ಶಿವಮೊಗ್ಗ

ಜಮೀನು ವಿವಾದ; ಮೂವರು ಸಹೋದರರ ಕೊಲೆ

Published On :

ಕ.ಪ್ರ.ವಾರ್ತೆ, ಶಿವಮೊಗ್ಗ,  ಜು.15
ಜಮೀನು ವಿವಾದವೊಂದು ಮೂವರ ಬರ್ಬರ ಕೊಲೆಗೆ ಕಾರಣವಾದ ಪ್ರಸಂಗ ಹೊಳೆಹೊನ್ನೂರು ಸಮೀಪದ ಭದ್ರಾಪುರ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಸಹೋದರರಾದ ಪ್ರಕಾಶ್(35), ರಮೇಶ್(30) ಮತ್ತು ಚಂದ್ರ(28)ಕೊಲೆಯಾದವರಾಗಿದ್ದು, ಹಲವು ವರ್ಷಗಳ ವೈಷಮ್ಯ ಒಂದೇ ಬಳ್ಳಿಯ ಮೂವರನ್ನು ಬಲಿತೆಗೆದುಕೊಂಡಿದೆ.
ಮಧ್ಯಾಹ್ನ 1 ಗಂಟೆ ಸುಮಾರಿಗೆ ಪ್ರಕಾಶ್ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ನಂತರ ಪ್ರಕಾಶ್ ಆಕ್ರೋಶ ಭರಿತರಾಗಿದ್ದು, ಇದೇ ಸಂದರ್ಭದಲ್ಲಿ ದುಷ್ಕರ್ಮಿಗಳು ಮತ್ತಿಬ್ಬರು ಸಹೋದರರನ್ನೂ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಮೃತ ಸಹೋದರರ ಕುಟುಂಬದ ಪಕ್ಕದಲ್ಲಿರುವ ತೋಟದ ಶೇಖರಪ್ಪ, ಪರಮೇಶ್, ಹನುಮಂತ, ಹರೀಶ್ ಮತ್ತು ಗೋಪಿ ಕೊಲೆಗೆ ಕಾರಣರಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಘಟನೆ: ಶೇಖರಪ್ಪ ಎಂಬವರಿಗೆ ಸೇರಿದ ತೋಟದ ಪಕ್ಕದಲ್ಲಿಯೇ ಪ್ರಕಾಶ್ ಅವರ ಗದ್ದೆ ಇದ್ದು, ಇಲ್ಲಿಗೆ ಹೋಗಿಬರಲು ಶೇಖರಪ್ಪ ಅವರ ತೋಟದ ಕಡೆಯಿಂದಲೇ ಹೋಗಬೇಕಾಗಿತ್ತು.
ಇವರ ಗದ್ದಗೆ ಓಡಾಡಲು ಪರ್ಯಾಯ ರಸ್ತೆಯಿರಲಿಲ್ಲ. ಹೀಗಾಗಿಯೇ ಪ್ರಕಾಶ್, ನಮ್ಮ ಗದ್ದೆಗೆ ಹೋಗಲು ಶೇಖರಪ್ಪ ಅವರ ತೋಟದ ಒಳಭಾಗದಿಂದ ದಾರಿ ಬಿಡುವಂತೆ ಒತ್ತಾಯಿಸಿದ್ದರು. ಈ ಬಗ್ಗೆ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಕೋರ್ಟ್ ರಸ್ತೆಗೆ ಅವಕಾಶ ನೀಡುವಂತೆ ಆದೇಶ ನೀಡಿತ್ತು. ಆದರೆ, ಇದಕ್ಕೆ ಈ ತೋಟದ ಮಾಲೀಕರು ಅವಕಾಶ ನೀಡಿರಲಿಲ್ಲ.
