ನಕಲಿ ವೈದ್ಯರ ಮಟ್ಟಹಾಕಲು ಪೊಲೀಸರೇ ಅಡ್ಡಿ
ಕ.ಪ್ರ.ವಾರ್ತೆ, ಶಿವಮೊಗ್ಗ, ಮೇ 31
ಜಿಲ್ಲೆಯಲ್ಲಿ ಮಿತಿ ಮೀರಿರುವ ನಕಲಿ ವೈದ್ಯರ ಹಾವಳಿ ಮಟ್ಟಹಾಕಲು ಆರೋಗ್ಯ ಇಲಾಖೆ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ. ಆದರೆ, ಈ ಪ್ರಯತ್ನಕ್ಕೆ ಪೊಲೀಸ್ ಇಲಾಖೆಯೇ ಕಂಟಕವಾಗಿರುವ ಅಚ್ಚರಿಯ ಸಂಗತಿಯೊಂದು ನಡೆದಿದೆ.
ಸರ್ಕಾರದ ನಿಯಮಾವಳಿ ಉಲ್ಲಂಘಿಸಿ ಜಿಲ್ಲೆಯಲ್ಲಿ ನೂರಾರು ಮಂದಿ ಅನರ್ಹರು ಅನೇಕ ವರ್ಷಗಳಿಂದ ವೈದ್ಯಕೀಯ ಚಿಕಿತ್ಸೆ ನೀಡುತ್ತಾ ಬಂದಿದ್ದು, ಬಹಿರಂಗವಾಗಿ ಕ್ಲಿನಿಕ್ಗಳನ್ನು ತೆರೆದು ಜನರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಈ ಮಧ್ಯೆ ಸರ್ಕಾರದ ನಿರ್ದೇಶನದಂತೆ ನಕಲಿ ವೈದ್ಯರನ್ನು ಮಟ್ಟಹಾಕಲು ಜಿಲ್ಲಾ ಆರೋಗ್ಯ ಇಲಾಖೆ ಮುಂದಾಯಿತು.
ಪೊಗದಸ್ತಾಗಿ ಬೆಳೆದುನಿಂತಿದ್ದ ನಕಲಿ ವೈದ್ಯರ ಹುಡುಕಾಟಕ್ಕಿಳಿದ ಇಲಾಖೆ, ಹರಸಾಹಸ ಪಟ್ಟು ದೊಡ್ಡ ಪಟ್ಟಿಯನ್ನೇ ಸಿದ್ಧಪಡಿಸಿತು. ವೈದ್ಯಕೀಯ ಕೋರ್ಸ್ ಮಾಡಿಕೊಳ್ಳದೇ ಔಷಧಿ ನೀಡುವ ಜೊತೆಗೆ ಶಸ್ತ್ರಚಿಕಿತ್ಸೆ ಮಾಡುತ್ತಿದ್ದವರೂ ಸಹ ಪತ್ತೆಯಾದರು.
ಕಾನೂನು ಬಾಹಿರವಾಗಿ ಈ ರೀತಿ ವೈದ್ಯವೃತ್ತಿ ಮಾಡುವ ನಕಲಿ ವೈದ್ಯರ ಮೇಲೆ ಕಣ್ಣಿಟ್ಟ ಇಲಾಖೆ ಸಿಬ್ಬಂದಿ ಒಬ್ಬೊಬ್ಬರನ್ನೇ ಖೆಡ್ಡಾಕ್ಕೆ ಬೀಳಿಸಲು ಆರಂಭಿಸಿತು.
