ಶಿವಮೊಗ್ಗ

ನದಿಗುಂಟ ಸೇತುವೆಯೋ? ನದಿಗೆ ಅಡ್ಡ ಸೇತುವೆಯೋ?

Published On :

ಕ.ಪ್ರ.ವಾರ್ತೆ, ಶಿವಮೊಗ್ಗ, ಜು.24
ಪದೇಪದೇ ಜನರ ಮೂಗಿಗೆ ತುಪ್ಪ ಹಚ್ಚುವ ಎಲೆಕ್ಷನ್ ಸೇತುವೆ ಬೇಕೋ? ಕಡಿಮೆ ವೆಚ್ಚದ, ಬೇಗ ಕಾಮಗಾರಿ ಮುಗಿಯುವ ಜನರ ಸೇತುವೆ ಬೇಕೋ? ಹೀಗೊಂದು ಚರ್ಚೆ ಸಾಗರ ತಾಲೂಕಿನ ಹಿನ್ನೀರಿನ ಜನರ ನಡುವೆ ಜಿಜ್ಞಾಸೆ ಶುರುವಾಗಿದೆ.
ಒಂದೆಡೆ ಅಗಾಧ ವೆಚ್ಚದ, ವರ್ಷಗಳುರುಳಿದರೂ ನಿರ್ಮಾಣ ಅಸಾಧ್ಯ ಎಂಬ ಭಾವನೆ ಇರುವ, ಆದರೆ ಈಗಾಗಲೇ ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಅನುಮೋದನೆ ದೊರೆತಿರುವ ಅಂಬಾರಗೋಡ್ಲು- ಕಳಸವಳ್ಳಿ ಮಾರ್ಗ. ಇನ್ನೊಂದೆಡೆ ಜನರೇ ಗುರುತಿಸಿರುವ ಅಂಬಾರಗೋಡ್ಲು- ಹರದೂರು ಮಾರ್ಗ. ಯಾವುದು ಸೂಕ್ತ ಈ ಎರಡು ಸೇತುವೆಗಳಲ್ಲಿ ಎಂಬ ಬಗ್ಗೆ ಬಿರುಸಿನ ಚರ್ಚೆ ಸಾಗಿದೆ.
ಅಂಬಾರಗೋಡ್ಲು- ಕಳಸವಳ್ಳಿ ಸೇತುವೆಯು ಎಲಕ್ಷನ್ ಸೇತುವೆ ಎಂದೇ ಪ್ರಸಿದ್ಧಿ. ಚುನಾವಣೆ ಸಂದರ್ಭದಲ್ಲಿ ಭಾರಿ ಗದ್ದಲಕ್ಕೆ ಕಾರಣವಾಗಿ, ನಂತರ ತಣ್ಣಗಾಗುವ ವಿವಾದವಿದು. ಈ ಸೇತುವೆ ನಿರ್ಮಾಣ ಖಂಡಿತಾ ಮಾಡುತ್ತೇನೆಂದು ರಕ್ತದಲ್ಲಿ ಬರೆದುಕೊಡುತ್ತೇನೆ ಎಂದು ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಹೇಳಿದರು.
ಮೊದಲು 65 ಕೋಟಿ ಎಂದು ಅಂದಾಜಿಸಲಾಗಿದ್ದ ವೆಚ್ಚವು ನಂತರ 164.53 ಕೋಟಿಗೆ ಏರಿಕೆಯಾಗಿತ್ತು. ಈಗ ಪ್ರಕ್ರಿಯೆ ಆಮೆಗತಿಯಲ್ಲಿ ಸಾಗುತ್ತಿರುವುದನ್ನು ನೋಡಿದರೆ ಇನ್ನೊಂದಿಷ್ಟು ನೂರು ಕೋಟಿಗಳು ಈ ಸೇತುವೆಗೆ ಬೇಕಾಗಬಹುದೇನೋ. ಈ ಸೇತುವೆ ನಿರ್ಮಾಣವಾದರೆ ದೇಶದ ಅತ್ಯಂತ ಉದ್ದದ ಸೇತುವೆಗಳಲ್ಲಿ ಒಂದಾಗಲಿದೆ. 2.4 ಕಿ.ಮೀ. ಉದ್ದಕ್ಕೆ ಈ ಸೇತುವೆ ಸಾಗಬೇಕಾಗುತ್ತದೆ.
ಅಡ್ಡಿಗಳೇನು?: ಯಾವ ಸೇತುವೆಯಾದರೂ ಪರವಾಗಿಲ್ಲ. ನಾಡಿಗೆ ಬೆಳಕು ನೀಡಲು ತ್ಯಾಗ ಮಾಡಿದ ಜನರಿಗೆ ಸೇತುವೆ ಆದರೆ ಸಾಕು ಎಂದು ಮಲೆನಾಡ ಜನರು ಅಂಬಾರಗೋಡ್ಲು- ಕಳಸವಳ್ಳಿ ಸೇತುವೆಗೆ, ಇದನ್ನು ಮಾಡುತ್ತೇನೆ ಎಂದು ಕಂಕಣತೊಟ್ಟ ಯಡಿಯೂರಪ್ಪರ ಉತ್ಸಾಹಕ್ಕೆ ಪಕ್ಷಬೇಧ ಮರೆತು ಜೈ ಎಂದರು. ಆಡಳಿತಾತ್ಮಕ ಅನುಮೋದನೆ ಸಿಗುವ ಮೊದಲೇ ಶಂಕುಸ್ಥಾಪನೆಯೂ ಆಯಿತು. ಸಮೀಕ್ಷೆಯೂ ನಡೆಯಿತು.
