ಎಂಜಿನಿಯರ್ ಮೇಲೆ ನಗರಸಭೆ ಸದಸ್ಯನ ಹಲ್ಲೆ
ಕ.ಪ್ರ.ವಾರ್ತೆ, ಭದ್ರಾವತಿ, ಜು.11
ನಗರಸಭೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮೇಲೆ ನಗರಸಭೆ ಸದಸ್ಯರೊಬ್ಬರು ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಭದ್ರಾವತಿ ನಗರಸಭೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಗುರುವಾರ ತಮ್ಮ ಕಾರ್ಯ ಸ್ಥಗಿತಗೊಳಿಸಿ ಧರಣಿ ಸತ್ಯಾಗ್ರಹ ನಡೆಸಿದ ಘಟನೆ ನಡೆಯಿತು.
ಹೊಸಮನೆ ಬಡಾವಣೆಯಲ್ಲಿ ನಡೆಯುತ್ತಿದ್ದ ಚರಂಡಿ ಕಾಮಗಾರಿ ಮತ್ತಿತರ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಅಲ್ಲಿನ ನಗರಸಭಾ ಸದಸ್ಯ ವಿ. ಕದಿರೇಶ್ ಗುತ್ತಿಗೆದಾರರಿಗೆ ಬೇರೆಡೆ ಆ ಕೆಲಸ ಮಾಡಲು ಸೂಚಿಸಿದಾಗ ಗುತ್ತಿಗೆದಾರರು ಅದಕ್ಕೆ ಒಪ್ಪಲಿಲ್ಲ. ಆಗ ಕದಿರೇಶ್ ಅವರು ಸ್ಥಳಕ್ಕೆ ನಗರಸಭೆಯ ಎಂಜಿನಿಯರ್ ಅವರು ಬಂದು ಪರಿಶೀಲನೆ ನಡೆಸಬೇಕೆಂದು ಒತ್ತಾಯಿಸಿದರು.
ಎಂಜಿನಿಯರ್ ಮೇಲೆ ಹಲ್ಲೆ: ಸ್ಥಳ ಪರಿಶೀಲನೆ ನಡೆಸಿದ ನಗರಸಭೆ ಅಧಿಕಾರಿಗಳು ಕಾಮಗಾರಿ ನಡೆಯುತ್ತಿರುವ ಸ್ಥಳ ಬದಲಾಯಿಸಲು ಬರುವುದಿಲ್ಲವೆಂದು ಹೇಳಿದಾಗ ಸಿಟ್ಟಿಗೆದ್ದ ಕದಿರೇಶ್, ನಗರಸಭೆಯ ಕಾರ್ಯಪಾಲಕ ಎಂಜಿನಿಯರ್ ಅವರ ಕಚೇರಿಗೆ ಬಂದು ಮಾತುಕತೆ ನಡೆಸಿದರು. ಆಗ ಸ್ಥಳಕ್ಕೆ ಬಂದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ನಿರಂಜನಮೂರ್ತಿ ಅವರ ಮೇಲೆ ಕದಿರೇಶ್ ಹಲ್ಲೆ ನಡೆಸಿದರೆಂದೂ ಇದರಿಂದ ಅಸ್ವಸ್ಥಗೊಂಡ ನಿರಂಜನಮೂರ್ತಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಬೇಕಾಯಿತೆಂದೂ ಪ್ರತಿಭಟನಕಾರರು ತಿಳಿಸಿದರು.
ಈ ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಪೌರಾಯುಕ್ತ ಬಿ.ಡಿ.ಬಸವರಾಜಪ್ಪನವರಿಗೆ ದೂರು ಸಲ್ಲಿಸಿದ ಮೇರೆಗೆ ಪೌರಾಯುಕ್ತರು ಹಳೇನಗರ ಪೋಲಿಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಕದಿರೇಶ್ ಸಹ ಪ್ರತಿದೂರು ನೀಡಿ ನಿರಂಜನಮೂರ್ತಿ ತಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ತಮ್ಮ ಮೇಲೆ ಹಲ್ಲೆ ನಡೆಸಿದರೆಂದು ತಿಳಿಸಿದ್ದಾರೆ.
ಸಂಧಾನ ವಿಫಲ: ಪೌರಾಯುಕ್ತರು ದೂರು ಸ್ವೀಕಾರ ಮಾಡಿ ಈರ್ವರನ್ನೂ ಕರೆದು ಸಂಧಾನ ಮಾಡಲು ಯತ್ನಿಸಿದರೂ ಅದು ಯಾವುದೇ ಫಲವನ್ನು ನೀಡದ ಪ್ರಯುಕ್ತ ಅವರು ಪೋಲಿಸರಿಗೆ ದೂರು ನೀಡಿದ್ದಾರೆ.
ನಂತರ ಶಾಸಕ ಎಂ.ಜೆ.ಅಪ್ಪಾಜಿ ಸ್ಥಳಕ್ಕೆ ಆಗಮಿಸಿ ಪ್ರತಿಭಟನಕಾರರ ಮನವೊಲಿಸಿ ವಾತಾವರಣವನ್ನು ತಿಳಿಗೊಳಿಸಿದ ನಂತರ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಯಿತು. ಪೌರಸೇವಾ ನೌಕರರ ರಾಜ್ಯ ಘಟಕದ ಅಧ್ಯಕ್ಷ ಸತ್ಯನಾರಾಯಣ ಮತ್ತು ಪೌರಾಯುಕ್ತ ಬಿ.ಡಿ.ಬಸವರಾಜಪ್ಪ ಸಹ ಈ ಸಂದರ್ಭದಲ್ಲಿ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

