ಶಿವಮೊಗ್ಗ

ಅಡಕೆಗೆ ಕೊಳೆ ರೋಗ: ಕಂಗಾಲಾದ ಬೆಳೆಗಾರ

Published On :

ಶಿವಮೊಗ್ಗ: ರಾಜ್ಯದಲ್ಲಿ ಗುಟ್ಕಾ ನಿಷೇಧದ ನಂತರ ಅಡಕೆಯ ಬೆಲೆ ಕುಸಿಯುವ ಆತಂಕದಲ್ಲೇ ದಿನದೂಡಿದ್ದ ಮಲೆನಾಡಿನ ಅಡಕೆ ಬೆಳೆಗಾರನಿಗೆ ಈಗ ದೀರ್ಘಕಾಲೀನ ಮಳೆ ಪೆಟ್ಟುಕೊಟ್ಟಿದ್ದು, ಕೊಳೆರೋಗವೆಂಬ ಗುಮ್ಮ ಹೆಗಲೇರಿ ಕುಳಿತಿದೆ
 ಮಲೆನಾಡಿನ ವ್ಯಾಪ್ತಿಯಲ್ಲಿ ಕೊಳೆ ರೋಗ ಗಂಭೀರವಾಗಿ ಅಡಕೆ ತೋಟಗಳನ್ನು ಆವರಿಸಿದ್ದು, ಭವಿಷ್ಯದ ದಿನಗಳನ್ನು ನೆನೆದು ಅಡಕೆ ಬೆಳೆಗಾರ ಆತಂಕಿತನಾಗಿದ್ದಾನೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೊಳೆ ರೋಗ ನಿಯಂತ್ರಣಕ್ಕಿರುವ ಅವಕಾಶಗಳನ್ನೂ ಬೆಳೆಗಾರ ಕಳೆದುಕೊಂಡಿದ್ದಾನೆ.
ಫಸಲು ಖೋತಾ: ಹಿರಿಯ ಅಡಕೆ ಬೆಳೆಗಾರರ ಪ್ರಕಾರ ಈಗಾಗಲೇ ಶೇ.35ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಫಸಲು ಖೋತಾ ಆಗಲಿದ್ದು, ಮಳೆ ಮುಂದುವರಿದರೆ ಫಸಲು ನಷ್ಟದ ಪ್ರಮಾಣ ಶೇ.50 ಮುಟ್ಟಿದರೂ ಆಶ್ಚರ್ಯವಿಲ್ಲ. ಒಂದು ಮಾಹಿತಿಯ ಪ್ರಕಾರ ಜಿಲ್ಲೆಯಲ್ಲಿ 43 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ಇದ್ದು, ಶೇ.70ಕ್ಕಿಂತ ಹೆಚ್ಚು ಪ್ರದೇಶಕ್ಕೆ ಕೊಳೆರೋಗ ಆವರಿಸಿದೆ.
 ಮಳೆಗಾಲದಲ್ಲಿ ಅಡಕೆ ಮರಕ್ಕೆ ಫಂಗಸ್ ತಗುಲಿ ಕೊಳೆ ರೋಗ ಹರಡಿಕೊಳ್ಳುತ್ತದೆ. ಇದರಿಂದ ಅಡಕೆ ಕೊನೆಯಿಂದ ಅಡಕೆ ಉದುರಲಾರಂಭಿಸುತ್ತದೆ. ಹೀಗಾಗಿ ಅಡಕೆ ಮರಕ್ಕೆ ಮೇ ಅಂತ್ಯ, ಜೂನ್ 15ರೊಳಗಾಗಿ ಕೊಳೆ ನಿಯಂತ್ರಕಗಳನ್ನು ಸಿಂಪಡಿಸಲಾಗುತ್ತಿತ್ತು. ಜುಲೈ ಅಂತ್ಯದೊಳಗೆ ಹಲವು ಕಡೆ ಎರಡು ಸುತ್ತಿನ ಕೊಳೆ ನಿಯಂತ್ರಕಗಳನ್ನು ಸಿಂಪಡಿಸಲಾಗುತ್ತಿತ್ತು.
