ಶಿವಮೊಗ್ಗ

ಊರೆಂದು ಹಗಲಲ್ಲೆ ಹೊರಹೋಗುವಂತಿಲ್ಲ...

Published On :

ಊರೆಂದು ಹಗಲಲ್ಲೆ ಹೊರಹೋಗುವಂತಿಲ್ಲ..
ಜನವೆಂದು ರಸ್ತೆಯಲ್ಲಿ ನಡೆಯುವಂತಿಲ್ಲ...
ಮನೆಯೆಂದು ಜೋಪಾನದಿ ಕೂರುವಂತಿಲ್ಲ..
ನೆಂಟರಿಷ್ಟರ ನಂಬಿ ಬೆರೆಯುವಂತಿಲ್ಲ..
ನೆರೆಯವರೆಂದು ಮಕ್ಕಳನ್ನು ಇರಿಸುವಂತಿಲ್ಲ
ಹೆತ್ತಮ್ಮನೆ ಕರುಳ ಕುಡಿಯ ಇಸಿದು ಹೊಸೆಯುತಿಹಳಲ್ಲ..
ಹೆತ್ತಪ್ಪನೆ ಕ್ಷಣಕ್ಕಾಗಿ ಕಾಮಿಯಾಗಿಹನಲ್ಲ..
ಎಲ್ಲಿದೆ.. ಸ್ವಾತಂತ್ರ್ಯ..
ಪೂರ್ಣಚಂದ್ರ ತೇಜಸ್ವಿ ವೇದಿಕೆ, ಶಿವಮೊಗ್ಗ
ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ತಂದೆ ತನ್ನ ಮಗಳ ಮೇಲೆ ವಿಕೃತ ಕಾಮಿಯಂತೆ ಆತ್ಯಾಚಾರ ಮಾಡುತ್ತಿದ್ದಾನೆ. ಇಂದು ಆತನನ್ನು ನಂಬುವಂತಿಲ್ಲ. ಅದೇ ತಾಯಿಯೇ ದೇವರು ಎನ್ನುತ್ತಾರೆ ಆಕೆಯು ಕೂಡ ಇಂದು ತಾನು ಹೆತ್ತ ಮಕ್ಕಳನೇ ಬೀದಿಬದಿ ಬಿಸಾಡಿ ಹೋಗುತ್ತಿದ್ದಾಳೆ. ಸಮಾಜದಲ್ಲಿ ಮಹಿಳೆಗೆ ರಕ್ಷಣೆಯೇ ಇಲ್ಲದಂತಾಗಿದೆ. ಯಾರನ್ನು ನಂಬುವಂತಿಲ್ಲ. ಪ್ರತಿಯೊಬ್ಬರು ವಿಕೃತ ಮನಸ್ಸಿನಿಂದಲೇ ನೋಡುತ್ತಿದ್ದಾರೆ ಎಂದು ಪ್ರತಿಪಾದಿಸಿದ್ದರು.
ಪ್ರೇಕ್ಷಕರ ಪ್ರಶಂಸೆ: ಹೀಗೆ ನಗರದ ಕುವೆಂಪು ಶತಮಾನೋತ್ಸವದ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿನಿ ಎಸ್. ಮಂಜುಳ ಅವರು ವಾಚಿಸಿದ ಕವನಕ್ಕೆ ಪ್ರೇಕ್ಷಕರಿಂದ ಬಾರಿ ಚಪ್ಪಾಳೆಗಳೆ ಹರಿದು ಬಂದವು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭಾನುವಾರ ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿ ಆವರಣದಲ್ಲಿ 8ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದದಲ್ಲಿ ಆಯೋಜಿಸಿದ್ದ ಪುಟ್ಟ ಮಿಂಚಿನ ಗೊಂಚಲು ವೇದಿಕೆಯಲ್ಲಿನ ಕವಿಗೋಷ್ಠಿಯಲ್ಲಿ ಕೇಳಿದ ಕವನಗಳ ಸಾಲುಗಳಿವು.
