ಶಿವಮೊಗ್ಗ

ಇಳಿಯದ ಪ್ರವಾಹ, ಗ್ರಾಮಗಳಿನ್ನೂ ಜಲಾವೃತ

Published On :

ಶಿವಮೊಗ್ಗ: ಮೂರು ದಿನಗಳಿಂದ ಸತತವಾಗಿ ಸುರಿಯುತ್ತಿದ್ದ ಮಳೆಯು ಗುರುವಾರ ಒಂದಿಷ್ಟು ಬಿಡುವು ನೀಡಿದೆ. ಆದರೆ ತುಂಗಾ, ಶರಾವತಿ, ವರದಾ ನದಿಗಳಲ್ಲಿ ಪ್ರವಾಹ ಮಾತ್ರ ಇಳಿಕೆಯಾಗಿಲ್ಲ.
 ಶಿವಮೊಗ್ಗ-ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿಯ ಮಂಡಗದ್ದೆ ಬಳಿ ರಸ್ತೆಯ ಮೇಲೆ ಇನ್ನೂ ನೀರು ಹರಿಯುತ್ತಿದ್ದು, ವಾಹನಗಳು ಪರ್ಯಾಯ ಮಾರ್ಗದಲ್ಲಿ ಸಂಚರಿಸುತ್ತಿವೆ. ಮಂಡಗದ್ದೆ ಪಕ್ಷಿಧಾಮದ ನಡುಗಡ್ಡೆ ಸಂಪೂರ್ಣ ಜಲಾವೃತವಾಗಿದೆ. ತೀರ್ಥಹಳ್ಳಿ ತಾಲೂಕಿನ ಶಿವರಾಜಪುರ ಹಾಗೂ ಲಕ್ಕುಂದ ಗ್ರಾಮಗಳಲ್ಲಿಯೂ ಸಹ ಪ್ರವಾಹ ಇಳಿಕೆಯಾಗಿಲ್ಲ.
90 ಸಾವಿರ ಕ್ಯುಸೆಕ್ ಒಳ ಹರಿವು: ಶರಾವತಿ ನದಿಯಲ್ಲಿ ಪ್ರವಾರ ಏರುಮುಖವಾಗಿದ್ದು, ಗುರುವಾರ ಲಿಂಗನಮಕ್ಕಿ ಜಲಾಶಯದ ಒಳಹರಿವು 1 ಲಕ್ಷ ಕ್ಯುಸೆಕ್ ದಾಟಿತ್ತು. ತುಂಗಾ ಜಲಾಶಯಕ್ಕೂ ಒಳಹರಿವು 90 ಸಾವಿರ ಕ್ಯುಸೆಕ್ ಇತ್ತು. ಇದರೊಂದಿಗೆ ಜಲಾಶಯ ಸಂಗ್ರಹದಲ್ಲಿ ವ್ಯಾಪಕ ಏರಿಕೆ ಕಂಡಿದೆ.
 ಸಾಗರ ತಾಲೂಕಿನ ಬೀಸನಗದ್ದೆ ಗ್ರಾಮದಲ್ಲಿ ವರದಾ ನದಿಯ ಪ್ರವಾಹ ಇಳಿಕೆಯಾಗಿಲ್ಲ. ಈ ಗ್ರಾಮ ಇನ್ನೂ ಜಲಾವೃತವಾಗಿದೆ. ಜಿಲ್ಲೆಯ ಮಲೆನಾಡ ತಾಲೂಕುಗಳಲ್ಲಿ ಮಳೆ ಕಡಿಮೆಯಾಗಿದೆ. ಆದರೆ ಹೊಸನಗರ ತಾಲೂಕಿನ ಯಡೂರಿನಲ್ಲಿ 30 ಸೆ.ಮೀ., ಹುಲಿಕಲ್ ಹಾಗೂ ಆಗುಂಬೆಯಲ್ಲಿ 28 ಸೆ.ಮೀ, ಮಾಸ್ತಿಕಟ್ಟೆಯಲ್ಲಿ 26, ಲಿಂಗನಮಕ್ಕಿ ಹಾಗೂ ತಾಳಗುಪ್ಪದಲ್ಲಿ 20 ಸೆ.ಮೀ, ತೀರ್ಥಹಳ್ಳಿಯಲ್ಲಿ 17, ಹೊಸನಗರ 12, ಹುಂಚದಕಟ್ಟೆ 9, ಸಾಗರ, ತ್ಯಾಗರ್ತಿ, ಆನವಟ್ಟಿಯಲ್ಲಿ 8, ಶಿಕಾರಿಪುರ 6, ಸೊರಬ ಹಾಗೂ ಭದ್ರಾವತಿ 4, ಹೊಳಲೂರು 3, ಆನವಟ್ಟಿಯಲ್ಲಿ 2 ಸೆ.ಮೀ. ಮಳೆಯಾಗಿದೆ.
ನಷ್ಟದ ಅಂದಾಜು
ಸಾಗರ: ತಾಲೂಕಿನಲ್ಲಿ ಎರಡು ದಿನಗಳ ಕಾಲ ಸುರಿದ ಮಳೆ ಬುಧವಾರ ಸಂಜೆಯಿಂದ ಕೊಂಚ ಬಿಡುವುದು ನೀಡಿದ್ದು ಗುರುವಾರ ಸಂಪೂರ್ಣ ಕಡಿಮೆಯಾಗಿದೆ.
