ದಂಡಾವತಿ ಅಣೆಯೂ ಆಗಲಿಲ್ಲ, ಗೋಳೂ ತಪ್ಪಲಿಲ್ಲ
ಕ.ಪ್ರ.ವಾರ್ತೆ,ಸೊರಬ, ಜು. 21
ದಂಡಾವತಿ ಅಣೆಕಟ್ಟು ಯೋಜನೆ ಘೋಷಣೆ ಆದಾಗಿನಿಂದಲೂ ನಿರ್ಮಾಣ ಪ್ರದೇಶವಾದ ಮರೂರು ಗ್ರಾಮ ಒಂದಲ್ಲ ಒಂದು ಸಮಸ್ಯೆಯನ್ನು ಸೆರಗಲ್ಲಿ ಕಟ್ಟಿಕೊಂಡಿದ್ದು, ಪ್ರಸ್ತುತ ಯೋಜನೆಯೂ ಆಗಲಿಲ್ಲ, ಇಲ್ಲಿನ ಜನತೆಯನ್ನು ತಾಲ್ಲೂಕು ಆಡಳಿತವೂ ಸೇರಿದಂತೆ ಪಪಂ ಆಡಳಿತ ಕೂಡ ಅಸ್ಪೃಶ್ಯರಂತೆ ಕಾಣುವುದೂ ತಪ್ಪಲಿಲ್ಲ.
ಸುಮಾರು 65ಕ್ಕೂ ಅಧಿಕ ಕುಟುಂಬಗಳಿರುವ ಇಲ್ಲಿಗೆ ಈ ಆಡಳಿತಗಳು ಯಾವುದೆ ನಾಗರೀಕ ಸೌಲಭ್ಯಗಳನ್ನು ತಲುಪಿಸುವ ಗೋಜಿಗೆ ಹೋಗದ ಕಾರಣ ಪಟ್ಟಣಕ್ಕೆ ತಾಗಿಕೊಂಡಿರುವ ಗ್ರಾಮವಾಗಿದ್ದೂ ಮೂಲ ಸೌಲಭ್ಯಗಳಿಂದ ವಂಚಿತಗೊಂಡಿದೆ.
ರಸ್ತೆಯೂ ಇಲ್ಲ: ಗ್ರಾಮಕ್ಕೆ ತಲುಪಲು ಸಮರ್ಪಕ ರಸ್ತೆ ಅವ್ಯವಸ್ಥೆಯೂ ಸೇರಿದಂತೆ ನೀರು ಮೂಲಗಳ ದುರಸ್ಥಿಗೂ ಆಡಳಿತ ಮುಂದಾಗದೆ, ಇಲ್ಲದ ಸಬೂಬು ಹೇಳಿ ಸಾಮಾನ್ಯ ಜನರನ್ನು ವಂಚಿಸುತ್ತಿದೆ ಎಂಬ ಆರೋಪ ಗ್ರಾಮಸ್ಥರಿಂದ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಪ್ರಮುಖ ಕೆರೆಯೊಂದು ತನ್ನ ಅಂತಿಮ ದಿನಗಳನ್ನು ಎಣಿಸುವಂತಾಗಿದೆ.
ಇಲ್ಲಿನ ಜೋಡಿಕೆರೆ ಸ್ವಾರ್ಥ ಲಾಲಸೆಯಿಂದಾಗಿ ಶಿಥಿಲಗೊಂಡಿದ್ದು, ಇನ್ನು ಕೆಲವೆ ದಿನಗಳಲ್ಲಿ ಸಂಪೂರ್ಣ ಛಿದ್ರಗೊಳ್ಳಲಿದೆ. ಕೆರೆಯ ಕೆಳಗಿನ ಜಮೀನೊಂದರ ಮಾಲಿಕ ತನ್ನ ಜಮೀನು ಜವುಳಾಗುತ್ತದೆ ಎಂದು ಕೋಡಿ ನೀರನ್ನು ತಡೆಹಿಡಿದ ಕಾರಣ ಕೆರೆ ಏರಿ ಶಿಥಿಲಗೊಂಡು, ಕುಸಿಯುವ ಹಂತದಲ್ಲಿದೆ. ಇದರ ದುರಸ್ಥಿಗಾಗಿ ಒಂದೆರಡು ವರ್ಷಗಳಿಂದಲೂ ಹಲವಾರು ಬಾರಿ ಇಲಾಖೆಗಳ ಎಡತಾಕಿದ ಗ್ರಾಮಸ್ಥರಿಗೆ ಯಾವೊಂದು ಪರಿಹಾರವೂ ದೊರೆತಿಲ್ಲ. ಯಾವ ಇಲಾಖೆಗೆ ಕೇಳಿದರೂ ಇದು ನಮ್ಮ ಇಲಾಖೆ ವ್ಯಾಪ್ತಿಯಲಿಲ್ಲ ಎಂಬ ಉತ್ತರ ನೀಡುತ್ತಿದ್ದು, ಈ ಕೆರೆ ಯಾರದ್ದು ಎಂಬ ಪ್ರಶ್ನೆ ಇಲ್ಲಿನವರಿಗೆ ಕಾಡಲಾರಂಭಿಸಿದೆ.