ಪ್ರಬುದ್ಧ ಕವನಗಳು: ಕವಿಗೋಷ್ಠಿಯಲ್ಲಿ 20ಕ್ಕೂ ಹೆಚ್ಚು ಯುವ ಕವಿಗಳು ವಿವಿಧ ವಿಷಯಗಳ ಮೇಲೆ ಕವನಗಳನ್ನು ಮಂಡಿಸಿದರು. ಕನ್ನಡ ತಾಯಿ, ಕನ್ನಡ ನೆಲದ ಬಗ್ಗೆ ಸಾಕಷ್ಟು ಕವನಗಳು ಮೀಸಲಾಗಿದ್ದರೆ, ಒಂದಷ್ಟು ಕವನಗಳು ಪ್ರೇಮಕ್ಕೆ ಮೀಸಲಾಗಿದ್ದವು. ಯುವತಿಯರ ಕವನಗಳು ಮಾತೃತ್ವಕ್ಕೆ ಹೆಸರಾದರೆ, ಸಾಕಷ್ಟು ಕವನಗಳು ಪ್ರಬುದ್ಧತೆಯಿಂದ ಕೂಡಿದ್ದವು.
ಇನ್ನು 6 ನೇ ತರಗತಿಯ ಸಮಾ ರಿಯಾಜ್‌ನ ಕವನ ವಾಚಿಸಿ, ನಾಯಿಗಳನ್ನು ಕಂಡರೆ ನಾನು ಹೆದರುತ್ತೇನೆ..ನನ್ನನ್ನು ಕಂಡರೆ ನಾಯಿಗಳೂ ಹೆದರುತ್ತವೆ...ನನಗೂ ಧೈರ್ಯ ಇಲ್ಲ..ನಾಯಿಗೂ ಧೈರ್ಯ ಇಲ್ಲ...ನಾವಿಬ್ಬರೂ ಪುಕ್ಕಲರು...ಹೆದರುಪುಕ್ಕರು.... ಈ ಕವನ ಕೇಳುಗರನ್ನು ನಿಬ್ಬೆರಗಾಗಿಸಿದವು.
ನೂರೆಂಟು ಕನಸು: ಶರಣಪ್ಪ ಚವ್ಹಾಣ್, ಬದುಕೆಲ್ಲ ಹೀಗೆ-ನೂರೆಂಟು ಕನಸುಗಳು...ಕಣ್ಣಿಗಷ್ಟೆ ಮೀಸಲಾಗಿ ಕನಸು ನಿಜವಾಗಿರುವಂತೆ ನಗುವಿನ ಗೆರೆ ಮೂಡುವಾಗ ಬದುಕಿಸದೆ ಬದುಕು ಬಿಡುತ್ತಾರೆ...  ಎನ್ನುತ್ತಾ ಬದುಕಿನಲ್ಲಿ ಕನಸುಗಳನ್ನು ನಂಬಲಾಗದು. ವಾಸ್ತವವೇ ಬೇರೆ, ಕನಸೇ ಬೇರೆ ಎಂದು ಸಾಬೀತುಪಡಿಸಿದರು.
ಸಾಗರದ ಇಂದಿರಾಗಾಂಧಿ ಕಾಲೇಜಿನ ಚ. ಅನುಶ್ರೀ ತಮ್ಮ ಮಹಾರಾಮ ಪಾರಾಯಣ ಶೀರ್ಷಿಕೆಯ ಕವನದಲ್ಲಿ -ಮಾಹಾಭಾರತ ಮತ್ತು ರಾಮಾಯಣದಲ್ಲಿ ಮಹಿಳೆಯರನ್ನು ಸಮನಾಗಿ ಕಂಡಿಲ್ಲ. ಮಹಿಳೆಯಿಂದಲೇ ರಾಮಾಯಣ, ಮಹಾಭಾರತ ನಡೆದಿಲ್ಲ. ಮಹಿಳೆಯನ್ನು ಅಷ್ಟೊಂದು ಕನಿಷ್ಠವಾಗಿ ಕಾಣುವುದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಸೀತಾಮಾತೆ ಯಾಕೆ ಸುಮ್ಮನಿದ್ದೆ ಸುಮ್ಮನಿರುವೆ ದ್ರೌಪದಿ ಯಾಕೆ ಅಸಹಾಯಕತೆ ತೋರಿರುವೆ ನಿಮ್ಮಿಂದಲ್ಲ ರಾಮಾಯಣ-ಮಹಾಭಾರತ- ಎಂದು ಆರಂಭಿಸಿ, -ಸೀತೆಗೇನು ಆಸೆ-ಅಕಾರ ಇಲ್ಲವೇ ರಾಮಾಯಣ ಬದಲಿಸಬೇಕಿತ್ತು ಆಕೆ, ದುಶ್ಶಾಸನನ ಕೆನ್ನೆಗೆ ದ್ರೌಪದಿ ಹೊಡೆದಿದ್ದರೆ ಗಂಟೇನು ಹೋಗುತ್ತಿತ್ತು ತಗ್ಗಿ-ಬಗ್ಗಿ ಹೆಣ್ಣು-ಗಂಡು ಇಬ್ಬರೂ ಬಾಳಬೇಕು ಎನ್ನುದನ್ನು ಅರಿಯಬೇಕು- ಎಂದು ಪ್ರತಿಪಾದಿಸಿದರು.
