ತಾಲೂಕಿನ ಹುಲ್ಲಿಕಟ್ಟಿ ಹತ್ತಿರದ ಅಡವಿಯಲ್ಲಿ  ಪ್ರತಿ 2 ವರ್ಷಕ್ಕೊಮ್ಮೆ ನಡೆಯುವ ಗುಳೇದ ಲೆಕ್ಕಮ್ಮ ಜಾತ್ರೆ  ಮಂಗಳವಾರ ರಾತ್ರಿಯಿಂದ ಪ್ರಾರಂಭವಾಗಿದ್ದು, ಜಾತ್ರೆಯಲ್ಲಿ ಮದ್ಯವೇ ತೀರ್ಥ, ಮಾಂಸವೇ ನೈವೇದ್ಯ ಎಂಬಂತಾಗಿತ್ತು.
ಬುಧವಾರ ಜಾತ್ರೆಯಲೊಮ್ಮೆ ಸುತ್ತಾಡಿದಾಗ ಪ್ರತಿ ಬಾರಿಗಿಂತ ಈ ಬಾರಿ ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ಬಂಡಿ, ಟ್ರ್ಯಾಕ್ಟರ್ ಮೂಲಕ ಕಳೆದ 2 ದಿನಗಳಿಂದ ಈ ಜಾತ್ರೆಗೆ ದಾವಣಗೆರೆ ಜಿಲ್ಲೆ ಹಾಗೂ ರಾಜ್ಯದ ಇತರ ಕಡೆಗಳಿಂದಲೂ ಭಕ್ತರು ಆಗಮಿಸಿ ಬೀಡಾರ ಹೂಡಿದ್ದಾರೆ. ಅದರಲ್ಲೂ ಲಂಬಾಣಿ ಸಮುದಯದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಾರೆ.
ಗುಳೇದ ಲೆಕ್ಕಮ್ಮ ದೇವಿಗೆ ದೇವಸ್ಥಾನವೇ ಇಲ್ಲ. ಒಂದು ಮರದ ಮದ್ಯೆ, ಮೂರ್ತಿ ಇದ್ದು,  ಸುತ್ತಲು  ಕೇವಲ  ಕಬ್ಬಿಣದ  ಜಾಲರಿ ಮಾತ್ರ ನಿರ್ಮಿಸಲಾಗಿದೆ. ಇಲ್ಲಿ ದೇವಿಗೆ ಯತೇಚ್ಛವಾಗಿ ಕೋಳಿ ಹಾಗೂ ಕುರಿಗಳನ್ನು ಬಲಿ ಕೊಡಲಾಗುತ್ತದೆ.
ಹೃದಯ ಹಾಗೂ ಲಿವರ್ ಎಡೆ: ಈ ಜಾತ್ರೆಯಲ್ಲಿ ಇನ್ನೊಂದು ವಿಶೇಷತೆ ಎಂದರೆ ಪ್ರತಿಯೊಬ್ಬ ಭಕ್ತರು ಕುರಿಯ ಹೃದಯ ಹಾಗೂ ಲಿವರ್‌ಗಳನ್ನು ಹೊರ ತೆಗೆದು ಕಡ್ಡಿಯಲ್ಲಿ ಚುಚ್ಚಿ  ಬೇಯಿಸಿ ದೇವಿಗೆ ಎಡೆ ಹಿಡಿಯುತ್ತಾರೆ.  ಕೋಳಿಗಳ ಕಾಲುಗಳನ್ನು ಕತ್ತರಿಸಿ ದೇವಿಯ ಮೂರ್ತಿ ಪಕ್ಕಕ್ಕೆ ಇರುವ ಮರಕ್ಕೆ ಸಾಲಾಗಿ ಕಟ್ಟುತ್ತಾರೆ. ಇದರಿಂದ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಅವರದು. ಗೋದಿಯ ಸಸಿಗಳನ್ನು ಸಣ್ಣ ಮರದ ಪುಟ್ಟಿಯಲ್ಲಿ ಬೆಳೆಸಿ ದೇವಿಗೆ ಅರ್ಪಿಸುತ್ತಾರೆ.
ಅಂದಾಜು ಎರಡು ಎಕರೆ ಪ್ರದೇಶದಲ್ಲಿ  ಭಕ್ತರು ಟೆಂಟನ್ನು ಹಾಕಿ ಬಿಡಾರ ಹೂಡಿರುತ್ತಾರೆ, ನೂರಾರು ಕುರಿ ಹಾಗೂ ಕೋಳಿಗಳು ಇಲ್ಲಿ ಆಹುತಿಯಾಗುತ್ತಿವೆ. ಇದರ ಜೊತೆಗೆ ಮದ್ಯವೂ ಯತೇಚ್ಛವಾಗಿ ಬಳಕೆಯಾಗುತ್ತದೆ. ಕೆಲವರು ಬೇವಿನ ಉಡುಗೆ ಉಟ್ಟರೆ, ಇನ್ನೂ ಕೆಲವರು ದೀಡು ನಮಸ್ಕಾರ ಹಾಕಿ  ಭಕ್ತಿ ಸಮರ್ಪಿಸುತ್ತಾರೆ.  
ಜಾತ್ರೆಯಲ್ಲಿ ತಾತ್ಕಾಲಿಕ ಪೊಲೀಸ್ ಠಾಣೆ ಇದೆ. ಅಲ್ಲಲ್ಲಿ ಪ್ರಾಣಿ ಬಲಿ ನಿಷೇಧಿಸಲಾಗಿದೆ ಎಂದು ನಾಮಫಲಕ, ಫ್ಲೆಕ್ಸ್‌ಗಳನ್ನು ಹಾಕಿದ್ದರೂ, ಎಗ್ಗಿಲ್ಲದೆ ಪ್ರಾಣಿ ಬಲಿ ನಡೆಯುತ್ತದೆ. ಇಲ್ಲಿ 3 ಕೊಳವೆ ಬಾವಿ, ಎರಡು ಖಾಸಗಿ ಪಂಪಸೆಟ್ ಗಳಿಂದ ನೀರನ್ನು ತೆಗೆದುಕೊಂಡರೂ ಕುಡಿಯುವ ನೀರಿನ ಸಮಸ್ಯೆಯನ್ನು ಭಕ್ತರು ಎದುರಿಸಿದರು. ರಸ್ತೆ ಸರಿಯಿಲ್ಲದ ಕಾರಣ ದೂಳು ಸಹ ವಿಪರೀತ
ಪ್ರತಿ ಜಾತ್ರೆಗೂ ಭಕ್ತರ ಸಂಖ್ಯೆ ಹೆಚ್ಚಾಗುತ್ತಲಿದ್ದು, ರಸ್ತೆ ಅಭಿವೃದ್ಧಿ ಹಾಗೂ ಸಮರ್ಪಕ ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯ ಒದಗಿಸಬೇಕು ಎಂಬುದು ಗ್ರಾಪಂ ಮಾಜಿ ಅಧ್ಯಕ್ಷ ಹುಲ್ಲಿಕಟ್ಟಿ ಚಂದ್ರಪ್ಪ ಅವರು ತಾಲೂಕು ಆಡಳಿತವನ್ನು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.