ಕರ್ನಾಟಕ ಪ್ರೈವೆಟ್ ಮೆಡಿಕಲ್ ಎಸ್ಟಾಬ್ಲಿಶ್ಮೆಂಟ್ ಆಕ್ಟ್ ಎಂಬ ಅಸ್ತ್ರ ಹಿಡಿದು ಹೊರಟ ಇಲಾಖೆ ಸಿಬ್ಬಂದಿಗೆ ಅನೇಕ ನಕಲಿ ವೈದ್ಯರು ಸುಲಭತುತ್ತಾದರು. ಆದರೆ, ನಕಲಿ ಕಲಿಗಳ ಮೇಲೆ ಕ್ರಮಕೈಗೊಳ್ಳುವ ಉದ್ದೇಶದಿಂದ ಅವರ ಮೇಲೆ ಪೊಲೀಸರಿಗೆ ದೂರು ಕೊಡುವ ಸಂದರ್ಭದಲ್ಲಿ ಮಾತ್ರ ಆರೋಗ್ಯ ಇಲಾಖೆಗೆ ಹಿನ್ನಡೆಯಾಗುತ್ತಿದೆ.
ಆಗುತ್ತಿರುವುದೇನು? ಆರೋಗ್ಯ ಇಲಾಖೆ ತಂಡ ನಕಲಿ ವೈದ್ಯರ ಕ್ಲಿನಿಕ್ ಮೇಲೆ ದಾಳಿ ಮಾಡಿ ಅವರನ್ನು ಠಾಣೆಗೆ ಹಿಡಿದು ತಂದರೆ ಪೊಲೀಸರು ದೂರು ಸ್ವೀಕಾರಕ್ಕೆ ಹಿಂದೆ ಸರಿದ ಪ್ರಸಂಗ ನಡೆದಿದೆ.
ಕನ್ನಡಪ್ರಭಕ್ಕೆ ಈ ವಿಷಯ ಖಚಿತಪಡಿಸಿರುವ ಇಲಾಖೆ ಸಿಬ್ಬಂದಿಯೊಬ್ಬರು, ಠಾಣೆಯಲ್ಲಿ 2-3 ಗಂಟೆ ಕಾಯುವಂತೆ ಮಾಡುವುದು ಜೊತೆಗೆ, ಕೈ ಬರವಣಿಗೆಯಲ್ಲೇ ದೂರು ಕೊಡಬೇಕೆಂದು ಮೊಂಡು ವಾದ ಮಾಡುವುದು ಸೇರಿದಂತೆ ವಿವಿಧ ರೀತಿಯಲ್ಲಿ ಕಿರಿಕಿರಿ ಉಂಟುಮಾಡುತ್ತಾರೆ ಎಂದು ಪ್ರತಿಕ್ರಿಯಿಸಿದರು.
ಆರೋಗ್ಯ ಇಲಾಖೆ, ಕರ್ನಾಟಕ ಸರ್ಕಾರದ ಶಿರ್ಷಿಕೆ ಇರುವ, ಇಲಾಖೆಯ ಪ್ರಧಾನ ಅಧಿಕಾರಿಯ ಸೀಲು ಸಹಿ ಇರುವ ಮುದ್ರಿತ ದೂರಿನಲ್ಲಿ ನಕಲಿ ವೈದ್ಯರ ಮಾಹಿತಿ ಅಡಕಗೊಳಿಸಿ ದೂರು ಕೊಟ್ಟರೆ ಅದನ್ನು ಸ್ವೀಕರಿಸಲು ಹಿಂದೇಟು ಹಾಕುವ ಪೊಲೀಸ್ ಸಿಬ್ಬಂದಿ ವಿಚಿತ್ರ ವಾತಾವರಣ ಸೃಷ್ಟಿ ಮಾಡುತ್ತಾರೆ, ಸತಾಯಿಸುತ್ತಾರೆ ಎಂದು ಇಲಾಖೆ ಸಿಬ್ಬಂದಿಯೊಬ್ಬರು ವಿವರಣೆ ನೀಡಿದರು.