ಕವನ: ಉಳಿದಂತೆ ಸೋಮೇಶ್ ಅವರ -ಬೇಗೆ ಮತ್ತು ಸ್ವಾರ್ಥ ರಾಜಕಾರಣ-, ಭದ್ರಾವತಿಯ ಗಗನಶ್ರೀ ಅವರ ನಾ ಏನಾಗಲೀ..., ಪಿ. ಲೋಕೇಶ್ ಅವರ ಕಾಣದ ಹಕ್ಕಿ, ಕೆ.ಆರ್. ಮಮತ 'ಮೌನ', ಜಗತ್ಕೆ.ಆರ್.ಗೌಡ 'ಕನ್ನಡದ ತಾಯಿ', ಜೆ.ಬಿ. ಕಾವೇರಿ ಅವರ -ಸಿದ್ದಮನಸ್ಸು- ಶೀರ್ಷಿಕೆಯ ಕವನಗಳು ಗಮನ ಸೆಳೆದವು.
ಇದಕ್ಕೂ ಮುನ್ನ ಕಾರ್ಯಕ್ರಮ ಉದ್ಘಾಟಿಸಿದ ತೀರ್ಥಹಳ್ಳಿಯ ಮುದ್ದು, ಹೊಸ ಕವಿಗಳು ಪ್ರಚಾರದ ಆಸೆಯಿಂದ ಕೃತಿಚೌರ್ಯ ಮಾಡಲು ಮುಂದಾಗಿದ್ದಾರೆ. ಕೃತಿಚೌರ್ಯ ಮಾಡುವುದು ತಪ್ಪು. ಮತ್ತೊಬ್ಬರ ಕೃತಿ ಚೌರ್ಯ ಮಾಡುವುದರಿಂದ ತಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ಬರುತ್ತದೆ ಎಂದರು. ಕವಿ ಎಂದು ತನ್ನ ಆತ್ಮಸೂರ್ತಿ ಕಳೆದುಕೊಂಡು ಕೃತಿಚೌರ್ಯ ಮಾಡಬಾರದು. ಯಾರದೋ ಲೇಖನವನ್ನು ಕಸಿದು ತಿರುಗ- ಮುರುಗ ಬರೆದು ತಮ್ಮದೆ ಲೇಖನ ಎಂದು ಹೇಳಿಕೊಳ್ಳುವುದು ಒಳ್ಳೆಯ ಕವಿಗಳ ಲಕ್ಷಣವಲ್ಲ ಎಂದು ತಿಳಿಸಿದರು.
ಮಕ್ಕಳ ಸಾಹಿತ್ಯದಲ್ಲಂತೂ ಕೃತಿಚೌರ್ಯ ಮೇರೆ ಮೀರುತ್ತಿದೆ. ನಿತ್ಯೋತ್ಸವ ಕವಿತೆಯನ್ನೇ ಒಬ್ಬರು ಕೃತಿಚೌರ್ಯ ಮಾಡಿಬಿಟ್ಟಿದ್ದಾರೆ. ಅದು ದೊಡ್ಡ  ಅಪರಾಧವಾಗುತ್ತದೆ ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಸಾಗರದ ಶ್ರಾವ್ಯ, ಆನಂದ ಬಾಳೇಕೊಪ್ಪ, ಎಸ್.ಆರ್. ಕುಮಾರಸ್ವಾಮಿ, ಜೆ.ವಿ. ರಾಮಕೃಷ್ಣ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.