ಅಡಕೆಗೆ ಕೊಳೆರೋಗ: ಪರಿಹಾರಕ್ಕೆ ಒತ್ತಾಯ
ಕ.ಪ್ರ.ವಾರ್ತೆ, ಸಾಗರ, ಜು.30
ಕೊಳೆರೋಗದಿಂದ ಬೆಳೆ ನಷ್ಟ ಉಂಟಾಗಿರುವ ಅಡಕೆ ಬೆಳೆಗಾರರಿಗೆ ರಾಜ್ಯ ಸರ್ಕಾರ ತಕ್ಷಣ ಸೂಕ್ತ ಪರಿಹಾರ ನೀಡಬೇಕು ಎಂದು ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್. ಜಯಂತ್ ಒತ್ತಾಯಿಸಿದ್ದಾರೆ.
ಮಂಗಳವಾರ ತಾಲೂಕಿನ ಮಾವಿನಸರ ಗ್ರಾಮದ ಕೊಳೆರೋಗಪೀಡಿತ ಅಡಕೆ ತೋಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ರಾಜ್ಯ ಸರ್ಕಾರ ಕೂಡಲೇ ಬೆಳೆಗಾರ ಪ್ರತಿನಿಧಿಗಳೊಂದಿಗೆ ಚರ್ಚೆ ಮಾಡಿ ಪರಿಹಾರದ ಮೊತ್ತವನ್ನು ನಿಗದಿ ಮಾಡಬೇಕು ಎಂದು ಹೇಳಿದರು.
ನಿಯಮಗಳಿಂದ ತೊಡಕು: ಕೇಂದ್ರ ಸರ್ಕಾರ ಪ್ರಕೃತಿ ವಿಕೋಪ ಪರಿಹಾರನಿಧಿ ಹಾಗೂ ರಾಷ್ಟ್ರೀಯ ವಿಪತ್ತು ಸಾದಿಲ್ವಾರು ನಿಧಿಯ ಅಡಿಯಲ್ಲಿ ಬಹುವಾರ್ಷಿಕ ಬೆಳೆಗಳಿಗೆ ಬೆಳೆನಷ್ಟ ಪರಿಹಾರ ನೀಡಬೇಕು ಎಂದು ಆದೇಶ ನೀಡಿದೆ. ಆದರೆ ಇದಕ್ಕೆ ಕೆಲವೊಂದು ನಿಯಮ ರೂಪಿಸಲಾಗಿದೆ. ನಿಯಮಗಳ ಪ್ರಕಾರ ಶೇ.50ಕ್ಕಿಂತ ಹೆಚ್ಚು ಬೆಳೆನಷ್ಟ ಸಂಭವಿಸಿದರೆ ಎಕರೆಗೆ ಆರು ಸಾವಿರ ರು. ಪರಿಹಾರ ಕೊಡಬೇಕೆಂದಿದೆ. ಆದರೆ ಶೇ.50 ಬೆಳೆನಷ್ಟವನ್ನು ಅಳತೆ ಮಾಡಲು ಅಳತೆಗೋಲನ್ನು ಹೇಳಿಲ್ಲವಾದ್ದರಿಂದ ಬೆಳೆಗಾರರಿಗೆ ಪರಿಹಾರ ಸಿಗುತ್ತಿಲ್ಲ. ಈ ದೃಷ್ಟಿಯಿಂದ ಈ ರೀತಿಯ ಕಾಯ್ದೆಗಳು ಅಡಕೆ ಬೆಳೆಗಾರರ ಪಾಲಿಗೆ ಮರಣಶಾಸನವಾಗಿದೆ ಎಂದು ಹೇಳಿದರು.
ತಾಲೂಕಿನ ಬಹುತೇಕ ತೋಟಗಳು ಕೊಳೆರೋಗದ ಬಾದೆಗೆ ತುತ್ತಾಗಿವೆ. ಕೊಳೆಯಿಂದ ಶೇ.50ರಷ್ಟು ಅಡಕೆಗಳು ಈಗಾಗಲೇ ಉದುರಿದ್ದು ಇನ್ನೊಂದಿಷ್ಟು ಅಡಕೆಗಳು ಉದುರುವ ಹಂತದಲ್ಲಿದೆ. ಇದು ಶೇ.80ತಲುಪುವ ಸಾಧ್ಯತೆ ಇದೆ. ಪ್ರತಿ ಮರದ ಬುಡದಲ್ಲಿ ಒಂದು ಕೆ.ಜಿ.ಗೆ ಕಡಿಮೆ ಇಲ್ಲದಂತೆ ಅಡಕೆಗಳು ಉದುರಿವೆ ಎಂದು ತಿಳಿಸಿದರು.