ನಿರಂತರ ಮಳೆ: ಆದರೆ, ಮಲೆನಾಡಿನ ಗ್ರಾಮೀಣ ಭಾಗದ ಅನೇಕ ಕಡೆಗಳಲ್ಲಿ ರೈತರು ಇನ್ನೂ ಒಂದು ಸುತ್ತಿನ ಕೊಳೆ ನಿಯಂತ್ರಕಗಳನ್ನೇ ಸಿಂಪಡಿಸಲು ಸಾದ್ಯವಾಗಿಲ್ಲ. ಕೆಲವು ಕಡೆಗಳಲ್ಲಷ್ಟೇ ಒಂದು ಸುತ್ತಿನಲ್ಲಿ ಮಾತ್ರ ನಿಯಂತ್ರಕಗಳನ್ನು ಸಿಂಪಡಿಸಿದ್ದಾರೆ. ಜುಲೈ ಆರಂಭದಿಂದ ಪ್ರತಿ ದಿನವೂ ಮಳೆ ಸುರಿಯುತ್ತಲೇ ಇರುವ ಕೊಳೆ ನಿಯಂತ್ರಕ ಸಿಂಪಡಿಸಲು ಸಾದ್ಯವಾಗಿಲ್ಲ. ಮಳೆಗಾಲದ ನಡುವೆಯೇ ಮಳೆ ಕಡಿಮೆಯಾದ ಸಂದರ್ಭ ಬಳಸಿಕೊಂಡು ನಿಯಂತ್ರಕವನ್ನು ಸಿಂಪಡಿಸಬೇಕು. ಆದರೆ, ಮಳೆ ಬ್ರೇಕ್ ತೆಗೆದುಕೊಳ್ಳದೇ ನಿರಂತರವಾಗಿ ಸುರಿಯುತ್ತಿರುವುದು ಹಾಗೂ ಮಳೆಯ ಪ್ರಮಾಣ ಗಂಭೀರವಾಗಿರುವ ಕಾರಣ ಬೆಳೆಗಾರರ ಆತಂಕಕ್ಕೆ ಒಳಗಾಗಿದ್ದಾನೆ.
 ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮೇಲೆ ಕೊಳೆ ರೋಗ ಗಂಭೀರ ಸ್ವರೂಪದಲ್ಲಿ ದಾಂಗುಡಿ ಇಟ್ಟಿದೆ. ತಾಲೂಕಿನ ಎಲ್ಲಾ ಹೋಬಳಿಯಲ್ಲೂ ಕೊಳೆ ರೋಗದ ಅಬ್ಬರ ಹೆಚ್ಚಾಗಿದೆ. ಅದೇ ರೀತಿ ಯಾವುದೇ ಮೂಲೆಗೆ ತೆರಳಿದರೂ ಅಲ್ಲಿ ಅಡಕೆ ಕೊಳೆರೋಗದ್ದೇ ಮಾತು. ಬಿಟ್ಟೂ ಬಿಡದ ಹಾಗೆ ಸಂಪೂರ್ಣವಾಗಿ ಕೊಳೆ ಆವರಿಸಿಕೊಂಡಿದ್ದು, ಅಡಕೆ ಕಾಯಿ ಉದುರಲು ಆರಂಭವಾಗಿದೆ. ಅದೇ ರೀತಿ ಹೊಸನಗರ ತಾಲೂಕಿನಲ್ಲಿ ಕೊಳೆರೋಗ ದೊಡ್ಡ ಮಟ್ಟದಲ್ಲಿ ವಿಸ್ತರಿಸಿದೆ. ಸಾಗರ ತಾಲೂಕಿಗೂ ಹಬ್ಬಿದೆ. ನೆರೆಯ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಕೊಪ್ಪ ವ್ಯಾಪ್ತಿಯಲ್ಲೂ ಕೊಳೆ ಸಮಸ್ಯೆ ತೀವ್ರವಾಗಿದೆ.
ರೈತರಲ್ಲಿ ಆತಂಕ: ಹಿರಿಯ ಅಡಕೆ ಕೃಷಿಕ ಸುಬ್ರಹ್ಮಣ್ಯ ಹೇಳುವಂತೆ ಆಗುಂಬೆ ಭಾಗದಲ್ಲಿ, ಶೇ.40ರಿಂದ 50ರಷ್ಟು ಅಡಕೆ ಫಸಲು ಸಿಕ್ಕರೆ ಅದೇ ಭಾಗ್ಯ. ಕೊಳೆ ರೋಗ ಪೂರ್ಣ ಪ್ರಮಾಣದಲ್ಲಿ ವ್ಯಾಪಿಸಿದ್ದು, ಉತ್ತಮ ಫಸಲಿನ ಆಸೆ ಬಿಟ್ಟಿದ್ದೇವೆ ಎಂದು ಅಭಿಪ್ರಾಯಪಡುತ್ತಾರೆ.
