ಸರ್ಕಾರಿ ನೌಕರರ ಚುನಾವಣೆ ರಸವತ್ತಾದ ರಾಜಕೀಯ
ಕ.ಪ್ರ.ವಾರ್ತೆ, ಶಿವಮೊಗ್ಗ, ಜು.21
ಸೋಮವಾರ ಸರ್ಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿ ಚುನಾವಣೆ ನಡೆಯುತ್ತಿದ್ದು, ಯಾವುದೇ ರಾಜಕೀಯ ಪಕ್ಷಗಳಿಗಿಂತ ಕಡಿಮೆ ಇಲ್ಲದಂತೆ ಚುನಾವಣೆ ಚಟುವಟಿಕೆ ನಡೆದಿದೆ.
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾಗಬೇಕೆಂದು ಕೆಲವರು ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದು, ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ. ತಮ್ಮ ಸಂಪೂರ್ಣ ಕೌಶಲ್ಯ, ಚಾಕಚಕ್ಯತೆಯನ್ನು ಧಾರೆ ಎರೆದಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಪಾರ್ಟಿಯ ಗಮ್ಮತ್ತು, ಉಡುಗೊರೆಗಳು ಹಂಚಿಕೆ ಒಂದು ಕಡೆಯಾದರೆ, ರಾಜಕೀಯ ಮುಖಂಡರು ಮತದಾರರನ್ನು ಓಲೈಸುತ್ತಿರುವುದು ಇನ್ನೊಂದು ವಿಶೇಷ.
ಬಾರ್ ರಶ್: ಶಿವಮೊಗ್ಗದ ಎಲ್ಲಾ ಬಾರ್ಗಳು ಭಾನುವಾರ ಫುಲ್ ರಶ್. ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಯೊಬ್ಬರೇ ಹೇಳುವಂತೆ, ಸರ್ಕಾರಿ ನೌಕರರ ಸಂಘದ ಚುನಾವಣೆಗೆ ನಿಂತ ಪ್ರಭಾವಿಗಳು ಮತದಾರರನ್ನು ಓಲೈಸಿಕೊಳ್ಳಲು ಗುಂಡು-ತುಂಡಿನ ಪಾರ್ಟಿ ಏರ್ಪಡಿಸಿದ್ದಾರೆ. ಇದೊಂದು ನೈತಿಕ ಚುನಾವಣೆಯೇ ಅಲ್ಲ ಎಂದು ತಿಳಿಸಿದರು.
ವಿಶೇಷವೆಂದರೆ, ಬಾರ್ಗಳ ಹೊರತಾಗಿ ನಗರದ ಪ್ರಮುಖ ಲಾಡ್ಜ್ಗಳಲ್ಲಿ ರೂಂಗಳು ಬಾಡಿಗೆಗೆ ಅಲಭ್ಯ. ತಿಂಗಳ ಮುಂಚಿತವಾಗಿ ಭಾನುವಾರಕ್ಕೆ ಮುಂಗಡ ಬುಕಿಂಗ್ ಆಗಿದ್ದು, ಇಲ್ಲಿ ಪಾರ್ಟಿಗಳಿಗೆ, ಸಭೆಗಳು ನಡೆದವು.
ಆಯಕಟ್ಟಿನ ಸ್ಥಳ: ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸ್ಥಾನವೆಂಬುದು ರಾಜಕೀಯ ಪಕ್ಷಗಳ ಮುಖಂಡರ ಪಾಲಿಗೆ ಆಯಕಟ್ಟಿನ ಸ್ಥಳ. ಇಲ್ಲಿ ತಮ್ಮವರನ್ನು ಗೆಲ್ಲಿಸಿಕೊಂಡರೆ ಮುಂದಿನ ದಿನಗಳಲ್ಲಿ ಉಪಯೋಗವಾಗುತ್ತದೆಂಬ ಕಾರಣಕ್ಕೆ ರಾಜಕೀಯ ತಂತ್ರಗಾರಿಕೆಯನ್ನು ಇಲ್ಲಿ ನಡೆಸಿರುವುದು ಈ ಚುನಾವಣೆಯಲ್ಲಿ ಸ್ಪಷ್ಟವಾಗಿ ಗೋಚರಿಸಿದೆ.
