ಪ್ರತಿಭಟಿಸಿದವರು ಪಾರಂಪರಿಕ ವೈದ್ಯರಲ್ಲ
ಕ.ಪ್ರ.ವಾರ್ತೆ ಶಿವಮೊಗ್ಗ ಜು.10 ಪಾರಂಪರಿಕ ವೈದ್ಯರೆಂದು ಹೇಳಿಕೊಂಡು ತಾವು ನಂಬಿರುವ ಚಿಕಿತ್ಸೆ ಮಾಡದೇ ಅಲೋಪತಿ ಔಷಧ, ಇಂಜೆಕ್ಷನ್, ಆಪರೇಷನ್ ಇತ್ಯಾದಿ ಮಾಡುತ್ತಿದ್ದ ವೈದ್ಯರ ವಿರುದ್ಧ ಕಠಿಣ ನಿಲವು ತಳೆದಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರು ನಕಲಿ ವೈದ್ಯರಷ್ಟೇ ಅಲ್ಲ, ವಂಚಕರು, ಮೋಸಗಾರರು, ಕಾನೂನು ಭಂಜಕರು, ಸಮಾಜ ಘಾತಕರು ಆಗಿರುತ್ತಾರೆ ಎಂದು ಅಭಿಪ್ರಾಯಪಟ್ಟಿದೆ.
ಸಾರ್ವಜನಿಕರು ಅಂತಹ ವೈದ್ಯರ ಬಗ್ಗೆ ಎಚ್ಚರಿಕೆಯಿಂದಿರುವಂತೆ ಹಾಗೂ ಸಕಾಲದಲ್ಲಿ ಇಲಾಖೆಗೆ ಮಾಹಿತಿ ನೀಡುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶಿವಣ್ಣರೆಡ್ಡಿ ಅವರು ತಿಳಿಸಿದ್ದಾರೆ.
ನಕಲಿ ವೈದ್ಯರು: ಜಿಲ್ಲೆಯಲ್ಲಿ ಅನಧಿಕೃತವಾಗಿ ಚಿಕಿತ್ಸಾಲಯಗಳನ್ನು ಸ್ಥಾಪಿಸಿಕೊಂಡು ಸಾರ್ವಜನಿಕರಿಗೆ ವಂಶಪಾರಂಪರಿಕ ವೈದ್ಯರೆಂದು ನಂಬಿಸಿ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದ ನಕಲಿ ವೈದ್ಯರನ್ನು ಗುರುತಿಸಿ, ನಿಯಮಾನುಸಾರ ಕ್ರಮಕೈಗೊಳ್ಳಲು ಆರೋಗ್ಯ ಇಲಾಖೆ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಜುಲೈ 8 ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರಿನಲ್ಲಿ ಇಲಾಖೆಯ ಕ್ರಮವನ್ನು ಪ್ರಶ್ನಿಸಿ, ಪ್ರತಿಭಟನೆ ನಡೆಸಿರುವವರು ವಂಶಪಾರಂಪರಿಕ ವೈದ್ಯರಲ್ಲ ಎಂದು ಹೇಳಿದ್ದಾರೆ.
ವಂಶಪಾರಂಪರಿಕ ವೈದ್ಯರಲ್ಲ: ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಪ್ರತಿಭಟನೆ ನಡೆಸಿದವರು ವಂಶಪಾರಂಪರಿಕ ವೈದ್ಯರಲ್ಲ. ಅವರು ಯಾವುದೇ ವಿದ್ಯಾರ್ಹತೆಯನ್ನು ಹೊಂದಿರದೆ ತಾವು ಕಾರ್ಯನಿರ್ವಹಿಸುತ್ತಿರುವ ಕಾರ್ಯಾಲಯದ ಮುಂದೆ ಕ್ಲಿನಿಕ್ ಎಂದು ನಾಮಫಲಕ ಹಾಕಿರುವುದಲ್ಲದೆ ಡಾಕ್ಟರ್ ಎಂದು ಹೆಸರಿಸಿಕೊಂಡು ಅಮಾಯಕ ರೋಗಿಗಳ ಪ್ರಾಣದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ಅಲ್ಲದೇ ಇವರಿಗೆ ಯಾವುದೇ ಅನುಭವವೂ ಇರುವುದಿಲ್ಲ. ಇವರು ಚಿಕಿತ್ಸೆ ನೀಡುವ ಕಾರ್ಯಾಲಯಗಳಲ್ಲಿ ಎಂಬಿಬಿಎಸ್ ವೈದ್ಯರು ನೀಡುವ ಅಲೋಪಥಿ ಇಂಜೆಕ್ಷನ್, ಮಾತ್ರೆ, ಗುಳಿಗೆ, ಔಷಧ, ಟಾನಿಕ್ ಇತ್ಯಾದಿಗಳು ತಮ್ಮ ಭೇಟಿ ಸಂದರ್ಭದಲ್ಲಿ ಸ್ವತಃ ವೀಕ್ಷಿಸಲಾಗಿದೆ ಎಂದವರು ತಿಳಿಸಿದ್ದಾರೆ.
ಈ ನಕಲಿ ವೈದ್ಯರು ತಮ್ಮ ಕ್ಲಿನಿಕ್ಗಳಲ್ಲಿ ರೋಗಿಗಳಿಗೆ ಗ್ಲೂಕೋಸ್ ಡ್ರಿಪ್ ಬಾಟಲ್ ಹಾಕುವುದು, ಹೆರಿಗೆ ಮಾಡಿಸುವುದು, ಅಕ್ರಮ ಗರ್ಭಪಾತ ಮಾಡಿಸುತ್ತಿದ್ದಾರೆ ಅಲ್ಲದೇ ನುರಿತ ತಜ್ಞ ವೈದ್ಯರಂತೆ ಔಷಧ, ಚಿಕಿತ್ಸೆ ನೀಡುತ್ತಿದ್ದಾರೆ. ಅತಿಹೆಚ್ಚಿನ ಔಷಧ ದಾಸ್ತಾನನ್ನು ಹೊಂದಿದ್ದಾರೆ. ಇವರು ನಾಟಿ ಔಷಧ ನೀಡುವವರು ಅಥವಾ ವಂಶಪಾರಂಪರಿಕ ವೈದ್ಯರಾಗಿರಲು ಹೇಗೆ ಸಾಧ್ಯ ಎಂದವರು ಪ್ರಶ್ನಿಸಿದ್ದಾರೆ. ಆರೋಗ್ಯ ಇಲಾಖೆ ಅಧಿಕಾರಿಗಳ ಮೇಲೆ ವಿನಾಕಾರಣ ಆಪಾದನೆ ಮಾಡುತ್ತಿರುವ ಇವರು ವೈದ್ಯ ವೃತ್ತಿ ನಡೆಸಲು ಅರ್ಹರು ಅಲ್ಲವೇ ಅಲ್ಲ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