ಶಕ್ತಿ ಹೀನ ದೂರು: ಮುದ್ರಿತ ದೂರು ಇದ್ದರೂ ಕೈಯಲ್ಲಿ ದೂರು ಬರೆಸಿಕೊಳ್ಳುತ್ತಿರುವ ಪೊಲೀಸರು, ಕರ್ನಾಟಕ ಪ್ರೈವೇಟ್ ಮೆಡಿಕಲ್ ಎಸ್ಟಾಬ್ಲಿಶ್ ಮೆಂಟ್ ಆಕ್ಟ್ನಂತೆ ಆರೋಪಿತರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿರುವ ಸಂಗತಿಯೂ ಕೆಲವು ಠಾಣೆಗಳಲ್ಲಿ ನಡೆದಿದೆ.
ದೂರು ನೀಡುವ ಸಂದರ್ಭದಲ್ಲಿ ಕೆಲವು ಕಲಂ (ಸೆಕ್ಷನ್) ಹಾಕಿದರೆ ಆರೋಪಿತರ ವಿರುದ್ಧ ಕಠಿಣ ಕ್ರಮವಾಗುತ್ತದೆ. ಕೆಲವು ಸಂದರ್ಭದಲ್ಲಿ ಜಾಮೀನು ಸಿಗುವುದು ಅನುಮಾನ. ಕರ್ನಾಟಕ ಪ್ರೈವೆಟ್ ಮೆಡಿಕಲ್ ಎಸ್ಟಾಬ್ಲಿಶ್ ಮೆಂಟ್ ಆಕ್ಟ್ ಇದಕ್ಕೆ ಅವಕಾಶ ಮಾಡಿಕೊಟ್ಟು, ಆರೋಗ್ಯ ಇಲಾಖೆ ಇದನ್ನು ಆರೋಪಿತರ ಮೇಲೆ ಬಳಸುವಂತೆ ಪೊಲೀಸರಿಗೆ ಕೋರಿದರೂ ಪೊಲೀಸರು ಮಾತ್ರ ಕೆಲವು ಸೆಕ್ಷನ್ ಹಾಕದೇ ಆರೋಪಿತರು ಸುಲಭವಾಗಿ ತಪ್ಪಿಸಿಕೊಂಡು ಹೋಗುವಂತೆ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಪ್ರಭಾವಿ ನಕಲಿ ವೈದ್ಯರೊಬ್ಬನನ್ನು ಇದೇ ರೀತಿ ಪೊಲೀಸರು ಬಿಟ್ಟು ಕಳುಹಿಸಿದ ಉದಾಹರಣೆಯೂ ಇದೆ.
ಇಷ್ಟೇ ಅಲ್ಲದೇ, ನಕಲಿ ವೈದ್ಯನನ್ನು ಹಿಡಿದುಕೊಟ್ಟರೆ ಆ ಸಂದರ್ಭದಲ್ಲಿ ನಗರಸಭಾ ಸದಸ್ಯರು, ಪುಡಿ ರಾಜಕಾರಣಿಗಳ ಪ್ರವೇಶವಾಗಿರುವ ಒಂದೆರಡು ಉದಾಹರಣೆಯೂ ನಡೆದಿದೆ. ಈ ಸಂದರ್ಭದಲ್ಲಿ ರಾಜಕೀಯ ಪ್ರಭಾವಕ್ಕೊಳಗಾಗಿ ನಕಲಿ ವೈದ್ಯರು ಸುಲಭವಾಗಿ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಯಿಂದಾಗಿ ರೋಸಿಹೋಗಿದ್ದೇವೆ, ನಾವೇಕೆ ನಕಲಿ ವೈದ್ಯರನ್ನು ಹಿಡಿಯಬೇಕು ಎಂದೆನಿಸುವಷ್ಟರ ಮಟ್ಟಿಗೆ ಬೇಸರ ಉಂಟಾಗಿದೆ ಎಂದು ಆರೋಗ್ಯ ಇಲಾಖೆ ಹಿರಿಯ ಸಿಬ್ಬಂದಿ ತಿಳಿಸಿದರು.
-ಶ್ರೀಕಾಂತ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

