ಗೊಂದಲ ಪರಿಹರಿಸುವ ಪ್ರಯತ್ನ: ಶ್ಲಾಘನೆ
ಕ.ಪ್ರ.ವಾರ್ತೆ , ಶಿವಮೊಗ್ಗ , ಜು.13
ಪಿಯುಸಿ ಶಿಕ್ಷಣ ನಂತರ ಮುಂದೇನು ಎಂಬ ಗೊಂದಲದ ವಿದ್ಯಾರ್ಥಿಗಳು ಹಾಗೂ ಪೋಷಕರ ಸಮಸ್ಯೆಗೆ ಪರಿಹಾರ ಸೂಚಿಸುವ ಪ್ರಯತ್ನವನ್ನು ಕನ್ನಡಪ್ರಭ- ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್, ಸಿಕ್ಸ್ರೀವ್ಸ್ ಸಂಸ್ಥೆ ಮಾಡುತ್ತಿರುವುದು ಶ್ಲಾಘನೀಯ ಎಂದು ಕೆ.ಬಿ. ಪ್ರಸನ್ನ ಕುಮಾರ್ ಹೇಳಿದರು.
ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್, ಕನ್ನಡಪ್ರಭ ಮತ್ತು ಸಿಕ್ಸ್ರೀವ್ಸ್ಸಂಸ್ಥೆ ಆಶ್ರಯದಲ್ಲಿ ಶನಿವಾರ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಶಿಕ್ಷಣ ಮೇಳದಲ್ಲಿ ಮಾತನಾಡಿದ ಅವರು, ಒಂದೇ ಸೂರಿನಡಿ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಸಂಬಂಧಿಸಿದ ಓದು ಹಾಗೂ ಮುಂದೆ ಕೈಗೊಳ್ಳಬಹುದಾದ ಕೋರ್ಸ್ಗಳ ಬಗ್ಗೆ ಮಾರ್ಗದರ್ಶನ ನೀಡುತ್ತಿರುವುದು ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದರು.
ಶಿಕ್ಷಣಕ್ಕೆ ಆದ್ಯತೆ: ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲದ ಬಗ್ಗೆ ಮಾಹಿತಿ ನೀಡಲು ಬ್ಯಾಂಕ್ ಅಧಿಕಾರಿಗಳು ಹಾಗೂ ವಿವಿಧ ಸಂಸ್ಥೆಗಳು ಪ್ರಮುಖರನ್ನು, ಶಿಕ್ಷಣ ತಜ್ಞರನ್ನು ಕರೆಸಿ ಮಾಹಿತಿ ನೀಡುವ ಕಾರ್ಯ ಅಭಿನಂದನಿಯ ಎಂದ ಅವರು, ನಮ್ಮ ಸರ್ಕಾರ ಶಿಕ್ಷಣಕ್ಕೆ ಹೆಚ್ಚು ಅದ್ಯತೆ ನೀಡಿದ್ದು, ಪ್ರಸಕ್ತ ಬಜೆಟ್ನಲ್ಲಿ ಶಾಲೆಗೆ ಬರುವ ಪ್ರತಿ ಹೆಣ್ಣು ಮಗುವಿಗೆ ದಿನಕ್ಕೆ 2 ಪ್ರೋತ್ಸಾಹ ಧನ ನೀಡುತ್ತಿದೆ. ಇದು ಹೆಣ್ಣು ಮಕ್ಕಳನ್ನು ಶಿಕ್ಷಣದಲ್ಲಿ ತೊಡಗಿಸಿಕೊಳ್ಳಲು ಅನುಕೂಲವಾಗುತ್ತದೆ ಎಂದು ಹೇಳಿದರು.
ಶಿಕ್ಷಣ ಮೇಳದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಮುಂದಿನ ಓದು ಹಾಗೂ ಉದ್ಯೋಗದ ಕುರಿತು ಸಾಕಷ್ಟು ಅನುಕೂಲವಾಗಲಿದೆ ಎಂದರಲ್ಲದೇ, ಇಲ್ಲಿಯವರೆಗೆ ನಿಮ್ಮನ್ನು ಕಷ್ಟಪಟ್ಟು ನಿಮ್ಮ ಪೋಷಕರು ಓದಿಸಿದ್ದಾರೆ. ಇನ್ನು ಮುಂದೆ ಅವರಿಗೆ ತೊಂದರೆ ನೀಡದೆ ಬ್ಯಾಂಕ್ಗಳು ನೀಡುವ ಶೈಕ್ಷಣಿಕ ಸಾಲವನ್ನು ಬಳಸಿಕೊಂಡು, ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬದುಕಿ ಎಂದು ತಿಳಿಸಿದರು.