ಆದರೆ, ಈ ಸೇತುವೆ ನಿರ್ಮಾಣ ಕಷ್ಟಸಾಧ್ಯ ಎನ್ನುವುದು ಕಂಕಣ ತೊಟ್ಟವರಿಗೆ ಅರಿವಾಗುತ್ತಾ ಹೋಯಿತು. ಆದರೂ ಅದನ್ನು ಕೈಬಿಡುವುದು ಪ್ರತಿಷ್ಠೆಗೆ ಪೆಟ್ಟು. ಆದ್ದರಿಂದ ಈ ಸೇತುವೆ ಕನಸನ್ನು ಜನರ ಮನಸಲ್ಲಿ ಬಿತ್ತುತ್ತಾ ಹೋದರು.
ಮೊದಲ ಅಡ್ಡಿಯೇ ವೆಚ್ಚದ ಅಗಾಧತೆ. ನೂರೈವತ್ತು ಕೋಟಿಯೂ ಸಾಕಾಗುವುದಿಲ್ಲ ಎಂಬ ಪರಿಸ್ಥಿತಿ ಇದೆ. ಕಳಸವಳ್ಳಿ ಹಾಗೂ ಅಂಬಾರಗೋಡ್ಲು ನಡುವೆ ನೀರು ನಿಂತಿರುವ ಜಾಗದಲ್ಲಿ ಭೂಮಿ ಆಳದಲ್ಲಿದೆ. ಸಡಿಲ ಮಣ್ಣು. ಕೇವಲ ಮಾನವೀಯತೆಯ ದೃಷ್ಟಿಯಿಂದ ಇಷ್ಟು ಅಗಾಧ ಮೊತ್ತವನ್ನು ಒಂದೇ ಒಂದು ಸೇತುವೆಗೆ ರಾಜ್ಯ ಸರ್ಕಾರ ವಿನಿಯೋಗಿಸುತ್ತದೆಯೇ ಎಂಬ ಅನುಮಾನ ಈಗ ಜನರಲ್ಲಿ ಮೂಡಿದೆ.
ಆದರೂ- ಈ ಸೇತುವೆ ಹೈವೆಗೆ ಸುಲಭ ಕನೆಕ್ಷನ್ ಕಣ್ರೀ- ಅಂತಾ ಹೇಳುವವರೇನೂ ಕಡಿಮೆ ಇಲ್ಲ. ಈ ಕನೆಕ್ಷನ್ ಕಡಿಮೆ ಖರ್ಚಿನಲ್ಲಿ ಆದ್ರೆ ಏನಂತೆ- ಎಂದು ಕೇಳುವವರಿಗೆ ಅವರು ಉತ್ತರಿಸೋಲ್ಲ.
ಪಯಾರ್ಯ ಮಾರ್ಗ: ಜನರೇ ಗುರುತಿಸಿರುವ ಅಂಬಾರಗೋಡ್ಲು- ಹರದೂರು ಮಾರ್ಗ ಇವತ್ತಿನ ಚಿಂತನೆ ಏನಲ್ಲ. ಹಾಲಿ ಸ್ಪೀಕರ್ ಆಗಿರುವ ಕಾಗೋಡು ತಿಮ್ಮಪ್ಪ ಅವರು 1991ರಲ್ಲಿ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರಾಗಿದ್ದಾಗ ಈ ಜಾಗಕ್ಕೆ ಭೇಟಿ ನೀಡಿದ್ದರು. ಇಲ್ಲಿ ಸೇತುವೆ ನಿರ್ಮಾಣ ಆಗಬೇಕಿರುವುದು 900 ಮೀ. ಮಾತ್ರ. ಲಿಂಗನಮಕ್ಕಿ ಅಣೇಕಟ್ಟು ನಿರ್ಮಾಣಕ್ಕೆ ಮುನ್ನ ಈ ಮಾರ್ಗದಲ್ಲಿ ಸಾಗರ- ಭಟ್ಕಳ ರಸ್ತೆ ಸಾಗುತ್ತಿತ್ತು. ಆಳ ಕಡಿಮೆ ಇರುವ ಕಾರಣ ಲಾಂಚ್ ಬರುವುದಕ್ಕಿಂತ ಮುಂಚೆ ಜನರು ಈ ಮಾರ್ಗದಲ್ಲಿಯೇ ತೆಪ್ಪದ ಮೂಲಕ ದಾಟುತ್ತಿದ್ದರು.