ವಿನಾಶದತ್ತ ಕೆರೆ: ಕೆರೆಯ ಶಿಥಿಲದಿಂದ ಒಂದೆಡೆ ಕೆರೆ ನಾಶಗೊಳ್ಳುತ್ತದೆ ಎಂಬ ಆತಂಕ, ಇತ್ತ ಹೆಚ್ಚಾದ ನೀರು ರಸ್ತೆಗೆ ನುಗ್ಗಿ ಇರುವ ಸಾಮಾನ್ಯ ರಸ್ತೆ ಸಂಚಾರಕ್ಕೆ ಸಹ ಯೋಗ್ಯವಾಗಿಲ್ಲದಿರುವುದು ಬಹು ದೊಡ್ಡ ತಲೆ ನೋವಾಗಿದೆ. ಸಾಲದೆಂಬಂತೆ ಇಲ್ಲಿಂದಲೆ ಮೀನುಗಾರಿಕೆ ಇಲಾಖೆ, ಶ್ರೀ ಗಂಧದ ಕಾಂಪ್ಲೆಕ್ಸ್ ಮತ್ತು ಸಾಗರ ಬೈಪಾಸ್ ರಸ್ತೆಗೆ ಹೋಗಬೇಕು. ಈ ಇಲಾಖೆಗಳ ಕಚೇರಿ ತಲುಪಲು ಕೆರೆ ಕೋಡಿಯೊಂದರ ಭಾಗದಲ್ಲಿ ತೆರಳಬೇಕಿದ್ದು, ಕೋಡಿ ಹುಗಿದು ರಸ್ತೆ ಮಾಡಲಾಗಿದೆ.
ಆದರೆ ಕೋಡಿ ನೀರು ಸಮರ್ಪಕ ಹರಿಯುವಂತೆ ಪೈಪ್ ಅಳವಡಿಸದ ಕಾರಣ ಕೆರೆಯ ಏರಿಗೆ ಇನ್ನಷ್ಟು ಒತ್ಚಡ ಜಾಸ್ತಿಯಾಗಿದೆ. ಈ ಕಚೇರಿಗಳ ಎದುರಿನ ರಸ್ಚೆ ಚರಂಡಿ ದುರಸ್ಥಿಯಾಗದ ಕಾರಣ ರಸ್ತೆಗೆ ನೀರು ನುಗ್ಗಿ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಅತ್ತ ಗ್ರಾಮದಲ್ಸಿ ಕುಡಿಯುವ ನೀರಿಗೆ ಹಾಹಾಕಾರ, ವಿದ್ಯುತ್, ದೂರವಾಣಿ ಸಮಸ್ಯೆ, ಸರ್ಕಾರದ ಸಾಮಾನ್ಯ ಯೋಜನಾ ಸೌಲಭ್ಯ ಜನತೆಗೆ ತಲುಪುತ್ತಿಲ್ಲ. ಹಾಗಾಗಿ ವಿದ್ಯಾರ್ಥಿಗಳೂ ಸೇರಿದಂತೆ ಗ್ರಾಮದ ಜನತೆ ಒಂದು ರೀತಿಯಲ್ಲಿ ಅಸ್ಪೃಶ್ಯರಂತಾಗಿದ್ದು, ಇವರ ನೋವು, ದುಗುಡ, ದುಮ್ಮಾನಗಳಿಗೆ ಕಿಂಚಿತ್ ಬೆಲೆಯೂ ಇಲ್ಲದಂತಾಗಿದೆ.
