ಜಿಲ್ಲೆಯ ಅರಣ್ಯ ಪರಿಸ್ಥಿತಿ ಗಂಭೀರ: ವರದಿ
ಕ.ಪ್ರ.ವಾರ್ತೆ, ಶಿವಮೊಗ್ಗ, ಜು.1
ಜಿಲ್ಲೆಯ ಅರಣ್ಯ ಸ್ಥಿತಿ ತೀರಾ ಗಂಭೀರವಾಗಿದೆ. ವರ್ಷದಿಂದ ವರ್ಷಕ್ಕೆ ಅರಣ್ಯ ಪ್ರದೇಶ ಕಡಿಮೆಯಾಗುತ್ತಿದ್ದು, ಮಾನವ ಹಸ್ತಕ್ಷೇಪ ಅತಿಯಾಗುತ್ತಿದೆ.
ಹೀಗೆಂದು ಎಚ್ಚರಿಕೆ ಗಂಟೆ ರೂಪದ ವರದಿ ಜಿಲ್ಲಾಡಳಿತಕ್ಕೆ ಸಲ್ಲಿಕೆಯಾಗಿದ್ದು, ಈ ಅಪರೂಪದ ವರದಿಯನ್ನು ಬೆಂಗಳೂರಿನ ಐಐಎಸ್ಸಿ ವಿಜ್ಞಾನಿಗಳ ತಂಡ ಅಧ್ಯಯನ ನಡೆಸಿ ಸಿದ್ಧಪಡಿಸಿದೆ.
ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ಅಧ್ಯಯನ ಕೇಂದ್ರದ ವಿಜ್ಞಾನಿಗಳ ತಂಡ ಶಿವಮೊಗ್ಗ ಜಿಲ್ಲೆಯ ಅರಣ್ಯ ಪರಿಸ್ಥಿತಿಯ ಅಧ್ಯಯನ ವಿಶ್ಲೇಷಣೆ ನಡೆಸಿದೆ. ಅರಣ್ಯ ಇಲಾಖೆ ಪಶ್ಚಿಮಘಟ್ಟ ಕಾರ್ಯಪಡೆ 2012ರ ಆರಂಭದಲ್ಲಿ ಅಧ್ಯಯನ ನಡೆಸುವ ಜವಾಬ್ದಾರಿ ನೀಡಿ ಪ್ರಾಯೋಜನೆ ಮಾಡಿತ್ತು.
ಡಾ.ಟಿ.ವಿ. ರಾಮಚಂದ್ರ, ಡಾ. ಸುಭಾಸ್ ಚಂದ್ರನ್ ನೇತೃತ್ವದ ವಿಜ್ಞಾನಿಗಳ ತಂಡ ನಿರಂತರ ಅಭ್ಯಾಸ, ಅರಣ್ಯ ಸಮೀಕ್ಷೆ ಮಾಹಿತಿ ಸಂಗ್ರಹ ನಡೆಸಿತು. ಅರಣ್ಯ ಇಲಾಖೆ ಅಧಿಕಾರಿಗಳು, ಗ್ರಾಮ ಅರಣ್ಯ ಸಮಿತಿಗಳು, ವೃಕ್ಷಲಕ್ಷ ಆಂದೋಲನದ ಕಾರ್ಯಕರ್ತರು ಸ್ಥಾನಿಕವಾಗಿ ಅಧ್ಯಯನಕ್ಕೆ ಸಹಕಾರ ನೀಡಿದ್ದರು.
ಸಮಗ್ರ ವರದಿ: 463 ಪುಟಗಳ ಸಮಗ್ರ ವರದಿಯಲ್ಲಿ ಮುಖ್ಯ ಅಂಶಗಳ ವರದಿ, ಪ್ರಸ್ತಾವನೆ, ನದಿಗಳು, ಜನಸಂಖ್ಯೆ, ಹವಾಮಾನ, ಭೂ ಪರಿಸ್ಥಿತಿ, ಅದಿರು, ಸಂಸ್ಯ ಸಂಪತ್ತು, ಭೂಮಿ ವಿಂಗಡಣೆ, ಭೂಮಿ, ಛಿದ್ರಗೊಳ್ಳುವಿಕೆ, ಅರಣ್ಯ ಅತಿಕ್ರಮಣ, ಅರಣ್ಯ ನಿರ್ವಹಣೆ, ಈಗಿನ ಸ್ಥಿತಿ ಈ ಹಿಂದಿನ ಅರಣ್ಯ ನಿರ್ವಹಣೆ ಪದ್ಧತಿ, ವನ್ಯಜೀವಿ ಪರಿಸ್ಥಿತಿ ಸೇರಿದಂತೆ ಅನೇಕ ಅಂಶಗಳನ್ನು ಈ ವರದಿ ಒಳಗೊಂಡಿದೆ.