ಜನರೇ ಕಂಡುಕೊಂಡಿರುವಂತೆ ಈ 900 ಮೀ. ದೂರದಲ್ಲಿ ಸಿಗುವ ಗರಿಷ್ಠ ಆಳ 70 ಅಡಿ. ಇದು ಕೇವಲ 25 ಮೀ. ಅಗಲವಿದೆ. ಇದು ಮಳುಗಡೆಯಾಗಿರುವ ಶರಾವತಿ ನದಿಯ ಪಾತ್ರ. ಅಂದರೆ ಸೇತುವೆ ನದಿಯ ಅಡ್ಡ ಸಾಗುತ್ತದೆ.
ಆದರೆ, ಅಂಬಾರಗೋಡ್ಲು- ಕಳಸವಳ್ಳಿ ಬಳಿ ಈಗ ಸೇತುವೆ ನಿರ್ಮಿಸಲು ಉದ್ದೇಶಿಸಿರುವ ಜಾಗ ಸಂಪೂರ್ಣವಾಗಿ ಶರಾವತಿ ನದಿಯ ಪಾತ್ರ. ಅಂದರೆ ನದಿ ಸಾಗುವ ಮಾರ್ಗದಲ್ಲಿಯೇ 2.4 ಕಿ.ಮೀ. ಉದ್ದದ ಸೇತುವೆ ಸಾಗಿ ಎರಡು ತುದಿಗಳನ್ನು ಸಂಪರ್ಕಿಸುತ್ತದೆ. ಹಾಗಾಗಿ ಅಂಬಾರಗೋಡ್ಲು- ಹರದೂರು ಸೇತುವೆಗೆ ಹೆಚ್ಚು ವೆಚ್ಚ ಬೇಡ ಎನ್ನುವುದು ಮೇಲ್ನೋಟಕ್ಕೇ ಗೊತ್ತಾಗುತ್ತದೆ ಎನ್ನುತ್ತಾರೆ ಹಿನ್ನೀರಿನ ಜನರು.
ಆದರೆ, ಜನಪ್ರತಿನಿಧಿಗಳು ಈಗಾಗಲೇ ಬಜೆಟ್‌ನಲ್ಲಿ ಘೋಷಿಸಿ, ಆಡಳಿತಾತ್ಮಕ-ತಾಂತ್ರಿಕ ಅನುಮೋದನೆ ದೊರಕಿಸುವ ಯೋಜನೆ ಬಿಟ್ಟು ಹೊಸ ಯೋಜನೆ ಪ್ರಸ್ತಾಪಿಸಿದರೆ ಮತ್ತೆಷ್ಟು ವಿಳಂಬವಾಗುತ್ತದೆಯೋ ಎಂಬ ಕಾರಣದಿಂದ ಮೀನಾಮೇಷ ಮಾಡುತ್ತಿದ್ದಾರೆ. ಜನರಿಗೆ ಅನುಕೂಲವಾಗುವುದಾದರೆ, ಬೇಗ ಕಾಮಗಾರಿ ಮುಗಿಯುವುದಾದರೆ ಪರ್ಯಾಯ ಆಲೋಚನೆಯಲ್ಲಿ ತಪ್ಪೇನು ಹಿನ್ನೀರ ಜನರೇನು ಸೇತುವೆ ಇಲ್ಲೇ ಆಗಲಿ, ಅಲ್ಲೇ ಆಗಲಿ ಎಂದು ಪಟ್ಟು ಹಿಡಿಯುತ್ತಿಲ್ಲ, ಎಲ್ಲೇ ಆದರೂ ಬೇಗ ಆಗಲಿ ಎನ್ನುತ್ತಿದ್ದಾರೆ. ಇದನ್ನು ಜನಪ್ರತಿನಿಧಿಗಳು ಸಾವಧಾನದಿಂದ ಪರಿಶೀಲಿಸಬೇಕಿದೆ. ತುಮರಿ ವ್ಯಾಪ್ತಿಯ ತಾ.ಪಂ. ಸದಸ್ಯ ಹರೀಶ್ ಗಂಟೆ, ಪ್ರವಾಸೋದ್ಯಮಕ್ಕೆ ಪೂರಕವಾಗಿ ಕಳಸವಳ್ಳಿ- ಅಂಬಾರಗೋಡ್ಲು ನಡುವೆ ಲಾಂಚ್ ಸಂಚಾರವನ್ನು ಸರ್ಕಾರ ಮುಂದುವರಿಸಲಿ. ಆದರೆ, ಅಂಬಾರಗೋಡ್ಲು- ಹರದೂರು ನಡುವೆ ಸೇತುವೆ ನಿರ್ಮಾಣಕ್ಕೆ ಚಿಂತಿಸಲಿ ಎಂದು -ಕನ್ನಡಪ್ರಭ-ಕ್ಕೆ ಪ್ರತಿಕ್ರಿಯಿಸಿದ್ದಾರೆ.
-ಹೊನ್ನಾಳಿ ಚಂದ್ರಶೇಖರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.