ತೋಟದ ಮಾಲೀಕರ ವರ್ತನೆಯಿಂದ ರೋಸಿ ಹೋದ ಪ್ರಕಾಶ್ ಸಹೋದರರು ಒಮ್ಮೆ ತೋಟದಲ್ಲಿನ ಅಡಕೆ ಗಿಡಗಳನ್ನು ಕಿತ್ತು ದಾರಿ ಮಾಡಿಕೊಳ್ಳುವ ಪ್ರಯತ್ನವನ್ನೂ ಮಾಡಿದ್ದರು. ಈ ಕುರಿತಂತೆ ಎರಡು ಕುಟುಂಬದವರ ನಡುವೆ ಹಲವು ವರ್ಷಗಳಿಂದ ಜಮೀನಿನ ವಿಚಾರವಾಗಿ ಗಲಾಟೆ, ತಕರಾರು ನಡೆಯುತ್ತಲೇ ಇತ್ತು. ಪೊಲೀಸ್ ಠಾಣೆ, ನ್ಯಾಯಾಲಯದ ಮೆಟ್ಟಿಲು ಏರಿದ್ದರು ಎಂದು ಮೂಲಗಳು ತಿಳಿಸಿವೆ.
ಈ ಹಿನ್ನೆಲೆಯಲ್ಲಿ ಬೆಸತ್ತ ಶೇಖರಪ್ಪ ಅವರು ತಮ್ಮ ಗುಂಪಿನೊಂದಿಗೆ ಸೋಮವಾರ ಏಕಾಏಕಿ ದಾಳಿ ಮಾಡಿ ಪ್ರಕಾಶ್ ಮತ್ತು ಸಹೋದರರನ್ನು ಮನಬಂದಂತೆ ಮಾರಕಾಸ್ತ್ರಗಳಿಂದ ಕೊಲೆ ಮಾಡಿ ಪರಾರಿಯಾಗಿರಬಹುದೆಂದು ಪೊಲೀಸ್ ಮೂಲಗಳು ತಿಳಿಸಿವೆ. ಒಂದೇ ಕುಟುಂಬದ ಮೂವರು ಸಹೋದರರು ಭೀಕರವಾಗಿ ಕೊಲೆಯಾಗಿರುವುದು ಇಡೀ ಗ್ರಾಮವನ್ನೇ ಬೆಚ್ಚಿಬಿಳಿಸಿದ್ದು, ಗ್ರಾಮದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ.
ಮೃತ ಕುಟುಂಬದ ಆಕ್ರಂದನ: ಗ್ರಾಮದಲ್ಲಿ ನಿರವ ಮೌನ ಮನೆಮಾಡಿದ್ದರೆ, ಒಂದೇ ಬಳ್ಳಿಯ ಮೂರು ಕುಡಿಗಳನ್ನು ಕಳಕೊಂಡ ಕುಟುಂಬದ ರೋಧನ
ಮುಗಿಲುಮುಟ್ಟಿದೆ. ತಮ್ಮ ಗಂಡಂದಿರನ್ನು ಕಳೆದುಕೊಂಡ ಮಹಿಳೆಯರ ಆಕ್ರಂದನ ಹೇಳತೀರದು. ನಮ್ಮನ್ನು- ಮಕ್ಕಳನ್ನು ತಬ್ಬಲಿಗಳನ್ನಾಗಿ ಮಾಡಿ ಹೋದಿರಲ್ಲ ಎಂಬ ಕೂಗು ಮನಕಲಕುವಂತಿತ್ತು.
ಸೂಕ್ತ ರಕ್ಷಣೆ: ಸ್ಥಳಕ್ಕೆ ಆಗಮಿಸಿದ ಹೊಳೆಹೊನ್ನೂರು ಠಾಣೆ ಪೊಲೀಸರು ಗ್ರಾಮದ ಸುತ್ತ ವ್ಯಾಪಕ ಕಟ್ಟೆಚ್ಚರ ವಹಿಸಿದ್ದಾರೆ. ಅಲ್ಲದೇ, ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಕೌಶಲೇಂದ್ರ ಕುಮಾರ್ ಭೇಟಿ ನೀಡಿದರು. ಘಟನೆ ಕುರಿತು ಪ್ರತಿಕ್ರಿಯಿಸಿರುವ ಅವರು ಆರೋಪಿಗಳನ್ನು ಪತ್ತೆ ಮಾಡಲು ಎರಡು ತಂಡಗಳನ್ನು ರಚಿಸಲಾಗಿದೆ. ಕೊಲೆ ಆರೋಪಿಗಳ ಬಗ್ಗೆ ಕೆಲವು ಸುಳಿವು ದೊರೆತಿದ್ದು, ಈ ಕೊಲೆಗೆ ಜಾಗದ ವಿವಾದವೇ ಕಾರಣ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.