ಅಧ್ಯಯನ ವರದಿ ಹಲವು ಅಂಕಿಸಂಖ್ಯೆ, ನಕಾಶೆ, ಆಧಾರಗಳನ್ನು ಒಳಗೊಂಡಿದೆ. ಕೆಲವು ಕಾನುಗಳ ಕೇಸ್ ಸ್ಟಡಿಗಳು ಇಲ್ಲಿವೆ. ಶರಾವತಿ ಕಣಿವೆಯ ಇಂಧನ ಪರಿಸ್ಥಿತಿ ಬಗ್ಗೆ ಮಾಹಿತಿ ಅಡಗಿದೆ.
ಅಗತ್ಯ ಕ್ರಮ: ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷ ಅನಂತ ಹೆಗಡೆ ಆಶೀಸರ ವರದಿಯನ್ನು ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಅವರಿಗೆ ನೀಡಿ, ತಜ್ಞರ ಸಲಹೆ ಸ್ವೀಕರಿಸಿ, ಅರಣ್ಯ ಸಂರಕ್ಷಣೆಗೆ ಒತ್ತುಕೊಡುವಂತೆ ಕೋರಿದರು.
ವರದಿ ಸ್ವೀಕರಿಸಿದ ಜಿಲ್ಲಾಧಿಕಾರಿ ಮಾತನಾಡಿ, ತಜ್ಞರ ವರದಿಯನ್ನು ಜಿಲ್ಲಾಡಳಿತದ ವೆಬ್ಸೈಟ್ನಲ್ಲಿ ಪ್ರಕಟಿಸುವ ಮೂಲಕ ಜನರಿಗೂ ಜಿಲ್ಲೆಯ ಅರಣ್ಯ ಮಾಹಿತಿಯನ್ನು ತಲುಪಿಸುವ ಜೊತೆಗೆ ಅರಣ್ಯ ಸಂರಕ್ಷಣೆಗೆ ಅಗತ್ಯವಾದ ಕ್ರಮಕೈಗೊಳ್ಳಲಾಗುವುದು ಎಂದರು.
ಐಐಎಸ್ಸಿ ವಿಜ್ಞಾನಿ ಡಾ.ಟಿ.ವಿ. ರಾಮಚಂದ್ರ ಮಾತನಾಡಿ, ಪಶ್ಚಿಮಘಟ್ಟದ ಅರಣ್ಯ ಸಂರಕ್ಷಣೆಗೆ ಇನ್ನಾದರೂ ಮುಂದಾಗಬೇಕು.
ಇಲ್ಲವಾದರೆ ಮುಂದೊಂದು ದಿನ ಉತ್ತರಾಖಂಡದಲ್ಲಾದ ಘಟನೆಗಳು ಇಲ್ಲೂ ನಡೆಯುತ್ತದೆ ಎಂದು ಎಚ್ಚರಿಕೆ ನೀಡಿದರು.
ಅರಣ್ಯ ಅಭಿವೃದ್ಧಿಗೆ ಏನೇನು ಮಾಡಬೇಕು?
1 ಪಶ್ಚಿಮಘಟ್ಟದ ಅಳಿವಿನ ಅಂಚಿನ ಪ್ರಭೇದಗಳನ್ನು ಉಳಿಸಲು ಗಂಭೀರ ಕಾರ್ಯಕ್ರಮ ಹಾಕಿಕೊಳ್ಳುವ ಜೊತೆ ಆದ್ಯತೆ ಕೊಡಬೇಕು. ಇನ್ನಷ್ಟು ಭೂಮಿ ಛಿದ್ರವಾಗುವುದನ್ನು ತಡೆಗಟ್ಟಬೇಕು.