 ಮಲೆನಾಡು ಅಡಕೆ ಬೆಳೆಗಾರರ ಹೋರಾಟ ಸಂಘದ ಅಧ್ಯಕ್ಷ ಬಿ.ಎ.ರಮೇಶ್ ಹೆಗ್ಡೆ ಅವರ ಪ್ರಕಾರ, ಕೊಳೆರೋಗ ವ್ಯಾಪಕವಾಗಿ ಆವರಿಸಿದ್ದು, ಶೇ.40ರಿಂದ 50ರಷ್ಟು ಫಸಲು ನಷ್ಟವಾಗುವ ಅಂದಾಜಿದೆ ಎಂದು ಹೇಳಿದರು.
ಸರ್ಕಾರ ನೆರವು ನೀಡಲಿ: ಕೆಲಸಗಾರರ ಕೊರತೆ ಹಾಗೂ ಹಣ ಉಳಿತಾಯದ ದೃಷ್ಟಿಯಿಂದ ಅಡಕೆ ಬೆಳೆಗಾರರು ಔಷಧಿ ಸಿಂಪಡಿಸಲು ನಿಧಾನ ಮಾಡಿದ್ದೇ ಸಮಸ್ಯೆ ಹೆಚ್ಚಲು ಕಾರಣ. ಅದೇ ರೀತಿ ಮಳೆಯ ವ್ಯಾಪಕತೆಯ ಬಗ್ಗೆ ಬೆಳೆಗಾರರಿಗೆ ಮುನ್ಸೂಚಿತವಾಗಿ ಹವಾಮಾನ ಮಾಹಿತಿ ಒದಗಿಸಬೇಕಾಗಿತ್ತು ಎಂದು ಅಭಿಪ್ರಾಯಪಡುತ್ತಾರೆ. ಸರ್ಕಾರ ಕೂಡಲೇ ಅಡಕೆ ಬೆಳೆಗಾರರ ನೆರವಿಗೆ ಧಾವಿಸಬೇಕು. ನಷ್ಟಕ್ಕೊಳಗಾದ ರೈತರಿಗೆ ನೆರವು ನೀಡುವ ಜೊತೆಗೆ ಮುಂದೆ ಕೊಳೆ ನಿಯಂತ್ರಕಗಳನ್ನು ರಿಯಾಯಿತಿ ದರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿತರಿಸಬೇಕೆಂದು ಸರ್ಕಾರವನ್ನು ಆಗ್ರಹಿಸುವುದಾಗಿ ಅವರು ಹೇಳುತ್ತಾರೆ.
 ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ವಿಶ್ವನಾಥ್ ಪ್ರತಿಕ್ರಿಯೆ ನೀಡಿದ್ದು, ಅಡಕೆಗೆ ಕೊಳೆ ರೋಗ ಗಂಭೀರವಾಗಿ ವ್ಯಾಪಿಸಿದೆ. ಮುಂದಿನ 3-4 ದಿನಗಳಲ್ಲಿ ಮಳೆ ಮುಂದುವರಿದರೆ ನಷ್ಟ ಪ್ರಮಾಣ ಹೆಚ್ಚಾಗಲಿದೆ ಎಂದು ಹೇಳಿದರು. ಮಳೆ ಹೆಚ್ಚಾಗಿ ಬೀಳುತ್ತಿರುವ ಕಾರಣ ಕೊಳೆ ರೋಗದ ಪ್ರಮಾಣದ ಬಗ್ಗೆ ಮಾಹಿತಿ ಸಂಗ್ರಹಿಸಲು ಸಾದ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಸರ್ವೆ ಕಾರ್ಯ ಮಾಡಿಸಲಾಗುತ್ತದೆ ಎಂದು ತಿಳಿಸಿದರು.
- ಶ್ರೀಕಾಂತ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.