ತಮ್ಮ ಪರವಾದ ಅಭ್ಯರ್ಥಿಗಳನ್ನು ನಿಲ್ಲಿಸುವ ಜೊತೆಗೆ ಎದುರಾಳಿಯ ಶಕ್ತಿಯನ್ನು ದುರ್ಬಲಗೊಳಿಸುವುದು, ಹಣಕಾಸಿನ ನೆರವು, ರಾಜಕೀಯ ಒತ್ತಡ ತಂತ್ರ ಮುಂತಾದ ಚಟುವಟಿಕೆಗಳು ನಡೆದುಹೋಯಿತು.
22ರಂದು ನಡೆಯುವ ಚುನಾವಣೆಯಲ್ಲಿ 42 ಸ್ಥಾನಗಳಿಗೆ 108 ಮಂದಿ ಕಣದಲ್ಲಿದ್ದಾರೆ. 17 ಮಂದಿ ಈಗಾಗಲೇ ಆಯ್ಕೆಯಾಗಿದ್ದಾರೆ. ಒಟ್ಟು 59 ಸ್ಥಾನಗಳಲ್ಲಿ ಗೆಲುವು ಸಾಧಿಸಿದವರು ಅಧ್ಯಕ್ಷರನ್ನು ಆಯ್ಕೆ ಮಾಡುತ್ತಾರೆ. ಹೀಗಾಗಿ ಓಲೈಕೆ ರಾಜಕಾರಣ ಆರಂಭದಿಂದಲೇ ಶುರುವಾಗಿತ್ತು. ಇಬ್ಬರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ ನಂತರ ಅಜ್ಞಾತ ಸ್ಥಳಕ್ಕೆ ತೆರಳಿದ್ದರು. ಇನ್ನೊಬ್ಬರು ನಾಮಪತ್ರ ಸಲ್ಲಿಕೆಗೆ ಅವಕಾಶ ಕೊಡದಂತೆ ತಡೆಯಲಾಗಿತ್ತು. ಇದೀಗ ಅಂತಿಮ ಹಂತದಲ್ಲಿ ತೀರಾ ಹಣಾಹಣಿಯಿಂದ ಕೂಡಿದ್ದು, ಕೊಡುಕೊಳ್ಳುವ ಪ್ರಕ್ರಿಯೆ ಸಹ ನಡೆದಿದೆ.
ಇದೇ ಪರಿಸ್ಥಿತಿಯಲ್ಲಿ ಅರಣ್ಯ ಇಲಾಖೆಯಲ್ಲಿ ಮತದಾರ ಸಿಬ್ಬಂದಿಗೆ ಉಂಬಳೇಬೈಲು ಬಳಿ ಜರ್ಕಿನ್ ಹಂಚಿದ ಪ್ರಸಂಗವೂ ಬೆಳಕಿಗೆ ಬಂದಿದೆ. ಅದೇ ರೀತಿ ಕೆಲವೆಡೆ ಬೇರೆ ಬೇರೆ ಉಡುಗೊರೆ ಮತದಾರನ ಮನೆ ಸೇರಿದೆ. ವಿವಿಧ ಇಲಾಖೆಗಳಲ್ಲಿ ಸರ್ಕಾರಿ ನೌಕರರ ಸಣ್ಣಪುಟ್ಟ ಸಂಘಟನೆಗಳಿದ್ದು, ಅವುಗಳನ್ನು ಓಲೈಸುವ ಚತುರ ಕೆಲಸವೂ ಭಾನುವಾರ ನಡೆಯಿತು. ಪ್ರಮುಖ ರಾಜಕೀಯ ನಾಯಕರು ನೇರವಾಗಿ ಈ ಸಂಘಟನೆಗಳ ಪ್ರಮುಖರಿಗೆ ದೂರವಾಣಿ ಮೂಲಕ ಮಾತನಾಡಿಸಿ, ಇಂತಹವರಿಗೆ ಮತ ನೀಡುವಂತೆ ಒತ್ತಡ ಹೇರಿದ್ದಾರೆ ಎಂದು ಗೊತ್ತಾಗಿದೆ.
