ರೇಲ್ವೆ ನಿಲ್ದಾಣ ಸ್ಥಿತಿಗೆ ಕಾಗೋಡು ಅಸಮಾಧಾನ
ಕ.ಪ್ರ.ವಾರ್ತೆ ಸಾಗರ ಜು.10
ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿದ್ದ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪನವರು ನಿಲ್ದಾಣದ ಸ್ಥಿತಿ ನೋಡಿ ಅಸಮಾಧಾನ ವ್ಯಕ್ತಪಡಿಸಿದರು.
ತಕ್ಷಣ ರೈಲ್ವೆ ಇಲಾಖೆಯ ಮೈಸೂರು ವಿಭಾಗದ ಡೆಪ್ಯೂಟಿ ಕಮರ್ಷಿಯಲ್ ಮ್ಯಾನೇಜರ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಸಮಸ್ಯೆ ನಿವಾರಣೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಸೌಲಭ್ಯ ನೀಡಿಲ್ಲ: ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಗರ ಪ್ರವಾಸಿ ಕೇಂದ್ರವಾಗಿದ್ದು, ರೈಲಿನ ಮೂಲಕ ರಾಜ್ಯದ ಬೇರೆ ಬೇರೆ ಭಾಗಗಳಿಂದ ಇಲ್ಲಿಗೆ ಪ್ರವಾಸಿಗರು ಆಗಮಿಸುತ್ತಾರೆ. ಆದರೆ ಇಲ್ಲಿನ ರೈಲು ನಿಲ್ದಾಣದಲ್ಲಿ ಮೂಲ ಸೌಕರ್ಯದ ಕೊರತೆಯಿದೆ. ದಿನೇ ದನೇ ರೈಲು ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದ್ದು ಆದಾಯ ಕೂಡ ಹೆಚ್ಚಾಗುತ್ತಿದೆ. ಆದರೆ ಇಲಾಖೆ ನಿಲ್ದಾಣಕ್ಕೆ ಅಗತ್ಯ ಸೌಲಭ್ಯ ಮಾತ್ರ ನೀಡಿಲ್ಲ ಎಂದು ದೂರಿದರು.
ಈಗಾಗಲೇ ಶಿವಮೊಗ್ಗ-ತಾಳಗುಪ್ಪ ಮಾರ್ಗಕ್ಕೆ ಎರಡು ಪ್ಯಾಸೆಂಜರ್ ರೈಲು ಮಂಜೂರಾಗಿದ್ದು, ಶೀಘ್ರ ಕಾರ್ಯಾರಂಭ ಮಾಡಲಿದೆ. ಈ ಸಂದರ್ಭದಲ್ಲಿ ಪ್ರಯಾಣಿಕರ ಒತ್ತಡ ಹೆಚ್ಚಲಿದೆ. ಅಗತ್ಯ ಸಿಬ್ಬಂದಿಗಳ ನೇಮಕ ಮಾಡದೆ ಹೋದರೆ ಬೆರಳೆಣಿಕೆ ಸಿಬ್ಬಂದಿಗೆ ಕಾರ್ಯನಿರ್ವಹಣೆ ಸಾಧ್ಯವಿಲ್ಲ. ಸಾಗರವಲ್ಲದೆ ಆನಂದಪುರಂ, ತಾಳಗುಪ್ಪ ನಿಲ್ದಾಣಗಳಲ್ಲೂ ಅಗತ್ಯ ಸೌಲಭ್ಯದ ಕೊರತೆ ಇದೆ ಎಂದು ಹೇಳಿದರು.
ರೈಲ್ವೆ ಸಚಿವರಿಗೆ ಮನವಿ: ಹಿಂದೆ ಮೀಟರ್ಗೇಜ್ ರೈಲು ಸಂಚರಿಸುತ್ತಿದ್ದ ವೇಳೆ ಇಲ್ಲಿ ಸಾಕಷ್ಟು ಸಿಬ್ಬಂದಿ ಇದ್ದರು. ಬ್ರಾಡ್ಗೇಜ್ ಪರಿವರ್ತನೆ ಸಂದರ್ಭದಲ್ಲಿ ಇಲ್ಲಿನ ಸಿಬ್ಬಂದಿಗಳನ್ನು ಬೇರೆ ಕಡೆಗೆ ವರ್ಗಾವಣೆ ಮಾಡಿದ್ದಾರೆ. ಅವರನ್ನು ಪುನ- ಇಲ್ಲಿಗೆ ವರ್ಗಾಯಿಸಿಲ್ಲ. ಸಿಬ್ಬಂದಿಗಳಿಗೆ ವಸತಿಗೃಹಗಳ ಕೊರತೆಯೂ ಇದೆ. ಈ ನಿಟ್ಟಿನಲ್ಲಿ ಸಾಗರ ರೈಲ್ವೆ ನಿಲ್ದಾಣಕ್ಕೆ ಆಗಬೇಕಾದ ಅಭಿವೃದ್ಧಿ ಕೆಲಸಗಳು, ಸಿಬ್ಬಂದಿ ನೇಮಕ ಕುರಿತು ಪಟ್ಟಿ ತಯಾರಿಸಿ ಕೇಂದ್ರ ರೈಲ್ವೆ ಸಚಿವರಿಗೆ ಕಳಿಸಿಕೊಡಲಾಗುವುದು ಎಂದು ತಿಳಿಸಿದರು.
ರೈಲ್ವೆ ಹೋರಾಟ ಸಮಿತಿಯ ವಿಲಿಯಂ, ಕುಮಾರ್, ಸುಳಗೋಡು ಗಣಪತಿ, ಕಾಂಗ್ರೆಸ್ ಪಕ್ಷದ ಕೆ. ಹೊಳೆಯಪ್ಪ, ರಮೇಶ್ ಗಾಳಿಪುರ, ತಾರಾಮೂರ್ತಿ, ನಗರಸಭೆ ಸದಸ್ಯರಾದ ತೀ.ನ. ಶ್ರೀನಿವಾಸ್, ಡಿಶ್ಗುರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

