ಪತ್ತೆಯಾದ ತುಣುಕುಗಳು ಮೂಲ ವಿಗ್ರಹದ್ದು
ಸೊರಬ: ತಾಲೂಕಿನ ಚಂದ್ರಗುತ್ತಿಯಲ್ಲಿ ಈಚೆಗೆ ಕಳವಾಗಿದ್ದ ದುರ್ಗೆ ವಿಗ್ರಹದ ಭಗ್ನವಶೇಷಗಳು ದೊರೆತಿರುವ ಹಿನ್ನಲೆಯಲ್ಲಿ ಮೂಲಮೂರ್ತಿಗೂ, ದೊರೆತಿರುವ ಅವಶೇಷಗಳಿಗೂ ಹೋಲಿಕೆಯಾಗುತ್ತಿಲ್ಲ ಎಂಬ ಅನುಮಾನ ಗ್ರಾಮಸ್ಥರಿಂದ ವ್ಯಕ್ತವಾಗಿತ್ತು, ಈ ಕುರಿತು ಪ್ರಾಚ್ಯವಸ್ತು ಮತ್ತು ಪುರಾತತ್ವ ಇಲಾಖೆ ಅಧಿಕಾರಿಗಳಿಗೆ ತಿಳಿಸಲಾಗಿತ್ತು, ಅದರಂತೆ ಬುಧವಾರ ಪಟ್ಟಣಕ್ಕೆ ಆಗಮಿಸಿದ್ದ ಪುರಾತತ್ವ ಇಲಾಖೆ ತಜ್ಞ ಪಿ. ಅರವಾಳಿ ಪೊಲೀಸ್ ವಶದಲ್ಲಿದ್ದ ಮೂರ್ತಿಯ ತುಣುಕುಗಳನ್ನು ಪರಿಶೀಲಿಸಿ ಇದು ಮೂಲ ಮೂರ್ತಿ ಹೌದು ಎಂದು ಸಾಬೀತು ಪಡಿಸಿದರು.
ಮೂರ್ತಿಯನ್ನು ತುಂಡರಿಸಿದ ಕೃತ್ಯ ಯಾವುದೇ ಧರ್ಮ, ಜನಾಂಗೀಯ ದ್ವೇಷದ ಹಿನ್ನೆಲೆಯಿಂದಲ್ಲ, ಬಹುತೇಕ ಕಳ್ಳ ಸಾಗಣಿಕೆಗಾಗಿ ಈ ಕೃತ್ಯವೆಸಗಿದ್ದು, ಮೂಲ ಮೂರ್ತಿಯ ದೇಹ ಭಾಗವನ್ನು ಇನ್ನೊಂದು ಕೃತಕ ಪ್ರಭಾವಳಿಗೆ ...ಜೋಡಿಸಿ... ಸಾಗಿಸುವ ಉದ್ದೇಶದಿಂದ ಮೂರ್ತಿಯ ದೇಹ ಭಾಗವನ್ನು ಮಾತ್ರ ಒಯ್ದಂತೆ ಕಾಣುತ್ತದೆ. ಯಾವುದಕ್ಕೂ ಇಲ್ಲಿಯವರೆಗೆ ಸಿಗದೆ ಇರುವ ದೇಹ ಭಾಗದ ಪತ್ತೆಗಾಗಿ ಸಿಬಿಐ ಗಮನಕ್ಕೆ ತರುವುದು ಸೂಕ್ತ ಎಂದರು.
ವಿಶ್ವಾಸವಿದೆ: ಮೂರ್ತಿ ಯಾವುದೇ ಸ್ಥಿತಿಯಲ್ಲಿರಲಿ, ಈ ತುಣುಕುಗಳನ್ನು ರಕ್ಷಿಸಿ, ವಿಗ್ರಹದ ದೇಹ ಭಾಗ ಪತ್ತೆ ಹಚ್ಚಬೇಕು, ಪತ್ತೆ ಹಚ್ಚಿ ಮೆಂಡಿಂಗ್ ಮಾಡುವ ಮೂಲಕ ಜತನ ಮಾಡಬೇಕು.
ಈಗಾಗಲೆ ಇಲಾಖೆ ಮೂರ್ತಿಯ ಶೋಧನೆ ಬಗ್ಗೆ ಶ್ರಮಿಸಿದ್ದು, ಅಳಿದುಳಿದ ಭಾಗದ ಶೋಧ ಕಾರ್ಯವನ್ನು ಕೂಡ ನಡೆಸುತ್ತದೆ ಎಂಬ ನಂಬುಗೆ ಇದೆ. ಒಟ್ಟಾರೆ ನಮ್ಮ ಮೂಲ ವಿಗ್ರಹ ರಕ್ಷಣೆ ಆಗಬೇಕು, ಪುನಃ ಆ ಮೂರ್ತಿಯ ಸ್ಥಿತಿ ಗತಿಯ ಬಗ್ಗೆ ನಾವು ಅವಲೋಕನ ನಡೆಸುತ್ತೇವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ತಜ್ಞರು ಪರಿಶೀಲನೆ ನಡೆಸುವ ವೇಳೆ ಇಲಾಖೆಯ ಸುಧೀಂದ್ರರಾವ್, ಗ್ರಾಮದ ಹಿರಿಯರಾದ ಎಂ.ಜಿ. ಸ್ವಾಧಿ, ಪ್ರಸನ್ನ ಶೇಠ್, ವೆಂಕಟೇಶ್, ಗಣೇಶ್, ಸತ್ಯನಾರಾಯಣ, ಭುವನೇಶ್, ಮುಜರಾಯಿ ಇಲಾಖೆಯ ರತ್ನಾಕರ್, ಪ್ರಾಚ್ಯ ವಸ್ತು ನೌಕರ ಮಂಜುನಾಥ್ ಮೊದಲಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

