ಶಿವಮೊಗ್ಗ

'ಆಧಾರ್‌' ಕೇಂದ್ರಕ್ಕೆ ಹೆಚ್ಚಿದ ಒತ್ತಡ

Published On :

ಕ.ಪ್ರ.ವಾರ್ತೆ, ನ.ರಾ.ಪುರ,  ಜು.4
ಪಟ್ಟಣದಲ್ಲಿ ಇರುವ ಎರಡು ಆಧಾರ್ ಕಾರ್ಡ್ ನೋಂದಣಿ ಕೇಂದ್ರಕ್ಕೆ ದಿನೇ, ದಿನೇ ಒತ್ತಡ ಹೆಚ್ಚಾಗುತ್ತಿರುವುದರಿಂದ ಹೋಬಳಿ ಕೇಂದ್ರವಾದ ಬಾಳೆಹೊನ್ನೂರು ಪಟ್ಟಣದಲ್ಲಿ ಆಧಾರ ಕಾರ್ಡ್ ನೋಂದಣಿ ಕೇಂದ್ರ ಸ್ಥಾಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ನರಸಿಂಹರಾಜಪುರ ಪ್ರಧಾನ ಅಂಚೆ ಕಚೇರಿಯಲ್ಲಿ 2010 ರಲ್ಲೇ ಆಧಾರ್ ಕಾರ್ಡ್ ನೋಂದಣಿ ಕೇಂದ್ರ ಉದ್ಘಾಟನೆ ಆಗಿದ್ದರೂ, ಕೆಲವೇ ತಿಂಗಳಲ್ಲಿ ಕೇಂದ್ರ ಸರ್ಕಾರದ ಗೊಂದಲ ನೀತಿಯಿಂದ ನೋಂದಣಿ ಕೇಂದ್ರ ನಿಂತು ಹೋಗಿತ್ತು. ಮತ್ತೆ 2012 ರ ನವಂಬರ್ 1ರಿಂದ ಆಧಾರ್ ಕಾರ್ಡ್ ನೋಂದಣಿ ಕೇಂದ್ರ ಪುನರಾರಂಭಿಸಲಾಯಿತು.
ಈ ವರ್ಷ ಮೇ ತಿಂಗಳವರೆಗೂ ನರಸಿಂಹರಾಜಪುರ ಪಟ್ಟಣದ ಅಂಚೆ ಕಚೇರಿಯಲ್ಲಿದ್ದ ಆಧಾರ್ ಕಾರ್ಡ್ ನೋಂದಣಿ ಶಿಬಿರವೇ ಏಕೈಕ ಕೇಂದ್ರವಾಗಿತ್ತು. ಕಳೆದ ಒಂದು ತಿಂಗಳ ಹಿಂದೆ ಅಗ್ರಹಾರದಲ್ಲಿ ಖಾಸಗಿಯವರಿಗೆ ಆಧಾರ್ ಕಾರ್ಡ್ ನೋಂದಣಿ ಶಿಬಿರ ವಹಿಸಲಾಗಿದ್ದು ಅಲ್ಲಿ ಪ್ರಾರಂಭಗೊಂಡಿದೆ. ಪಟ್ಟಣದಲ್ಲಿ 2  ಆಧಾರ್ ಕಾ ರ್ಡ್ ನೋಂದಣಿ ಶಿಬಿರವಿದ್ದರೂ, ಪ್ರತಿ ದಿನ ಬೆಳಗ್ಗೆಯಿಂದ ಸಂಜೆವರೆಗೂ ಜನರು ಸರದಿಸಾಲಿನಲ್ಲೇ ನಿಂತು ಮಾಡಿಸಬೇಕಾಗಿದೆ. ದಿನ ಒಂದಕ್ಕೆ ಒಂದು ನೋಂದಣಿ ಶಿಬಿದಲ್ಲಿ 50 ಜನರ ಆಧಾರ್ ಕಾರ್ಡ್ ಮಾಡಿಸಬಹುದಾಗಿದೆ.
48 ಸಾವಿರ ಜನರ ಕಾರ್ಡ್ ಆಗಿಲ್ಲ: ತಾಲೂಕಿನ 14 ಗ್ರಾಪಂನ 58,686 ಜನಸಂಖ್ಯೆ ಹಾಗೂ ಪಪಂನ 7,462 ಜನ ಸಂಖ್ಯೆ ಸೇರಿ ಒಟ್ಟು 66,148 ಜನರಿಗೆ ಆಧಾರ್ ಕಾರ್ಡ್ ಆಗಬೇಕಾಗಿದೆ. ಇವರಲ್ಲಿ ಇದುವರೆಗೆ ಕೇವಲ 12 ಸಾವಿರ ಆಧಾರ್ ಕಾರ್ಡ್ ಮಾತ್ರ ಆಗಿದೆ. 5 ವರ್ಷದ ಒಳಗಿನ ಮಕ್ಕಳನ್ನು ಬಿಟ್ಟರೂ ಅಂದಾಜು ಇನ್ನೂ 48 ರಿಂದ 50 ಸಾವಿರ ಜನರ ಆಧಾರ್ ಕಾರ್ಡ್ ಆಗಬೇಕಾಗಿದೆ.