2 ಅಪಾರ ಜಲ ಮೂಲಗಳಿರುವ ಈ ಅರಣ್ಯಗಳ ನಿರ್ವಹಣೆಯ ನೀತಿ ಪುನರ್ ವಿಮರ್ಶೆ ಅತ್ಯಗತ್ಯ. ಏಕೆಂದರೆ, ಇಲ್ಲಿನ ನದಿ ಕಣಿವೆಗಳು, ಹೊಳೆಹಳ್ಳಗಳು, ರಾಜ್ಯಕ್ಕೆ ದಕ್ಷಿಣ ಭಾರತಕ್ಕೆ, ಬಯಲು ನಾಡಿಗೆ ನೀರುಣಿಸುತ್ತಿವೆ.
3 ನಿರಂತರವಾಗಿ ಇಡೀ ವರ್ಷ ನೀರಿನ ಹರಿವು ಇರಲು ಹಾಗೂ ಅಪಾರ ಜೀವ ವೈವಿದ್ಯ ಉಳಿಯಲು ಸರಿಯಾದ ನಿರ್ವಹಣಾ ಯೋಜನೆ ಬಂದರೆ ಮಾತ್ರ ಉಳಿದಿರುವ ನಿತ್ಯ ಹರಿದ್ವರ್ಣ, ಭಾಗಶ- ಹಸಿರು ಅರಣ್ಯ ರಕ್ಷಣೆ ಸಾದ್ಯವಿದೆ.
4 ದಾಲ್ಚಿನ್ನಿ, ಹಾಲ್ಮಡ್ಡಿ, ಜೇನು, ಉಪ್ಪಾಗೆ, ಮುರುಗಲು, ಬಿದಿರು, ಬೆತ್ತ ಮುಂತಾದ ಅರಣ್ಯ ಉಪ ಉತ್ಪನ್ನಗಳನ್ನು ಹಾನಿಕಾರಕ ರೀತಿಯಲ್ಲಿ ಸಂಗ್ರಹ ಮಾಡುವ ಗುತ್ತಿಗೆ ನೀಡುವ ಪದ್ಧತಿ ಕೈಬಿಡಬೇಕು.
5 ಶರಾವತಿ ಅಭಯಾರಣ್ಯದಲ್ಲಿ ಅಕೇಶಿಯಾದಂತಹ ಏಕ ಜಾತಿ ನೆಡುತೋಪು ಬೆಳೆಸಿರುವುದು ವನ್ಯಜೀವಿ ರಕ್ಷಣೆ ದೃಷ್ಟಿಯಿಂದ ತಪ್ಪುಕ್ರಮ.
6 ಅಕ್ರಮ ಕ್ವಾರಿಗಳು ಹಾಗೂ ಅಕ್ರಮ ಮರಳುಗಾರಿಕೆ ನಿಲ್ಲದಿದ್ದರೆ ಅರಣ್ಯ, ನದೀ ಪಾತ್ರಗಳು ಜಿಲ್ಲೆಯಲ್ಲಿ ಬಹು ಶೋಷಣೆಗೆ ಒಳಗಾಗುತ್ತವೆ, ನಾಶವಾಗುತ್ತವೆ.
7 ಶೇ.88ರಷ್ಟು ರೈತರು 4 ದನಗಳನ್ನು ಹೊಂದಿದ್ದಾರೆ. ಇವರಿಗೆ ಗೋಬರ್ ಗ್ಯಾಸ್ ನಿರ್ಮಿಸಲು ಎಲ್ಲಾ ಸೌಲಭ್ಯ ಕಲ್ಪಿಸಬೇಕು.