ಇಂದು ಮತದಾನ, ಇಂದೇ ಫಲಿತಾಂಶ
ಜು.22ರಂದು ಬೆಳಿಗ್ಗೆ 11ರಿಂದ 4 ಗಂಟೆವರೆಗೆ ಮತದಾನ ಪ್ರಕ್ರಿಯೆ ನಡೆಯಲಿದ್ದು, ಸಂಜೆ 5ಗಂಟೆಯಿಂದ ಮತ ಏಣಿಕೆ ಕಾರ್ಯ ನಡೆಯಲಿದೆ.
ಜಿಲ್ಲಾ ಕಾರ್ಯಕಾರಿ ಸಮಿತಿಗೆ ಒಟ್ಟು 59 ಸ್ಥಾನಗಳಿಗೆ ಚುನಾವಣೆ ನಡೆಯಬೇಕಿದ್ದು, ಈ ಪೈಕಿ 16 ಇಲಾಖೆಗಳ 17 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದಿರುವ 42 ಸ್ಥಾನಗಳ ಚುನಾವಣೆಗೆ 108 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿದ್ದಾರೆ.
ಶಿಕ್ಷಣ ಕ್ಷೇತ್ರಕ್ಕೆ ಸ್ಪರ್ಧಿಗಳ ಆಯ್ಕೆಗೆ ಸಂಬಂಧಿಸಿದಂತೆ ನಗರದ ಕೆಇಬಿ ವೃತ್ತದಲ್ಲಿರುವ ಸರ್ಕಾರಿ ನೌಕರರ ಭವನದಲ್ಲಿ ಪ್ರತ್ಯೇಕವಾದ 3 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಉಳಿದ ಇಲಾಖೆಗಳ ಪ್ರತಿನಿಧಿ ಸ್ಥಾನಗಳಿಗೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಸರ್ಕಾರಿ ನೌಕರರ ಭವನದಲ್ಲಿ ಮತದಾನಕ್ಕೆ ಅಗತ್ಯ ವ್ಯವಸ್ಥೆ ಮಾಡಲಾಗಿದೆ.
ಜಿಲ್ಲೆಯಲ್ಲಿ 25 ಸಾವಿರ ನೋಂದಾಯಿತ ನೌಕರರಿದ್ದಾರೆ. ಶಿವಮೊಗ್ಗ ತಾಲೂಕಿನಲ್ಲಿ ಐಎಎಸ್, ಐಪಿಎಸ್, ಯುಪಿಎಸ್ಸಿ ಹಿರಿಯ ಶ್ರೇಣಿಯ ಅಧಿಕಾರಿಗಳನ್ನು ಹೊರತುಪಡಿಸಿ, ಮಾರ್ಚ್ 20(2013)ರವರೆಗೆ ಸದಸ್ಯತ್ವ ಶುಲ್ಕ ಪಾವತಿಸಿ, ಸದಸ್ಯತ್ವ ಪಡೆದ ಒಟ್ಟು 5,261 ನೌಕರ ಮತದಾರರು ಪ್ರಸಕ್ತ ಚುನಾವಣೆಯಲ್ಲಿ ಮತಚಲಾಯಿಸಲಿದ್ದಾರೆ.
ಮತದಾನದಲ್ಲಿ ಭಾಗವಹಿಸುವ ನೌಕರರ ಅನುಕೂಲಕ್ಕಾಗಿ ಕರ್ತವ್ಯದ ಅವಧಿಯ 2 ಗಂಟೆಗಳ ಕಾಲ ಮತಗಟ್ಟೆಗೆ ತೆರಳಿ ಮತ ಚಲಾಯಿಸಲು ಅನುಮತಿ ನೀಡಲಾಗಿದೆ.
-ಶ್ರೀಕಾಂತ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