ಮುಖ್ಯ ಸಮಸ್ಯೆ ಎಂದರೆ ನರಸಿಂಹರಾಜಪುರ ಪಟ್ಟಣದಿಂದ ಹೋಬಳಿ ಕೇಂದ್ರವಾದ ಬಾಳೆಹೊನ್ನೂರಿಗೆ 40 ಕಿ.ಮೀ. ದೂರವಾಗಲಿದೆ. ಬಾಳೆಹೊನ್ನೂರು ಪಟ್ಟಣದಲ್ಲೇ 10 ಸಾವಿರ ಜನಸಂಖ್ಯೆ ಇದೆ. ಜೊತೆಗೆ ಮಾಗುಂಡಿ, ಬನ್ನೂರು, ಕರ್ಕೇಶ್ವರ, ಮೇಲ್ಪಾಲ್, ಗಡಿಗೇಶ್ವರ ಜನರು ಸಹ ಆಧಾರ್ ಕಾರ್ಡ್ ಮಾಡಿಸಲು ನರಸಿಂಹರಾಜಪುರ ಪಟ್ಟಣದ ಆಧಾರ್ ಕಾರ್ಡ್ ಕೇಂದ್ರಕ್ಕೇ ಬರಬೇಕಾಗಿದೆ.
ಬನ್ನೂರು, ಮಾಗುಂಡಿಯು ನರಸಿಂಹರಾಜಪುರ ಪಟ್ಟಣಕ್ಕೆ 58 ಕಿ.ಮೀ. ದೂರವಾಗಲಿದೆ. ಇಷ್ಟು ದೂರದಿಂದ ಅಲ್ಲಿಯ ಜನರು ಕೆಲಸ ಬಿಟ್ಟು ಬರುವುದನ್ನು ತಪ್ಪಿಸಲು ಹೋಬಳಿ ಕೇಂದ್ರವಾದ ಬಾಳೆಹೊನ್ನೂರು ಪಟ್ಟಣದಲ್ಲೇ ಆಧಾರ್ ಕಾರ್ಡ್ ನೋಂದಣಿ ಕೇಂದ್ರ ಸ್ಥಾಪಿಸಬೇಕು ಎಂದು ಬಾಳೆಹೊನ್ನೂರು ಪಟ್ಟಣದ ನಿವಾಸಿ ಕೆ.ಟಿ. ವೆಂಕಟೇಶ್ ಒತ್ತಾಯಿಸಿದ್ದಾರೆ.
ಎಲ್ಲಕ್ಕೂ ಆಧಾರ್ ಕಾರ್ಡ್: ಈಗ ಬ್ಯಾಂಕ್ ವ್ಯವಹಾರ, ಗ್ಯಾಸ್ ಸಿಲಿಂಡರ್ ಸಂಪರ್ಕಕ್ಕೆ, ಮಕ್ಕಳ ಸ್ಕಾಲರ್ ಶಿಪ್ ಸೇರಿದಂತೆ ಹಲವು ದಾಖಲೆಗಳಿಗೆ ಆಧಾರ್ ಕಾರ್ಡ್ ಕೇಳುತ್ತಿದ್ದಾರೆ. ಬಾಳೆಹೊನ್ನೂರು ಭಾಗದವರಿಗೆ ಆಧಾರ್ ಕಾರ್ಡ್ ನೋಂದಣಿ ಕೇಂದ್ರವನ್ನು ಬಾಳೆಹೊನ್ನೂರಿನಲ್ಲೇ ಸ್ಥಾಪಿಸಿದರೆ, ನರಸಿಂಹರಾಜಪುರ ಪಟ್ಟಣದ ನೋಂದಣಿ ಕೇಂದ್ರಕ್ಕೆ ಒತ್ತಡ ಕಡಿಮೆಯಾಗಲಿದೆ.
ಆಧಾರ್ ಕಾರ್ಡ್ ನೋಂದಣಿ ಕೇಂದ್ರಕ್ಕೆ ಹೋಗಿ ಪೋಟೋ ತೆಗೆಸಿಕೊಂಡರೂ ತಕ್ಷಣಕ್ಕೆ ಆಧಾರ್ ಕಾರ್ಡ್ ದೊರೆಯುವುದಿಲ್ಲ. ಕಳೆದ ನವಂಬರ್ ತಿಂಗಳಲ್ಲಿ ಪೋಟೋ ತೆಗಿಸಿಕೊಂಡವರಿಗೇ ಇನ್ನೂ ಆಧಾರ್ ಕಾರ್ಡ್ ಲಭ್ಯವಿಲ್ಲ.
6 ತಿಂಗಳ ನಂತರವೇ ಆಧಾರ್ ಕಾರ್ಡ್ ದೊರೆಯಲಿದೆ. ಸಂಬಂಧಪಟ್ಟವರು ತಾಲೂಕಿನ  ಬಾಳೆಹೊನ್ನೂರು ಪಟ್ಟಣ, ಕುದುರೆಗುಂಡಿ ಮತ್ತು ಮುತ್ತಿನಕೊಪ್ಪದಲ್ಲಿ ಆಧಾರ್ ಕಾರ್ಡ್ ನೋಂದಣಿ ಕೇಂದ್ರ ತೆರೆದರೆ ಸಾರ್ವಜನಿಕರಿಗೆ ಹೆಚ್ಚು ಅನುಕೂಲವಾಗಲಿದೆ. ಅಲ್ಲದೆ ಅತಿ ಶೀಘ್ರದಲ್ಲೇ ಆಧಾರ ಕಾರ್ಡ್ ಪಡೆಯಲು ಅನುಕೂಲವಾಗಲಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.