ಪಶ್ಚಿಮ ಘಟ್ಟ ಕಾರ್ಯಪಡೆ ವರದಿಯ ಮುಖ್ಯಾಂಶಗಳು ಏನೇನು
1 ಶಿವಮೊಗ್ಗ ಜಿಲ್ಲೆಯಲ್ಲಿ 1973ರಲ್ಲಿ ಶೇ.43ರಷ್ಟು ಅರಣ್ಯವಿತ್ತು. 2012ರಲ್ಲಿ ಶೇ.22.33ಕ್ಕೆ ಮಾತ್ರ ಉಳಿದುಕೊಂಡಿದ್ದು, ಭದ್ರಾವತಿ ವ್ಯಾಪ್ತಿಯಲ್ಲಿ ಮಾನವ ಹಸ್ತಕ್ಷೇಪ ಅತಿಯಾಗಿದೆ.
2 ಅತ್ಯಂತ ಒಳ ಪ್ರದೇಶದ ಕಾಡುಗಳೂ ಕಳೆದ 40 ವರ್ಷಗಳಲ್ಲಿ ಶೇ.12ರಷ್ಟು ಕಣ್ಮರೆಯಾಗಿವೆ. ಈ ವರೆಗೆ ಜಿಲ್ಲೆಯಲ್ಲಿ ಆಗಿರುವ ಅರಣ್ಯ ಅತಿಕ್ರಮಣ 36102 ಹೆಕ್ಟೆರ್.
3 ವರದಾ, ಶರಾವತಿ ಕಣಿವೆಗಳಲ್ಲಿ ಅರಣ್ಯ ಛಿದ್ರವಾಗಿ ಹಳ್ಳ, ತೊರೆಗಳ ನಾಶವಾಗಿದೆ. ಈ ನದಿಗಳ ಉಪ ನದಿ, ಹೊಳೆಗಳ ಜಲಾನಯನ ರಕ್ಷಣೆ, ನದಿ ಪಾತ್ರದ ಸಸ್ಯ ವೈವಿಧ್ಯ ಉಳಿಸಲು ಜರೂರು ಕ್ರಮಬೇಕು.
4 ರಾಂಪತ್ರೆ ಜಡ್ಡಿಗಳು, ಕತ್ತಲೆ ಕಾನ್ಸಿಸ್ನಂತ ವೃಕ್ಷ ಜಾತಿಗಳು ಕೆಲವೇ ಉಳಿದಿದ್ದು, ಬಹಳ ನಾಶಹೊಂದಿವೆ.
5 ಜಿಲ್ಲೆಯಲ್ಲಿ ಏಕ ಜಾತಿ ಕೈಗಾರಿಕಾ ನೆಡುತೋಪುಗಳು ಮಲೆನಾಡಿನ ಸ್ವಾಭಾವಿಕ ಜೀವ ವೈವಿದ್ಯ, ಹುಲ್ಲುಗಾವಲುಗಳ ನಾಶಕ್ಕೆ ಕಾರಣವಾಗಿದೆ. ಕೊಡಚಾದ್ರಿ, ಮಡೆನೂರುಗಳಲ್ಲಿ ಹುಲ್ಲುಗಾವಲು ಇರುವ ಪ್ರದೇಶಗಳಲ್ಲಿ ನೆಡುತೋಪುಗಳು ಬಂದಿವೆ. ಜಾನುವಾರುಗಳಿಗೆ ಮೇಯಲು ಹುಲ್ಲುಗಾವಲು ಇಲ್ಲ.
6 ಜಿಲ್ಲೆಯಲ್ಲಿ ವ್ಯಾಪಕ ಅರಣ್ಯ ನಾಶವಾಗಿದ್ದರಿಂದ ಕ್ಯಾಸನೂರು ಅರಣ್ಯ ಕಾಯಿಲೆಗಳಂತಹ ರೋಗಗಳು ಬಂದಿವೆ.
7 ಅತಿಯಾದ ಹೈಬ್ರಿಡ್ ಜಾತಿಯ ಬೀಜ ಬಳಸುವಿಕೆ, ಕೃಷಿ ತೋಟಗಾರಿಕೆಗಾಗಿ ಬಹಳ ರಾಸಾಯನಿಕ ಔಷಧಿ ಸಿಂಪಡಣೆ ಇತ್ಯಾದಿಗಳಿಂದ ದೇಶೀ ಕೃಷಿ ತೋಟಗಾರಿಕಾ ತಳಿಗಳು ಕಣ್ಮರೆ ಆಗುತ್ತಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