ಸರ್ಕಾರವೇ ಹೊಣೆ: ಎಕರೆಯಲ್ಲಿ 800 ಮರಗಳಂತೆ ಅಂದಾಜಿಸಿದರೆ ಬೆಳೆನಷ್ಟದ ಪ್ರಮಾಣ 8 ಕ್ವಿಂಟಾಲಿನಷ್ಟಾಗುತ್ತದೆ ಎಂದು ಪರಿಸ್ಥಿತಿಯ ಗಂಭೀರತೆಯನ್ನು ವಿಶ್ಲೇಷಿದ ಜಯಂತ್ ನಿರಂತರ ಮೂರು ವರ್ಷಗಳ ಕಾಲ ಕೊಳೆರೋಗ ಪೀಡಿತವಾದರೆ ಮರಗಳೇ ನಾಶವಾಗುತ್ತದೆ. ಈ ಕಾರಣದಿಂದ ಅಡಕೆ ಬೆಳೆಗಾರರು ಆತ್ಮಹತ್ಯೆಯ ದಾರಿ ಹಿಡಿದರೆ ಅದಕ್ಕೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ರಾಷ್ಟ್ರೀಯ ತೋಟಗಾರಿಕಾ ಮಿಷನ್ ವತಿಯಿಂದ ಸಬ್ಸಿಡಿ ದರದಲ್ಲಿ ಮೈಲುತುತ್ತ ವಿತರಿಸಲಾಗುತ್ತಿದೆ. ಆದರೆ ಈ ಸಬ್ಸಿಡಿ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನ್ನುವಂತಾಗಿದೆ. ಈ ವರ್ಷದ ಮಳೆಯ ಸಂದರ್ಭದಲ್ಲಿ ತೋಟಗಳಿಗೆ ಒಮ್ಮೆ ಔಷಧಿ ಸಿಂಪಡಿಸಿದರೆ ಸಾಕಾಗುವುದಿಲ್ಲ. ಕನಿಷ್ಠ ಎರಡು-ಮೂರು ಬಾರಿಯಾದರೂ ಸಿಂಪಡಿಸಿದರೆ ರೋಗ ಹತೋಟಿಗೆ ಬರಬಹುದು. ಆದ್ದರಿಂದ ಎಕರೆಗೆ ಕನಿಷ್ಠ ಮೂರು ಸಾವಿರ ರು. ಸಹಾಯಧನವನ್ನಾದರೂ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಗೆ ಸಿದ್ಧತೆ: ಸರ್ಕಾರ ತಕ್ಷಣ ಅಡಕೆ ಬೆಳೆಗಾರರ ನೆರವಿಗೆ ಧಾವಿಸುವಂತೆ ಒತ್ತಾಯಿಸಿ ಶೀಘ್ರದಲ್ಲಿ ಸಾಗರದ ಎಸಿ ಕಚೇರಿ ಎದುರು ಕೊಳೆ ಅಡಕೆ ಸುರಿದು ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದ ಜಯಂತ್ ಆದರೂ ಸರ್ಕಾರ ಗಂಭೀರವಾಗಿ ಪರಿಗಣಿಸದಿದ್ದರೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ದೊಡ್ಡಮಟ್ಟದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.
ಬೆಳೆಗಾರರ ಸಂಘದ ವೆಂಕಟಗಿರಿ, ಮಹಾಬಲಗಿರಿ, ವಿನಾಯಕರಾವ್, ವ.ಶಂ. ರಾಮಚಂದ್ರ ಭಟ್, ರಾಧಾಕೃಷ್ಣ, ಎಂ.ಕೆ. ತಿಮ್ಮಪ್ಪ, ತೋಟಗಾರಿಕಾ ಇಲಾಖೆಯ ಅಧಿಕಾರಿಗಳಾದ ತಿಮ್ಮಪ್ಪ, ರಮೇಶ್, ಗ್ರಾಮಸ್ಥರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