 ಮಳೆ ನಿಂತಿದ್ದರೂ ಮಳೆ ಸೃಷ್ಟಿಸಿದ ಅನಾಹುತ ಮುಂದುವರೆದಿದೆ. ಎಡಬಿಡದೆ ಸುರಿದ ಭಾರಿ ಮಳೆಯಿಂದ ತಾಲೂಕಿನಲ್ಲಿ ದೊಡ್ಡ ಪ್ರಮಾಣದ ಹಾನಿ ಸಂಭವಿಸಿದೆ. ಸಾವಿರಾರು ಎಕರೆ ಕೃಷಿ ಭೂಮಿ ಜಲಾವೃತವಾಗಿದ್ದರೆ ಕೆಲವು ಜಮೀನುಗಳಲ್ಲಿ ಮಣ್ಣು, ಮರಳು ತುಂಬಿಕೊಂಡಿದೆ. ಅಲ್ಲದೆ ರಸ್ತೆ, ಚರಂಡಿ, ಸೇತುವೆಗಳಿಗೆ ಹಾನಿಯುಂಟಾಗಿದ್ದು ರು. 50 ಲಕ್ಷಕ್ಕೂ ಹೆಚ್ಚಿನ ಹಾನಿ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ.
ಸಾವಿರಾರು ರುಪಾಯಿ ನಷ್ಟ: ಕೆಳದಿ ಹೋಬಳಿ ಮಣಗದ್ದೆಯಲ್ಲಿ ಸುಮಾರು 41 ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಬ್ಯಾರೇಜಿಗೆ ವರದಾನದಿ ಪ್ರವಾಹದಿಂದ ಹಾನಿಯಾಗಿದೆ. ಇದರಿಂದ ಈ ಭಾಗದ ನೂರಕ್ಕೂ ಹೆಚ್ಚು ಎಕರೆ ಬಿತ್ತನೆ ಮಾಡಿದ ಜಮೀನು ಜಲಾವೃತವಾಗಿದೆ. ಬಂದಗದ್ದೆಯ ಮಠದ ಕೆರೆ ಪೂರ್ಣ ಒಡೆದಿದ್ದು, ಸಾವಿರಾರು ರುಪಾಯಿ ನಷ್ಟ ಉಂಟಾಗಿದೆ. ಮಠದ ಕೆರೆ ಒಡೆದಿದ್ದರಿಂದ ನೀರು ಕೆಳದಿ ಹಿರೇಕೆರೆಗೆ ನುಗ್ಗಿದ್ದು ಅಪಾಯ ಸಂಭವಿಸುವ ಸಾಧ್ಯತೆ ಇದೆ. ಕಲ್ಯಾಣಪುರದಲ್ಲಿ ಕೆರೆ ಒಡೆದ ಪರಿಣಾಮ ಚನ್ನಬಸಪ್ಪಗೌಡ ಎಂಬುವವರ ತೋಟಕ್ಕೆ ನೀರುನುಗ್ಗಿ ಅಪಾರ ಹಾನಿ ಆಗಿದೆ.
ಕೃಷಿಭೂಮಿ ಮುಳುಗಡೆ: ತಾಳಗುಪ್ಪ ಹೋಬಳಿಯಲ್ಲಿ ಶೇ. 50ರಷ್ಟು ಬಿತ್ತನೆಕಾರ್ಯ ಮುಗಿದಿತ್ತು. ಆದರೆ ಮಾವಿನಹೊಳೆ, ಕನ್ನಹೊಳೆ, ಕಣಸೆ ಹೊಳೆ ಹಾಗೂ ವರದಾನದಿ ಪ್ರವಾಹದಿಂದಾಗಿ ಸಾವಿರಾರು ಎಕರೆ ಕೃಷಿಭೂಮಿ ಮುಳುಗಡೆಯಾಗಿ ಬಿತ್ತನೆಬೀಜ ಹಾಗೂ ಗೊಬ್ಬರ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ವರದಾನದಿ ದಂಡೆಯ ಇಕ್ಕೆಲಗಳಲ್ಲಿ ಬರುವ ಕೆಳದಿ ಹೋಬಳಿಯ ಅನೇಕ ಪ್ರದೇಶಗಳು ಜಲಾವೃತವಾಗಿದೆ.
 ಪ್ರವಾಹಪೀಡಿತ ಪ್ರದೇಶಗಳಿಗೆ ತಾಪಂ ಅಧ್ಯಕ್ಷ ಮಹಾಬಲೆಶ್ವರ ಕುಗ್ವೆ, ಸದಸ್ಯರು, ಅಧಿಕಾರಿಗಳು ಗುರುವಾರ ಭೇಟಿ ನೀಡಿ ಪರಿಶೀಲಿಸಿದರು. ರೈತರಿಗೆ ಕೃಷಿ ಇಲಾಖೆಯಿಂದ ಸಬ್ಸಿಡಿ ದರದಲ್ಲಿ ಬಿತ್ತನೆಬೀಜ ಹಾಗೂ ರಸಗೊಬ್ಬರ ಪೂರೈಕೆಗೆ ಜೂ. 30 ಕೊನೆಯ ದಿನವಾಗಿತ್ತು. ಪ್ರವಾಹ ಹಿನ್ನೆಲೆಯಲ್ಲಿ ಅವಧಿಯನ್ನು ಇನ್ನೂ ಒಂದು ತಿಂಗಳು ವಿಸ್ತರಿಸುವಂತೆ ತಾಪಂ ಅಧ್ಯಕ್ಷರು ಒತ್ತಾಯಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.