ಶಿವಮೊಗ್ಗ

ವೈದ್ಯರ ಹಿತ ರಕ್ಷಿಸುವ ಐಎಂಎ: ಸುಧಾಕರ್

Published On :

ಭದ್ರಾವತಿ: ಭಾರತೀಯ ವೈದ್ಯಕೀಯ ಸಂಘವು (ಐಎಂಎ) ಭಾರತದ ಒಂದು ಅತಿದೊಡ್ಡ ಸರ್ಕಾರೇತರ ವೈದ್ಯರ ಸಂಸ್ಥೆಯಾಗಿದ್ದು, 2.15 ಲಕ್ಷಕ್ಕೂ ಅಧಿಕ ಸದಸ್ಯರನ್ನು ಹಾಗೂ 1,650ಕ್ಕೂ ಅಧಿಕ ಶಾಖೆಗಳನ್ನು ಹೊಂದಿದೆ ಎಂದು ಸಂಘದ ಕರ್ನಾಟಕ ಶಾಖೆಯ ರಾಜ್ಯಾಧ್ಯಕ್ಷ ಡಾ. ವೈ.ಎಂ. ಸುಧಾಕರ್ ತಿಳಿಸಿದರು.
 ಪಟ್ಟಣದ ಸುನಂದ ಹಾಲ್‌ನಲ್ಲಿ ನಡೆದ ಸಂಘದ ವಾರ್ಷಿಕ ಸಾಮಾನ್ಯ ಸಭೆಗೆ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ, ಭಾರತೀಯ ವೈದ್ಯಕೀಯ ಸಂಸ್ಥೆ ನೂತನ ವೈಜ್ಞಾನಿಕ ಪದ್ಧತಿಯ ಔಷಧ  ನೀಡುವ ವೈದ್ಯರ ರಾಷ್ಟ್ರೀಯ ಸ್ವಯಂಸೇವಾ ಸಂಘಟನೆಯಾಗಿದ್ದು, ಇದು ವೈದ್ಯರ ಮತ್ತು ಸಮುದಾಯದ ಹಿತಾಸಕ್ತಿಯನ್ನು ಕಾಪಾಡುವ ಒಂದು ಸಂಸ್ಥೆಯಾಗಿದೆ ಎಂದು ತಿಳಿಸಿದರು.
ಸಹಕಾರ ಮನೋಭಾವ: ವೈದ್ಯಕೀಯ ಮತ್ತು ಸಂಬಂಧಿತ ವಿಜ್ಞಾನಗಳನ್ನು ತನ್ನೆಲ್ಲಾ ಶಾಖೆಗಳಲ್ಲಿ ಉತ್ತೇಜಿಸುವುದು ಮತ್ತು ಬೆಳೆಸುವುದು ಹಾಗೂ ಸಾರ್ವಜನಿಕ ಸ್ವಾಸ್ಥ್ಯ ಮತ್ತು ವೈದ್ಯಕೀಯ ಶಿಕ್ಷಣವನ್ನು ಭಾರತದಲ್ಲಿ ಸುಧಾರಿಸುವುದು, ವೈದ್ಯಕೀಯ ವೃತ್ತಿಯ ಗೌರವ ಮತ್ತು ಪ್ರತಿಷ್ಠೆಗಳನ್ನು ಕಾಪಾಡುವುದು ಮತ್ತು ವೈದ್ಯಕೀಯ ವೃತ್ತಿಯ ಹಿತಾಸಕ್ತಿಯನ್ನು ಎತ್ತಿಹಿಡಿಯುವುದು ಹಾಗೂ ಸದಸ್ಯರಲ್ಲಿ ಸಹಕಾರ ಮನೋಭಾವವನ್ನು ಬೆಳೆಸುವುದು ಇವು ಭಾರತೀಯ ವೈದ್ಯಕೀಯ ಸಂಸ್ಥೆಯ ಉದ್ದೇಶವೆಂದು ಅವರು ತಿಳಿಸಿದರು.
 ಸಮಾಜದಲ್ಲಿ ನಡೆಯುವ ವೈದ್ಯಕೀಯ ಶಿಬಿರಗಳಲ್ಲಿ ವೈದ್ಯರು ಸಲ್ಲಿಸುವ ಸೇವೆ ಮಹತ್ತರವಾದದ್ದು. ಗ್ರಾಮೀಣ ಆರೋಗ್ಯ ಸೇವೆಗಳ ಪದವಿ ಬಗ್ಗೆ ಐಎಂಎ ತನ್ನ ವಿರೋಧವನ್ನು ವ್ಯಕ್ತಪಡಿಸಿದೆಯಲ್ಲದೆ ರಾಷ್ಟ್ರಾದ್ಯಂತ ಮುಷ್ಕರವನ್ನೂ ನಡೆಸಿದೆ. ಭಾರತೀಯ ವೈದ್ಯಕೀಯ ಪರಿಷತ್ತಿಗೆ ವೈದ್ಯೇತರ ವ್ಯಕ್ತಿಗಳನ್ನು ನೇಮಿಸುವುದರ ಬಗ್ಗೆಯೂ ಐಎಂಎ ತನ್ನ ವಿರೋಧವನ್ನು ವ್ಯಕ್ತಪಡಿಸಿದೆ ಎಂದರು.
ಉಚಿತವಾಗಿ ನೀಡಲಿ: ಆರೋಗ್ಯ ವಿಮೆಯ ಬಗ್ಗೆ ಮಾತನಾಡಿದ ಐಎಂಎ ಸಂಸ್ಥೆಯ ನಿಯೋಜಿತ ಅಧ್ಯಕ್ಷ ಡಾ. ಯೋಗಾನಂದ ರೆಡ್ಡಿ ಐಎಂಎನಲ್ಲೇ ರಾಷ್ಟ್ರೀಯ ಸಾಮಾಜಿಕ ಭದ್ರತಾ ಯೋಜನೆಯಂತಹ ಯೋಜನೆಗಳಿವೆ. ಭಾರತದಲ್ಲಿ ಇನ್ನೂ ಹತ್ತು, ಹದಿನೈದು ವರ್ಷ ಉಚಿತ ಆರೋಗ್ಯ ಸೇವೆ ಮತ್ತು ಆರೋಗ್ಯ ವಿಮೆಯನ್ನು ಸರ್ಕಾರ ನೀಡುವ ಅವಶ್ಯಕತೆ ಇದೆ ಎಂದರು.
ಐಎಂಎ ಭದ್ರಾವತಿ ಶಾಖೆಯ ಅಧ್ಯಕ್ಷ ಡಾ. ಗಣೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯದರ್ಶಿ ಡಾ. ಸುಜಿತ್ ಕುಮಾರ್ ಸ್ವಾಗತಿಸಿದರು. ಡಾ. ಹರೀಶ ದೇಲಂತಬೆಟ್ಟು ನಿರೂಪಿಸಿದರು. ಖಜಾಂಚಿ ಡಾ. ವಿನೀತ್ ಆನಂದ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.