ಗ್ಯಾರಂಟಿ ನೀಡಿ: ವಿಜಯಾ ಬ್ಯಾಂಕ್ನ ಸಹಾಯಕ ಪ್ರಧಾನ ವ್ಯವಸ್ಥಾಪಕ ರಾಧಾಕೃಷ್ಣ ಶೆಟ್ಟಿ, ವಿದ್ಯಾಭ್ಯಾಸಕ್ಕೆ ಸಾಲ ನೀಡುವ ಪ್ರಕ್ರಿಯೆ ಎಲ್ಲಾ ಬ್ಯಾಂಕ್ಗಳಲ್ಲಿಯೂ ಒಂದೇ ಮಾದರಿಯಲ್ಲಿ ಇರುತ್ತದೆ. ಅತೀ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ನಾಲ್ಕರಿಂದ ಏಳೂವರೆ ಲಕ್ಷ ರುಪಾಯಿವರೆಗೆ ಸಾಲ ನೀಡಲಾಗುತ್ತದೆ. ಆದರೆ, ಇದಕ್ಕೆ ಮೂರನೇ ವ್ಯಕ್ತಿಯ ಗ್ಯಾರೆಂಟಿ ಬೇಕಾಗುತ್ತದೆ. ಇದನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್ ಉಪ ಮಹಾಪ್ರಬಂಧಕ ಎಂ.ಎಸ್. ಚಿನಿವಾರ್, ಎಸ್ಬಿಐ ಮುಖ್ಯ ವ್ಯವಸ್ಥಾಪಕ ಎಂ.ಎಸ್. ಶೆಣೈ, ಇಪಿಎಂಎಲ್ ಪ್ರಧಾನ ವ್ಯವಸ್ಥಾಪಕ ವಿನೋದ್ ನಾಯರ್, ಇಪಿಎಂಎಲ್ ಶಿವಮೊಗ್ಗ ವ್ಯವಸ್ಥಾಪಕ ಎಲ್.ಎನ್. ಮೂರ್ತಿ, ಸಿಕ್ಸ್ರೀವ್ಸ್ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಯುವರಾಜ್ ಮತ್ತಿತರರು ಇದ್ದರು.
ಗೋಷ್ಠಿಗಳು: ಶಿಕ್ಷಣ ಮೇಳದಲ್ಲಿ ಒಟ್ಟು ನಾಲ್ಕು ಗೋಷ್ಠಿಗಳು ನಡೆದವು. ಡಿವಿಎಸ್ಸ್ವತಂತ್ರ್ಯ ಪ.ಪೂ. ಕಾಲೇಜಿನ ಉಪನ್ಯಾಸಕ ಎ.ಇ. ರಾಜಶೇಖರ್ ಸಿಇಟಿ ಪರೀಕ್ಷೆ ನಂತರ ವಿದ್ಯಾರ್ಥಿಗಳು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಆದಿಚುಂಚನಗಿರಿ ಪ.ಪೂ. ಕಾಲೇಜಿನ ಉಪಪ್ರಾಂಶುಪಾಲ ಪ್ರಫುಲ್ಲಚಂದ್ರ ಹಂಜಿ ಅವರು 2014ರಲ್ಲಿ ವಿದ್ಯಾರ್ಥಿಗಳು ಎದುರಿಸಬೇಕಾಗಿರುವ ನೀಟ್ ಹಾಗೂ ಜೆಇಇ ಪರೀಕ್ಷೆಗಳ ಬಗ್ಗೆ ಉಪನ್ಯಾಸ ನೀಡಿದರು.
ಮೈಸೂರು ಎಜ್ಯುಕೇಷನ್ ಅಕಾಡೆಮಿಯ ನಿರ್ದೇಶಕ ರೇಣುಕಾರಾಧ್ಯ ಅವರು ವಿದ್ಯಾರ್ಥಿಗಳು ಎದುರಿಸಬಹುದಾದ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾತನಾಡಿದರು. ಸಿಕ್ಸ್ರೀವ್ಸ್ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಯುವರಾಜ್ ಶೈಕ್ಷಣಿಕ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ನೀಡಿದರು.
ಸುಮಾರು 2 ಸಾವಿರ ವಿದ್ಯಾರ್ಥಿಗಳು ಮೇಳಕ್ಕೆ ಆಗಮಿಸಿ ವಿವಿಧ ವಿಷಯಗಳ ಬಗ್ಗೆ ಮಾಹಿತಿ ಪಡೆದರು. ಹಲವು ಶೈಕ್ಷಣಿಕ ಸಂಸ್ಥೆಗಳು ಹಾಗೂ ಆಪ್ತ ಸಲಹಾ ಕೇಂದ್ರಗಳ ಕೌಂಟರ್ಗಳಿಗೆ ಭೇಟಿ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