ತಾತ್ಸಾರ: ಈ ಹಿಂದಿನ ಶಾಸಕರು ದಂಡಾವತಿ ಯೋಜನೆಯಿಂದ ಹೇಗೂ ಮುಳುಗಡೆ ಆಗುತ್ತದೆ ಎಂದು ತಾತ್ಸಾರ ಮಾಡಿದ್ದರು. ಈಗಿನ ಶಾಸಕರಾದರೂ ಜನತೆಯ ಪರಿಸ್ಥಿತಿ ಅರಿತು ನೆರವು ನೀಡಿಯಾರೆ ಎಂದು ತಾಳ್ಮೆ ವಹಿಸಿರುವ ಗ್ರಾಮಸ್ಥರು ಮತ್ತೊಮ್ಮೆ ಅಂತಿಮವಾಗಿ ತಹಶೀಲ್ದಾರರ ಹಾಗೂ ಜಿಪಂ ಎಇಇ ಮೂಲಕ ಮನವಿ ಸಲ್ಲಿಸಿದ್ದಾರೆ.
ಹಲಸು ಸೇವನೆ: 4 ಹಸುಗಳ ಸಾವು
ಶಿವಮೊಗ್ಗ: ತಾಲೂಕಿನ ಹುಂಚದಕಟ್ಟೆಯ ಕೆಸರೆ ಗ್ರಾಮದಲ್ಲಿ ತೋಟಕ್ಕೆ ಬಂದ ಹಸುಗಳಿಗೆ ಹಲಸಿನಹಣ್ಣಿನಲ್ಲಿ ವಿಷ ಹಾಕಿದ್ದರಿಂದ ಇದೇ ಗ್ರಾಮದ ಕೊಲಪ್ಪಗೌಡರ ನಾಲ್ಕು ಹಸುಗಳು ಮೃತಪಟ್ಟಿವೆ. ನೆರೆಯ ತೋಟಗಳಿಗೆ ಯಾವುದೇ ಬೇಲಿ ಇರಲಿಲ್ಲ. ಹಾಗಾಗಿ ಸಾಮಾನ್ಯವಾಗಿ ಹಸುಗಳು ತೋಟಕ್ಕೆ ಹೋಗುತ್ತಿದ್ದವು. ಈ ಬಗ್ಗೆ ನೆರೆಯ ತೋಟದ ಮಾಲೀಕರು ನಮಗೆ ಯಾವುದೇ ಮಾಹಿತಿ ನೀಡದೆ ಏಕಾಏಕಿ ಹಸುಗಳಿಗೆ ಹಣ್ಣಿನಲ್ಲಿ ವಿಷ ಹಾಕಿ ಸಾಯಿಸಿದ್ದಾರೆ. ಈ ಸಂಬಂಧ ಪೊಲೀಸರಿಗೆ ದೂರು ದಾಖಲಿಸಲಾಗಿದೆ ಎಂದು ಕೊಲಪ್ಪಗೌಡರ ಮಗ ಪ್ರಕಾಶ್ ತಿಳಿಸಿದ್ದಾರೆ.
ಭದ್ರಾವತಿ ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಇಮ್ರಾನ್ ಖಾನ್
ಭದ್ರಾವತಿ: ಭದ್ರಾವತಿ ತಾಲೂಕು ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ ಇಮ್ರಾನ್ ಖಾನ್ ಅವರು ನೇಮಕಗೊಂಡಿದ್ದಾರೆ. ತಮ್ಮನ್ನು ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷರನ್ನಾಗಿ ನೇಮಿಸಿರುವುದಕ್ಕಾಗಿ ಮಾಜಿ ಕೇಂದ್ರ ಸಚಿವರಾದ ಸಿ.ಎಂ. ಇಬ್ರಾಹಿಂ, ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ರಿಜ್ವಾನಿ ಅರ್ಷದ್ ಅವರಿಗೆ ಕೃತಜ್ಞೆತೆಗಳನ್ನು ಅರ್ಪಿಸಿದ್ದಾರೆ.
-ಶ್ರೀಪಾದ ಬಿಚ್ಚುಗತ್ತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

